ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಮೇ 20 2024
ಮೂಲ ಚಿತ್ರವು ೨೦೧೮ ರದ್ದು ಮತ್ತು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಸಮಾಜ ಸುಧಾರಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋವನ್ನು ಹಿಡಿದುಕೊಂಡಿರುವುದನ್ನು ತೋರಿಸುತ್ತದೆ.
ಹೇಳಿಕೆ ಏನು?
ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಸಂಸದ (ಎಂಪಿ) ಅಸಾದುದ್ದೀನ್ ಓವೈಸಿ ಹಿಂದೂ ದೇವರಾದ ಭಗವಾನ್ ರಾಮನನ್ನು ಚಿತ್ರಿಸುವ ಚೌಕಟ್ಟಿನ ಚಿತ್ರವನ್ನು ಹಿಡಿದಿರುವಂತೆ ತೋರಿಸುವ ಚಿತ್ರವು ನಡೆಯುತ್ತಿರುವ ಲೋಕಸಭಾ ಚುನಾವಣೆಗಳ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಕೆಲವು ವೈರಲ್ ಪೋಷ್ಟ್ ಗಳಲ್ಲಿ, ಓವೈಸಿ ಇತರ ಪುರುಷರೊಂದಿಗೆ ನಿಂತಿರುವಂತೆ ಮತ್ತು ಭಗವಾನ್ ರಾಮನ ಭಾವಚಿತ್ರವನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಜೊತೆಗಿರುವ ಹಿಂದಿ ಶೀರ್ಷಿಕೆಯು, ಎಲ್ಲರಿಗೂ ಒಂದೇ, ಚುನಾವಣೆಯಲ್ಲಿ ಸೋಲುವ ಭಯದಲ್ಲಿರುವ ಓವೈಸಿ, ಚುನಾವಣೆಯ ಸಮಯದಲ್ಲಿ ಮತಗಳನ್ನು ಪಡೆಯಲು ತಾನೊಬ್ಬ ರಾಮಭಕ್ತ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿ ಮತ್ತು ಇದೇ ರೀತಿಯ ಹೇಳಿಕೆಗಳನ್ನು ಮಾಡುವ ಇತರ ಪೋಷ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೈರಲ್ ಎಕ್ಸ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಒವೈಸಿ ಅವರು ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದ ಹೈದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ, ಅವರು ನಾಲ್ಕು ವರ್ಷದಿಂದ ಇರುವ ಸ್ಥಾನವನ್ನು ಹೊಂದಿದ್ದಾರೆ. ಹೈದರಾಬಾದ್‌ನಲ್ಲಿ ಮೇ ೧೩ ರಂದು ನಾಲ್ಕನೇ ಹಂತದ ಸಾರ್ವತ್ರಿಕ ಚುನಾವಣೆಯ ಮತದಾನ ನಡೆದಿದ್ದು, ಜೂನ್ ೪ ರಂದು ಫಲಿತಾಂಶ ಪ್ರಕಟವಾಗಲಿದೆ.
ಭಗವಾನ್ ರಾಮನ ಭಾವಚಿತ್ರವನ್ನು ಹಿಡಿದಿರುವ ಓವೈಸಿಯ ವೈರಲ್ ಚಿತ್ರವನ್ನು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಅಂತಹ ಪೋಷ್ಟ್‌ಗಳ ಆರ್ಕೈವ್ ಆವೃತ್ತಿಗಳು ಇಲ್ಲಿ ಮತ್ತು ಇಲ್ಲಿ ಲಭ್ಯವಿದೆ.
ಕೆಲವು ಫೇಸ್‌ಬುಕ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ವೈರಲ್ ಹೇಳಿಕೆ ಫೇಕ್ ಯಾಕೆಂದರೆ ಚಿತ್ರವನ್ನು ಎಡಿಟ್ ಮಾಡಲಾಗಿದೆ.
ನಾವು ಏನು ಕಂಡುಕೊಂಡಿದ್ದೇವೆ?
ವೈರಲ್ ಫೋಟೋವನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಏಪ್ರಿಲ್ ೭, ೨೦೧೮ ರಂದು ಓವೈಸಿ ಅವರ ಪರಿಶೀಲಿಸಿದ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಪೋಷ್ಟ್ಗೆ ನಮ್ಮನ್ನು ಕರೆದೊಯ್ಯಿತು. ಈ ಪೋಷ್ಟ್ ಸಾಮಾಜಿಕ ಸುಧಾರಕ ಮತ್ತು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವ ಡಾ. ಬಿ.ಆರ್. ಅಂಬೇಡ್ಕರ್ ಅವರ ಚೌಕಟ್ಟಿನ ಭಾವಚಿತ್ರವನ್ನು ಹಿಡಿದಿರುವ ಓವೈಸಿ ಅವರ ಫೋಟೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಒಳಗೊಂಡಿದೆ, ಭಗವಾನ್ ರಾಮನಲ್ಲ.
ಪೋಷ್ಟ್ನ ಶೀರ್ಷಿಕೆ ಹೀಗಿದೆ: "ಮೋಚಿ ಕಾಲೋನಿಯ ದಲಿತರು #ಎಐಎಂಐಎಂ ಅಧ್ಯಕ್ಷ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಅವರನ್ನು ಎಐಎಂಐಎಂ ಪಕ್ಷದ ಪ್ರಧಾನ ಕಚೇರಿ #ದರುಸ್ಸಲಾಮ್‌ನಲ್ಲಿ ಭೇಟಿಯಾದರು ಮತ್ತು ತಮ್ಮ ಪ್ರದೇಶದಲ್ಲಿ (ರಾಮನಾಸ್‌ಪುರ ಡಿವ್ ಬಹದ್ದೂರ್‌ಪುರ ಕ್ಷೇತ್ರ) ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು."
ಮೂಲ: ಫೇಸ್‌ಬುಕ್
೨೦೧೮ ರ ಚಿತ್ರವು ಮತ್ತು ಈಗ ವೈರಲ್ ಆಗಿರುವ ಚಿತ್ರದ ಹೋಲಿಕೆಯನ್ನು ಕೆಳಗೆ ನೀಡಲಾಗಿದೆ. ವೈರಲ್ ಫೋಟೋದಲ್ಲಿರುವಂತೆಯೇ ಅದೇ ಪುರುಷರು ಓವೈಸಿಯನ್ನು ಸುತ್ತುವರೆದಿದ್ದಾರೆ, ಒಂದೇ ವ್ಯತ್ಯಾಸವೆಂದರೆ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದಿದ್ದಾರೆ.
೨೦೧೮ ರ ಚಿತ್ರದೊಂದಿಗೆ ಕೆಲವು ದೃಶ್ಯ ವ್ಯತ್ಯಾಸಗಳನ್ನು ಹೊಂದಿರುವ ವೈರಲ್ ಫೋಟೋದ ಹೋಲಿಕೆ. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಅಲ್ಲದೆ, ವೈರಲ್ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಭಗವಾನ್ ರಾಮನ ಭಾವಚಿತ್ರದ ಬಲ ಮೂಲೆಯಲ್ಲಿ ವಿರೂಪವನ್ನು ಗುರುತಿಸಬಹುದು. ಇಲ್ಲಿ, ಚೌಕಟ್ಟಿನ ಫೋಟೋವನ್ನು ಹಿಡಿದಿರುವ ವ್ಯಕ್ತಿಯ ಒಂದು ಕೈ ಸಾಕಷ್ಟು ಅಸ್ಪಷ್ಟವಾಗಿದೆ. ಅಲ್ಲದೆ, ವೈರಲ್ ಚಿತ್ರದಲ್ಲಿ, ಫೋಟೋ ಫ್ರೇಮ್‌ನ ಅಂಚುಗಳನ್ನು ಸರಿಯಾಗಿ ವ್ಯಾಖ್ಯಾನಿಸಲಾಗಿಲ್ಲ. ಈ ಎಲ್ಲಾ ವ್ಯತ್ಯಾಸಗಳು ೨೦೧೮ ರ ಮೂಲ ಚಿತ್ರವನ್ನು ಡಾ ಬಿ.ಆರ್. ಅಂಬೇಡ್ಕರ್ ಬದಲಿಗೆ ಓವೈಸಿ ರಾಮನ ಭಾವಚಿತ್ರವನ್ನು ಹಿಡಿದಿರುವುದನ್ನು ತೋರಿಸಲು ಎಡಿಟ್ ಮಾಡಲಾಗಿದೆ ಎಂದು ಸೂಚಿಸುತ್ತದೆ.
ಏಪ್ರಿಲ್ ೭, ೨೦೧೮ ರಂದು ಓವೈಸಿ ಅವರ ಅಥವಾ ಅವರ ಪಕ್ಷದ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಭಗವಾನ್ ರಾಮನ ಭಾವಚಿತ್ರವನ್ನು ಹಿಡಿದಿರುವ ವೈರಲ್ ಚಿತ್ರದಲ್ಲಿ ಕಂಡುಬರುವ ಅದೇ ಜನರೊಂದಿಗೆ ಓವೈಸಿ ಅವರ ಫೋಟೋ ಕೂಡ ನಮಗೆ ಕಂಡುಬಂದಿಲ್ಲ.
ಲಾಜಿಕಲಿ ಫ್ಯಾಕ್ಟ್ಸ್ ಈ ಹಿಂದೆ ಓವೈಸಿ ಬಗ್ಗೆ ತಪ್ಪು ಹೇಳಿಕೆಗಳನ್ನು ಫ್ಯಾಕ್ಟ್- ಚೆಕ್ ಮಾಡಿದೆ, ಅದರಲ್ಲಿ ಅವರು ಹಿಂದೂ ಪ್ರಾರ್ಥನೆಯನ್ನು ಪಠಿಸುವುದನ್ನು ತಪ್ಪಾಗಿ ತೋರಿಸುವ ಎಡಿಟ್ ಮಾಡಿದ ವೀಡಿಯೋ ಮತ್ತು ಓವೈಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ತಪ್ಪಾಗಿ ಪ್ರತಿಪಾದಿಸುವ ಫೋಟೋ ಸೇರಿದೆ.
ತೀರ್ಪು
ಅಸಾದುದ್ದೀನ್ ಓವೈಸಿ ಅವರು ರಾಮನ ಭಾವಚಿತ್ರವನ್ನು ಹಿಡಿದಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ೨೦೧೮ ರ ಮೂಲ ಚಿತ್ರವು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವನ್ನು ಹಿಡಿದಿರುವ ಓವೈಸಿಯನ್ನು ತೋರಿಸುತ್ತದೆ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.