ಮುಖಪುಟ ಮಯನ್ಮಾರ್ ನಲ್ಲಿ ಚಂಡಮಾರುತದಿಂದ ಉಂಟಾದ ಹಾನಿಯ ಹಳೆಯ ವೀಡಿಯೋವನ್ನು ಮೈಚಾಂಗ್ ಚಂಡಮಾರುತಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮಯನ್ಮಾರ್ ನಲ್ಲಿ ಚಂಡಮಾರುತದಿಂದ ಉಂಟಾದ ಹಾನಿಯ ಹಳೆಯ ವೀಡಿಯೋವನ್ನು ಮೈಚಾಂಗ್ ಚಂಡಮಾರುತಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ರಾಹುಲ್ ಅಧಿಕಾರಿ

ಡಿಸೆಂಬರ್ 5 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮಯನ್ಮಾರ್ ನಲ್ಲಿ ಚಂಡಮಾರುತದಿಂದ ಉಂಟಾದ ಹಾನಿಯ ಹಳೆಯ ವೀಡಿಯೋವನ್ನು ಮೈಚಾಂಗ್ ಚಂಡಮಾರುತಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಮೈಚಾಂಗ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೇ ತಿಂಗಳಲ್ಲಿ ಮೋಚಾ ಚಂಡಮಾರುತ ಬಾಂಗ್ಲಾದೇಶ-ಮಯನ್ಮಾರ್ ಗಡಿಯಲ್ಲಿ ಭೂಕುಸಿತವನ್ನು ಉಂಟುಮಾಡಿದಾಗ ವೈರಲ್ ವೀಡಿಯೋವನ್ನು ಸೆರೆಹಿಡಿಯಲಾಗಿದೆ.

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಮೈಚಾಂಗ್ ಚಂಡಮಾರುತವು ತೀವ್ರ ಚಂಡಮಾರುತವಾಗಿ ತೀವ್ರಗೊಂಡಿದೆ ಮತ್ತು ಡಿಸೆಂಬರ್ ೫ ರಂದು ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಭೂಕುಸಿತವನ್ನು ಉಂಟುಮಾಡುವ ನಿರೀಕ್ಷೆಯಿದೆ. ಗಂಟೆಗೆ ೮೦-೯೦ ಕಿಮೀ ವೇಗದ ಗಾಳಿ ಮತ್ತು ೧೦೦ ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತದೆ. ಇದು ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯನ್ನು ತರಬಹುದು ಎಂಬ ಮುನ್ಸೂಚನೆ ನೀಡಲಾಗಿದೆ. ಹೀಗಿರುವಾಗ, ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದ ಚಂಡಮಾರುತವು ಪ್ರವಾಹವನ್ನು ಉಂಟುಮಾಡಿದ ಚೆನ್ನೈನ ಭಾರೀ ಮಳೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿವೆ. 

ಇಲ್ಲಿನ ಹೇಳಿಕೆಯೇನು?

ಈ ಹಿನ್ನೆಲೆಯಲ್ಲಿ ಮೈಚಾಂಗ್ ಚಂಡಮಾರುತದಿಂದ ಉಂಟಾದ ಹಾನಿಯನ್ನು ತೋರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ೨೧ ಸೆಕೆಂಡ್ ಗಳ ಈ ಕ್ಲಿಪ್ ಭಾರೀ ಗಾಳಿ ಮತ್ತು ಮಳೆಯಿಂದ ರಸ್ತೆ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾದ ಪ್ರವಾಹವನ್ನು ತೋರಿಸುತ್ತದೆ. ಹಲವಾರು ಬಳಕೆದಾರರು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡು ಇದನ್ನು ಮೈಚಾಂಗ್ ಗೆ ಲಿಂಕ್ ಮಾಡಿದ್ದಾರೆ. ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಹೀಗಿದೆ, “ಭೀಕರ ಭೂಕಂಪದ ನಂತರ # ಫಿಲಿಪೈನ್ಸ್, ಈಗ ಭಾರತದ ದಕ್ಷಿಣ ರಾಜ್ಯಗಳಿಗೆ ಚಂಡಮಾರುತದ ಎಚ್ಚರಿಕೆಯನ್ನು ನೀಡಲಾಗಿದೆ. ಪ್ರಕೃತಿಯ ಲೆಕ್ಕಾಚಾರವು ಬೇರೇಯೇನೋ ಇದೆ ಎಂದು ತೋರುತ್ತಿದೆ. ಈ ಫ್ಯಾಕ್ಟ್-ಚೆಕ್ ಬರೆಯುವ ಸಮಯದಲ್ಲಿ ೮೩,೦೦೦ ವೀಕ್ಷಣೆಗಳನ್ನು ಮತ್ತು ೧೭೩ ಲೈಕ್ ಗಳನ್ನು ಗಳಿಸಿದೆ. ವೈರಲ್ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಗಳು ಮತ್ತು ಅಂತಹುದೇ ಇತರ ಪೋಷ್ಟ್ ಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಎಕ್ಸ್ ನಲ್ಲಿ ಕಂಡುಬಂದ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಇದು ಮೇ ತಿಂಗಳಲ್ಲಿ ಬಾಂಗ್ಲಾದೇಶ-ಮಯನ್ಮಾರ್ ಗಡಿಯಲ್ಲಿ ಮೋಚಾ ಚಂಡಮಾರುತದಿಂದ ಉಂಟಾದ ಭಾರೀ ಮಳೆಯ ಹಳೆಯ ವೀಡಿಯೋವಾಗಿದೆ.

ನಾವು ಕಂಡುಹಿಡಿದದ್ದೇನು?

ವೈರಲ್ ವೀಡಿಯೋದ ಮೊದಲ ನಾಲ್ಕು ಸೆಕೆಂಡುಗಳು ಪ್ರವಾಹಕ್ಕೆ ಒಳಗಾದ ರಸ್ತೆಯನ್ನು ತೋರಿಸಿದರೆ, ಉಳಿದ ೧೭ ಸೆಕೆಂಡ್‌ಗಳು ಹಿನ್ನಲೆಯಲ್ಲಿ ಭಾರೀ ಮಳೆ ಮತ್ತು ಗಾಳಿಯಿಂದಾಗಿ ಮರವೊಂದು ತೂಗಾಡಿ ಕಟ್ಟಡವೊಂದರ ಮೇಲೆ ಬೀಳುವುದನ್ನು ತೋರಿಸುತ್ತದೆ. ವೈರಲ್ ವೀಡಿಯೋದ ಕೀಫ್ರೇಮ್‌ ರಿವರ್ಸ್ ಇಮೇಜ್ ಸರ್ಚ್ ಮೂಲಕ ಕ್ಲಿಪ್‌ನ ಮೊದಲ ಭಾಗವು ಮೇ ತಿನಗಳಲ್ಲಿ ಸೆರೆಹಿಡಿಯಲಾದ ವೀಡಿಯೋದಿಂದ ಬಂದಿದೆ ಎಂದು ತಿಳಿದುಬಂದಿದೆ. ಎಕ್ಸ್ ಬಳಕೆದಾರ 'ಆಂಧ್ರ ಪ್ರದೇಶ ವೆದರ್‌ಮ್ಯಾನ್' ಮೇ ೧೪ ರಂದು ವೈರಲ್ ವೀಡಿಯೋದ ಮೊದಲ ಭಾಗದ ದೀರ್ಘ ಆವೃತ್ತಿಯನ್ನು ಪೋಷ್ಟ್ ಮಾಡಿದ್ದಾರೆ. ಇದು ಸೈಕ್ಲೋನ್ ಮೋಚಾ ಉಂಟುಮಾಡಿದ ಭೂಕುಸಿತವನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಅವರು ಬರೆದ ಶೀರ್ಷಿಕೆ ಹೀಗಿದೆ, “ಇದೀಗ ಮಯನ್ಮಾರ್ ಮೇಲೆ # ಸೈಕ್ಲೋನ್ ಮೋಚಾ ಫ್ಯೂರಿ. ಒಂದು ವಾರದ ಹಿಂದೆ ನಿರೀಕ್ಷಿಸಿದಂತೆ, ಈ ಚಂಡಮಾರುತವು ಈಗ ಭೂಕುಸಿತವನ್ನು ಉಂಟುಮಾಡಿದೆ."

ಸುದ್ದಿ ಔಟ್ಲೆಟ್ ವಿಯಾನ್ ಮೇ ೧೪ ರಂದು ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ವೈರಲ್ ವೀಡಿಯೋದ ಮೊದಲ ನಾಲ್ಕು ಸೆಕೆಂಡುಗಳ ದೀರ್ಘ ಆವೃತ್ತಿಯನ್ನು ಪೋಷ್ಟ್ ಮಾಡಿದೆ. ಈ ಪೋಷ್ಟ್‌ ನ ಶೀರ್ಷಿಕೆಯು, “ವೀಕ್ಷಿಸಿ | #cycloneMocha ಭಾನುವಾರ ಬಾಂಗ್ಲಾದೇಶ-ಮಯನ್ಮಾರ್ ಗಡಿಯಲ್ಲಿ ಭೂಕುಸಿತ ಉಂಟುಮಾಡಿದೆ. ಇದು ಮರಗಳನ್ನು ನಾಶಪಡಿಸುತ್ತದೆ ಮತ್ತು ಧಾರಾಕಾರ ಮಳೆಯೂ ಕೂಡ ಸುರಿಯುತ್ತಿದೆ" ಎಂದು ಹೇಳಿಕೊಂಡಿದೆ.

ವೈರಲ್ ಕ್ಲಿಪ್ ಮತ್ತು ವಿಯಾನ್ ಪೋಷ್ಟ್ ಮಾಡಿದ ವೀಡಿಯೋ ನಡುವಿನ ಹೋಲಿಕೆ. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಹೆಚ್ಚಿನ ಸಂಶೋಧನೆಯಲ್ಲಿ, ಸುದ್ದಿ ಸಂಸ್ಥೆ ರಾಯಿಟರ್ಸ್ ಮೇ ೧೫ ರಂದು ಯೂಟ್ಯೂಬ್‌ನಲ್ಲಿ ವೈರಲ್ ವೀಡಿಯೋವನ್ನು ಶಾರ್ಟ್ಸ್ ಆಗಿ ಪ್ರಕಟಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಯೂಟ್ಯೂಬ್ ಶಾರ್ಟ್ಸ್ ವೈರಲ್ ವೀಡಿಯೋದಲ್ಲಿ ಕಂಡುಬರುವ ಪ್ರವಾಹಕ್ಕೆ ಒಳಗಾದ ರಸ್ತೆ ಮತ್ತು ಭಾರೀ ಮಳೆ ಬೀಳುತ್ತಿರುವ ಕಟ್ಟಡ ಇವೆರಡೂ ದೃಶ್ಯಗಳನ್ನು ತೋರಿಸುತ್ತದೆ. ಮೋಚಾ ಚಂಡಮಾರುತವು ಮಯನ್ಮಾರ್ ಅನ್ನು ಅಪ್ಪಳಿಸಿತು ಎಂದು ಯೂಟ್ಯೂಬ್ ವಿವರಣೆ ಹೇಳಿದೆ. ಮಯನ್ಮಾರ್ ನ ಸರ್ಕಾರಿ ಮಾಧ್ಯಮವನ್ನು ಉಲ್ಲೇಖಿಸಿ, ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು ೧,೦೦೦ ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ರಾಯಿಟರ್ಸ್ ಹೇಳಿದೆ.

ವೈರಲ್ ವೀಡಿಯೋ ಮತ್ತು ರಾಯಿಟರ್ಸ್ ಪ್ರಕಟಿಸಿದ ಯೂಟ್ಯೂಬ್ ಶಾರ್ಟ್ಸ್ ನಡುವಿನ ಹೋಲಿಕೆ. (ಮೂಲ: ಎಕ್ಸ್/ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಹೀಗಾಗಿ ವೈರಲ್ ವೀಡಿಯೋ ಮೇ ತಿಂಗಳದ್ದು ಮತ್ತು ಮೈಚಾಂಗ್ ಚಂಡಮಾರುತಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಬಾಂಗ್ಲಾದೇಶ-ಮಯನ್ಮಾರ್ ಗಡಿಯಲ್ಲಿ ಮೋಚಾ ಚಂಡಮಾರುತವು ಭೂಕುಸಿತವನ್ನು ಉಂಟುಮಾಡುವುದನ್ನು ವೀಡಿಯೋ ತೋರಿಸುತ್ತದೆ.

ಮೋಚ ಚಂಡಮಾರುತದ ನಂತರದ ಪರಿಣಾಮ

ಮೋಚಾ ಚಂಡಮಾರುತವು ಮೇ ೧೪ ರಂದು ಬಾಂಗ್ಲಾದೇಶ ಮತ್ತು ಮಯನ್ಮಾರ್ ಕರಾವಳಿಯಲ್ಲಿ ಭೂಕುಸಿತವನ್ನು ಉಂಟುಮಾಡಿತು ಮತ್ತು ನೂರಾರು ತಾತ್ಕಾಲಿಕ ಶೆಲ್ಟರ್ ಗಳನ್ನು ನಾಶಪಡಿಸಿತು. ಮೇ ೧೯ ರ ಬಿಬಿಸಿ ವರದಿಯ ಪ್ರಕಾರ, ಚಂಡಮಾರುತದಿಂದಾಗಿ ಕನಿಷ್ಠ ೧೪೫ ಜನರು ಸಾವನ್ನಪ್ಪಿದ್ದಾರೆ. ೧೪೫ ಮೃತರಲ್ಲಿ ೧೧೭ ಜನರು ರೋಹಿಂಗ್ಯಾ ಅಲ್ಪಸಂಖ್ಯಾತ ಸಮುದಾಯದಿಂದ ಬಂದಿದ್ದರಿಂದ ಅವರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ತೀವ್ರವಾದ ಚಂಡಮಾರುತವು ಕನಿಷ್ಠ ೮೦೦,೦೦೦ ಜನರ ಮೇಲೆ ಪರಿಣಾಮ ಬೀರಿದೆ. ಇದು ಈ ಪ್ರದೇಶವನ್ನು ಅಪ್ಪಳಿಸಿದ ಶತಮಾನದ ಪ್ರಬಲ ಚಂಡಮಾರುತವಾಗಿದೆ. ಮೋಚ ಚಂಡಮಾರುತವು ವರ್ಗ ೫ ರ ಚಂಡಮಾರುತವಾಗಿದ್ದು, ಗಂಟೆಗೆ ೧೭೫ ಮೈಲುಗಳಷ್ಟು (೨೮೦ ಕಿಲೋಮೀಟರ್) ವೇಗದಲ್ಲಿ ಗಾಳಿ ಬೀಸಿದೆ ಎಂದು ನಾಸಾ ಹೇಳಿಕೊಂಡಿದೆ.

ತೀರ್ಪು 

ವೈರಲ್ ವೀಡಿಯೋ ಮೈಚಾಂಗ್ ಚಂಡಮಾರುತದಿಂದ ಚೆನ್ನೈ ನಲ್ಲಿ ಉಂಟಾದ ಪ್ರವಾಹ ಮತ್ತು ಹಾನಿಯನ್ನು ತೋರಿಸುವುದಿಲ್ಲ. ಬದಲಾಗಿ, ಬಾಂಗ್ಲಾದೇಶ ಮತ್ತು ಮಯನ್ಮಾರ್ ನ  ಕರಾವಳಿ ತೀರದಲ್ಲಿ ಮೋಚಾ ಚಂಡಮಾರುತವು ಭೂಕುಸಿತವನ್ನು ಉಂಟುಮಾಡಿದಾಗ ಮೇ ತಿಂಗಳಲ್ಲಿ ಸೆರೆಹಿಡಿದ ದೃಶ್ಯಗಳನ್ನು ತೋರಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ