ಮೂಲಕ: ತಾಹಿಲ್ ಅಲಿ
ನವೆಂಬರ್ 14 2024
ಈ ಚಿತ್ರವನ್ನು ಎಡಿಟ್ ಮಾಡಲಾಗಿದೆ; ೨೦೧೭ ರ ಮೂಲ ಚಿತ್ರ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಅಂಡಾಕಾರದ ಪೆಂಡೆಂಟ್ ಅನ್ನು ಧರಿಸಿದ್ದರು, ಶಿಲುಬೆಯಲ್ಲ.
ಹೇಳಿಕೆ ಏನು?
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಎರಡು ಫೋಟೋಗಳ ಕೊಲಾಜ್ ವ್ಯಾಪಕವಾಗಿ ಹರಡುತ್ತಿದೆ, ಇದು ಚುನಾವಣಾ ಸಮಯದಲ್ಲಿ ಮತದಾರರನ್ನು ಸಮಾಧಾನಪಡಿಸಲು ಉದ್ದೇಶಪೂರ್ವಕವಾಗಿ ವಿವಿಧ ಪ್ರದೇಶಗಳಲ್ಲಿ ವಿವಿಧ ಧಾರ್ಮಿಕ ಚಿಹ್ನೆಗಳನ್ನು ಧರಿಸಿದ್ದರು ಎಂದು ಹೇಳಲಾಗುತ್ತಿದೆ.
ನವೆಂಬರ್ ೧೩, ೨೦೨೪ ರ ಬುಧವಾರ ಉಪಚುನಾವಣೆಯಲ್ಲಿ ಮತದಾನ ನಡೆಯಲಿರುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಗಾಂಧಿಯವರು ಚುನಾವಣಾ ಪಾದಾರ್ಪಣೆ ಮಾಡುತ್ತಿದ್ದಾರೆ.
ಮೊದಲ ಚಿತ್ರ ಹಿಂದೂ ಧರ್ಮದಲ್ಲಿ ಬಳಸಲಾಗುವ 'ರುದ್ರಾಕ್ಷ' ಸಾರವನ್ನು ಧರಿಸಿರುವ ಗಾಂಧಿಯನ್ನು ತೋರಿಸುತ್ತದೆ. ಚಿತ್ರವನ್ನು "ಕಾಶಿ" (ವಾರಣಾಸಿ, ಉತ್ತರ ಪ್ರದೇಶ) ಎಂದು ಲೇಬಲ್ ಮಾಡಲಾಗಿದೆ, ಇದನ್ನು ಪವಿತ್ರ ಪ್ರದೇಶವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲ್ಪಟ್ಟಿದೆ. ಎರಡನೇ ಫೋಟೋದಲ್ಲಿ ಆಕೆ ಕ್ರಿಶ್ಚಿಯನ್ ಶಿಲುಬೆಯನ್ನು ಧರಿಸಿರುವುದನ್ನು ತೋರಿಸುತ್ತದೆ ಮತ್ತು "ಕೇರಳ" ಎಂದು ಲೇಬಲ್ ಮಾಡಲಾಗಿದೆ.
ಎಕ್ಸ್ (ಹಿಂದೆ ಟ್ವಿಟ್ಟರ್) ಬಳಕೆದಾರರು ಈ ಕೊಲಾಜ್ ಅನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ "ಹಿಂದೂಗಳನ್ನು ಹೇಗೆ ಮರುಳು ಮಾಡುವುದು? ಇಲ್ಲಿ ನೋಡಿ." ಈ ಫ್ಯಾಕ್ಟ್-ಚೆಕ್ ಬರೆಯುವ ಹೊತ್ತಿಗೆ, ಪೊಸ್ಟ್ ೧೯೬,೦೦೦ ವೀಕ್ಷಣೆಗಳನ್ನು ಮತ್ತು ೧೫,೦೦೦ ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಕಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ವಾಸ್ತವಾಂಶಗಳೇನು?
ಗಾಂಧಿ ಕ್ರಿಶ್ಚಿಯನ್ ಶಿಲುಬೆಯನ್ನು ಧರಿಸಿರುವ ವೈರಲ್ ಚಿತ್ರವನ್ನು ಎಡಿಟ್ ಮಾಡಲಾಗಿದೆ. ೨೦೧೭ ರಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ತೆಗೆದ ಮೂಲ ಚಿತ್ರದಲ್ಲಿ ಶಿಲುಬೆ ಕಾಣಿಸುತ್ತಿಲ್ಲ.
ಶಿಲುಬೆಯೊಂದಿಗಿನ ಫೋಟೋ
ಫೆಬ್ರವರಿ ೧೮, ೨೦೧೭ ರಂದು ಎನ್‌ಡಿಟಿವಿ ವರದಿಯಲ್ಲಿ ಪ್ರಕಟವಾದ ವೈರಲ್ ಫೋಟೋದ ಕ್ರಾಪ್ ಮಾಡದ ಆವೃತ್ತಿಯನ್ನು ನಾವು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹಂದುಕೊಂಡೆವು. "ಯುಪಿ ಚುನಾವಣೆ ೨೦೧೭: ಪ್ರಿಯಾಂಕಾ ಗಾಂಧಿ ಶುಕ್ರವಾರ ರಾಯ್ಬರೇಲಿಯಲ್ಲಿ ಮೊದಲುಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು," ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ಆವೃತ್ತಿಯಲ್ಲಿ, ಗಾಂಧಿಯವರು ಅಂಡಾಕಾರದ ಬೆಳ್ಳಿಯ ಪೆಂಡೆಂಟ್ ಹೊಂದಿರುವ ಸಾರವನ್ನು ಧರಿಸಿದ್ದಾರೆ, ಶಿಲುಬೆಯಲ್ಲ. ಮೂಲ ಚಿತ್ರದಲ್ಲಿ ಮರದ ಬೇಲಿಯ ಹಿಂದೆ ನಿಂತಿರುವ ಜನರನ್ನು ತೋಸುತ್ತದೆ, ಇದನ್ನು ವೈರಲ್ ಚಿತ್ರದಲ್ಲಿ ಎಡಿಟ್ ಮಾಡಲಾಗಿದೆ.
೨೦೧೭ ರ ಮೂಲ ಚಿತ್ರ ಮತ್ತು ವೈರಲ್ ಚಿತ್ರದ ಹೋಲಿಕೆ. (ಮೂಲ: ಎನ್‌ಡಿಟಿವಿ/ಎಕ್ಸ್)
ಗೆಟ್ಟಿ ಇಮೇಜಸ್ ಕೂಡ ಅದೇ ಫೋಟೋವನ್ನು ಪ್ರಕಟಿಸಿದೆ, ಛಾಯಾಗ್ರಾಹಕ ಸಂಜಯ್ ಕನೋಜಿಯಾ/ಎಎಫ್ ಪಿ ಅವರಿಗೆ ಸಲ್ಲುತ್ತದೆ. ಫೆಬ್ರವರಿ ೧೭, ೨೦೧೭ ರಂದು ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ರ‍್ಯಾಲಿಯಲ್ಲಿ ಇದನ್ನು ತೆಗೆದುಕೊಳ್ಳಲಾಗಿದೆ. ಬಿಬಿಸಿ ತಮಿಳು, ನ್ಯಾಷನಲ್ ಹೆರಾಲ್ಡ್, ದಿ ನ್ಯಾಷನಲ್, ಮತ್ತು ದಿ ಎಕನಾಮಿಕ್ ಟೈಮ್ಸ್ ಸೇರಿದಂತೆ ಇತರ ಸುದ್ದಿವಾಹಿನಿಗಳು ಸಹ ಚಿತ್ರದ ಈ ಆವೃತ್ತಿಯನ್ನು ಪ್ರಕಟಿಸಿದ್ದವು.
'ರುದ್ರಾಕ್ಷ' ಜೊತೆಗಿನ ಫೋಟೋ
ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಮಾರ್ಚ್ ೨೦, ೨೦೧೯ ರಂದು ಎಬಿಪಿ ನ್ಯೂಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸೇರಿದಂತೆ ಹಲವು ವೀಡಿಯೋಗಳನ್ನು ಕಂಡುಕೊಂಡೆವು. ಅದರಲ್ಲಿ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಗಾಂಧಿ ಅದೇ 'ರುದ್ರಾಕ್ಷ' ಪ್ರಾರ್ಥನಾ ಮಣಿಗಳನ್ನು ಧರಿಸಿರುವುದು ಕಂಡುಬರುತ್ತದೆ.
"ಪ್ರಿಯಾಂಕಾ ಗಾಂಧಿ ಶಿಸ್ತನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ" ಎಂಬ ಶೀರ್ಷಿಕೆಯ ಎಬಿಪಿ ವೀಡಿಯೋದಲ್ಲಿ, ೦:೩೮ ಮತ್ತು ೧:೨೫ ರ ಟೈಮ್‌ಸ್ಟ್ಯಾಂಪ್‌ಗಳಲ್ಲಿ ಗಾಂಧಿಯನ್ನು ತೋರಿಸುತ್ತದೆ. ಹೆಚ್ಚುವರಿಯಾಗಿ, ಗೆಟ್ಟಿ ಇಮೇಜಸ್ ಮಾರ್ಚ್ ೨೦೧೯ ರಲ್ಲಿ ವಾರಣಾಸಿಗೆ ಭೇಟಿ ನೀಡಿದಾಗ ಗಾಂಧಿಯವರು 'ರುದ್ರಾಕ್ಷ' ಮಣಿಗಳನ್ನು ಧರಿಸಿರುವ ಇದೇ ರೀತಿಯ ಫೋಟೋಗಳನ್ನು ಪ್ರಕಟಿಸಿದೆ.
ತೀರ್ಪು
ಪ್ರಿಯಾಂಕಾ ಗಾಂಧಿ ಕ್ರಿಶ್ಚಿಯನ್ ಶಿಲುಬೆಯನ್ನು ಧರಿಸಿರುವ ಫೋಟೋವನ್ನು ಎಡಿಟ್ ಮಾಡಲಾಗಿದೆ. ಫೆಬ್ರವರಿ ೨೦೧೭ ರಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ತೆಗೆದ ಮೂಲ ಫೋಟೋ ಕೇರಳದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. 'ರುದ್ರಾಕ್ಷ' ಮಣಿಗಳನ್ನು
ಹೊಂದಿರುವ ಚಿತ್ರವು ಅಧಿಕೃತವಾಗಿದೆ ಮತ್ತು ೨೦೧೯ ರಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ತೆಗೆದುಕೊಳ್ಳಲಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.