ಮೂಲಕ: ಸೋಹಮ್ ಶಾ
ಜುಲೈ 11 2024
ವೈರಲ್ ವೀಡಿಯೋ, ಜನವರಿ ೧, ೨೦೨೪ ರಂದು ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದ್ದು, ರಾಹುಲ್ ಗಾಂಧಿ ಅವರ ಇತ್ತೀಚಿನ ಮಣಿಪುರ ಭೇಟಿಗೆ ಸಂಬಂಧಪಟ್ಟಿಲ್ಲ.
ಹೇಳಿಕೆ ಏನು?
"ರಾಹುಲ್ ಗಾಂಧಿ ಗೋ ಬ್ಯಾಕ್" ಮತ್ತು "ರಾಹುಲ್ ಗಾಂಧಿ ಹಾಯ್ ಹಾಯ್ (ರಾಹುಲ್ ಗಾಂಧಿ ವಿರುದ್ಧ ಕೂಗು)" ಎಂದು ಜನರ ಗುಂಪೊಂದು ಕೂಗುತ್ತಿರುವ ವೀಡಿಯೋ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರ ಇತ್ತೀಚಿನ ಮಣಿಪುರ ಭೇಟಿಯ ಸಂದರ್ಭದಲ್ಲಿ ಇದು ಸಂಭವಿಸಿದೆ ಎಂದು ಪೋಷ್ಟ್ ಹೇಳುತ್ತದೆ. ಫೂಟೇಜ್‌ನಲ್ಲಿ, ಪ್ರತಿಭಟನಾಕಾರರು ಇಂಗ್ಲಿಷ್ ಮತ್ತು ಅಸ್ಸಾಮಿ ಭಾಷೆಯಲ್ಲಿ "ರಾಕಿಬುಲ್ ಹುಸೇನ್ ಗೋ ಬ್ಯಾಕ್" ಮತ್ತು "ರಾಕಿಬುಲ್ ಹಟಾವೊ, ಸಮಗುರಿ ಬಸಾವೊ (ರಬಿಕುಲ್ ತೆಗೆದುಹಾಕಿ, ಸಮಗುರಿಯನ್ನು ಉಳಿಸಿ)" ಸೇರಿದಂತೆ ಭಿತ್ತಿಪತ್ರಗಳನ್ನು ಹಿಡಿದಿದ್ದಾರೆ. ಅಲ್ಲಿ ಧುಬ್ರಿ ಲೋಕಸಭಾ ಸದಸ್ಯ ರಕಿಬುಲ್ ಹುಸೇನ್ (ಸಮಗುರಿ ವಿಧಾನಸಭೆಯ ಸದಸ್ಯರಾಗಿದ್ದರು) ಅವರನ್ನು ಉಲ್ಲೇಖಿಸಲಾಗಿದೆ.
ಗೋಚರಿಸುವ ಇತರ ಘೋಷಣೆಗಳಲ್ಲಿ "ಅನ್ನಯ್ ಯಾತ್ರೆ (ಅನ್ಯಾಯ ಮಾರ್ಚ್)" ಮತ್ತು "ರಾಹುಲ್ ಗಾಂಧಿ ಗೋ ಬ್ಯಾಕ್" ಕಾಣಿಸುತ್ತವೆ. ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರು ಗಾಂಧಿಯವರೊಂದಿಗೆ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಅವರನ್ನು ಪ್ರತಿಭಟನಾಕಾರರ ಗುಂಪಿನಿಂದ ದೂರವಿಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್ .
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಅಂತಹ ಒಂದು ಪೋಷ್ಟ್ ನಲ್ಲಿ, "ರಾಹುಲ್ ಗಾಂಧಿಯವರು ಹಿಂತಿರುಗುವಂತೆ ಮಣಿಪುರದ ನಿವಾಸಿಗಳು ಕೇಳಿಕೊಂಡಿದ್ದಾರೆ, ಏಕೆಂದರೆ ಅವರ ಪ್ರಚೋದಕ ಭಾಷಣಗಳು ಹೊಸ ಘರ್ಷಣೆಗಳನ್ನು ಉಂಟುಮಾಡುತ್ತವೆ. ಇದು ನಿನ್ನೆ, ೮-೭-೨೦೨೪, ಆದ್ದರಿಂದ ಅವರು ಹಿಂತಿರುಗಬೇಕಾಯಿತು (sic)." ಈ ಹಿಂದೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲು ಹೆಸರುವಾಸಿಯಾದ ಸಾಮಾಜಿಕ ಮಾಧ್ಯಮ ಬಳಕೆದಾರರಾದ ಅರುಣ್ ಪುದೂರ್ ಕೂಡ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು, ಒಟ್ಟು ೪೦೦೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ.
ಆದ್ರೆ, ಈ ವೀಡಿಯೋ ಇತ್ತೀಚಿನ ಮಣಿಪುರದ್ದಲ್ಲ, ಬದಲಿಗೆ ಅಸ್ಸಾಂನ ಹಳೆಯ ಕ್ಲಿಪ್ ಎಂದು ನಮ್ಮ ತನಿಖೆಯು ಬಹಿರಂಗಪಡಿಸಿದೆ.
ಸತ್ಯ ಏನು?
ವೈರಲ್ ವೀಡಿಯೋದಲ್ಲಿ ಫ್ರೇಮ್‌ನ ಮೇಲಿನ ಬಲ ಮೂಲೆಯಲ್ಲಿ ಭಾರತೀಯ ಸುದ್ದಿ ಸಂಸ್ಥೆ ಎಎನ್ಐ ನ ವಾಟರ್‌ಮಾರ್ಕ್ ಅನ್ನು ನಾವು ಗುರುತಿಸಬಹುದು.
ಎಎನ್ಐ ವಾಟರ್‌ಮಾರ್ಕ್ ವೀಡಿಯೋದ ಚೌಕಟ್ಟಿನಲ್ಲಿ ಗೋಚರಿಸುತ್ತದೆ.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಇದು ಜನವರಿ ೨೧, ೨೦೨೪ ರಂದು ಎಎನ್ಐ ನ ಅಧಿಕೃತ ಎಕ್ಸ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಮಾಡಿದ ಸ್ವಲ್ಪ ಹೆಚ್ಚು ಅವಧಿಯ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ಈ ಪೋಷ್ಟ್ ನ ಶೀರ್ಷಿಕೆ ಹೀಗಿದೆ: "ಅಸ್ಸಾಂ: 'ರಾಹುಲ್ ಗಾಂಧಿ ಗೋ ಬ್ಯಾಕ್' ಎಂಬ ಪೋಸ್ಟರ್‌ಗಳನ್ನು ಹೊತ್ತ ಹೆಚ್ಚಿನ ಸಂಖ್ಯೆಯ ಜನರು ಮತ್ತು ಇಂದು ಸಂಜೆ ನಾಗಾಂವ್‌ನ ಅಂಬಾಗನ್ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ‘ಅನ್ಯಾಯಾ ಯಾತ್ರೆ’ ಪ್ರತಿಭಟನೆ ನಡೆಸಿತು.
ಘಟನೆಯನ್ನು ಕುರಿತು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ವಿವರವಾದ ವರದಿಯನ್ನು ಡೆಕ್ಕನ್ ಹೆರಾಲ್ಡ್ ಸುದ್ದಿ ವಾಹಿನಿಯಲ್ಲಿ ಕಂಡುಕೊಂಡೆವು. ಈ ವರದಿಯ ಪ್ರಕಾರ, ಗಾಂಧಿ ಭಾರತ್ ಜೋಡೋ ನ್ಯಾಯ್ ಯಾತ್ರೆಗಾಗಿ ಅಸ್ಸಾಂನ ರುಪೋಹಿಗೆ ಪ್ರಯಾಣಿಸುತ್ತಿದ್ದಾಗ ಅಂಬಾಗನ್‌ನಲ್ಲಿನ ಉಪಾಹಾರ ಗೃಹದ ಹೊರಗೆ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಅದೇ ದಿನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರ ಮೇಲೆ ಹಲ್ಲೆ ನಡೆಸಲಾಯಿತು ಮತ್ತು ಪ್ರತ್ಯೇಕ ಘಟನೆಯಲ್ಲಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ದಾಳಿ ನಡೆಸಲಾಯಿತು ಎಂದು ವರದಿ ಹೇಳಿದೆ.
ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, "ಪೂಜಾ ಗಿಫ್ಟ್ ಸ್ಟೋರ್" ಎಂಬ ಅಂಗಡಿ ಮತ್ತು ಅದರ ಮುಂದೆ "ಗುರುಕುಲ ಗ್ಲೋಬಲ್ ಅಕಾಡೆಮಿ" ಎಂಬ ಫಲಕವನ್ನು ನಾವು ಗಮನಿಸಿದ್ದೇವೆ.
ವೈರಲ್ ವೀಡಿಯೋದ ಸ್ಕ್ರೀನ್‌ಗ್ರಾಬ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಈ ಅಂಗಡಿಗಾಗಿ ಗೂಗಲ್ ಹುಡುಕಾಟವು ನಮಗೆ ಅದನ್ನು ಅಸ್ಸಾಂನ ಪಚಿಮ್ ಸುಲಾನಿಗೆ ಜಿಯೋಲೊಕೇಟ್ ಮಾಡಲು ಅವಕಾಶ ಮಾಡಿಕೊಟ್ಟಿತು. ಲಭ್ಯವಿರುವ ಗೂಗಲ್ ಚಿತ್ರಗಳಲ್ಲಿ ಅಂಗಡಿಯ ಮುಂಭಾಗದಲ್ಲಿ "ಗುರುಕುಲ್ ಗ್ಲೋಬಲ್ ಅಕಾಡೆಮಿ" ಚಿಹ್ನೆಯು ಸಹ ಗೋಚರಿಸುತ್ತದೆ. ಅಂಗಡಿಯ ಸೂಚನಾ ಫಲಕವು ಅದರ ಸ್ಥಳವನ್ನು ಅಂಬಾಗನ್, ನಾಗಾನ್, ಅಸ್ಸಾಂ ಎಂದು ಸ್ಪಷ್ಟವಾಗಿ ಹೇಳುತ್ತದೆ, ಘಟನೆಯು ಅಸ್ಸಾಂನಲ್ಲಿ ನಡೆದಿದೆಯೇ ಹೊರತು ಮಣಿಪುರದಲ್ಲಿ ಅಲ್ಲ ಎಂದು ಇದು ದೃಢಪಡಿಸುತ್ತದೆ.
ವೀಡಿಯೋದಲ್ಲಿ ಕಂಡುಬರುವ ಅಂಗಡಿಯನ್ನು ನಾವು ಅಸ್ಸಾಂನಲ್ಲಿ ಪಚಿಮ್ ಸುಲಾನಿಗೆ ಪತ್ತೆಹಚ್ಚಲು ಸಾಧ್ಯವಾಯಿತು. (ಮೂಲ: ಗೂಗಲ್ ಮ್ಯಾಪ್ಸ್)
ಜುಲೈ ೮, ೨೦೨೪ ರಂದು ಗಾಂಧಿಯವರು ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನೆಗಳ ಯಾವುದೇ ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿಲ್ಲ. ಮಣಿಪುರವು ಮೇ ೨೦೨೩ ರಿಂದ ಜನಾಂಗೀಯ ಸಂಘರ್ಷದಲ್ಲಿದೆ. ದಿ ಹಿಂದೂ ಪ್ರಕಾರ, ೨೨೧ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ೫೦,೦೦೦ ಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ.
ತೀರ್ಪು
ಹೇಳಿಕೆ ತಪ್ಪು. ವೀಡಿಯೋ ಜನವರಿ ೨೦೨೪ ರಲ್ಲಿ ಅಸ್ಸಾಂನಿಂದ ಬಂದಿದೆ ಮತ್ತು ರಾಹುಲ್ ಗಾಂಧಿಯವರ ಇತ್ತೀಚಿನ ಮಣಿಪುರ ಭೇಟಿಗೆ ಸಂಬಂಧವಿಲ್ಲ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here