ಮುಖಪುಟ ಬಾಂಗ್ಲಾದೇಶದಲ್ಲಿ 'ಹಿಂದೂ ಹುಡುಗಿಯರನ್ನು ಕಟ್ಟಿಹಾಕಲಾಗಿದೆ' ಎಂದು ವಿದ್ಯಾರ್ಥಿಗಳ ಪ್ರತಿಭಟನೆಯ ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಬಾಂಗ್ಲಾದೇಶದಲ್ಲಿ 'ಹಿಂದೂ ಹುಡುಗಿಯರನ್ನು ಕಟ್ಟಿಹಾಕಲಾಗಿದೆ' ಎಂದು ವಿದ್ಯಾರ್ಥಿಗಳ ಪ್ರತಿಭಟನೆಯ ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ

ಆಗಸ್ಟ್ 9 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬಾಂಗ್ಲಾದೇಶದಲ್ಲಿ 'ಹಿಂದೂ ಹುಡುಗಿಯರನ್ನು ಕಟ್ಟಿಹಾಕಲಾಗಿದೆ' ಎಂದು ವಿದ್ಯಾರ್ಥಿಗಳ ಪ್ರತಿಭಟನೆಯ ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ ಬಾಂಗ್ಲಾದೇಶದಲ್ಲಿ ಹಿಂದೂ ಹುಡುಗಿಯೊಬ್ಬಳನ್ನು ಬೀದಿಗಳಲ್ಲಿ ಕಟ್ಟಿಹಾಕಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್‌. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋ ಮಾರ್ಚ್ ೨೦೨೪ ರದ್ದು ಮತ್ತು ಢಾಕಾದ ಜಗನ್ನಾಥ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯ ಆತ್ಮಹತ್ಯೆಯ ವಿರುದ್ಧ ಪ್ರತಿಭಟನೆಯಲ್ಲಿ ಪ್ರದರ್ಶಿಸಲಾದ ಬೀದಿ ನಾಟವನ್ನು ತೋರಿಸುತ್ತದೆ

(ಪ್ರಚೋದಕ ಎಚ್ಚರಿಕೆ: ಈ ಕಥೆಯು ಆತ್ಮಹತ್ಯೆ ಮತ್ತು ಲೈಂಗಿಕ ಕಿರುಕುಳದ ಉಲ್ಲೇಖಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಹೇಳಿಕೆ ಏನು?

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಶಾಂತಿಯ ನಡುವೆ 'ಹಿಂದೂ ಹುಡುಗಿಯರನ್ನು' ಹೀಗೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಹಸಿರು ಬಟ್ಟೆ ಧರಿಸಿದ ಹುಡುಗಿಯೊಬ್ಬಳು ಬಾಯಿಗೆ ಟೇಪ್ ಮತ್ತು ಕೈಗಳನ್ನು ಕಟ್ಟಿ ನೆಲದ ಮೇಲೆ ಕುಳಿತಿರುವ ೩೦ ಸೆಕೆಂಡುಗಳ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೋಟಾ ಮೀಸಲಾತಿ ವ್ಯವಸ್ಥೆಯ ಮೇಲೆ ಪ್ರಾರಂಭವಾದ ಈ ಪ್ರತಿಭಟನೆಯು ಹಿಂಸಾಚಾರಕ್ಕೆ ಏರಿತು.

ವೀಡಿಯೋವನ್ನು ಹಂಚಿಕೊಳ್ಳಲಾದ ಶೀರ್ಷಿಕೆಗಳಲ್ಲಿ, "ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರು! ಅವರನ್ನು ಅತ್ಯಾಚಾರ ಮತ್ತು ಕೊಲ್ಲಲಾಗುತ್ತಿದೆ! ಹಿಂದೂಗಳು ಬಾಂಗ್ಲಾದೇಶದಲ್ಲಿ ನರಮೇಧವನ್ನು ನೋಡುತ್ತಿದ್ದಾರೆ. ಈ ಚಿತ್ರಗಳು ಮತ್ತು ವೀಡಿಯೋಗಳು ನಿಮ್ಮನ್ನು ತುಂಬಾ ಅಸಹಾಯಕರನ್ನಾಗಿಸುತ್ತವೆ! (sic)," ಎಂದು ಹೇಳಲಾಗಿದೆ.  ಪೋಷ್ಟ್  ಒಂದು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಮತ್ತೊಬ್ಬ ಬಳಕೆದಾರರು, "ಬಾಂಗ್ಲಾದೇಶಕ್ಕೆ ಸ್ವಾಗತ, ಅಲ್ಲಿ ಹಿಂದೂ ಹುಡುಗಿಯರನ್ನು ಬೀದಿಗಳಲ್ಲಿ ಕಟ್ಟಲಾಗಿದೆ. ಪಾಶ್ಚಿಮಾತ್ಯ ಮಾಧ್ಯಮಗಳು ಮೂಕವಾಗಿವೆ," ಎಂದು ಬರೆದಿದ್ದರೆ. ಹಾಗು ಅದು  #HinduGenocideInBangladesh ಎಂಬ ಹ್ಯಾಶ್‌ಟ್ಯಾಗ್ ಅನ್ನು ಒಳಗೊಂಡಿದೆ, ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.


ವೈರಲ್ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋ ಮಾರ್ಚ್ ೨೦೨೪ ರದ್ದು. ಢಾಕಾದ ಜಗನ್ನಾಥ ವಿಶ್ವವಿದ್ಯಾನಿಲಯದ ಶಾಂತೋ ಚಟ್ಟಾರ್‌ನಲ್ಲಿ ವಿದ್ಯಾರ್ಥಿಯೊಬ್ಬರು ಪ್ರತಿಭಟನೆ ನಡೆಸುತ್ತಿರುವುದನ್ನು ಇದು ತೋರಿಸುತ್ತದೆ, ಮತ್ತೊಬ್ಬ ವಿಶ್ವವಿದ್ಯಾಲಯದ ವಿದ್ಯಾರ್ಥಿ ಫೈರೋಜ್ ಅಬಾಂಟಿಕಾ ಅವರ ಆತ್ಮಹತ್ಯೆಗೆ ಪ್ರೇರೇಪಿಸಿದವರಿಗೆ ಶಿಕ್ಷೆ ವಿಧಿಸಬೇಕೆಂದು ಇಲ್ಲಿ ಒತ್ತಾಯಿಸಲಾಗಿತ್ತು. 

ವಾಸ್ತವಾಂಶಗಳು

ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ , ಜುಲೈ ೨೬, ೨೦೨೪ ರಂದು ಫೇಸ್‌ಬುಕ್ ಖಾತೆ JnU Short Stories (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಮಾಡಿದ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ.


 JnU Short Stories ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್ ಜುಲೈ ೨೬, ೨೦೨೪ ರಂದು ಹಂಚಿಕೊಳ್ಳಲಾಗಿದೆ.
(ಮೂಲ: ಫೇಸ್‌ಬುಕ್)

ಮೂಲತಃ ಬಂಗಾಳಿ ಭಾಷೆಯಲ್ಲಿರುವ ಪೋಷ್ಟ್ ನಲ್ಲಿ ಮಹಿಳೆಯು ಜಗನ್ನಾಥ್ ವಿಶ್ವವಿದ್ಯಾಲಯದ ೨೦೨೧-೨೨ ನೇ ಬ್ಯಾಚ್‌ನ ವಿದ್ಯಾರ್ಥಿನಿ ಎಂದು ಉಲ್ಲೇಖಿಸಲಾಗಿದೆ ಮತ್ತು ಈ ದೃಶ್ಯವು ಕೆಲವು ಸಮಯದ ಹಿಂದೆ ವಿದ್ಯಾರ್ಥಿನಿ ಅಬಾಂಟಿಕಾ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ವಿರೋಧಿಸಿ ಪ್ರದರ್ಶಿಸಿದ ಬೀದಿ ನಾಟಕದ ದೃಶ್ಯವಾಗಿದೆ ಎಂದು ಸೂಚಿಸಲಾಗಿದೆ. 

ವೀಡಿಯೋವನ್ನು ಉಲ್ಲೇಖಿಸಿ, ಹಲವಾರು ಜನರು ಇದನ್ನು ಬಾಂಗ್ಲಾದೇಶದ ಪ್ರತಿಭಟನೆಗಳಿಗೆ ಲಿಂಕ್ ಮಾಡಿದ್ದಾರೆ ಮತ್ತು ಬಾಂಗ್ಲಾದೇಶ ಅವಾಮಿ ಲೀಗ್‌ನ ವಿದ್ಯಾರ್ಥಿ ವಿಭಾಗವಾದ ಛತ್ರ ಲೀಗ್‌ನ ನಾಯಕಿ ಎಂದು ಹುಡುಗಿಯನ್ನು ತಪ್ಪಾಗಿ ಗುರುತಿಸಿದ್ದಾರೆ ಎಂದು ಪೋಷ್ಟ್ ಹೇಳಿದೆ. ಅಂತಹ ಪೋಷ್ಟ್ ಗಳಿಂದಾಗಿ ಅವರು ಆಘಾತವನ್ನು ಅನುಭವಿಸುತ್ತಿದ್ದಾರೆ ಎಂದು ಅದು ಹೇಳಿದೆ. ಪ್ರತಿಯೊಬ್ಬರೂ ಅವಳ ಬೆಂಬಲಕ್ಕೆ ನಿಲ್ಲುವಂತೆ ಒತ್ತಾಯಿಸಿದರು, ವೀಡಿಯೋವನ್ನು ವರದಿ ಮಾಡಿ ಮತ್ತು ಪೋಷ್ಟ್ ಅನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ ವದಂತಿಯನ್ನು ನಿಲ್ಲಿಸಿ ಎಂದು ಹೇಳಿಕೊಳ್ಳಲಾಗಿದೆ. 

ಬಾಂಗ್ಲಾದೇಶದ ಜಗನ್ನಾಥ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಕಾನೂನು ವಿದ್ಯಾರ್ಥಿಯಾಗಿದ್ದ ಫೈರೋಜ್ ಸದಾಫ್ ಅಬಾಂಟಿಕಾ ಅವರು ಮಾರ್ಚ್ ೧೫, ೨೦೨೪ ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಸಾಯುವ ಮೊದಲು, ಅವರು ಅಮ್ಮನ್ ಎಂಬ ಸಹ ವಿದ್ಯಾರ್ಥಿಯ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು ಮತ್ತು ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಕ್ಟರ್ ದಿನ್ ಇಸ್ಲಾಮ್ ಅವರು ಅಮ್ಮನ್ ಅನ್ನು ಸಮರ್ಥಿಸಿಕೊಂಡಿದ್ದರು ಹಾಗು ಅವಳನ್ನು ಹೊರಹಾಕುವ ಬೆದರಿಕೆಯನ್ನೂ ಹಾಕಿದ್ದರು ಎಂದು ಆರೋಪಿಸಲಾಗಿದೆ. ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು.

ಅಬಾಂಟಿಕಾ ಅವರ ಆತ್ಮಹತ್ಯೆ ವಿಶ್ವವಿದ್ಯಾನಿಲಯ ಸಮುದಾಯದಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿತು. ಆಕೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಪಂಜಿನ ಮೆರವಣಿಗೆ, ಮೇಣದಬತ್ತಿಗಳನ್ನು ಬೆಳಗಿಸಿದರು ಮತ್ತು ಬೀದಿ ನಾಟಕಗಳನ್ನು ಪ್ರದರ್ಶಿಸಿದರು. ಈ ವೀಡಿಯೋ ಅಂತಹ ಒಂದು ಪ್ರದರ್ಶನದ ಭಾಗವಾಗಿದೆ. 

ವೀಡಿಯೋವನ್ನು ಜಿಯೋಲೊಕೇಟ್ ಮಾಡಲಾಗಿದೆ

ನಾವು ನಂತರ ಗೂಗಲ್ ಮ್ಯಾಪ್ಸ್ ನಲ್ಲಿ ವೈರಲ್ ವೀಡಿಯೋವನ್ನು ಹೋಲುವ ವಿಶ್ವವಿದ್ಯಾಲಯದ ಫೋಟೋಗಳನ್ನು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೋದ ಹಿನ್ನೆಲೆಯಲ್ಲಿಯೂ ಸಹ ಸೈನ್‌ಪೋಷ್ಟ್ ನೊಂದಿಗೆ ಬೂದು ಬಣ್ಣದ ರಚನೆಯು ಕಾಣಿಸಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ.

ಗೂಗಲ್ ಮ್ಯಾಪ್ಸ್ ನಲ್ಲಿ ಕಂಡುಬರುವಂತೆ, ಢಾಕಾದ ಜಗನ್ನಾಥ್ ವಿಶ್ವವಿದ್ಯಾಲಯದ ಚಿತ್ರದೊಂದಿಗೆ ವೈರಲ್ ವೀಡಿಯೋದ ಹೋಲಿಕೆ. (ಮೂಲ: ಎಕ್ಸ್/ಗೂಗಲ್ ಮ್ಯಾಪ್ಸ್) 

ಹೆಚ್ಚುವರಿಯಾಗಿ, ಬಾಂಗ್ಲಾದೇಶದ ಮಾಧ್ಯಮ ಔಟ್‌ಲೆಟ್ ಸೊಮೊಯ್ ನ್ಯಾಷನಲ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ಈ ಪ್ರತಿಭಟನೆಯ ಮತ್ತೊಂದು ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮಾರ್ಚ್ ೧೮ ರಂದು ಪೋಷ್ಟ್ ಮಾಡಲಾಗಿದ್ದು, ಪ್ರದರ್ಶನವು ಅಬಾಂಟಿಕಾವನ್ನು ಬೆಂಬಲಿಸುತ್ತದೆ ಎಂದು ಸೂಚಿಸುವ ಶೀರ್ಷಿಕೆ ಇದೆ.

ಈ ವೀಡಿಯೋದಲ್ಲಿ, ೧: ೩೧ ಸೆಕೆಂಡ್ ಟೈಮ್‌ಸ್ಟ್ಯಾಂಪ್‌ನಲ್ಲಿ, ವೈರಲ್ ವೀಡಿಯೋದ ಮಹಿಳೆ ಇತರರೊಂದಿಗೆ ಕಾಣಿಸಿಕೊಂಡಿದ್ದಾಳೆ, ಅವರಲ್ಲಿ ಕೆಲವರು ತಮ್ಮ ಬಾಯಿಯ ಮೇಲೆ ಟೇಪ್‌ನೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.


ಇತರ ವಿದ್ಯಾರ್ಥಿಗಳೊಂದಿಗೆ ವೈರಲ್ ವೀಡಿಯೋದಲ್ಲಿ ಕಂಡುಬರುವ ಮಹಿಳೆಯನ್ನು ಹೈಲೈಟ್ ಮಾಡುವ ಸೊಮೊಯ್ ನ್ಯಾಷನಲ್ ಅವರ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್)

ಬಾಂಗ್ಲಾದೇಶದ ಸುದ್ದಿ ವಾಹಿನಿ ಚಾನೆಲ್ ೨೪ ನ್ಯೂಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರಕಟಿಸಿದ ಮತ್ತೊಂದು ವೀಡಿಯೋದಲ್ಲಿ ವೈರಲ್ ಕ್ಲಿಪ್ ನಲ್ಲಿ ಕಾಣುವ ಹುಡುಗಿಯನ್ನು ೧:೧೯  ಸೆಕೆಂಡುಗಳಲ್ಲಿ ನೋಡಬಹುದು.  

ತೀರ್ಪು

ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿಶ್ವವಿದ್ಯಾನಿಲಯದಲ್ಲಿ ನಡೆದ ಪ್ರತಿಭಟನೆಯ ವೀಡಿಯೋವನ್ನು, ಇದು ನಡೆಯುತ್ತಿರುವ ಅಶಾಂತಿಯ ನಡುವೆ 'ಹಿಂದೂ ಮಹಿಳೆ'ಯ ಸ್ಥಿತಿಯನ್ನು ತೋರಿಸುತ್ತದೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. 

(ನಿಮಗೆ ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಬೆಂಬಲದ ಅಗತ್ಯವಿದ್ದರೆ, ದಯವಿಟ್ಟು ಈ ತುರ್ತು ಸೇವಾ ಸಹಾಯವಾಣಿಗಳೊಂದಿಗೆ ಸಂಪರ್ಕದಲ್ಲಿರಿ.)

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ