ಮೂಲಕ: ಸೋಹಮ್ ಶಾ
ಜುಲೈ 10 2024
ವೀಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು 'ಮೋಸ ಮಾಡುವ ಫೇತ್ ಹೀಲರ್' ಗಳ ಬಗ್ಗೆ ಜಾಗೃತಿ ಮೂಡಿಸಲು ಬಾಂಗ್ಲಾದೇಶದ ಫೇಸ್‌ಬುಕ್ ಪುಟದಿಂದ ಪೋಷ್ಟ್ ಮಾಡಲಾಗಿದೆ.
ಹೇಳಿಕೆ ಏನು?
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೋವೊಂದು ಇಸ್ಲಾಮಿಕ್ ಟೋಪಿಯನ್ನು ಧರಿಸಿರುವ 'ಫೇತ್ ಹೀಲರ್' ಅನಾರೋಗ್ಯವನ್ನು ಗುಣಪಡಿಸುವ ನೆಪದಲ್ಲಿ ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದನ್ನು ತೋರಿಸುತ್ತದೆ. ವಿವಿಧ ಕಾಯಿಲೆಗಳಿಗೆ ತನ್ನ ಸಹಾಯವನ್ನು ಕೋರಿದ ಮಹಿಳೆಯರೊಂದಿಗೆ ಪುರುಷನು ದೈಹಿಕ ಸಂಪರ್ಕವನ್ನು ಮಾಡುತ್ತಿರುವ ದೃಶ್ಯವನ್ನು ಚಿತ್ರಿಸುತ್ತದೆ.
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿನ ಒಂದು ಪೋಷ್ಟ್ಹಿಂದಿಯಿಂದ ಅನುವಾದಿಸಲಾದ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದೆ: "ಮಾರುಕಟ್ಟೆಯಲ್ಲಿ ಹೊಸ ಮುಲ್ಲಾ. ಮಹಿಳೆಯರ ಹೊಟ್ಟೆ, ಬೆನ್ನು ಮತ್ತು ಹಿಂಭಾಗಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ; ಸಾವಿರಾರು ಜನರು ಅವನನ್ನು ಪ್ರತಿದಿನ ಭೇಟಿ ಮಾಡುತ್ತಾರೆ."
ಮತ್ತೊಂದು ಖಾತೆ, 'Mr Sinha' ತಪ್ಪು ಮಾಹಿತಿ ಹರಡಲು ಹೆಸರುವಾಸಿಯಾಗಿದ್ದು, ಎಕ್ಸ್ ನಲ್ಲಿ ಈ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ: "ಇದು ಯಾವ ರೀತಿಯ ಮೂರ್ಖತನ? ಇಂತಹ ವಂಚನೆಗಳಿಗೆ ಹೋಗಿದ್ದಕ್ಕಾಗಿ ನಾನು ಈ ಮಹಿಳೆಯರನ್ನು ದೂಷಿಸುತ್ತೇನೆ ... ಮತ್ತು ಏನಾದರೂ ತಪ್ಪಾದಲ್ಲಿ, ಎಲ್ಲರೂ ಸರ್ಕಾರವನ್ನು ದೂಷಿಸುತ್ತಾರೆ." ಈ ಪೋಷ್ಟ್‌ಗಳು ಒಟ್ಟಾರೆಯಾಗಿ ೪.೮ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿವೆ. ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ ಮತ್ತು ಇಲ್ಲಿ ಲಭ್ಯವಿದೆ.
ವೀಡಿಯೋ ಒಂದರಲ್ಲಿ ಧಾರ್ಮಿಕ ಹೀಲರ್ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದನ್ನು ಹೇಳಿಕೊಳ್ಳುವ ಎಕ್ಸ್ ಪೋಷ್ಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ವೀಡಿಯೋವನ್ನು ತಪ್ಪು ಮತ್ತು ಕೋಮು ವಿಭಜಕ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನಮ್ಮ ತನಿಖೆಯು ಬಹಿರಂಗಪಡಿಸುತ್ತದೆ.
ಸತ್ಯ ಏನು?
ವೀಡಿಯೋದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್, ಜನವರಿ ೩೦, ೨೦೨೪ ರಂದು ಪೀಸ್ ಟಿವಿ ಬಿಡಿ ಎಂಬ ಫೇಸ್‌ಬುಕ್ ಪುಟದಲ್ಲಿ ಪೋಷ್ಟ್ ಮಾಡಿದ ದೀರ್ಘ ಆವೃತ್ತಿಗೆ ನಮ್ಮನ್ನು ಕರೆದೊಯ್ಯಿತು. ಕ್ಲಿಪ್‌ನೊಂದಿಗೆ ಹಂಚಿಕೊಂಡ ಶೀರ್ಷಿಕೆಯು ಹೀಗಿದೆ: "ಮಾವ ರಾಗಿ ಪೀರ್ ಅವರ ಚಿಕಿತ್ಸೆಯ ವೈರಲ್ ವೀಡಿಯೋ."
ಈ ೧೩-ನಿಮಿಷದ ವೀಡಿಯೋವನ್ನು ವೀಕ್ಷಿಸಿದ ನಂತರ, ನಾವು ಕೊನೆಯಲ್ಲಿ ಬಂಗಾಳಿ ಭಾಷೆಯಲ್ಲಿ ಹಕ್ಕು ನಿರಾಕರಣೆಯನ್ನು ಕಂಡುಕೊಂಡಿದ್ದೇವೆ: "ಅಂತಹ ಬಾಬಾಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ನಮ್ಮ ಮತ್ತು ನಿಮ್ಮ ಜವಾಬ್ದಾರಿಯಾಗಿದೆ. ಪೀಸ್ ಟಿವಿ ನಿರ್ದೇಶಿಸಿದೆ." ವೀಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ನೈಜ ಘಟನೆಯನ್ನು ಚಿತ್ರಿಸುವುದಿಲ್ಲ ಎಂದು ಇದು ಸೂಚಿಸುತ್ತದೆ.
ಬೆಂಗಾಲಿಯಲ್ಲಿ ವೀಡಿಯೋದ ಕೊನೆಯಲ್ಲಿ ಹಕ್ಕು ನಿರಾಕರಣೆ. (ಮೂಲ: ಪೀಸ್ ಟಿವಿ ಬಿಡಿ/ಫೇಸ್‌ಬುಕ್)
ಪೀಸ್ ಟಿವಿ ಬಿಡಿ ಫೇಸ್‌ಬುಕ್ ಪುಟದ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೆಚ್ಚಿನ ತನಿಖೆ ವಿವಿಧ ಧಾರ್ಮಿಕ ಸಮಸ್ಯೆಗಳನ್ನು ತಿಳಿಸುವ ಹಲವಾರು ವೀಡಿಯೋಗಳನ್ನು ಬಹಿರಂಗಪಡಿಸಿದೆ. ಈ ವೀಡಿಯೋದಲ್ಲಿ ಕಂಡುಬರುವ ನಟರು, 'ವೈದ್ಯರು' ಮತ್ತು ಕೆಂಪು ಬಟ್ಟೆಯನ್ನು ಧರಿಸಿದ ಸಹಾಯಕರು ಸೇರಿದಂತೆ, ಪುಟದಲ್ಲಿನ ಇತರ ವೀಡಿಯೋಗಳಲ್ಲಿ (ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಅದೇ ನಟರು ಫೇಸ್‌ಬುಕ್ ಪುಟದಲ್ಲಿ ಇತರ ವೀಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. (ಮೂಲ: ಪೀಸ್ ಟಿವಿ ಬಿಡಿ/ಫೇಸ್‌ಬುಕ್)
ಪೀಸ್ ಟಿವಿ ಬಿಡಿ ಫೇಸ್‌ಬುಕ್ ಪುಟವು ಎರಡು ಯೂಟ್ಯೂಬ್ ಚಾನಲ್‌ಗಳಿಗೆ ಲಿಂಕ್ ಮಾಡುತ್ತದೆ: ಮ್ಹಕ್ ಡ್ರಾಮಾ ಟಿವಿ ಮತ್ತು ಅಲ್ ಅಕ್ಸಾ ಟಿವಿ, ಇವೆರಡೂ ಒಂದೇ ರೀತಿಯ ವಿಷಯವನ್ನು ಹೊಂದಿವೆ. ಈ ಚಾನಲ್‌ಗಳ 'ಬಗ್ಗೆ' ಪುಟಗಳು ಅವುಗಳನ್ನು "ಬಾಂಗ್ಲಾದೇಶದ ಅತಿದೊಡ್ಡ ಇಸ್ಲಾಮಿಕ್ ವಿಷಯ ಮತ್ತು ನಿರ್ಮಾಪಕ ಸಂಸ್ಥೆ" ಎಂದು ವಿವರಿಸುತ್ತದೆ, ಇಸ್ಲಾಮಿಕ್ ಸಮಸ್ಯೆಗಳು, ಸಂದರ್ಶನಗಳು, ಶೈಕ್ಷಣಿಕ ಘಟನೆಗಳು, ಸುದ್ದಿಗಳು, ಕಿರುಚಿತ್ರಗಳು, ಇಸ್ಲಾಮಿಕ್ ನಾಟಕಗಳು ಮತ್ತು ಹೆಚ್ಚಿನವುಗಳ ಕುರಿತು ವಿಷಯವನ್ನು ಚಿತ್ರೀಕರಿಸುತ್ತಾರೆ.
ಈ ಸಾಕ್ಷ್ಯವು ವೀಡಿಯೋವನ್ನು ಸ್ಕ್ರಿಪ್ಟ್ ಮಾಡಲಾದ ನಿರ್ಮಾಣವಾಗಿದೆ ಮತ್ತು ಮಹಿಳೆಯರಿಗೆ ಕಿರುಕುಳ ನೀಡುವ 'ಮುಸ್ಲಿಂ ಫೇತ್ ಹೀಲರ್' ನನ್ನು ಚಿತ್ರಿಸುವುದಿಲ್ಲ ಎಂದು ದೃಢಪಡಿಸುತ್ತದೆ.
ತೀರ್ಪು
ಪ್ರಶ್ನೆಯಲ್ಲಿರುವ ವೀಡಿಯೋ ಬಾಂಗ್ಲಾದೇಶದ ಶೈಕ್ಷಣಿಕ ಚಾನಲ್‌ನಿಂದ ರಚಿಸಲಾದ ಸ್ಕ್ರಿಪ್ಟ್ ನಿರ್ಮಾಣವಾಗಿದೆ, ಕೊನೆಯಲ್ಲಿ ಹಕ್ಕು ನಿರಾಕರಣೆಯಿಂದ ಸಾಕ್ಷಿಯಾಗಿದೆ. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮತ್ತು ಕೋಮು ಆರೋಪದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.