ಮೂಲಕ: ಇಶಿತಾ ಗೋಯಲ್ ಜೆ
ಸೆಪ್ಟೆಂಬರ್ 6 2024
ತೆಲಂಗಾಣದ ಖಮ್ಮಮ್ ನ ಪ್ರವಾಹ ಸಂದರ್ಭದ ಬುಲ್ಡೋಜರ್ ರಕ್ಷಣಾ ಘಟನೆಗೆ ಈ ವೀಡಿಯೋ ಸಂಬಂಧವಿಲ್ಲ. ಸೌದಿ ಅರೇಬಿಯಾದ ಪ್ರವಾಹ ಸಂದರ್ಭದಲ್ಲಿ ನಡೆದ ಇದೇ ರೀತಿಯ ರಕ್ಷಣೆಯನ್ನು ತೋರಿಸುತ್ತದೆ.
ಹೇಳಿಕೆ ಏನು?
ದಕ್ಷಿಣ ಭಾರತದ ರಾಜ್ಯವಾದ ತೆಲಂಗಾಣದ ಇತ್ತೀಚಿನ ಪಾರುಗಾಣಿಕಾ ಘಟನೆಯನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ, ಬಲವಾದ ನೀರಿನ ಪ್ರವಾಹಕ್ಕೆ ಜನರು ಮುಳುಗುವ ಮೊದಲೇ, ಟ್ರ್ಯಾಕ್ಟರ್ ಸಹಾಯದಿಂದ ರಕ್ಷಿಸಲ್ಪಟ್ಟಿರುವುದನ್ನು ಕಾಣಬಹುದು.
"ಮುನ್ನೇರು ಪ್ರವಾಹದಲ್ಲಿ ೯ ಜನರು ಗಂಟೆಗಟ್ಟಲೆ ಸಿಲುಕಿದ್ದರು. ಎಲ್ಲಾ ಸಲಹೆಗಳನ್ನು ನಿರ್ಲಕ್ಷಿಸಿ, ಸುಭಾನ್ ಖಾನ್ ತಮ್ಮ ಜೆಸಿಬಿಯನ್ನು ಏಕಾಂಗಿಯಾಗಿ ಓಡಿಸಿ ಅವರನ್ನು ರಕ್ಷಿಸಿದರು" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋವನ್ನು ಹಂಚಿಕೊಂಡ ಮತ್ತೊಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಸುಭಾನ್ ಖಾನ್, ಜೆಸಿಬಿ ಡ್ರೈವರ್ ೯ ಜನರನ್ನು ಖಮ್ಮಮ್ # ತೆಲಂಗಾಣ ಪ್ರವಾಹದಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಮುನ್ನೇರು ವಾಗುದಲ್ಲಿ ಮುಳುಗುತ್ತಿದ್ದರಿಂದ ರಕ್ಷಿಸಿದ್ದಾರೆ." ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸೆಪ್ಟೆಂಬರ್ ೧, ೨೦೨೪ ರಂದು, ತೆಲಂಗಾಣದ ಖಮ್ಮಮ್ ಜಿಲ್ಲೆಯ ಮುನ್ನೇರು ನದಿಯು ೩೦ ವರ್ಷಗಳ ನಂತರ ಪ್ರವಾಹಕ್ಕೆ ಒಳಗಾಯಿತು. ಬೊಕ್ಕಲಗಡ್ಡ, ಮೋತಿ ನಗರ, ದಮಸಲಾಪುರ, ದಾನವಾಯಿಗುಡೆಂ, ಪ್ರಕಾಶ್ ನಗರ, ಕಾಲ್ವೊಡು ಸೇರಿದಂತೆ ವಿವಿಧ ಪ್ರದೇಶಗಳಿಗೆ ನೀರು ನುಗ್ಗಿದ್ದು, ಮೇಲ್ಛಾವಣಿಗೆ ನೀರು ನುಗ್ಗಿದೆ. ಒಂದು ಘಟನೆಯಲ್ಲಿ, ಹರಿಯಾಣದ ಸುಭಾನ್ ಖಾನ್ ಎಂಬ ವ್ಯಕ್ತಿ ಬುಲ್ಡೋಜರ್ ಓಡಿಸಿ ಖಮ್ಮಮ್ ಜಿಲ್ಲೆಯ ಪ್ರಕಾಶ್ ನಗರದ ಮುನ್ನೇರು ಸೇತುವೆಯಿಂದ ೯ ಜನರನ್ನು ರಕ್ಷಿಸಿದ್ದಾರೆ. ಸುದ್ದಿ ಸಂಸ್ಥೆಗಳು ಈ ಘಟನೆಯನ್ನು ವ್ಯಾಪಕವಾಗಿ ವರದಿ ಮಾಡುತ್ತಿದ್ದಂತೆ ಅವರ ಧೈರ್ಯದಿಂದ ರಕ್ಷಿಸಿದ ವೀಡಿಯೋ ವೈರಲ್ ಆಗಿತು.
ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಸುಭಾನ್ ಖಾನ್ ಅಥವಾ ತೆಲಂಗಾಣ ಪ್ರವಾಹವನ್ನು ಒಳಗೊಂಡ ನಿರ್ದಿಷ್ಟ ರಕ್ಷಣಾ ಘಟನೆಗೂ ಈ ವೀಡಿಯೋಗೂ ಸಂಬಂಧವಿಲ್ಲ.
ವಾಸ್ತವಾಂಶಗಳೇನು?
ರಿವರ್ಸ್ ಇಮೇಜ್ ಸರ್ಚ್ ಮೂಲಕ, ವೀಡಿಯೋ ಏಪ್ರಿಲ್ ೨೦೨೪ ರ ಹಿಂದಿನದು ಮತ್ತು ಸೌದಿ ಅರೇಬಿಯಾದಿಂದ ಬಂದಿದೆ ಎಂದು ನಾವು ಕಂಡುಕೊಂಡಿದ್ದೇವೆ. ಗಲ್ಫ್ ನ್ಯೂಸ್ ಏಪ್ರಿಲ್ ೨೮, ೨೦೨೪ ರಂದು ವೀಡಿಯೋವನ್ನು ಮತ್ತು ರಕ್ಷಣೆಯ ಇತರ ಚಿತ್ರಗಳನ್ನು ಪೋಷ್ಟ್ ಮಾಡಿದೆ ಮತ್ತು ಹೀಗೆ ಬರೆದಿದೆ, "ಅಪಾಯಕಾರಿ ಪರಿಸ್ಥಿತಿಗಳ ನಡುವೆ, ಧಾರಾಕಾರ ನೀರಿನಿಂದ ಜನರು ಮುಳುಗುವ ಸಂದರ್ಭದಲ್ಲಿ, ಅಯದ್ ಬಿನ್ ದಘಾಶ್ ಅಲ್ ಅಕ್ಲಾಬಿ, ಎರಡು ನಾಗರಿಕ ರಕ್ಷಣೆಯ ಸಹಾಯದಿಂದ ಅವನ ಬುಲ್ಡೋಜರ್‌ನಲ್ಲಿದ್ದ ಸಿಬ್ಬಂದಿ, ಜನರನ್ನು ರಕ್ಷಿಸಿದರು."
ಈ ಘಟನೆಯಲ್ಲಿ, ಸೌದಿ ಅರೇಬಿಯಾದ ಬಿಶಾ ಪ್ರಾಂತ್ಯದ ಅಸಿರ್ ಪ್ರದೇಶದ ಪ್ರವಾಹದ ಮಧ್ಯೆ ಜುವಾಬಾ ಕಣಿವೆಯಲ್ಲಿ ಸಿಲುಕಿದ್ದ ಜನರನ್ನು ಸೌದಿ ಅರೇಬಿಯಾದ ಪ್ರಜೆಯೊಬ್ಬರು ರಕ್ಷಿಸಿದ್ದಾರೆ.
ಸೌದಿಯ ಇತರ ಸುದ್ದಿ ಸಂಸ್ಥೆಗಳು ದೃಶ್ಯಗಳನ್ನು ಹಂಚಿಕೊಂಡಿದ್ದು ಮತ್ತು ಅದೇ ವಿವರಗಳನ್ನು ವರದಿ ಮಾಡಿದೆ. ಮಿಡ್ಲ್ ಈಸ್ಟ್ ಬ್ಯುಸಿನೆಸ್ ವರದಿಯ ಪ್ರಕಾರ ವಾಡಿ ಅಲ್-ಜುಬಾ ೪ ರ ಪ್ರವಾಹದ ಸಮಯದಲ್ಲಿ ಜನರು ವಾಹನದೊಳಗೆ ಸಿಲುಕಿಕೊಂಡರು ಮತ್ತು ಅಲ್-ಅಕ್ಲಾಬಿ ಟ್ರಾಕ್ಟರ್ ಓಡಿಸಿ ಅವರನ್ನು ರಕ್ಷಿಸಿದರು ಎಂದು ಬರೆದಿದ್ದಾರೆ.
ಈ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ ಎಂದು ದೃಢಪಡಿಸಿದ ಸುದ್ದಿ ವರದಿಗಳು ಒಳಗೊಂಡ ದೃಶ್ಯಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಗಲ್ಫ್ ನ್ಯೂಸ್/ಮಿಡ್ಲ್ ಈಸ್ಟ್ ಬ್ಯುಸಿನೆಸ್ /ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಸುಭಾನ್ ಖಾನ್ ರಕ್ಷಣೆಯ ನೈಜ ದೃಶ್ಯಗಳು
ನಾವು ಇತ್ತೀಚೆಗೆ ಖಮ್ಮಮ್‌ನಲ್ಲಿ ಪ್ರವಾಹದ ಸಮಯದಲ್ಲಿ ರಕ್ಷಣೆಯ ದೃಶ್ಯಗಳನ್ನು ವೈರಲ್ ವೀಡಿಯೋಗೊಂದಿಗೆ ಹೋಲಿಸಿದ್ದೇವೆ ಮತ್ತು ಅವು ವಿಭಿನ್ನವಾಗಿವೆ ಎಂದು ಕಂಡುಕೊಂಡಿದ್ದೇವೆ. ಕಡಿಮೆ ಬೆಳಕಿನಲ್ಲಿ ಸಂಜೆಯ ಸಮಯದಲ್ಲಿ ರಕ್ಷಣೆಯನ್ನು ಮಾಡಲಾಯಿತು, ಆದರೆ ವೈರಲ್ ವೀಡಿಯೋ ಹಗಲಿನ ಸಮಯದಲ್ಲಿ ನಡೆಸಿದ ರಕ್ಷಣಾ ಘಟನೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಲ್ಲದೆ, ನಿಜವಾದ ರಕ್ಷಣೆಯಲ್ಲಿ ಖಾನ್ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯಾವುದೇ ಸ್ಪಷ್ಟ ವೀಡಿಯೋಗಳಿಲ್ಲ. ಅವರು ರಕ್ಷಿಸಿದ ನಂತರ ಜನರು ಹರ್ಷೋದ್ಗಾರ ಮಾಡುವ ದೃಶ್ಯಗಳನ್ನು ನಾವು ರಾತ್ರಿಯಲ್ಲಿ ಮಾತ್ರ ನೋಡಬಹುದು.
ತೀರ್ಪು
ವೈರಲ್ ವೀಡಿಯೋ ಏಪ್ರಿಲ್ ೨೦೨೪ ರಲ್ಲಿ ಸೌದಿ ಅರೇಬಿಯಾದಲ್ಲಿ ಸಂಬಂಧವಿಲ್ಲದ ರಕ್ಷಣಾ ಘಟನೆಯನ್ನು ತೋರಿಸುತ್ತದೆ, ಇದರಲ್ಲಿ ಜುವಾಬಾ ಕಣಿವೆಯಲ್ಲಿ ಬಿಶಾ ಪ್ರವಾಹದ ಸಮಯದಲ್ಲಿ ಸಿಲುಕಿಕೊಂಡಿದ್ದ ನಾಲ್ವರನ್ನು ರಕ್ಷಿಸಲಾಗಿತ್ತು. ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ನಡೆದ ಬುಲ್ಡೋಜರ್ ರಕ್ಷಣೆಗೂ ಈ ಘಟನೆಗೂ ಸಂಬಂಧವಿಲ್ಲ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.