ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಸೆಪ್ಟೆಂಬರ್ 2 2024
ಆರ್ಜಿ ಕರ್ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಪಕ್ಕದಲ್ಲಿ ಕೇಕ್ ಕತ್ತರಿಸುತ್ತಿರುವ ವ್ಯಕ್ತಿ ಆಸ್ಪತ್ರೆಯ ಉದ್ಯೋಗಿಯೇ ಹೊರತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಅಲ್ಲ.
ಹೇಳಿಕೆ ಏನು?
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲರಾದ ಸಂದೀಪ್ ಘೋಷ್ ಅವರ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಕೇಕ್ ಕತ್ತರಿಸುತ್ತಿರುವುದನ್ನು ತೋರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಘೋಷ್ ಅವರು ಇತ್ತೀಚೆಗೆ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಘಟನೆಯ ನಂತರ, ಘೋಷ್ ಅವರು ಆಗಸ್ಟ್ ೧೨ ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೇಕ್ ಕತ್ತರಿಸುವ ವ್ಯಕ್ತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಎಂಬ ಹೇಳಿಕೆಗಳೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹಲವಾರು ಬಳಕೆದಾರರು "ಅತ್ಯಾಚಾರ ಆರೋಪಿ ಸಂಜಯ್ ರಾಯ್ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಕಚೇರಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ" ಎಂಬ ಹೇಳಿಕೆಗಳೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೈರಲ್ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಈ ಫೋಟೋದ ಮಾಧ್ಯಮ ಪ್ರಸಾರವು ವಿಭಿನ್ನವಾಗಿದೆ. ಕಲ್ಕತ್ತಾ ಟೆಲಿವಿಷನ್ ನೆಟ್‌ವರ್ಕ್ ತನ್ನ ಲೇಖನದ ಶೀರ್ಷಿಕೆಯಲ್ಲಿ, "ಸಂದೀಪ್ ಕ್ಯಾಬಿನ್‌ನಲ್ಲಿ ಸಂಜಯ್ ಅವರ ಕೇಕ್ ಕತ್ತರಿಸುವ ಸಂಭ್ರಮಾಚರಣೆ! ವೈರಲ್ ಫೋಟೋ," ಎಂದು ಹೇಳಿದೆ ಮತ್ತು ಫೋಟೋದ ಸತ್ಯಾವನ್ನು ಪರಿಶೀಲಿಸಲಾಗಿಲ್ಲ ಎಂದು ತಿಳಿಸಿದೆ. ರಿಪಬ್ಲಿಕ್ ವರ್ಲ್ಡ್ ನ ವರದಿಯಲ್ಲಿ , "ಸಂಜಯ್ ರಾಯ್ ಮಾಜಿ ಆರ್ಜಿ ಕರ್ ಪ್ರಿನ್ಸಿಪಾಲ್ ಸಂದೀಪ್ ಘೋಷ್ ಅವರಿಗೆ ಕೇಕ್ ನೀಡುತ್ತಿರುವುದನ್ನು ದೃಢೀಕರಿಸದ ಫೋಟೋ ತೋರಿಸುತ್ತದೆ," ಟೈಮ್ಸ್ ನೌ ಬೆಂಗಾಲಿ ಶೀರ್ಷಿಕೆಯಲ್ಲಿ, "ಆರ್ಜಿ ಕರ್ ಘಟನೆ ವೈರಲ್ ಚಿತ್ರ: ಸಂಜಯ್ ಸಂದೀಪ್ ಪಕ್ಕದಲ್ಲಿ ನಿಂತು ನಗುತ್ತಾ ಕೇಕ್ ಕತ್ತರಿಸುತ್ತಿದ್ದಾರೆ, ವೈರಲ್ ಚಿತ್ರದ ಬಗ್ಗೆ ಗಲಾಟೆಯಾಗಿದೆ," ಎಂದು ಹೇಳಲಾಗಿದೆ.
ವೈರಲ್ ಚಿತ್ರದ ಸುದ್ದಿ ವರದಿಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಕಲ್ಕತ್ತಾ ಟೆಲಿವಿಷನ್ ನೆಟ್‌ವರ್ಕ್/ ರಿಪಬ್ಲಿಕ್ ವರ್ಲ್ಡ್/ಟೈಮ್ಸ್ ನೌ ಬೆಂಗಾಲಿ/ ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಫೋಟೋದಲ್ಲಿರುವ ವ್ಯಕ್ತಿ ಪ್ರಸೂನ್ ಚಟರ್ಜಿ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಉದ್ಯೋಗಿ ಮತ್ತು ಘೋಷ್ ಅವರ ಸಹಾಯಕ ಎಂದು ವರದಿಯಾಗಿದೆ. ಅವರು ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯಲ್ಲ.
ನಾವು ಕಂಡುಕೊಂಡಿದ್ದು ಏನು?
ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಸಿಎನ್ಎಂಸಿಆರ್ ಡಿಎ) ನಿಂದ ೨೮ ಆಗಸ್ಟ್ ೨೦೨೪ ರಂದು ಇನ್‌ಸ್ಟಾಗ್ರಾಮ್ ಪೋಷ್ಟ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕಂಡುಕೊಂಡೆವು. ಪೋಷ್ಟ್ ನಲ್ಲಿ ಎಂಟು ಸ್ಲೈಡ್‌ಗಳು ಸೇರಿವೆ, ಸೂಟ್‌ನಲ್ಲಿರುವ ವ್ಯಕ್ತಿಯ ಚಿತ್ರ ಒಳಗೊಂಡಿದೆ, ಟಿವಿ೯ ಸುದ್ದಿ ವಿಭಾಗದ ಬಂಗಾಳಿ ಪಠ್ಯವು "ಸೆಮಿನಾರ್ ಹಾಲ್‌ನಲ್ಲಿ ಪ್ರಸೂನ್ ಚಟರ್ಜಿ" ಎಂದು ಅನುವಾದಿಸುತ್ತದೆ ಮತ್ತು ವೈರಲ್ ಫೋಟೋವನ್ನು ತೋರಿಸುತ್ತದೆ. ಪೋಷ್ಟ್ ನಲ್ಲಿರುವ ವ್ಯಕ್ತಿಯನ್ನು ಪ್ರಸೂನ್ ಚಟರ್ಜಿ ಎಂದು ಗುರುತಿಸುತ್ತದೆ. ಅವರು ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (ಸಿಎನ್ಎಂಸಿ&ಹೆಚ್) ನಲ್ಲಿ ಡೇಟಾ ಎಂಟ್ರಿ ಆಪರೇಟರ್ ಎಂದು ಸೂಚಿಸಲಾಗಿದೆ.
ಆಗಸ್ಟ್ ೯, ೨೦೨೪ ರಂದು ಚಟರ್ಜಿಯವರ ಚಟುವಟಿಕೆಗಳು ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಘೋಷ್ ಅವರೊಂದಿಗಿನ ಅವರ ಒಡನಾಟದ ಬಗ್ಗೆ ಸಿಬಿಐ ತನಿಖೆಗೆ ಸಹ ಪೋಷ್ಟ್ ಕರೆ ನೀಡುತ್ತದೆ.
ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್‌ನ ಇನ್‌ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು. (ಮೂಲ: ಇನ್‌ಸ್ಟಾಗ್ರಾಮ್)
ಹೆಚ್ಚಿನ ತನಿಖೆಯಲ್ಲಿ ಚಟರ್ಜಿಯವರ ಲಾಕ್ ಆಗಿರುವ ಫೇಸ್‌ಬುಕ್ ಪ್ರೊಫೈಲ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅನ್ನು ಕಂಡುಕೊಂಡೆವು. ಸಿಎನ್ಎಂಸಿಆರ್ ಡಿಎ ನ ಇನ್‌ಸ್ಟಾಗ್ರಾಮ್ ಪೋಷ್ಟ್ ನಲ್ಲಿ ಕಂಡುಬರುವ ಸೂಟ್‌ನಲ್ಲಿರುವ ವ್ಯಕ್ತಿಗೆ ಪ್ರೊಫೈಲ್ ಫೋಟೋ ಹೊಂದಿಕೆಯಾಗುತ್ತದೆ. ಅವರು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಕಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಎರಡರಲ್ಲೂ ಕೆಲಸ ಮಾಡುತ್ತಿದ್ದಾರೆ, ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ ಮತ್ತು ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ ಎಂದು ಅವರ ಪ್ರೊಫೈಲ್ ಹೇಳುತ್ತದೆ.
ಪ್ರಸೂನ್ ಚಟರ್ಜಿ ಅವರ ಫೇಸ್‌ಬುಕ್ ಪ್ರೊಫೈಲ್‌ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್)
ನಾವು ಜನವರಿ ೩, ೨೦೨೦ ರ ಪ್ರೊಸೆಂಜಿತ್ ದೇ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅವರ ಫೇಸ್‌ಬುಕ್ ಪೋಷ್ಟ್ ಅನ್ನು ಸಹ ಪತ್ತೆ ಮಾಡಿದ್ದೇವೆ. ಈ ಪೋಷ್ಟ್ ನಲ್ಲಿ ಅದೇ ವ್ಯಕ್ತಿಯ ಹುಟ್ಟುಹಬ್ಬವನ್ನು ಆಚರಿಸುವ ಹನ್ನೆರಡು ಫೋಟೋಗಳು, ಉಡುಗೆ ಮತ್ತು ಸೆಟ್ಟಿಂಗ್ ವೈರಲ್ ಫೋಟೋದಲ್ಲಿ ಇದೆ. ಪೋಷ್ಟ್ ನ ಶೀರ್ಷಿಕೆ ಹೀಗಿದೆ: "MSVP ಕಚೇರಿ, CNMCH ನಲ್ಲಿ ಪ್ರಸೂನ್ ಚಟರ್ಜಿಯವರ ಜನ್ಮದಿನದ ಆಚರಣೆ," ಮತ್ತು ಚಟರ್ಜಿಯವರ ಫೇಸ್‌ಬುಕ್ ಖಾತೆಯನ್ನು ಟ್ಯಾಗ್ ಮಾಡಲಾಗಿದೆ.
ಜನವರಿ ೩, ೨೦೨೦ ರಂದು ಬಳಕೆದಾರರಾದ ಪ್ರೊಸೆನ್‌ಜಿತ್ ಡೇ ಅವರ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್)
ಘೋಷ್ ಅವರೊಂದಿಗಿನ ವೈರಲ್ ಫೋಟೋದಲ್ಲಿರುವ ವ್ಯಕ್ತಿ ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಅಲ್ಲ, ಚಟರ್ಜಿ ಎಂದು ಈ ಸಾಕ್ಷ್ಯವು ದೃಢಪಡಿಸುತ್ತದೆ.
ಲಾಜಿಕಲಿ ಫ್ಯಾಕ್ಟ್ಸ್ ಕಾಮೆಂಟ್‌ಗಾಗಿ ಸಿಎನ್ಎಂಸಿಆರ್ ಡಿಎ ಮತ್ತು ಫೇಸ್‌ಬುಕ್ ಬಳಕೆದಾರರ ದೇ ಅವರನ್ನು ಸಂಪರ್ಕಿಸಿದೆ. ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ಈ ಫ್ಯಾಕ್ಟ್-ಚೆಕ್ ಅನ್ನು ನವೀಕರಿಸಲಾಗುತ್ತದೆ.
ಪೊಲೀಸರು ಸ್ಪಷ್ಟನೆ ನೀಡಿದ್ದಾರೆ
ಆಗಸ್ಟ್ ೩೦ ರಂದು, ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಕೋಲ್ಕತ್ತಾ ಪೊಲೀಸರು ಇದು ರಾಯ್ ಜೊತೆಗಿನ ಘೋಷ್ ಅನ್ನು ತೋರಿಸುವುದಾಗಿ ಹಂಚಿಕೊಂಡ ಹೇಳಿಕೆ ತಪ್ಪು ಎಂದು ವೈರಲ್ ಫೋಟೋವನ್ನು ದೃಢಪಡಿಸಿದರು. ಚಿತ್ರವು ಘೋಷ್ ಅವರ ವೈಯಕ್ತಿಕ ಡೇಟಾ ಆಪರೇಟರ್ ಅನ್ನು ತೋರಿಸುತ್ತದೆ, ರಾಯ್ ಅಥವಾ ಯಾವುದೇ ನಾಗರಿಕ ಸ್ವಯಂಸೇವಕನಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಟರ್ಜಿ ಅವರ ಹೆಸರನ್ನು ಉಲ್ಲೇಖಿಸಲಾಗಿದ್ದರೂ, ಅವರು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿಲ್ಲ.
ಟಿಎಂಸಿ ನಾಯಕರು ವೈರಲ್ ಚಿತ್ರವನ್ನು ನಕಲಿ ಸುದ್ದಿ ಎಂದು ಖಂಡಿಸಿದ್ದಾರೆ
ನಿಲಂಜನ್ ದಾಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ, ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಲ್ಲಿ ಫೋಟೋ ರಾಯ್ ಅನ್ನು ತೋರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಬರೆದಿದ್ದಾರೆ, "ಸತ್ಯವೆಂದರೆ, ಚಿತ್ರದಲ್ಲಿನ ವ್ಯಕ್ತಿ ಪ್ರಸೂನ್ ಚಟರ್ಜಿ, ಡಿಇಓ, ಸಿಎನ್ಎಂಸಿಹೆಚ್, ಅವರು ಡಾ. ಘೋಷ್‌ಗೆ ಅರೆಕಾಲಿಕ ಪಿಎ ಆಗಿದ್ದರು."
ಟಿಎಂಸಿ ಸಂಸದೆ ಸಾಗರಿಕಾ ಘೋಸ್ ಅವರು ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಲ್ಲಿ ಸಮಸ್ಯೆಯನ್ನು ಪ್ರಸ್ತಾಪಿಸಿದರು, "ಇಲ್ಲ, #RGKar ಪ್ರಾಂಶುಪಾಲರೊಂದಿಗೆ ಕೇಕ್ ಕತ್ತರಿಸುವವರು ಪ್ರಮುಖ ಆರೋಪಿ ಅಲ್ಲ. ಇದು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿ, ಪ್ರಸೂನ್ ಚಟರ್ಜಿ, ಡೇಟಾ ಆಪರೇಟರ್. ನಕಲಿ ಸುದ್ದಿಗಳನ್ನು ನಿಲ್ಲಿಸಿ .ನಿಜ ಹೇಳಿ," ಎಂದು ಬರೆದಿದ್ದಾರೆ.
ತೀರ್ಪು
ಆರ್‌ಜಿ ಕರ್ ಆಸ್ಪತ್ರೆ ಮತ್ತು ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಉದ್ಯೋಗಿ ಪ್ರಸೂನ್ ಚಟರ್ಜಿಯನ್ನು ಒಳಗೊಂಡಿರುವ ಜನವರಿ ೨೦೨೦ ರ ಫೋಟೋವನ್ನು ಆರ್‌ಜಿ ಕಾರ್ ಅತ್ಯಾಚಾರ ಮತ್ತು ಕೊಲೆ ಶಂಕಿತ ಸಂಜಯ್ ರಾಯ್, ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಜೊತೆಗೆ ಕೇಕ್ ಕತ್ತರಿಸುತ್ತಿರುವುದನ್ನು ತೋರಿಸಲಾಗಿದೆ ಎಂದು ತಪ್ಪಾಗಿ ಪ್ರಸಾರ ಮಾಡಲಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here