ಮುಖಪುಟ ವೈರಲ್ ವೀಡಿಯೋ ಬಾಂಗ್ಲಾದೇಶದಲ್ಲಿ ರೆಸ್ಟೋರೆಂಟ್ ಗೆ ಬೆಂಕಿ ಬಿದ್ದಿರುವುದನ್ನು ಚಿತ್ರಿಸುತ್ತದೆ, 'ಹಿಂದೂ ದೇವಾಲಯ' ಅಲ್ಲ

ವೈರಲ್ ವೀಡಿಯೋ ಬಾಂಗ್ಲಾದೇಶದಲ್ಲಿ ರೆಸ್ಟೋರೆಂಟ್ ಗೆ ಬೆಂಕಿ ಬಿದ್ದಿರುವುದನ್ನು ಚಿತ್ರಿಸುತ್ತದೆ, 'ಹಿಂದೂ ದೇವಾಲಯ' ಅಲ್ಲ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ

ಆಗಸ್ಟ್ 8 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವೈರಲ್ ವೀಡಿಯೋ ಬಾಂಗ್ಲಾದೇಶದಲ್ಲಿ ರೆಸ್ಟೋರೆಂಟ್ ಗೆ ಬೆಂಕಿ ಬಿದ್ದಿರುವುದನ್ನು ಚಿತ್ರಿಸುತ್ತದೆ, 'ಹಿಂದೂ ದೇವಾಲಯ' ಅಲ್ಲ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯವೊಂದು ಉರಿಯುತ್ತಿರುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ ಎಂಬ ವೈರಲ್ ಹೇಳಿಕೆಯ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋದಲ್ಲಿ ಚಿತ್ರಿಸಲಾದ ಕಟ್ಟಡವು ವಾಸ್ತವವಾಗಿ ಬಾಂಗ್ಲಾದೇಶದ ಸತ್ಖಿರಾ ಜಿಲ್ಲೆಯ ರೆಸ್ಟೋರೆಂಟ್ ಆಗಿದೆ ಮತ್ತು ಅದನ್ನು ಹಿಂದೂ ದೇವಾಲಯ ಎಂದು ತಪ್ಪಾಗಿ ಗುರುತಿಸಲಾಗಿದೆ.

ಹೇಳಿಕೆ ಏನು?

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೀಡಿಯೋ ಕಟ್ಟಡವೊಂದು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ತೋರಿಸುತ್ತದೆ, ಇದು ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯವು ಬೆಂಕಿಯಲ್ಲಿ ಉರಿತ್ತಿರುವುದನ್ನು ಚಿತ್ರಿಸುತ್ತದೆ ಎಂದು ಹೇಳಲಾಗಿದೆ. ವಿವಾದಾತ್ಮಕ ಉದ್ಯೋಗ ಕೋಟಾ ನೀತಿಯ ಕುರಿತು ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಬಾಂಗ್ಲಾದೇಶದಲ್ಲಿ ಇತ್ತೀಚಿನ ವಾರಗಳಲ್ಲಿ ಅಶಾಂತಿ ಉಲ್ಬಣಗೊಂಡಿದೆ.

೧೨-ಸೆಕೆಂಡ್‌ಗಳ ವೀಡಿಯೋ ಸಂಕೀರ್ಣವಾದ ವಾಸ್ತುಶಿಲ್ಪದ ಅಂಶಗಳನ್ನು ಹೊಂದಿರುವ ಕಟ್ಟಡವನ್ನು ಒಳಗೊಂಡಿದೆ-ಕಮಾನುಗಳು, ಗುಮ್ಮಟಗಳು ಮತ್ತು ಕಾಲಮ್‌ಗಳು-ಜ್ವಾಲೆಯಲ್ಲಿ ಮುಳುಗಿದೆ, ಛಾವಣಿ ಮತ್ತು ಕಿಟಕಿಗಳಿಂದ ಹೊಗೆ ಬರುತ್ತಿದೆ. ಸುತ್ತಮುತ್ತ ಬೇಲಿ ಮತ್ತು ತಾಳೆ ಮರಗಳು ಹೊಂದಿದೆ.

ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್), ವೀಡಿಯೋವನ್ನು ಈ ಕೆಳಗಿನ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ: "ಬಾಂಗ್ಲಾದೇಶದ ಅನಾಗರಿಕ ಇಸ್ಲಾಮಿಸ್ಟ್‌ಗಳು ಮತ್ತೊಂದು ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳನ್ನು ರಕ್ಷಿಸುತ್ತಿದ್ದ ಎಲ್‌ಕೆಎಫ್‌ಸಿ ಜುಬೈರ್ ಸಹೋದರರು ಎಲ್ಲಿದ್ದಾರೆ? ಇದನ್ನು ವ್ಯಾಪಕವಾಗಿ ಶೇರ್ ಮಾಡಿ ಮತ್ತು ಜಗತ್ತು ಇಸ್ಲಾಮಿಕ್ ಅನಾಗರಿಕತೆಯನ್ನು ನೋಡಲಿ. #AllEyesOnBangladeshiHindus." ಅಂತಹ ಒಂದು ಪೋಷ್ಟ್ ಸರಿಸುಮಾರು ೪೩೪,೨೦೦ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಈ ಪೋಷ್ಟ್‌ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಎಕ್ಸ್‌ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಬಾಂಗ್ಲಾದೇಶದ ಬಹು ವರದಿಗಳು (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಿ) ಹಿಂದೂಗಳಿಗೆ ಸೇರಿದ ದೇವಾಲಯಗಳು, ಮನೆಗಳು ಮತ್ತು ವ್ಯವಹಾರಗಳನ್ನು ಅಶಾಂತಿಯ ನಡುವೆ ಗುರಿಯಾಗಿಸಿಕೊಂಡಿವೆ ಎಂದು ಸೂಚಿಸುತ್ತದೆ. ಆದರೆ, ವೀಡಿಯೋದಲ್ಲಿ ತೋರಿಸಿರುವ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದೇವಸ್ಥಾನವೆಂದು ತಪ್ಪಾಗಿ ಗುರುತಿಸಲಾದ ಕಟ್ಟಡವು ವಾಸ್ತವವಾಗಿ ಬಾಂಗ್ಲಾದೇಶದ ಸತ್ಖಿರಾದಲ್ಲಿರುವ ಕಾಫಿ ಶಾಪ್ ಮತ್ತು ರೆಸ್ಟೋರೆಂಟ್ ಆಗಿದೆ.

ನಾವು ಕಂಡುಕೊಂಡದ್ದು

ರಿವರ್ಸ್ ಇಮೇಜ್ ಸರ್ಚ್, ಆಗಸ್ಟ್ ೫, ೨೦೨೪ ರಂದು ಪ್ರಕಟವಾದ ಢಾಕಾ ಮೂಲದ ಪತ್ರಿಕೆಯಾದ ಕಲ್ಬೆಲಾ ವರದಿಯಲ್ಲಿ ವೈರಲ್ ವೀಡಿಯೋವನ್ನು ಹೋಲುವ ಚಿತ್ರವನ್ನು ಹೊಂದಿರುವುದನ್ನು ತೋರಿಸುತ್ತದೆ. ಆಗಸ್ಟ್ ೫ ರ ಸಂಜೆ, ಹಸೀನಾ ಅವರ ರಾಜೀನಾಮೆಯ ಸುದ್ದಿಗೆ ಪ್ರತಿಕ್ರಿಯೆಯಾಗಿ ಸತ್ಖಿರಾ ಜಿಲ್ಲಾ ಕಾರಾಗೃಹ ಸೇರಿದಂತೆ ವಿವಿಧ ಸ್ಥಳಗಳನ್ನು ಗುಂಪು ಧ್ವಂಸಗೊಳಿಸಿತು ಮತ್ತು ಸುಟ್ಟುಹಾಕಿತು ಎಂಬುದನ್ನು ವರದಿ ವಿವರಿಸಿದೆ.ಜನಸಮೂಹವು ಅವಾಮಿ ಲೀಗ್ ನಾಯಕರ ಮನೆಗಳು ಮತ್ತು ಸಾರ್ವಜನಿಕ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿತು. ವರದಿಯಲ್ಲಿ ಹಿಂದೂ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಉಲ್ಲೇಖಿಸಿಲ್ಲ.

ಹೆಚ್ಚಿನ ತನಿಖೆಯು ವೈರಲ್ ವೀಡಿಯೋದಿಂದ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿರುವ ಫೇಸ್‌ಬುಕ್ ಪೋಷ್ಟ್‌ಗೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ಅದೇ ಕಟ್ಟಡದ ಮುಂದೆ ವ್ಯಕ್ತಿ ನಿಂತಿರುವ  ಯೂಟ್ಯೂಬ್ ವೀಡಿಯೋಗೆ ಕರೆದೊಯ್ಯಿತು. ವೀಡಿಯೋ ಸತ್ಖಿರಾದಲ್ಲಿನ ರೆಸ್ಟೋರೆಂಟ್ ಅನ್ನು ಚಿತ್ರಿಸುತ್ತದೆ, ದೇವಸ್ಥಾನವಲ್ಲ ಎಂದು ಪೋಷ್ಟ್ ಸ್ಪಷ್ಟಪಡಿಸಿದೆ.

ಈ ಮುನ್ನಡೆಯನ್ನು ಅನುಸರಿಸಿ, ನಾವು ಜನವರಿ ೩, ೨೦೨೪ ರ "ರಾಜ್ ಪ್ರಸಾದ್ ಕಾಫಿ ಶಾಪ್" ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪತ್ತೆ ಮಾಡಿದ್ದೇವೆ. ವೀಡಿಯೋ ಕಟ್ಟಡದ ವಿವರವಾದ ಪ್ರವಾಸವನ್ನು ಒದಗಿಸುತ್ತದೆ, ಅದರ ಆಂತರಿಕ ಮತ್ತು ಬಾಹ್ಯ ಎರಡನ್ನೂ ಪ್ರದರ್ಶಿಸುತ್ತದೆ. ಎರಡು-ನಿಮಿಷದ ಅವಧಿಯಲ್ಲಿ, ವೀಡಿಯೋ ರೆಸ್ಟೋರೆಂಟ್‌ನ ಆಸನ ಪ್ರದೇಶವನ್ನು ಬಹಿರಂಗಪಡಿಸುತ್ತದೆ, ಇದು ರೆಸ್ಟೋರೆಂಟ್‌ನ ವಿಶಿಷ್ಟವಾದ ಹಲವಾರು ಟೇಬಲ್‌ಗಳು ಮತ್ತು ಕುರ್ಚಿಗಳನ್ನು ಒಳಗೊಂಡಿರುತ್ತದೆ. ಕಟ್ಟಡವು ನಿಜವಾಗಿಯೂ ರೆಸ್ಟೋರೆಂಟ್, ದೇವಾಲಯವಲ್ಲ ಎಂದು ದೃಶ್ಯಾವಳಿಗಳು ಖಚಿತಪಡಿಸುತ್ತವೆ. ಹೆಚ್ಚುವರಿಯಾಗಿ, ರೆಸ್ಟೋರೆಂಟ್ ಮುಂದೆ ಇರುವ ಬೋರ್ಡ್ ಅದನ್ನು ರೆಸ್ಟೋರೆಂಟ್ ಮತ್ತು ರೆಸಾರ್ಟ್ ಎಂದು ಗುರುತಿಸುತ್ತದೆ.

ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್ ರೆಸ್ಟೋರೆಂಟ್‌ನ ಮುಂಭಾಗದಲ್ಲಿರುವ ಬೋರ್ಡ್ ಅನ್ನು ರೆಸ್ಟೋರೆಂಟ್ ಮತ್ತು ರೆಸಾರ್ಟ್ ಎಂದು ಗುರುತಿಸುತ್ತದೆ. (ಮೂಲ: ಯೂಟ್ಯೂಬ್)

ಅದೇ ಕಟ್ಟಡವನ್ನು ಒಳಗೊಂಡ ವ್ಲಾಗರ್‌ಗಳ ಇತರ ಯೂಟ್ಯೂಬ್ ವೀಡಿಯೋಗಳನ್ನು ಇತ್ತೀಚಿನ ತಿಂಗಳುಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. "ರಾಜ್ ಪ್ರಸಾದ್ ರೆಸ್ಟೋರೆಂಟ್ ಕಲಾರೋವಾ, ಸತ್ಖಿರಾ" ಎಂಬ ಶೀರ್ಷಿಕೆಯ ಒಂದು ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಡ್ರೈವ್-ಬೈ ಸಮಯದಲ್ಲಿ ಕಟ್ಟಡವನ್ನು ತೋರಿಸುತ್ತದೆ. 


ವೈರಲ್ ಮತ್ತು ಸತ್ಖಿರಾ ಜಿಲ್ಲೆಯ ರೆಸ್ಟೋರೆಂಟ್ ಅನ್ನು ತೋರಿಸುವ ಯೂಟ್ಯೂಬ್ ವೀಡಿಯೋದ ಹೋಲಿಕೆ (ಮೂಲ: ಎಕ್ಸ್‌/ಯೂಟ್ಯೂಬ್, ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಗೂಗಲ್ ಮ್ಯಾಪ್ಸ್ ಬಳಸಿಕೊಂಡು, ನಾವು ಕಟ್ಟಡವನ್ನು ಜಿಯೋಲೊಕೇಟ್ ಮಾಡಿದ್ದೇವೆ ಮತ್ತು ಫೆಬ್ರವರಿ ೨೦೨೩ ರಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಚಿತ್ರಗಳನ್ನು ಕಂಡುಕೊಂಡಿದ್ದೇವೆ, ಇತ್ತೀಚಿನ ಸ್ಟ್ರೀಟ್ ವ್ಯೂ ಲಭ್ಯವಿದೆ.

ರೆಸ್ಟೋರೆಂಟ್‌ನ ಸ್ಟ್ರೀಟ್ ವ್ಯೂ ಮತ್ತು ಸ್ಥಳದ ವಿಮರ್ಶೆಗಳ ಸ್ಕ್ರೀನ್‌ಶಾಟ್. (ಮೂಲ: ಗೂಗಲ್ ಮ್ಯಾಪ್ಸ್)

ಬಾಂಗ್ಲಾದೇಶದಲ್ಲಿ ಪ್ರಸ್ತುತ ಅಶಾಂತಿ

ಜೂನ್ ಅಂತ್ಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಬಾಂಗ್ಲಾದೇಶವು ವಾರಗಳ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಅಗ್ನಿಸ್ಪರ್ಶ ಮತ್ತು ಪೊಲೀಸ್ ಘರ್ಷಣೆಯೊಂದಿಗೆ ಪರಿಸ್ಥಿತಿ ಹದಗೆಟ್ಟಿತು, ಇದರಿಂದಾಗಿ ಹಲವಾರು ಪ್ರತಿಭಟನಾಕಾರರು ಸಾವನ್ನಪ್ಪಿದರು. 

ಜುಲೈ ೨೧ ರಂದು, ಸುಪ್ರೀಂ ಕೋರ್ಟ್ ಉದ್ಯೋಗ ಕೋಟಾ ನೀತಿಯನ್ನು ಭಾಗಶಃ ರದ್ದುಗೊಳಿಸಿತು, ೯೩ ಪ್ರತಿಶತ ಸರ್ಕಾರಿ ಉದ್ಯೋಗಗಳು ಅರ್ಹತೆಯ ಆಧಾರದ ಮೇಲೆ ಇರುವುದನ್ನು ಕಡ್ಡಾಯಗೊಳಿಸಿತು. ಆದರೆ, ಅವಾಮಿ ಲೀಗ್ ಮತ್ತು ಹಸೀನಾ ವಿರುದ್ಧ ಪ್ರತಿಭಟನೆಗಳು ಮುಂದುವರೆದವು.

ಆಗಸ್ಟ್ ೫ ರಂದು ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು. ಬಾಂಗ್ಲಾದೇಶ ಸೇನೆಯು ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಮುಖ್ಯ ಸಲಹೆಗಾರರಾಗಿ ಮಧ್ಯಂತರ ಸರ್ಕಾರವನ್ನು ಸ್ಥಾಪಿಸಿತು.

ತೀರ್ಪು 

ದೇಶದ ಅಶಾಂತಿಯ ನಡುವೆ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯವನ್ನು ಬೆಂಕಿ ಸುಡುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುತ್ತದೆ ಎಂಬ ಹೇಳಿಕೆ ತಪ್ಪು. ಬೆಂಕಿ ಹೊತ್ತಿಕೊಂಡ ಕಟ್ಟಡವು ಸತ್ಖಿರಾ ಜಿಲ್ಲೆಯ ರೆಸ್ಟೋರೆಂಟ್ ಆಗಿದೆ, ಇದನ್ನು ಹಿಂದೂ ದೇವಾಲಯ ಎಂದು ತಪ್ಪಾಗಿ ಗುರುತಿಸಲಾಗಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ