ಮೂಲಕ: ರಾಜೇಶ್ವರಿ ಪರಸ
ಜನವರಿ 31 2024
ವೈರಲ್ ವೀಡಿಯೋ ರಾಜಸ್ಥಾನದ ಸನ್ವಾಲಿಯಾ ದೇವಸ್ಥಾನದಿಂದ ಬಂದಿದೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಹಲವು ದಿನಗಳ ಮೊದಲು ಸೆರೆಹಿಡಿಯಲಾಗಿದೆ.
ಹೇಳಿಕೆ ಏನು?
ಜನವರಿ ೨೨, ೨೦೨೪ ರಂದು ನಡೆದ ಮಹಾಮಸ್ತಕಾಭಿಷೇಕದ ನಂತರ ಅಯೋಧ್ಯೆಯ ಹೊಸ ರಾಮ ಮಂದಿರವು ಸ್ವೀಕರಿಸಿದ ದೇಣಿಗೆಯನ್ನು ತೋರಿಸಲು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ಪ್ರಸಾರವಾಗುತ್ತಿದೆ. ೨೦ ಸೆಕೆಂಡುಗಳ ಕ್ಲಿಪ್ ಹಲವಾರು ವ್ಯಕ್ತಿಗಳು ಟ್ರಂಕ್‌ನಿಂದ ಸಣ್ಣ ಬುಟ್ಟಿಗಳಿಗೆ ಹಣವನ್ನು ವರ್ಗಾಯಿಸುವುದನ್ನು ತೋರಿಸುತ್ತದೆ.
ಎಕ್ಸ್ (ಹಿಂದೆ ಟ್ವಿಟ್ಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಬಳಕೆದಾರರು ಈ ವೀಡಿಯೊವನ್ನು ಶೀರ್ಷಿಕೆಯೊಂದಿಗೆ ಪೋಷ್ಟ್ ಮಾಡಿದ್ದಾರೆ: "ಅಯೋಧ್ಯಾ ಧಾಮ್‌ನಲ್ಲಿರುವ ರಾಮ ಮಂದಿರದಲ್ಲಿ ಮೊದಲ ದಿನದಂದು ಅರ್ಧ ದಿನದೊಳಗೆ ದೇಣಿಗೆ ಪೆಟ್ಟಿಗೆಯು ಬ್ಯಾಂಕ್‌ನೋಟುಗಳಿಂದ ತುಂಬಿತ್ತು. ಇಂದು ₹೩ ಕೋಟಿ ೧೭ ಲಕ್ಷ ಸಂಗ್ರಹವಾಗಿದೆ. ಇದನ್ನು ಟೆಂಪಲ್ ಎಕಾನಮಿ ಎಂದು ಕರೆಯಲಾಗುತ್ತದೆ. ಎಷ್ಟು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಬಹುದು?"
ಒಂದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ಹೇಳಿಕೆಯ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ವೀಡಿಯೋ ಅಯೋಧ್ಯೆಯದ್ದಲ್ಲ, ರಾಜಸ್ಥಾನದ್ದು.
ನಾವು ಏನು ಕಂಡುಕೊಂಡಿದ್ದೇವೆ?
ವೀಡಿಯೋದ ಕೀಫ್ರೇಮ್‌ನ ಮೇಲೆ ರಿವರ್ಸ್ ಇಮೇಜ್ ಸೀರ್ಚನ್ನು ನಡೆಸಿದಾಗ ಯೂಟ್ಯೂಬ್ ನಲ್ಲಿ ಶೊರ್ಟ್ಸ್ ಆಗಿ ಪ್ರಕಟಿಸಲಾದ ಇದೇ ರೀತಿಯ ವೀಡಿಯೋಗೆ ನಮ್ಮನ್ನು ನಿರ್ದೇಶಿಸಿದೆ.ಜನವರಿ ೧೯, ೨೦೨೪ ರ ದಿನಾಂಕದ ಈ ವೀಡಿಯೋ, ಹಿಂದಿಯಲ್ಲಿ ಶೀರ್ಷಿಕೆಯನ್ನು ಒಳಗೊಂಡಿದೆ: "ಚಿತ್ತೋರ್‌ಗಢ್ ರಾಜಸ್ಥಾನದ ಸವಾರಿಯಾ ಸೇಠ್ ದೇವಾಲಯ, ಶ್ರೀಮಂತ ದೇವಾಲಯ.” ಹೆಚ್ಚುವರಿಯಾಗಿ, ಯೂಟ್ಯೂಬ್ ವೀಡಿಯೋವು ಇನ್ಸ್ಟಾಗ್ರಾಮ್ ಖಾತೆ '@Sanwaliya_seth_1007' ಯ ವಾಟರ್‌ಮಾರ್ಕ್ ಅನ್ನು ಒಳಗೊಂಡಿದೆ.
ಖಾತೆಯ ಮಾಲೀಕರು, @Sanwaliya_seth_1007, ಅಥವಾ ನಿತಿನ್ ವೈಷ್ಣವ್ ಅವರು ತಮ್ಮ ಬಯೋದಲ್ಲಿ ರಾಜಸ್ಥಾನದ ಸನ್ವಾಲಿಯಾ ದೇವಸ್ಥಾನದಲ್ಲಿ ಅರ್ಚಕ ಎಂದು ಗುರುತಿಸಿಕೊಂಡಿದ್ದಾರೆ, ಜನವರಿ ೧೬, ೨೦೨೪ ರಂದು ಇನ್ಸ್ಟಾಗ್ರಾಮ್ ಗೆ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ದೇಗುಲದಲ್ಲಿ ೧೨ ಕೋಟಿ ೬೯ ಲಕ್ಷ ರೂಪಾಯಿ ದೇಣಿಗೆ ಬಂದಿದ್ದು, ದಾಖಲೆ ಸಂಗ್ರಹವಾಗಿದೆ ಎಂಬ ಶೀರ್ಷಿಕೆ ವೀಡಿಯೋ ಜೊತೆಗಿತ್ತು. ಸನ್ವಾಲಿಯಾ ಸೇಠ್ ದೇವಾಲಯವು ಹಿಂದೂ ದೇವತೆಯಾದ ಕೃಷ್ಣನಿಗೆ ಸಮರ್ಪಿತವಾಗಿದೆ, ಇದು ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿದೆ.
ಲಾಜಿಕಲಿ ಫ್ಯಾಕ್ಟ್ಸ್ ಸನ್ವಾಲಿಯಾ ದೇವಸ್ಥಾನದ ಆಡಳಿತಾಧಿಕಾರಿ ನಂದಕಿಶೋರ್ ಟೈಲರ್ ಅವರನ್ನು ಸಂಪರ್ಕಿಸಿತು, ಅವರು ರಾಮ ಮಂದಿರ ದೇಣಿಗೆ ಎಂದು ಪ್ರಸಾರವಾಗುತ್ತಿರುವ ವೀಡಿಯೋವು ವಾಸ್ತವವಾಗಿ ಸನ್ವಾಲಿಯಾ ದೇವಸ್ಥಾನವನ್ನು ತೋರಿಸುತ್ತದೆ ಎಂದು ದೃಢಪಡಿಸಿದರು. ಅವರು ವಿವರಿಸಿದರು, "ನಮ್ಮ ದೇವಸ್ಥಾನದಲ್ಲಿ ಜನವರಿ ೧೦, ೨೦೨೪ ರಂದು ನಮ್ಮ ಮಾಸಿಕ ಆಚರಣೆಯಲ್ಲಿ ಕಾಣಿಕೆ ಪೆಟ್ಟಿಗೆಯನ್ನು ತೆರೆಯುವ ಮತ್ತು ಕಾಣಿಕೆಗಳನ್ನು ಎಣಿಸುವಾಗ ವೀಡಿಯೋವನ್ನು ಸೆರೆಹಿಡಿಯಲಾಗಿದೆ, ನಾವು ಪ್ರತಿ ತಿಂಗಳು ಅಮಾವಾಸ್ಯೆಯ ಒಂದು ದಿನ ಮೊದಲು ಅನುಸರಿಸುತ್ತೇವೆ."
ಹೆಚ್ಚಿನ ತನಿಖೆಯಿಂದ ಈ ದೇವಾಲಯವು ಭಕ್ತರಿಂದ ಗಮನಾರ್ಹವಾದ ದೇಣಿಗೆಗಳನ್ನು ಸ್ವೀಕರಿಸಲು ಹೆಸರುವಾಸಿಯಾಗಿದೆ ಎಂದು ತಿಳಿದುಬಂದಿದೆ. ಫೆಬ್ರವರಿ ೨೦೨೧ ರ ಡಿಎನ್‌ಎ ವರದಿಯು ದೇವಾಲಯದಲ್ಲಿ ದೊಡ್ಡ ದೇಣಿಗೆಗಳು ಸಾಮಾನ್ಯ ಘಟನೆಯಾಗಿದೆ ಎಂದು ಎತ್ತಿ ತೋರಿಸಿದೆ.
ತೀರ್ಪು
ರಾಜಸ್ಥಾನದ ಸನ್ವಾಲಿಯಾ ದೇವಸ್ಥಾನದಲ್ಲಿ ಕಾಣಿಕೆ ಪೆಟ್ಟಿಗೆಯನ್ನು ಖಾಲಿ ಮಾಡುತ್ತಿರುವುದನ್ನು ಚಿತ್ರಿಸುವ ವೀಡಿಯೋವನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯನ್ನು ತೋರಿಸಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಆದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.