ಮುಖಪುಟ ೨೦೨೧ ರ ಬೆಂಗಳೂರು ಲೈಂಗಿಕ ದೌರ್ಜನ್ಯ ಪ್ರಕರಣದ ದೃಶ್ಯಗಳನ್ನು ಬಾಂಗ್ಲಾದೇಶದ ಹಿಂಸಾಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

೨೦೨೧ ರ ಬೆಂಗಳೂರು ಲೈಂಗಿಕ ದೌರ್ಜನ್ಯ ಪ್ರಕರಣದ ದೃಶ್ಯಗಳನ್ನು ಬಾಂಗ್ಲಾದೇಶದ ಹಿಂಸಾಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ಅನುರಾಗ್ ಬರುವಾ

ಆಗಸ್ಟ್ 6 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೧ ರ ಬೆಂಗಳೂರು ಲೈಂಗಿಕ ದೌರ್ಜನ್ಯ ಪ್ರಕರಣದ ದೃಶ್ಯಗಳನ್ನು ಬಾಂಗ್ಲಾದೇಶದ ಹಿಂಸಾಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಬೆಂಗಳೂರಿನಲ್ಲಿ ೨೦೨೧ ರ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ತಪ್ಪಾಗಿ ಲಿಂಕ್ ಮಾಡುವ ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಸ್ಕ್ರೀನ್‌ಶಾಟ್‌ಗಳು/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

೨೦೨೧ ರಲ್ಲಿ ಪ್ರಕರಣವನ್ನು ವರದಿ ಮಾಡಿದ ಪತ್ರಕರ್ತರು ವೀಡಿಯೋ ಹಳೆಯದು ಮತ್ತು ಬಾಂಗ್ಲಾದೇಶದ ಪ್ರಸ್ತುತ ಅಶಾಂತಿಗೆ ಸಂಬಂಧಿಸಿಲ್ಲ ಎಂದು ಲಾಜಿಕಲಿ ಫ್ಯಾಕ್ಟ್ಸ್‌ಗೆ ದೃಢಪಡಿಸಿದ್ದಾರೆ.

(ಪ್ರಚೋದಕ ಎಚ್ಚರಿಕೆ: ಈ ಲೇಖನವು ಲೈಂಗಿಕ ದೌರ್ಜನ್ಯದ ಉಲ್ಲೇಖಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಹೇಳಿಕೆ ಏನು?

ಮಹಿಳೆಯನ್ನು ಬಲವಂತವಾಗಿ ಹಾಸಿಗೆಯ ಮೇಲೆ ಹಿಡಿದಿರುವ ಭಾಗಶಃ ಮಸುಕಾದ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಪಠ್ಯವು ಢಾಕಾ ವಿಶ್ವವಿದ್ಯಾನಿಲಯದ ಹಿಂದೂ ಮಹಿಳೆಯೊಬ್ಬರನ್ನು ಹಲವಾರು ಪುರುಷರು ಲೈಂಗಿಕವಾಗಿ ಆಕ್ರಮಣ ಮಾಡುವುದನ್ನು ಚಿತ್ರಿಸುತ್ತದೆ ಎಂದು ಹೇಳಲಾಗಿದೆ. ಘಟನೆಯ ಸಂಪೂರ್ಣ ವೀಡಿಯೋ ಲಭ್ಯವಿದೆ ಮತ್ತು ಬಾಂಗ್ಲಾದೇಶದ ಹೊಸ (ಮಧ್ಯಂತರ) ಸರ್ಕಾರವು ಅಂತಹ ದಾಳಿಗಳನ್ನು ಉಲ್ಬಣಗೊಳಿಸುತ್ತದೆ ಎಂದು ಪಠ್ಯವು ಹೇಳುತ್ತದೆ.

ಕೆಲವು ಬಳಕೆದಾರರು ವೈರಲ್ ಸ್ಕ್ರೀನ್‌ಶಾಟ್‌ನೊಂದಿಗೆ ಅನೇಕ ವ್ಯಕ್ತಿಗಳು ಹೆಣ್ಣಿನ ಬಟ್ಟೆಯನ್ನು ತೆಗೆದುಹಾಕುವ ಮತ್ತು ಆಕ್ರಮಣ ಮಾಡುವ ಆರು-ಸೆಕೆಂಡ್-ಉದ್ದದ ಗ್ರಾಫಿಕ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ಚಿತ್ರವು ಈ ವೀಡಿಯೋದ ಒಂದು ಫ್ರೇಮ್ ಆಗಿದೆ. ಅದರ ಗ್ರಾಫಿಕ್ ಸ್ವಭಾವದಿಂದಾಗಿ, ಲಾಜಿಕಲಿ ಫ್ಯಾಕ್ಟ್ಸ್ ವೀಡಿಯೋ ಅಥವಾ ಅದರ ಆರ್ಕೈವ್ ಮಾಡಿದ ಆವೃತ್ತಿಯ ಲಿಂಕ್ ಅನ್ನು ಒದಗಿಸುವುದಿಲ್ಲ.

ಹಲವಾರು ಎಕ್ಸ್ (ಹಿಂದೆ ಟ್ವಿಟ್ಟರ್) ಬಳಕೆದಾರರು ಈ ಸ್ಕ್ರೀನ್‌ಶಾಟ್ ಅನ್ನು ಅದೇ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಆತ್ಮೀಯ ಸೆಕ್ಯುಲರ್/ಎಡಪಂಥೀಯ ಹಿಂದೂಗಳೇ. ನಿಮ್ಮ ಮಗಳು/ಸಹೋದರಿಯರೂ ಅವರಿಗೆ ‘ಹಿಂದೂ ಸರಕುಗಳು’. ಇದೀಗ ಬಾಂಗ್ಲಾದೇಶದಲ್ಲಿ ಹಿಂದೂ ಸಹೋದರಿಯರು ಎದುರಿಸುತ್ತಿರುವುದು ಇದನ್ನೇ, ಮತ್ತು ಅವರನ್ನು ಉಳಿಸಲು ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹಿಂದೂಗಳು ಅಳುವುದನ್ನು ಬಿಟ್ಟು ಹೋರಾಟಕ್ಕೆ ಮುಂದಾಗಬೇಕು. @narendramodiji ಎದ್ದೇಳಿ ಮತ್ತು ಏನಾದರೂ ಮಾಡಿ."

ಬಾಂಗ್ಲಾದೇಶದ ಹಲವಾರು ಚಿತ್ರಗಳು ಮತ್ತು ವೀಡಿಯೋಗಳನ್ನು ಪೋಷ್ಟ್ ಮಾಡಿದ 'ಇಸ್ಲಾಮಿಕ್ ಆರ್ಮಿ - ಲೇಟೆಸ್ಟ್ ವರ್ಷನ್' ಎಂಬ ಟೆಲಿಗ್ರಾಮ್ ಚಾನೆಲ್‌ನಲ್ಲಿ ವೀಡಿಯೋವನ್ನು ಮೊದಲು ಹಂಚಿಕೊಳ್ಳಲಾಗಿದೆ.

ವಾಸ್ತವಾಂಶಗಳೇನು?

ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್, ನ್ಯೂಸ್ ಬಾಂಗ್ಲಾ ೨೪ ವರದಿಗೆ ನಮ್ಮನ್ನು ಕರೆದೊಯಿತು. ಜೂನ್ ೮, ೨೦೨೧ ರ ದಿನಾಂಕದ ವರದಿಯು ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿತ್ತು ಮತ್ತು ಭಾರತದ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ನಾಗರಿಕರನ್ನು ಒಳಗೊಂಡ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದೆ. "ಭಾರತದಲ್ಲಿ ಯುವತಿಯರ ಮೇಲಿನ ದೌರ್ಜನ್ಯ: ಟ್ರ್ಯಾಫಿಕಿಂಗ್ ರಿಂಗ್‌ಲೀಡರ್ಸ್ ತಪ್ಪೊಪ್ಪಿಗೆ" ಎಂಬ ಶೀರ್ಷಿಕೆಯ ವರದಿಯು ಬಾಸ್ ರಫಿ ಎಂದೂ ಕರೆಯಲ್ಪಡುವ ಅಶ್ರಫುಲ್ ಮೊಂಡಲ್ ಮತ್ತು ಬಾಂಗ್ಲಾದೇಶ ಮತ್ತು ಭಾರತದ ನಡುವೆ ಕಾರ್ಯನಿರ್ವಹಿಸುತ್ತಿರುವ ಕಳ್ಳಸಾಗಣೆ ಜಾಲದ ನಾಯಕರಾದ ಅಬ್ದುರ್ ರೆಹಮಾನ್‌ರಿಂದ ವಿವರವಾದ ತಪ್ಪೊಪ್ಪಿಗೆಗಳನ್ನು ಒಳಗೊಂಡಿದೆ. ವರದಿಯು ವೀಡಿಯೋವನ್ನು ಉಲ್ಲೇಖಿಸಿದೆ, ಇದು ಐದು ಪುರುಷರು ಮಹಿಳೆಯ ಮೇಲೆ ಹಲ್ಲೆ ಮಾಡುವುದನ್ನು ತೋರಿಸುತ್ತದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ವಿವರಿಸಿದೆ.

ಆ ವರ್ಷದ ಮೇ ತಿಂಗಳಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಮಹಿಳೆಯೊಬ್ಬರ ಲೈಂಗಿಕ ದೌರ್ಜನ್ಯದ ವರದಿಗಳ ನಂತರ ೨೦೨೧ ರಲ್ಲಿ ವೀಡಿಯೋ ಮೊದಲ ಬಾರಿಗೆ ವೈರಲ್ ಆಗಿತ್ತು. ಹಲವು ಭಾರತೀಯ ಸುದ್ದಿ ಸಂಸ್ಥೆಗಳು ಘಟನೆಯನ್ನು ವರದಿ ಮಾಡಿವೆ. ಜುಲೈ ೮, ೨೦೨೧ ರ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಮೇ ತಿಂಗಳ ಆರಂಭದಲ್ಲಿ ಪೂರ್ವ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಬಾಂಗ್ಲಾದೇಶಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವರು ಮಹಿಳೆಯರು ಸೇರಿದಂತೆ ಹನ್ನೆರಡು ಬಾಂಗ್ಲಾದೇಶಿ ಪ್ರಜೆಗಳ ಮೇಲೆ ಆರೋಪ ಹೊರಿಸಲಾಯಿತು. 

೨೦೨೧ ರ ಮೇ ೨೯ ರಂದು, ಪತ್ರಕರ್ತ ಅರುಣ್ ದೇವ್ ಅವರ ದಿ ಹಿಂದೂಸ್ತಾನ್ ಟೈಮ್ಸ್ ವರದಿಯು, ೨೦ ರ ಆಸುಪಾಸಿನ ಮಹಿಳೆಯೊಬ್ಬರನ್ನು ಹಿಂಸಿಸುವ ಮತ್ತು ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆದ ನಂತರ ನಾಲ್ಕು ದಾಖಲೆಗಳಿಲ್ಲದ ಬಾಂಗ್ಲಾದೇಶಿ ಪುರುಷರನ್ನು ಬಂಧಿಸಲಾಗಿದೆ ಎಂದು ಹೇಳಿದೆ. ಈಗ ವೈರಲ್ ಆಗಿರುವ ವೀಡಿಯೋ ಅದೇ ೨೦೨೧ ರ ಘಟನೆಯಿಂದ ಬಂದಿದೆ ಎಂದು ದೇವ್ ಲಾಜಿಕಲಿ ಫ್ಯಾಕ್ಟ್ಸ್‌ಗೆ ದೃಢಪಡಿಸಿದರು. 

ಆ ವೇಳೆ ಅಸ್ಸಾಂನಲ್ಲೂ ಈ ವೀಡಿಯೋ ವೈರಲ್ ಆಗಿತ್ತು. ಜುಲೈ ೮, ೨೦೨೧ ರಂದು Scroll.in ವರದಿಯು, ಅಪರಾಧಿಗಳು ಅಸ್ಸಾಂನಲ್ಲಿರುವ ಸ್ನೇಹಿತರೊಂದಿಗೆ ಕ್ಲಿಪ್ ಅನ್ನು ಹೇಗೆ ರೆಕಾರ್ಡ್ ಮಾಡಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ, ಇದು ವೈರಲ್ ಮತ್ತು ನಂತರದ ಪೊಲೀಸ್ ತನಿಖೆಗೆ ಕಾರಣವಾಯಿತು ಎಂಬುದನ್ನು ವಿವರಿಸಲಾಗಿದೆ. ಪ್ರಶ್ನೆಯಲ್ಲಿರುವ ಸ್ಕ್ರೀನ್‌ಶಾಟ್ ಮತ್ತು ವೀಡಿಯೋ ಒಂದೇ ಘಟನೆಯಿಂದ ಬಂದಿದೆ ಎಂದು  Scroll.in ಪತ್ರಕರ್ತ ರೋಕಿಬುಜ್ ಜಮಾನ್ ಲಾಜಿಕಲಿ ಫ್ಯಾಕ್ಟ್ಸ್ ಗೆ ದೃಢಪಡಿಸಿದರು.

Scroll.in ವರದಿಯು ಮೇ ೨೭, ೨೦೨೧ ರ ಬೆಂಗಳೂರಿನ ಪೊಲೀಸ್ ಆಯುಕ್ತರಿಂದ ಎಕ್ಸ್ ಪೋಷ್ಟ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಒಳಗೊಂಡಿದೆ, ಅದು ಹೀಗೆ ಹೇಳಿದೆ: “ವೀಡಿಯೋದ ವಿಷಯಗಳು ಮತ್ತು ಪ್ರಾಥಮಿಕ ತನಿಖೆಯ ಆಧಾರದ ಮೇಲೆ, @ramamurthyngrps ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರು ವಿರುದ್ಧ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಲಾಗಿದೆ."

ಹೆಚ್ಚಿನ ದೃಢೀಕರಣಕ್ಕಾಗಿ ನಾವು ರಾಮಮೂರ್ತಿ ಪೊಲೀಸರನ್ನು ಸಂಪರ್ಕಿಸಿದ್ದೇವೆ ಮತ್ತು ನಾವು ಪ್ರತಿಕ್ರಿಯೆಯನ್ನು ಪಡೆದ ನಂತರ ಈ ಚೆಕ್ ಅನ್ನು ನವೀಕರಿಸುತ್ತೇವೆ.

ಬಾಂಗ್ಲಾದೇಶದಲ್ಲಿ ಪ್ರಸ್ತುತ ಅಶಾಂತಿ

ವಿವಾದಾತ್ಮಕ ಉದ್ಯೋಗ ಕೋಟಾ ನೀತಿಯ ಕುರಿತು ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ಜೂನ್ ಅಂತ್ಯದಲ್ಲಿ ಭುಗಿಲೆದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಬಾಂಗ್ಲಾದೇಶವು ವಾರಗಳ ಕಾಲ ಪ್ರಕ್ಷುಬ್ಧತೆಯನ್ನು ಅನುಭವಿಸುತ್ತಿದೆ. ಈ ನೀತಿಯು ಪಾಕಿಸ್ತಾನದ ವಿರುದ್ಧ ೧೯೭೧ ರ ಸ್ವಾತಂತ್ರ್ಯ ಸಂಗ್ರಾಮದ ಅನುಭವಿಗಳ ಕುಟುಂಬಗಳಿಗೆ ೩೦ ಪ್ರತಿಶತದಷ್ಟು ಸರ್ಕಾರಿ ಸ್ಥಾನಗಳನ್ನು ಕಾಯ್ದಿರಿಸಿದೆ. ನೀತಿಯನ್ನು ೨೦೧೮ ರಲ್ಲಿ ರದ್ದುಗೊಳಿಸಲಾಯಿತು, ಆದರೆ ಜೂನ್ ೨೦೨೪ ರಲ್ಲಿ ಕೆಳ ನ್ಯಾಯಾಲಯದಿಂದ ಮರುಸ್ಥಾಪಿಸಲಾಯಿತು.

ಪ್ರತಿಭಟನೆಗೆ ಪ್ರತಿಕ್ರಿಯೆಯಾಗಿ, ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಯಿತು ಮತ್ತು ಕರ್ಫ್ಯೂ ವಿಧಿಸಲಾಯಿತು. ಆದರೆ, ಪ್ರತಿಭಟನಾಕಾರರು ಬೆಂಕಿ ಹಚ್ಚಲು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಪೊಲೀಸರು ಬಲಪ್ರಯೋಗ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಹಲವಾರು ಪ್ರತಿಭಟನಾಕಾರರು ಸಾವನ್ನಪ್ಪಿದರು. 

ವ್ಯಾಪಕ ಪ್ರತಿಭಟನೆಗಳ ನಂತರ, ಜುಲೈ ೨೧ ರಂದು, ದೇಶದ ಸರ್ವೋಚ್ಚ ನ್ಯಾಯಾಲಯವು ನೀತಿಯನ್ನು ಭಾಗಶಃ ರದ್ದುಗೊಳಿಸಿತು ಮತ್ತು ಸರ್ಕಾರದ ೯೩% ಉದ್ಯೋಗಗಳು ಅರ್ಹತೆಯ ಮೇಲೆ ಇರಬೇಕು ಎಂದು ನಿರ್ದೇಶಿಸಿತು. ಆದರೆ, ಪ್ರತಿಭಟನೆಗಳು ಮುಂದುವರೆದವು, ಆಡಳಿತಾರೂಢ ಅವನಿ ಲೀಗ್ ಮತ್ತು ಶೇಖ್ ಹಸೀನಾ ವಿರುದ್ಧ ಆಂದೋಲನವಾಗಿ ಮಾರ್ಪಟ್ಟಿತು.

ಬಿಬಿಸಿ ವರದಿಯ ಪ್ರಕಾರ, ಆಗಸ್ಟ್ ೫, ೨೦೨೪ ರ ಹೊತ್ತಿಗೆ, ಪೊಲೀಸ್ ಗುಂಡಿನ ದಾಳಿ, ಗುಂಪು ಥಳಿತ ಮತ್ತು ಬೆಂಕಿ ಹಚ್ಚುವಿಕೆಯಿಂದ ಸತ್ತವರ ಸಂಖ್ಯೆ ೨೮೦ ಆಗಿದೆ.

ಆಗಸ್ಟ್ ೫ ರಂದು ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು. ಆಕೆಯ ನಿರ್ಗಮನವನ್ನು ಆಚರಿಸಲು ಪ್ರತಿಭಟನಾಕಾರರು ಆಕೆಯ ನಿವಾಸಕ್ಕೆ ನುಗ್ಗಿ, ಆಕೆಯ ತಂದೆ ಮತ್ತು ಬಾಂಗ್ಲಾದೇಶದ ಸ್ವಾತಂತ್ರ್ಯ ವೀರ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಮತ್ತು ಬೀದಿಗಳಲ್ಲಿ ಬೆಂಕಿ ಹಚ್ಚುವ ದೃಶ್ಯಗಳು ಹೊರಹೊಮ್ಮಿವೆ. ಹಸೀನಾ ಪ್ರಸ್ತುತ ಭಾರತದಲ್ಲಿದ್ದಾರೆ ಮತ್ತು ಬೇರೆಡೆ ಆಶ್ರಯ ಪಡೆಯುವ ಸಂದರ್ಭದಲ್ಲಿ ಅಲ್ಲಿಯೇ ಉಳಿಯುವ ನಿರೀಕ್ಷೆಯಿದೆ, ವರದಿಗಳ ಪ್ರಕಾರ ಅವರು ಯುನೈಟೆಡ್ ಕಿಂಗ್‌ಡಮ್‌ಗೆ ಹೋಗಬಹುದು ಎಂದು ಸೂಚಿಸಲಾಗಿದೆ.

ಈ ಮಧ್ಯೆ, ಬಾಂಗ್ಲಾದೇಶ ಸೇನೆಯು ಮಧ್ಯಂತರ ಸರ್ಕಾರ ರಚನೆಯನ್ನು ಘೋಷಿಸಿತು, ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಮುಖ್ಯ ಸಲಹೆಗಾರರಾಗಿದ್ದರು. ಒಂದು ದಿನದ ಉದ್ವಿಗ್ನತೆಯ ನಂತರ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ. ಕರ್ಫ್ಯೂ ಆಗಸ್ಟ್ ೬ ರಂದು ಬೆಳಿಗ್ಗೆ ೬ ಗಂಟೆಗೆ ಕೊನೆಗೊಂಡಿತು, ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮತ್ತೆ ತೆರೆಯಲು ಅವಕಾಶ ಮಾಡಿಕೊಟ್ಟಿತು.

ತೀರ್ಪು

ಬೆಂಗಳೂರಿನಲ್ಲಿ ೨೦೨೧ ರ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಹುಟ್ಟಿಕೊಂಡ ವೈರಲ್ ವೀಡಿಯೋ ವನ್ನು ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯೊಂದಿಗೆ ತಪ್ಪಾಗಿ ಜೋಡಿಸಲಾಗಿದೆ, ಇದು ಅಲ್ಲಿನ "ಹಿಂದೂ ಮಹಿಳೆಯರ ಅವಸ್ಥೆ" ಯನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಬಹು ಸುದ್ದಿ ವರದಿಗಳು ಮತ್ತು ಪತ್ರಕರ್ತರು ವೀಡಿಯೋ ಹಳೆಯದು ಮತ್ತು ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿಲ್ಲ ಎಂದು ಧೃಢಪಡಿಸಿದ್ದಾವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ