ಮೂಲಕ: ರಾಜೇಶ್ವರಿ ಪರಸ
ಆಗಸ್ಟ್ 1 2024
ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಪೊಲೀಸ್ ಅಧಿಕಾರಿಯು, ಕ್ಲಿಪ್ ಅನ್ನುಆಂಧ್ರಪ್ರದೇಶದಲ್ಲಿ ಅಲ್ಲ, ಬೆಂಗಳೂರಿನಲ್ಲಿ ಚಿತ್ರಿಕರಿಸಲಾಗಿದೆ ಲಾಜಿಕಲಿ ಫ್ಯಾಕ್ಟ್ಸ್‌ಗೆ ದೃಢಪಡಿಸಿದ್ದಾರೆ.
ಹೇಳಿಕೆ ಏನು?
ಟ್ರಾಫಿಕ್ ಪೊಲೀಸರು ರಸ್ತೆಯ ಬದಿಗೆ ಮೊಳೆಗಳನ್ನು ಗುಡಿಸುತ್ತಿರುವುದನ್ನು ತೋರಿಸುವ ೧೬ ಸೆಕೆಂಡುಗಳ ವೀಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷಕ್ಕೆ (ವೈಎಸ್‌ಆರ್‌ಸಿಪಿ) ಜನರು ಮತ ಹಾಕದ ಕಾರಣ ಈ ವಿಧ್ವಂಸಕ ಕೃತ್ಯ ಎಸಗಲಾಗಿದೆ ಎಂದು ವೀಡಿಯೋದೊಂದಿಗೆ ಹಂಚಿಕೊಂಡ ಪೋಷ್ಟ್ ಗಳು ಹೇಳಿಕೊಂಡಿವೆ.
ಇಬ್ಬರು ಟ್ರಾಫಿಕ್ ಅಧಿಕಾರಿಗಳು ರಸ್ತೆಯನ್ನು ತೆರವುಗೊಳಿಸುತ್ತಿರುವುದನ್ನು ಈ ವೀಡಿಯೋ ಚಿತ್ರಿಸುತ್ತದೆ ಮತ್ತು ಆಂಧ್ರದ ರಾಜಕೀಯ ಪಕ್ಷಗಳಿಗೆ ಹ್ಯಾಶ್‌ಟ್ಯಾಗ್‌ಗಳ ಜೊತೆಗೆ "ತಮ್ಮ ನಾಯಕ ಚುನಾವಣೆಯಲ್ಲಿ ಸೋತರು ಮತ್ತು ಜನರು ಮತ ಚಲಾಯಿಸದ ಕಾರಣ ಸೈಕೋ ಬ್ಯಾಚ್ ರಸ್ತೆಗೆ ಮೊಳೆಗಳನ್ನು ಎಸೆಯುತ್ತಿದ್ದಾರೆ: ಆಂಧ್ರ ಪ್ರದೇಶ: #TDP, #YSRCP, #JSP, #BJP." ಎಂಬ ತೆಲುಗು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಮತ್ತು ಅದೇ ರೀತಿಯ ಪೋಷ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಈ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ 'ಸೈಕೋ' ಎಂಬ ಪದವು ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಅದರ ಮಿತ್ರಪಕ್ಷಗಳು ವೈಎಸ್‌ಆರ್‌ಸಿಪಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯನ್ನು ವಿವರಿಸಲು ಬಳಸುವ ಅವಹೇಳನಕಾರಿ ಪದವಾಗಿದೆ. ಇದಕ್ಕೆ ಪ್ರತಿಯಾಗಿ, ವೈಎಸ್‌ಆರ್‌ಸಿಪಿ ನಾಯಕರು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದ ಮುಖ್ಯಮಂತ್ರಿಯನ್ನು 'ಸ್ಯಾಡಿಸ್ಟ್' ಎಂದು ಕರೆಯುತ್ತಾರೆ.
ಇತ್ತೀಚಿನ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, ವೈಎಸ್‌ಆರ್‌ಸಿಪಿ ಪಕ್ಷವು ಟಿಡಿಪಿ, ಜನಸೇನಾ ಪಕ್ಷ (ಜೆಎಸ್ಪಿ), ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಒಳಗೊಂಡಿರುವ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ (ಎನ್ಡಿಎ) ಗೆ ಸೋತಿತು.
ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ ಈ ಹೇಳಿಕೆ ತಪ್ಪು . ಆಂಧ್ರಪ್ರದೇಶದಲ್ಲಿ ಅಲ್ಲ, ಬೆಂಗಳೂರಿನಲ್ಲಿ ಈ ವೀಡಿಯೋವನ್ನು ಚಿತ್ರೀಕರಿಸಲಾಗಿದೆ ಮತ್ತು ವಿವರಿಸಿದ ರಾಜಕೀಯ ಪರಿಸ್ಥಿತಿಗೆ ಸಂಬಂಧವಿಲ್ಲ ಎಂದು ನಮ್ಮ ತನಿಖೆ ದೃಢಪಡಿಸಿತು.
ವಾಸ್ತವಾಂಶಗಳು ಇಲ್ಲಿವೆ
ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ವೀಡಿಯೋ ಆಂಧ್ರಪ್ರದೇಶದಿಂದಲ್ಲ, ಬೆಂಗಳೂರಿನಿಂದ ಬಂದಿದೆ ಎಂದು ದೃಢಪಡಿಸಿದೆ. ಜುಲೈ ೨೮, ೨೦೨೪ ರಂದು, ಸ್ಥಳೀಯ ಮಾಧ್ಯಮವಾದ ಏಷ್ಯಾನೆಟ್ ನ್ಯೂಸಬಲೆ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಿ) ಪೋಷ್ಟ್ ಮಾಡಿದೆ, “ವೀಕ್ಷಿಸಿ | ಬೆಂಗಳೂರು ಟ್ರಾಫಿಕ್ ಪೊಲೀಸರು ಲೋಹದ ಮೊಳೆಗಳನ್ನು ರಸ್ತೆಯನ್ನು ಸ್ವಚ್ಛಗೊಳಿಸುತ್ತಾರೆ," ಎಂಬ ಶೀರ್ಷಿಕೆ ಹೊಂದಿಗೆ.
ವಾಹನ ಚಾಲಕರು ಒಂದೇ ಸ್ಥಳದಲ್ಲಿ ಹಲವಾರು ಪಂಕ್ಚರ್‌ಗಳನ್ನು ವರದಿ ಮಾಡಿದ ನಂತರ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಲೋಹದ ಮೊಳೆಗಳಿಂದ ಮುಚ್ಚಿದ ರಸ್ತೆಯನ್ನು ತೆರವುಗೊಳಿಸಿದ್ದಾರೆ ಎಂದು ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ. ಪಬ್ಲಿಕ್ ಟಿವಿ (ಇಲ್ಲಿ ಆರ್ಕೈವ್), ಕನ್ನಡ ಸುದ್ದಿವಾಹಿನಿ ಕೂಡ ಜುಲೈ ೨೯, ೨೦೨೪ ರಂದು ವೀಡಿಯೋವನ್ನು ಹಂಚಿಕೊಂಡಿದೆ, ಬಿಇಎಲ್ ಮತ್ತು ಕುವೆಂಪು ಅಂಡರ್‌ಪಾಸ್‌ನಲ್ಲಿ ಮೊಳೆಗಳು ಕಂಡುಬಂದಿವೆ ಮತ್ತು ಜಾಲಹಳ್ಳಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಅದನ್ನು ಸ್ವಚ್ಛಗೊಳಿಸಿದ್ದಾರೆ ಎಂದು ವರದಿ ಮಾಡಿದೆ.
ಜುಲೈ ೨೯, ೨೦೨೪ ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿಯು, ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆಯ ಟ್ರಾಫಿಕ್ ಅಧಿಕಾರಿಗಳಾದ ರಂಗಮ್ಮ ಮತ್ತು ರಾಹುಲ್ ವೈ ಅವರು ಉತ್ತರ ಬೆಂಗಳೂರಿನ ಜಾಲಹಳ್ಳಿ ಬಳಿಯ ಕುವೆಂಪು ಅಂಡರ್‌ಪಾಸ್ ರಸ್ತೆಯಿಂದ ಮೊಳೆಗಳನ್ನು ತೆರವುಗೊಳಿಸಿದ್ದಾರೆ ಎಂದು ಹೇಳುತ್ತದೆ.
ಲಾಜಿಕಲಿ ಫ್ಯಾಕ್ಟ್ಸ್ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮತ್ತು ಹೆಡ್ ಕಾನ್‌ಸ್ಟೆಬಲ್ ನರಸ ರಾಜು ಅವರೊಂದಿಗೆ ಮಾತನಾಡಿತು, ಅವರು ತಮ್ಮ ವ್ಯಾಪ್ತಿಯೊಳಗೆ ಈ ಘಟನೆ ಸಂಭವಿಸಿರುವುದನ್ನು ಖಚಿತಪಡಿಸಿದರು. ತಮ್ಮ ಠಾಣೆಯ ಇಬ್ಬರು ಟ್ರಾಫಿಕ್ ಕಾನ್‌ಸ್ಟೆಬಲ್‌ಗಳು ಪದೇ ಪದೇ ವಾಹನಗಳಿಗೆ ಹಾನಿ ಮಾಡುತ್ತಿದ್ದ ಮೊಳೆಗಳನ್ನು ರಸ್ತೆಯಿಂದ ತೆಗೆದಿದ್ದಾರೆ ಎಂದು ರಾಜು ಹೇಳಿದರು. ರಸ್ತೆಯ ಮೇಲೆ ಮೊಳೆಗಳು ಬಿದ್ದಿರುವುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ಅವರು ಹೇಳಿದರು.
ದುಷ್ಕರ್ಮಿಗಳು ಅಥವಾ ಪ್ರಾಯಶಃ ಸ್ಥಳೀಯ ಪಂಕ್ಚರ್ ಅಂಗಡಿಗಳಿಂದ ಮೊಳೆಗಳನ್ನು ಹಾಕಿರಬಹುದು ಎಂದು ಕಾನ್‌ಸ್ಟೆಬಲ್ ರಾಜು ಸೂಚಿಸಿದ್ದಾರೆ, ಆದರೆ ಉದ್ದೇಶವು ಸ್ಪಷ್ಟವಾಗಿಲ್ಲ. ಘಟನೆಗೆ ಆಂಧ್ರಪ್ರದೇಶಕ್ಕೆ ಸಂಬಂಧವಿಲ್ಲ ಎಂದು ಅವರು ಒತ್ತಿ ಹೇಳಿದರು.
ಇದಲ್ಲದೆ, ವೀಡಿಯೋದಲ್ಲಿ ಕಂಡುಬರುವ ಸಂಚಾರಿ ಅಧಿಕಾರಿಗಳಲ್ಲಿ ಒಬ್ಬರಾದ ಟಿ.ರಂಗಮ್ಮ ಅವರು ಬೆಂಗಳೂರಿನಲ್ಲಿ ಘಟನೆ ನಡೆದಿರುವುದನ್ನು ಖಚಿತಪಡಿಸಿದರು. ಜುಲೈ ೨೭, ೨೦೨೪ ರಂದು, ಜಾಲಹಳ್ಳಿ ಟ್ರಾಫಿಕ್ ಪೊಲೀಸ್ ಠಾಣೆಯು ಘಟನೆಯ ವೀಡಿಯೋ ತುಣುಕುಗಳು ಮತ್ತು ಚಿತ್ರಗಳನ್ನು ಎಕ್ಸ್ (ಹಿಂದೆ ಟ್ವಿಟರ್) (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಲ್ಲಿ ಹಂಚಿಕೊಂಡಿದೆ ಮತ್ತು ಹೀಗೆ ಬರೆಯಲಾಗಿದೆ: “ಈ ದಿನ ಠಾಣಾ ಸರಹದ್ದಿನ ಕುವೆಂಪು ವೃತ್ತದ ಅಂಡರ್ ಪಾಸ್ ನಲ್ಲಿ ಬಿದ್ದಿದ್ದ ಮಳೆಗಳಿಂದ ವಾಹನಗಳು ಪಂಚರ್ ಆಗುತ್ತಿದ್ದುದನ್ನು ಗಮನಿಸಿದ ಠಾಣೆಯ ಸಿಬ್ಬಂದಿಯವರು, ಮಳೆಗಳನ್ನು ತೆರವುಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು."
ತೀರ್ಪು
ಟ್ರಾಫಿಕ್ ಪೊಲೀಸರು ರಸ್ತೆಯಿಂದ ಮೊಳೆಗಳನ್ನು ತೆರವುಗೊಳಿಸುತ್ತಿರುವುದನ್ನು ತೋರಿಸುವ ವೀಡಿಯೋವನ್ನು ಇದು ಆಂಧ್ರ ಪ್ರದೇಶದಲ್ಲಿ ಚುನಾವಣಾ ಸೋಲಿನ ಕಾರಣ ವೈಎಸ್‌ಆರ್‌ಸಿಪಿಯ ಪ್ರತಿಕ್ರಿಯೆಯಾಗಿದೆ ಎಂದು ಹಂಚಿಕೊಳ್ಳಲಾಗಿದೆ. ವಾಸ್ತವದಲ್ಲಿ, ವೀಡಿಯೋ ಮತ್ತು ಘಟನೆ ನಡೆದಿರುವುದು ಆಂಧ್ರಪ್ರದೇಶದಲ್ಲ, ಕರ್ನಾಟಕದ ಬೆಂಗಳೂರಿನಲ್ಲಿ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.