ಮೂಲಕ: ಉಮ್ಮೆ ಕುಲ್ಸುಮ್
ಸೆಪ್ಟೆಂಬರ್ 18 2024
ವೀಡಿಯೋ ಭಾರತದದ್ದಲ್ಲ; ಇದು ಪೆಸಿಫಿಕ್ ಹೆದ್ದಾರಿಗೆ ಸಂಪರ್ಕಿಸುವ ಗ್ವಾಟೆಮಾಲಾದ ರಾಷ್ಟ್ರೀಯ ಮಾರ್ಗ CA-9 ನಲ್ಲಿ ಹಾನಿಗೊಳಗಾದ ರಸ್ತೆಯನ್ನು ಚಿತ್ರಿಸುತ್ತದೆ.
ಹೇಳಿಕೆ ಏನು?
ಬಿರುಕು ಬಿಟ್ಟ ರಸ್ತೆಯಿಂದ ನೀರು ಹೊರೆಬರುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಭಾರತದ ರಸ್ತೆಯನ್ನು ಚಿತ್ರಿಸುತ್ತದೆ ಮತ್ತು ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಟೀಕಿಸುತ್ತದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ನಾಯಕ ಸುರೇಂದ್ರ ಸಿಂಗ್ ರಜಪೂತ್ ಅವರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ: "ರಸ್ತೆ ಒಡೆಯುವ ಅಭಿವೃದ್ಧಿಗಾಗಿ ನಿಮ್ಮ ಜನ್ಮದಿನದಂದು ಅಭಿನಂದನೆಗಳು, ಸರ್." ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ ೧೭ ರಂದು ಈ ಹೇಳಿಕೆಗಳು ಹರಿದಾಗುತ್ತಿವೆ. ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಲಭ್ಯವಿದೆ.
ಆನ್‌ಲೈನ್‌ನಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ವೀಡಿಯೋ ವಾಸ್ತವವಾಗಿ ಗ್ವಾಟೆಮಾಲಾದಿಂದ ಬಂದಿದೆ, ಭಾರತದಿಂದಲ್ಲ.
ನಾವು ಕಂಡುಕೊಂಡದ್ದು ಏನು?
ವೈರಲ್ ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಸೆಪ್ಟೆಂಬರ್ ೧೨, ೨೦೨೪ ರಂದು ಗ್ವಾಟೆಮಾಲಾನ್ ಸುದ್ದಿವಾಹಿನಿಯಾದ ಪ್ರೆನ್ಸಾ ಲಿಬ್ರೆ ಪ್ರಕಟಿಸಿದ ವರದಿಯನ್ನು ಕಂಡುಕೊಂಡೆವು. ವರದಿಯು ವೈರಲ್ ವೀಡಿಯೋದ ಕೀಫ್ರೇಮ್ ಅನ್ನು ಒಳಗೊಂಡಿದೆ ಮತ್ತು ಗ್ವಾಟೆಮಾಲಾದ ಹಳ್ಳಿ, ವಿಲ್ಲಾ ನ್ಯೂವಾ ಬಳಿಯ, CA-9 ರಾಷ್ಟ್ರೀಯ ಮಾರ್ಗದಲ್ಲಿ ಕಂಡ ಬಿರುಕುಗಳನ್ನು ವಿವರಿಸಿದೆ. ಭಾರೀ ಮಳೆಯಿಂದಾಗಿ ರಸ್ತೆಯ ಕೆಳಗಿರುವ ಮೋರಿ ತುಂಬಿ ಹಾನಿಯಾಗಿದೆ ಎಂದು ಅದು ಗಮನಿಸಿದೆ.
ಮತ್ತೊಂದು ಗ್ವಾಟೆಮಾಲನ್ ಸುದ್ದಿ ಮೂಲ, ಲಾ ಹೋರಾ ಜಿಟಿ, ಸೆಪ್ಟೆಂಬರ್ ೧೨, ೨೦೨೪ ರ ಸಂಜೆ ಭಾರೀ ಮಳೆಯ ನಂತರ ಈ ಘಟನೆ ಸಂಭವಿಸಿದೆ ಎಂದು ವರದಿ ಮಾಡಿದೆ.
ಗೂಗಲ್ ಮ್ಯಾಪ್ಸ್ ಬಳಸಿಕೊಂಡು ವೀಡಿಯೋದ ಜಿಯೋಲೊಕೇಶನ್ ವಿಶ್ಲೇಷಣೆಯು ಅದನ್ನು ಗ್ವಾಟೆಮಾಲಾದ ವಿಲ್ಲಾ ನ್ಯೂವಾ ಗ್ರಾಮದಲ್ಲಿ CA-9 ಮಾರ್ಗದಲ್ಲಿ ಚಿತ್ರೀಕರಿಸಲಾಗಿದೆ ಎಂದು ಖಚಿತಪಡಿಸುತ್ತದೆ, ಅದು ಭಾರತದಿಂದಲ್ಲ ಎಂದು ಪರಿಶೀಲಿಸುತ್ತದೆ.
ತೀರ್ಪು
ಗ್ವಾಟೆಮಾಲಾದಲ್ಲಿ ಹಾನಿಗೊಳಗಾದ ರಸ್ತೆಯಿಂದ ನೀರು ಹೊರಬರುತ್ತಿರುವ ವೀಡಿಯೋವನ್ನು ಭಾರತದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here