ಮೂಲಕ: ಇಶಿತಾ ಗೋಯಲ್ ಜೆ
ನವೆಂಬರ್ 7 2024
ಟ್ರಂಪ್ ಅವರು ರಾಬರ್ಟ್ ಎಫ್ ಕೆನಡಿ ಜೂನಿಯರ್ ಅನ್ನು ಉಲ್ಲೇಖಿಸುತ್ತಿದ್ದಂತೆ ಪ್ರೇಕ್ಷಕರು ರಾಬರ್ಟ್ ಅವರ ಅಡ್ಡಹೆಸರು 'ಬಾಬಿ, ಬಾಬಿ' ಎಂದು ಕೂಗಿದರು.
ನವೆಂಬರ್ ೬, ೨೦೨೪ ರಂದು, ಡೊನಾಲ್ಡ್ ಜೆ. ಟ್ರಂಪ್ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೋಕ್ರಾಟ್ ಕಮಲಾ ಹ್ಯಾರಿಸ್ ವಿರುದ್ಧ ಗೆದ್ದು, ೪೭ ನೇ ಅಧ್ಯಕ್ಷರಾದರು. ಟ್ರಂಪ್ ಅವರು ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಚುನಾವಣಾ ರಾತ್ರಿ ವೀಕ್ಷಣೆ ಪಾರ್ಟಿಯನ್ನು ಆಯೋಜಿಸಿದರು, ಅಲ್ಲಿ ಅವರು ಗೆಲ್ಲುವ ಸಾಧ್ಯತೆಯನ್ನು ಪ್ರಕ್ಷೇಪಗಳು ತೋರಿಸಿದಂತೆ ಅವರು ವಿಜಯ ಭಾಷಣ ಮಾಡಿದರು.
ಹೇಳಿಕೆ ಏನು?
ಟ್ರಂಪ್‌ರ ಭಾಷಣದ ಸಮಯದಲ್ಲಿ ಜನಸಮೂಹವು "ಮೋದಿ, ಮೋದಿ"-ಭಾರತದ ಪ್ರಧಾನಿ ನರೇಂದ್ರ ಮೋದಿಯ ಉಲ್ಲೇಖ-ಎಂದು ಘೋಷಣೆಗಳನ್ನು ಕೂಗಿದರು ಎಂಬ ಹೇಳಿಕೆಯೊಂದಿಗೆ, ಟ್ರಂಪ್ ಜನರನ್ನು ಉದ್ದೇಶಿಸಿ ಮಾತನಾಡುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕ್ಲಿಪ್‌ನಲ್ಲಿ, ಟ್ರಂಪ್ ಅವರು "ಅಮೆರಿಕವನ್ನು ಮತ್ತೆ ಆರೋಗ್ಯಕರವಾಗಿಸಬೇಕು " ಎಂದು ಹೇಳುವುದನ್ನು ಕೇಳಬಹುದು. ಜನಸಮೂಹವು "ಬಾಬಿ, ಬಾಬಿ" ಎಂದು ಜಪಿಸುವ ಮೂಲಕ ಪ್ರತಿಕ್ರಿಯಿಸುತ್ತದೆ, ಅದರ ನಂತರ ಟ್ರಂಪ್ , "ಅವನು ಒಬ್ಬ ಮಹಾನ್ ವ್ಯಕ್ತಿ, ಮತ್ತು ಅವನು ಕೆಲವು ಕೆಲಸಗಳನ್ನು ಮಾಡಲು ಬಯಸುತ್ತಾನೆ, ಮತ್ತು ನಾವು ಅವನನ್ನು ಮಾಡಲು ಬಿಡುತ್ತೇವೆ," ಎಂದು ಹೇಳುತ್ತಾರೆ. ಇದರ ಹೊರತಾಗಿಯೂ, ಬಳಕೆದಾರರು "ಟ್ರಂಪ್ ವಿಜಯ ಭಾಷಣದ ಸಮಯದಲ್ಲಿ ಮೋದಿ ಮೋದಿ ಪಠಣಗಳು" ಮತ್ತು "ಮೋದಿ ಮೋದಿಯ ಪಠಣವನ್ನು ಕೇಳಿದ ನಂತರ ಶ್ರೀ #ಟ್ರಂಪ್ ಅವರ ಮುದ್ದಾದ ಸ್ಮೈಲ್ ಅನ್ನು ನೋಡಿ... ಮೋದಿ-ಟ್ರಂಪ್ ಬಾಂಧವ್ಯವನ್ನು ಹೆಚ್ಚಿಸುವುದಲ್ಲದೆ ಭಾರತ-ಯು.ಎಸ್. ಸಂಬಂಧಗಳು ಎರಡೂ ದೇಶಗಳ ವಿರೋಧಿಗಳಿಗೆ ಪಾಠವಾಗಿದೆ." ಎಂಬ ಶೀರ್ಷಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಮತ್ತೊಬ್ಬ ಯೂಟ್ಯೂಬ್ ಬಳಕೆದಾರರು "ಡೊನಾಲ್ಡ್ ಟ್ರಂಪ್ ವಿನ್ನರ್ ಮೋದಿ ಚಾಂಟ್ಸ್" ಶೀರ್ಷಿಕೆಯ ಕ್ಲಿಪ್ ಅನ್ನು ಪೋಷ್ಟ್ ಮಾಡಿದ್ದಾರೆ. ಈ ಹೇಳಿಕೆಗಳ ಆರ್ಕೈವ್ ಆವೃತ್ತಿಗಳು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಲಭ್ಯವಿದೆ.
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕರಾದ ಭಗಬನ್ ದಾಸ್, ಜಿತು ಜಿರತಿ ಮತ್ತು ವಿವಿನ್ ಭಾಸ್ಕರನ್ ಸೇರಿದಂತೆ ಹಲವಾರು ರಾಜಕಾರಣಿಗಳು ತಮ್ಮ ಈ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಅದರ ಆರ್ಕೈವ್ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಎಕ್ಸ್/ಯೂಟ್ಯೂಬ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
"ನಮಸ್ತೆ ಟ್ರಂಪ್" ಮತ್ತು "ಹೌಡಿ ಮೋದಿ" ಯಂತಹ ಕಾರ್ಯಕ್ರಮಗಳಲ್ಲಿ ಕಾರ್ಯತಂತ್ರದ ಆಸಕ್ತಿಗಳು, ರಾಜತಾಂತ್ರಿಕ ಸಹಕಾರ ಮತ್ತು ವೈಯಕ್ತಿಕ ಬಾಂಧವ್ಯದ ಪ್ರದರ್ಶನಗಳಿಂದ ಒತ್ತಿಹೇಳಲಾದ ಟ್ರಂಪ್ ಮತ್ತು ಮೋದಿ ನಡುವಿನ ಬಲವಾದ ಸಂಬಂಧವನ್ನು ವರದಿಗಳು ಎತ್ತಿ ತೋರಿಸಿವೆ. ಬುಧವಾರ, ಟ್ರಂಪ್ ಅವರ ವಿಜಯದ ಬಗ್ಗೆ ಅಭಿನಂದಿಸಿದ ಮೊದಲ ವಿಶ್ವ ನಾಯಕರಲ್ಲಿ ಮೋದಿ ಒಬ್ಬರು, ಅವರು ಮತ್ತಷ್ಟು ಸಹಯೋಗಕ್ಕಾಗಿ ನೋಡುತ್ತಿದ್ದಾರೆ ಎಂದು ಹೇಳಿದರು.
ಆದರೆ, ನಮ್ಮ ವಿಶ್ಲೇಷಣೆಯ ಪ್ರಕಾರ ಜನರು ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರನ್ನು ಉಲ್ಲೇಖಿಸಿ "ಬಾಬಿ, ಬಾಬಿ" ಎಂದು ಕೂಗಿದ್ದರು, ಆದರೆ ಹೇಳಿಕೊಂಡಂತೆ "ಮೋದಿ, ಮೋದಿ" ಅಲ್ಲ.
ವಾಸ್ತವಾಂಶಗಳೇನು?
ಕೆಲವು ಪೋಷ್ಟ್ ಗಳ ಮೂಲೆಯಲ್ಲಿ ಪಿಬಿಎಸ್ ನ್ಯೂಸ್ ಲೋಗೋವನ್ನು ನೋಡಬಹುದು, ಇದು ನವೆಂಬರ್ ೬, ೨೦೨೪ ರಂದು ಅದರ ಯೂಟ್ಯೂಬ್ ಚಾನೆಲ್ ನಲ್ಲಿ ಪೋಷ್ಟ್ ಮಾಡಿದ ವೀಡಿಯೋದ ದೀರ್ಘ ಆವೃತ್ತಿಗೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಮ್ಮನ್ನು ಕರೆದೊಯ್ಯಿತು. ಆದರೆ ಶೀರ್ಷಿಕೆ ಹೀಗಿದೆ, "ಟ್ರಂಪ್ ವೆಸ್ಟ್ ಪಾಮ್ ಬೀಚ್‌ನಲ್ಲಿ ಚುನಾವಣಾ ರಾತ್ರಿ ವೀಕ್ಷಣೆ ಪಾರ್ಟಿಯನ್ನು ಆಯೋಜಿಸುತ್ತಾರೆ, ಫ್ಲೋರಿಡಾ." ೭:೫೨:೧೪ ಟೈಮ್‌ಸ್ಟ್ಯಾಂಪ್‌ನಲ್ಲಿ, ತುಣುಕು ವೈರಲ್ ಕ್ಲಿಪ್‌ಗೆ ಹೊಂದಿಕೆಯಾಗುತ್ತದೆ.
ಈ ವಿಭಾಗದಲ್ಲಿ, ಟ್ರಂಪ್ ಕೆನಡಿಯನ್ನು ಉಲ್ಲೇಖಿಸುವಾಗ, “ಈ ಮಹಾನ್ ಗುಂಪಿನ ಪರವಾಗಿ ನಾನು ಹೇಳಲು ಬಯಸುತ್ತೇನೆ-ಇವರು ಕಷ್ಟಪಟ್ಟು ದುಡಿಯುವ ಜನರು, ಇವರು ಅದ್ಭುತ ಜನರು-ನಾವು ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರಂತಹ ಕೆಲವು ಹೆಸರುಗಳನ್ನು ಸೇರಿಸಬಹುದು. ಅವರು ಅಮೆರಿಕವನ್ನು ಮತ್ತೆ ಆರೋಗ್ಯಕರವಾಗಿಸಲು ಸಹಾಯ ಮಾಡುತ್ತಾರೆ. "
ಇದನ್ನು ಅನುಸರಿಸಿ, ಪ್ರೇಕ್ಷಕರು "ಬಾಬಿ, ಬಾಬಿ" ಎಂದು ಘೋಷಣೆ ಕೂಗಿದರು. ಟ್ರಂಪ್ ಮುಂದುವರಿಸುತ್ತಾ, "ಅವರು ಒಬ್ಬ ಮಹಾನ್ ವ್ಯಕ್ತಿ, ಮತ್ತು ಅವರು ಏನಾದರೂ ಮಾಡಲು ಬಯಸುತ್ತಾರೆ, ಮತ್ತು ನಾವು ಅವನನ್ನು ಮಾಡಲು ಬಿಡುತ್ತೇವೆ. ನಾನು ಹೇಳಿದೆ, ಬಾಬಿ, ತೈಲವನ್ನು ನನಗೆ ಬಿಟ್ಟುಬಿಡಿ, ನಮ್ಮಲ್ಲಿ ಹೆಚ್ಚು ಲಿಕ್ವಿಡ್ ಗೋಲ್ಡ್ ತೈಲ ಮತ್ತು ಅನಿಲವಿದೆ, ಪ್ರಪಂಚದ ಯಾವುದೇ ದೇಶಕ್ಕಿಂತ ಹೆಚ್ಚು ಲಿಕ್ವಿಡ್ ಗೋಲ್ಡ್ ಇದೆ, ಸೌದಿ ಅರೇಬಿಯಾಕ್ಕಿಂತ ಹೆಚ್ಚು."
ಲಸಿಕೆಗಳು ಮತ್ತು ಆರೋಗ್ಯದ ಬಗ್ಗೆ ವಿವಾದಾತ್ಮಕ ನಿಲುವು ಹೊಂದಿರುವ ಅಮೇರಿಕನ್ ರಾಜಕಾರಣಿ ಮತ್ತು ವಕೀಲರಾದ "ಬಾಬಿ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಕೆನಡಿಯನ್ನು ಪಠಣವು ಉಲ್ಲೇಖಿಸಿದೆ ಎಂಬುದು ತುಣುಕಿನಿಂದ ಸ್ಪಷ್ಟವಾಗಿದೆ.
ವಾಲ್ ಸ್ಟ್ರೀಟ್ ಜರ್ನಲ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಮಾಡಿದೆ, ಅಲ್ಲಿ ಇದೇ ರೀತಿಯ ತುಣುಕನ್ನು ೧೯:೩೩ ಮಾರ್ಕ್‌ನಲ್ಲಿ ಕಾಣಿಸಿಕೊಳ್ಳುತ್ತದೆ. "ಅಮೆರಿಕವನ್ನು ಮತ್ತೆ ಆರೋಗ್ಯಕರವಾಗಿಸಲು" ಕೆನಡಿಯವರ ಬದ್ಧತೆಯನ್ನು ಟ್ರಂಪ್ ಶ್ಲಾಘಿಸಿದ ನಂತರ ಪ್ರೇಕ್ಷಕರು "ಬಾಬಿ, ಬಾಬಿ" ಎಂದು ಜಪಿಸಿದರು ಎಂದು ಗಾರ್ಡಿಯನ್ ಮತ್ತು ಟೈಮ್‌ನಂತಹ ಹಲವಾರು ಸುದ್ದಿವಾಹಿನಿಗಳು ವರದಿ ಮಾಡಿವೆ.
ತೀರ್ಪು
ವೈರಲ್ ಹೇಳಿಕೆ ತಪ್ಪು. ಅವರ ವಿಜಯ ಭಾಷಣದ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರನ್ನು "ಬಾಬಿ" ಎಂದು ಉಲ್ಲೇಖಿಸಿದರು ಮತ್ತು ಪ್ರೇಕ್ಷಕರು "ಬಾಬಿ, ಬಾಬಿ" ಎಂದು ಪ್ರತಿಕ್ರಿಯಿಸಿದರು. ಟ್ರಂಪ್ ಅವರ ಭಾಷಣದ ಸಮಯದಲ್ಲಿ "ಮೋದಿ, ಮೋದಿ" ಎಂಬ ಘೋಷಣೆಗಳು ಕೇಳಿಬಂದವು ಎಂದು ಸೂಚಿಸಲಾದ ಸಾಮಾಜಿಕ ಮಾಧ್ಯಮದಲ್ಲಿ ತುಣುಕನ್ನು ತಪ್ಪಾಗಿ ಅರ್ಥೈಸಲಾಗಿದೆ.
(೨೦೨೪ ರ ಯುಎಸ್ ಚುನಾವಣೆಯ ಕುರಿತು ಹೆಚ್ಚಿನ ಫ್ಯಾಕ್ಟ್-ಚೆಕ್ ಮತ್ತು ಲೇಖನೆಗಳಿಗಾಗಿ, ಲಾಜಿಕಲಿ ಫ್ಯಾಕ್ಟ್ಸ್ ಅನ್ನು ಇಲ್ಲಿ ಅನುಸರಿಸಿ.)
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.