ಮೂಲಕ: ವನಿತಾ ಗಣೇಶ್
ಆಗಸ್ಟ್ 12 2024
ವೀಡಿಯೋ ಅವಾಮಿ ಲೀಗ್ ವಿದ್ಯಾರ್ಥಿ ವಿಭಾಗವಾದ ಛತ್ರ ಲೀಗ್ ಆಯೋಜಿಸಿದ ೨೦೨೩ ರ ರ‍್ಯಾಲಿಯನ್ನು ಚಿತ್ರಿಸುತ್ತದೆ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿಲ್ಲ.
ಹೇಳಿಕೆ ಏನು?
ಕೇಸರಿ ಬಟ್ಟೆ ಧರಿಸಿದ ಜನರ ರ‍್ಯಾಲಿಯನ್ನು ತೋರಿಸುವ ೩೯ ಸೆಕೆಂಡುಗಳ ವೀಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದು ಬಾಂಗ್ಲಾದೇಶದ ಹಿಂದೂಗಳು ಇತ್ತೀಚಿನ ಕೋಮು ಹಿಂಸಾಚಾರವನ್ನು ಪ್ರತಿಭಟಿಸುತ್ತಿರುವುದನ್ನು ಚಿತ್ರಿಸುತ್ತದೆ ಎಂದು ಹೇಳಲಾಗಿದೆ. ಈ ಹಿಂಸಾಚಾರವು ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾದ ಕೋಟಾಗಳ ಬಗ್ಗೆ ವಿದ್ಯಾರ್ಥಿಗಳ ಪ್ರತಿಭಟನೆಯಾಗಿ ಪ್ರಾರಂಭವಾಯಿತು.
ಎಕ್ಸ್ ನಲ್ಲಿ (ಹಿಂದೆ ಟ್ವಿಟ್ಟರ್), ಈ ವೀಡಿಯೋವನ್ನು ಹಂಚಿಕೊಂಡ ಪೋಷ್ಟ್ ವೊಂದರ ಶೀರ್ಷಿಕೆ ಹೀಗಿದೆ, " #ಬಾಂಗ್ಲಾದೇಶ ದ #ಹಿಂದೂ ಗಳೆಲ್ಲಾ ಒಟ್ಟಾಗಿ ಬಾಂಗ್ಲಾದ ಗಲ್ಲಿಗಳಲ್ಲಿ - ಬೀದಿಬೀದಿಗಳಲ್ಲಿ - ರಸ್ತೆರಸ್ತೆಗಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ..ಬಾಂಗ್ಲಾದೇಶದ ರಸ್ತೆಗಳಲ್ಲಿ #Bhagwa ಧ್ವಜಗಳು ಹಾರಾಡುತಿದೆ..ರಸ್ತೆಗಳೆಲ್ಲಾ #ಕೇಸರಿ ಮಯವಾಗಿದೆ." ಅದೇ ರೀತಿಯ ಹೇಳಿಕೆಯನ್ನು ಹಂಚಿಕೊಂಡ ಪೋಷ್ಟ್ ಗಳ ಆರ್ಕೈವ್ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಪ್ರಶ್ನೆಯಲ್ಲಿರುವ ವೀಡಿಯೋ ೨೦೨೩ ರ ಹಿಂದಿನದು ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅಧಿಕಾರಾವಧಿಯಲ್ಲಿ ಆಡಳಿತ ಪಕ್ಷವಾಗಿದ್ದ ಅವಾಮಿ ಲೀಗ್‌ನ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ ಛತ್ರ ಲೀಗ್ (ಬಿಸಿಎಲ್) ಆಯೋಜಿಸಿದ ರ‍್ಯಾಲಿಯನ್ನು ತೋರಿಸುತ್ತದೆ.
ನಾವು ಕಂಡುಕೊಂಡದ್ದು ಏನು?
ರ‍್ಯಾಲಿಯ ಮುಂಭಾಗದಲ್ಲಿರುವ ವೀಡಿಯೋದಲ್ಲಿ ಕಂಡುಬರುವ ಪೋಷ್ಟ್ ರ್‌ನಲ್ಲಿರುವ ಬಾಂಗ್ಲಾ ಘೋಷಣೆಯು "ವಿದ್ಯಾರ್ಥಿ ರ‍್ಯಾಲಿ ಯಶಸ್ವಿಯಾಗಲಿ" ಎಂದು ಅನುವಾದಿಸುತ್ತದೆ.
ಈ ಮಾಹಿತಿ ಮತ್ತು ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಬಾಂಗ್ಲಾದೇಶದ ಸುದ್ದಿ ಪೋರ್ಟಲ್ ಚಾನೆಲ್೨೪ ನಿಂದ ಸೆಪ್ಟೆಂಬರ್ ೧, ೨೦೨೩ ರಂದು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅಪ್‌ಲೋಡ್ ಮಾಡಿದ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. "ಬಿಸಿಎಲ್ ರ‍್ಯಾಲಿಯಲ್ಲಿ ಬೃಹತ್ ಮೆರವಣಿಗೆಯೊಂದಿಗೆ ನಾಯಕರು ಮತ್ತು ಕಾರ್ಯಕರ್ತರು" ಎಂಬ ಶೀರ್ಷಿಕೆಯ ಈ ವೀಡಿಯೋ ವೈರಲ್ ದೃಶ್ಯಗಳಿಗೆ ಹೊಂದಿಕೆಯಾಗುತ್ತದೆ.
ರ‍್ಯಾಲಿಯ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಚಾನೆಲ್೨೪)
"ಬಿಸಿಎಲ್ ರ‍್ಯಾಲಿ" ಗಾಗಿ ಗೂಗಲ್ ಹುಡುಕಾಟವು ನಮ್ಮನ್ನು ಬಾಂಗ್ಲಾದೇಶ ಛತ್ರ ಲೀಗ್‌ನ ಫೇಸ್‌ಬುಕ್ ಪುಟಕ್ಕೆ ನಿರ್ದೇಶಿಸಿದೆ, ಅಲ್ಲಿ ವೈರಲ್ ವೀಡಿಯೋದಲ್ಲಿರುವಂತೆಯೇ ಚಿತ್ರಗಳನ್ನು ಒಳಗೊಂಡಿರುವ ಪೋಷ್ಟ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ. ಪೋಷ್ಟ್ ನ ಬಾಂಗ್ಲಾ ಶೀರ್ಷಿಕೆಯು ಹೀಗಿದೆ: “ಗಫರ್‌ಗಾಂವ್ ಉಪಜಿಲಾ ಛಾತ್ರ ಲೀಗ್ ಮತ್ತು ಮುನ್ಸಿಪಲ್ ಛಾತ್ರಾ ಲೀಗ್, ಬಾಂಗ್ಲಾದೇಶ ಛಾತ್ರ ಲೀಗ್ ಆಯೋಜಿಸಿದ 'ರಾಷ್ಟ್ರದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಮತ್ತು ಬಂಗಮಾತಾ ಶೇಖ್ ಫಜಿಲತುನ್ ನೆಚಾ ಮುಜಿಬ್' (sic) ಅವರ ನೆನಪಿಗಾಗಿ…”
ಮತ್ತೊಂದು ಫೇಸ್‌ಬುಕ್ ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸೆಪ್ಟೆಂಬರ್ ೨೦೨೩ ರಂದು Fahmi Gulandaz Babel ಖಾತೆಯಲ್ಲಿ ಅದೇ ಚಿತ್ರಗಳು ಮತ್ತು ಶೀರ್ಷಿಕೆಯನ್ನು ಒಳಗೊಂಡಿದೆ. ಬಾಬೆಲ್ ಅವರ ಪ್ರೊಫೈಲ್ ಅವರು ಬಾಂಗ್ಲಾದೇಶದ ಸಂಸತ್ತಿನ ಸದಸ್ಯ ಎಂದು ಸೂಚಿಸುತ್ತದೆ.
ಈ ಮಾಹಿತಿಯನ್ನು ಬಳಸಿಕೊಂಡು, ನಾವು ಸೆಪ್ಟೆಂಬರ್ ೧, ೨೦೨೩ ರಂದು ಪ್ರಕಟಿಸಿದ ಢಾಕಾ ಟ್ರಿಬ್ಯೂನ್‌ನ ವರದಿಯನ್ನು ಪತ್ತೆಹಚ್ಚಿದ್ದೇವೆ. ಢಾಕಾದ ಸುಹ್ರವರ್ದಿ ಉದ್ಯಾನದಲ್ಲಿ ಛತ್ರ ಲೀಗ್ ನಡೆಸಿದ ರ‍್ಯಾಲಿಯನ್ನು ಮಾಜಿ ಪ್ರಧಾನಿ ಹಸೀನಾ ಉದ್ದೇಶಿಸಿ ಮಾತನಾಡಿದ್ದಾರೆ ಎಂದು ವರದಿ ಹೇಳುತ್ತದೆ. ‘ಫಾದರ್ ಆಫ್ ನೇಶನ್’ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಮತ್ತು ಬಂಗಮಾತಾ ಶೇಖ್ ಫಜಿಲತುನ್ನೇಸಾ ಮುಜೀಬ್ ಅವರನ್ನು ಗೌರವಿಸಲು ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಸೂಚಿಸಲಾಗಿದೆ.
ಫೈನಾನ್ಷಿಯಲ್ ಎಕ್ಸ್‌ಪ್ರೆಸ್, ನ್ಯೂಏಜ್ ಮತ್ತು ಸುದ್ದಿ ಸಂಸ್ಥೆ ಬಿಎಸ್‌ಎಸ್ ಸೇರಿದಂತೆ ಅನೇಕ ಸುದ್ದಿವಾಹಿನಿಗಳು ರ‍್ಯಾಲಿಯ ಬಗ್ಗೆ ವರದಿಯನ್ನು ಮಾಡಿದ್ದವು.
ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸಿಕೊಂಡು, ರ‍್ಯಾಲಿ ಮಾರ್ಗವು ಕಾಜಿ ನಜ್ರುಲ್ ಇಸ್ಲಾಂ ಅವೆನ್ಯೂವನ್ನು ಒಳಗೊಂಡಿದೆ ಎಂದು ನಾವು ದೃಢಪಡಿಸಿಕೊಂಡೆವು. ಅದರಲ್ಲಿ ಗೋಚರಿಸುವ ಕಟ್ಟಡಗಳು ವೈರಲ್ ವೀಡಿಯೋದಲ್ಲಿರುವ ಕಟ್ಟಡಗಳಿಗೆ ಹೊಂದಿಕೆಯಾಗುತ್ತವೆ.
ಗೂಗಲ್ ಸ್ಟ್ರೀಟ್ ವ್ಯೂ ಮತ್ತು ವೈರಲ್ ವೀಡಿಯೋದ ಹೋಲಿಕೆ. (ಮೂಲ: ಎಕ್ಸ್/ ಗೂಗಲ್ ಸ್ಟ್ರೀಟ್ ವ್ಯೂ)
ಬಾಂಗ್ಲಾದೇಶದಲ್ಲಿ ಪ್ರಸ್ತುತ ಅಶಾಂತಿ
ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರು ಹಿಂಸಾಚಾರದ ದಿನಗಳ ನಂತರ ಆಗಸ್ಟ್ ೮, ೨೦೨೪ ರಂದು ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದರು.
೧೯೭೧ ರ ಸ್ವಾತಂತ್ರ್ಯ ಸಂಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ೩೦ ಪ್ರತಿಶತ ಉದ್ಯೋಗ ಕೋಟಾದ ಕುರಿತು ಜೂನ್ ೨೦೨೪ ರಲ್ಲಿ ಪ್ರಾರಂಭವಾದ ಪ್ರತಿಭಟನೆಗಳ ಮಧ್ಯೆ ಮಾಜಿ ಪ್ರಧಾನಿ ಹಸೀನಾ ಆಗಸ್ಟ್ ೫ ರಂದು ಬಾಂಗ್ಲಾದೇಶದಿಂದ ಪಲಾಯನ ಮಾಡಿದರು. ಪ್ರತಿಭಟನೆಯು ಸರ್ಕಾರದ ವಿರೋಧಿ ಆಂದೋಲನವಾಗಿ ವಿಕಸನಗೊಂಡಿತು, ಇದರ ಪರಿಣಾಮವಾಗಿ ಆಗಸ್ಟ್ ೬ ರ ಹೊತ್ತಿಗೆ ಕನಿಷ್ಠ ೪೪೦ ಸಾವುಗಳು ಸಂಭವಿಸಿದವು.
ತೀರ್ಪು
ಸೆಪ್ಟೆಂಬರ್ ೨೦೨೩ ರಿಂದ ಆನ್‌ಲೈನ್‌ನಲ್ಲಿರುವ ವೈರಲ್ ವೀಡಿಯೋ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಶಾಂತಿಗೆ ಸಂಬಂಧಿಸಿಲ್ಲ. ಇದು ಶೇಖ್ ಮುಜಿಬುರ್ ರೆಹಮಾನ್ ಮತ್ತು ಬಂಗಮಾತಾ ಶೇಖ್ ಫಜಿಲತುನ್ ನೆಚಾ ಮುಜೀಬ್ ಅವರ ಸ್ಮರಣಾರ್ಥ ಛತ್ರ ಲೀಗ್ ಆಯೋಜಿಸಿದ್ದ ವಿದ್ಯಾರ್ಥಿ ರ‍್ಯಾಲಿಯನ್ನು ಚಿತ್ರಿಸುತ್ತದೆ.
ಲಾಜಿಕಲಿ ಫ್ಯಾಕ್ಟ್ಸ್ ಬಾಂಗ್ಲಾದೇಶದ ಅಶಾಂತಿಯ ಬಗ್ಗೆ ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಹೊರಹಾಕುತ್ತಿದೆ. ನಮ್ಮ ಫ್ಯಾಕ್ಟ್-ಚೆಕ್ ಗಳನ್ನು ನೀವು ಇಲ್ಲಿ ಓದಬಹುದು.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here