ಮೂಲಕ: ಅನುರಾಗ್ ಬರುವಾ
ನವೆಂಬರ್ 20 2024
ವೈರಲ್ ಹೇಳಿಕೆ ತಪ್ಪು, ಮತ್ತು ಸಾಕ್ಷಿಯಾಗಿ ಉಲ್ಲೇಖಿಸಲಾದ ಸಕಲ್ ಗ್ರಾಫಿಕ್ ಒಂದು ಕಲ್ಪಿತ ಚಿತ್ರವಾಗಿದೆ ಎಂದು ಸಕಲ್ ಮೀಡಿಯಾ ಮತ್ತು ಒಳಗೊಂಡಿರುವ ಅಧಿಕಾರಿಗಳು ದೃಢಪಡಿಸಿದ್ದಾರೆ.
ಹೇಳಿಕೆ ಏನು?
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಎರಡು ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ: ಒಂದು ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನವನ್ನು ತೋರಿಸುತ್ತದೆ ಮತ್ತು ಇನ್ನೊಂದು ದೇವಸ್ಥಾನದೊಳಗಿರುವ ಹಿಂದೂ ದೇವರು ಗಣೇಶನ ವಿಗ್ರಹವನ್ನು ತೋರಿಸುತ್ತದೆ. ವಕ್ಫ್ ಬೋರ್ಡ್ ದೇವಾಲಯದ ಮೇಲೆ ಹಕ್ಕು ಸಾಧಿಸಿದೆ ಎಂದು ಪೋಷ್ಟ್ ಗಳು ಹೇಳುತ್ತವೆ.
ವೈರಲ್ ಕೊಲಾಜ್ ಚಿತ್ರಣವು ಮರಾಠಿ ಭಾಷೆಯ ದಿನಪತ್ರಿಕೆಯಾದ ಸಕಲ್‌ನ ಲೋಗೋವನ್ನು ಮೇಲಿನ ಬಲ ಮೂಲೆಯಲ್ಲಿ ಪ್ರದರ್ಶಿಸುತ್ತದೆ, ಪೋಷ್ಟ್ ಪತ್ರಿಕೆಯಿಂದ ಹುಟ್ಟಿಕೊಂಡಿದೆ ಎಂಬ ಅನಿಸಿಕೆ ನೀಡುತ್ತದೆ.
ಎಕ್ಸ್ ನಲ್ಲಿ ಒಬ್ಬ ಬಳಕೆದಾರರು ಈ ಹೇಳಿಕೆಯನ್ನು ಹಂಚಿಕೊಂಡಿದ್ದು ಅದರ ಅನುವವಾದ ಹೀಗಿದೆ: "ತುಂಬಾ ಕೋಪೋದ್ರಿಕ್ತವಾಗಿದೆ! ಹಿಂದೂಗಳ ಆರಾಧ್ಯ ಮತ್ತು ಮುಂಬೈನ ಗುರುತಾಗಿರುವ ಸಿದ್ಧಿವಿನಾಯಕ ದೇವಾಲಯದ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸಿದೆ! ಮಹಾವಿಕಾಸ್ ಅಘಾಡಿಯು ಲಿಖಿತ ಒಪ್ಪಿಗೆಯನ್ನು ನೀಡಿದೆ. ಉಲೇಮಾ, ವಕ್ಫ್ ಬೇಡಿಕೆ ಸೇರಿದಂತೆ, ನೀವು ದೇವಾಲಯಗಳು ಮತ್ತು ಕೋಟೆಗಳನ್ನು ಉಳಿಸಲು ಬಯಸಿದರೆ, ಮಹಾಯುತಿಗೆ ಮತ ನೀಡಿ!"
ಮಹಾಯುತಿ (ಗ್ರ್ಯಾಂಡ್ ಅಲೈಯನ್ಸ್ ಎಂದು ಅನುವಾದಿಸಲಾಗಿದೆ) ಭಾರತದ ಮಹಾರಾಷ್ಟ್ರದ ರಾಜಕೀಯ ಒಕ್ಕೂಟವಾಗಿದೆ. ಮೈತ್ರಿಯು ಪ್ರಸ್ತುತ ಮೂರು ಪ್ರಮುಖ ಪಕ್ಷಗಳನ್ನು ಒಳಗೊಂಡಿದೆ: ಬಿಜೆಪಿ, ಶಿವಸೇನೆ (ಎಸ್ ಹೆಚ್ಎಸ್), ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ).
ಈ ಪೋಷ್ಟ್, ನವೆಂಬರ್ ೧೮, ೨೦೨೪ ರಂದು, ೪೦,೦೦೦ ವೀಕ್ಷಣೆಗಳನ್ನು ಗಳಿಸಿದೆ. ಇದರ ಆರ್ಕೈವ್ ಮಾಡಿದ ಆವೃತ್ತಿಗಳು ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ನಿತೇಶ್ ರಾಣೆ ಸೇರಿದಂತೆ ಉದ್ದೇಶಿತ ಸಕಲ್ ಸುದ್ದಿ ಗ್ರಾಫಿಕ್ ಅನ್ನು ಹೊಂದಿರುವ ಇದೇ ರೀತಿಯ ಪೋಷ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಕನ್ನಡದ್ಲಲಿ ಹಂಚಿಕೊಂಡ ಪೋಷ್ಟ್ ಒಂದರ ಶೀರ್ಷಿಕೆ ಹೀಗಿದೆ, "ಸಿದ್ದಿ ವಿನಾಯಕ ದೇವಸ್ಥಾನ ಅಲ್ಲಾಹು ಅಕ್ಬರನದ್ದು," ಮತ್ತು ಅದು ಗಣೇಶನ ಚಿತ್ರ ಹಾಗು ಅದರ ಮೇಲೆ ಆಂಗ್ಲ ಭಾಷೆಯಲ್ಲಿ ಬರೆದ ವಾಕ್ಯ ಹೀಗೆ ಅನುವಾದಿಸುತ್ತದೆ, "ವಕ್ಫ್ ಬೋರ್ಡ್ ಈಗ ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನದ ಮೇಲೆ ಹಕ್ಕು ಸಾಧಿಸಿದೆ."
ವಕ್ಫ್ ಬೋರ್ಡ್ ಭಾರತದಲ್ಲಿನ ಶಾಸನಬದ್ಧ ಸಂಸ್ಥೆಯಾಗಿದ್ದು ಅದು ವಕ್ಫ್ ಆಸ್ತಿಗಳನ್ನು ನಿರ್ವಹಿಸುತ್ತದೆ, ಇದು ಮುಸ್ಲಿಮರು ಧಾರ್ಮಿಕ, ಶೈಕ್ಷಣಿಕ ಅಥವಾ ಸಮುದಾಯ ಉದ್ದೇಶಗಳಿಗಾಗಿ ಮಾಡಿದ ದತ್ತಿಗಳಾಗಿವೆ.
ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಇನ್ನೂ ಕೆಲವರು ವೈರಲ್ ಗ್ರಾಫಿಕ್ ಇಲ್ಲದೆ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ ಅಂತಹ ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆದರೆ , ನಮ್ಮ ತನಿಖೆಯು ವೈರಲ್ ಹೇಳಿಕೆ ತಪ್ಪು ಮತ್ತು ಅದನ್ನು ಬೆಂಬಲಿಸಲು ಬಳಸುತ್ತಿರುವ ಗ್ರಾಫಿಕ್ ಅನ್ನು ನಿರ್ಮಿಸಲಾಗಿದೆ ಎಂದು ಕಂಡುಹಿಡಿದಿದೆ.ನಾವು ಕಂಡುಕೊಂಡಿದ್ದು ಏನು?
ಸಕಲ್ ಲೋಗೋದೊಂದಿಗೆ ವೈರಲ್ ಕೊಲಾಜ್‌ನ ರಿವರ್ಸ್ ಇಮೇಜ್ ಸರ್ಚ್ ನಂಬಲರ್ಹ ಫಲಿತಾಂಶಗಳನ್ನು ನೀಡಲಿಲ್ಲ. ಸಕಲ್ ಮೀಡಿಯಾದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಂತಹ ಯಾವುದೇ ಗ್ರಾಫಿಕ್ ಕಂಡುಬಂದಿಲ್ಲ ಮತ್ತು ಪತ್ರಿಕೆಯು ಯಾವುದೇ ವರದಿಯನ್ನು ಪ್ರಕಟಿಸಿಲ್ಲ.
ಅವರ ಸಾಮಾಜಿಕ ಮಾಧ್ಯಮದಲ್ಲಿ ಪೋಷ್ಟ್ ಮಾಡಿದ ವೈರಲ್ ಗ್ರಾಫಿಕ್ ಮತ್ತು ಸಕಲ್ ಅವರ ಅಧಿಕೃತ ಪೋಷ್ಟ್ ಕಾರ್ಡ್ ನಡುವಿನ ದೃಶ್ಯ ಹೋಲಿಕೆಯು ಹಲವಾರು ವ್ಯತ್ಯಾಸಗಳನ್ನು ಬಹಿರಂಗಪಡಿಸಿತು. ವೈರಲ್ ಗ್ರಾಫಿಕ್‌ಗಿಂತ ಭಿನ್ನವಾಗಿ, ಸಕಲ್‌ನ ಪೋಷ್ಟ್ ಗಳು ಬಾರ್ಡರ್ ಹೊಂದಿಲ್ಲ, ಮತ್ತು ಸಕಲ್ ಕಾರ್ಡ್ ಗಳಲ್ಲಿನ ಪಠ್ಯವು ಯಾವಾಗಲೂ ಎಡಕ್ಕೆ ಜೋಡಿಸಲ್ಪಟ್ಟಿರುತ್ತದೆ, ಆದರೆ ವೈರಲ್ ಗ್ರಾಫಿಕ್‌ನೊಳಗಿನ ಪಠ್ಯವು ಕೇಂದ್ರೀಕೃತವಾಗಿದೆ.
ವೈರಲ್ ಗ್ರಾಫಿಕ್‌ನಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ತೋರಿಸುವ ದೃಶ್ಯ ಹೋಲಿಕೆ.
(ಮೂಲ: ಎಕ್ಸ್/ಸಕಲ್ ಮೀಡಿಯಾ/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಇದಲ್ಲದೆ, ಸಕಲ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಗಳನ್ನು ನೀಡಿದ್ದು, ಚಿತ್ರವು ನಕಲಿ ಎಂದು ಸ್ಪಷ್ಟಪಡಿಸಿದೆ. ಸಕಲ್ ಅವರು ಮರಾಠಿಯಲ್ಲಿ ಎಕ್ಸ್‌ನಲ್ಲಿ ಪೋಷ್ಟ್ ಮಾಡಿದ ಹೇಳಿಕೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೀಗೆ ಅನುವಾದಿಸುತ್ತದೆ: "ಪ್ರಸ್ತುತ, 'ಸಕಲ್' ಹೆಸರಿನಲ್ಲಿ ತಪ್ಪುದಾರಿಗೆಳೆಯುವ ಸೃಜನಶೀಲತೆ ಸಾಮಾಜಿಕ ಮಾಧ್ಯಮದಲ್ಲಿ 'ಮುಂಬೈನ ಸಿದ್ಧಿವಿನಾಯಕ ದೇವಾಲಯದ ಮೇಲೆ ವಕ್ಫ್ ಮಂಡಳಿಯ ಹಕ್ಕು' ಶೀರ್ಷಿಕೆಯೊಂದಿಗೆ ವೈರಲ್ ಆಗಿದೆ. ಆದರೆ, ‘ಸಕಲ್’ ಅಂತಹ ಯಾವುದೇ ಸೃಜನಶೀಲತೆಯನ್ನು ಸೃಷ್ಟಿಸಿಲ್ಲ ಮತ್ತು ‘ಸಕಲ್’ ನ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಈ ಕಿಡಿಗೇಡಿತನವನ್ನು ಮಾಡಲಾಗಿದೆ."
ಸಕಲ್ ಮೀಡಿಯಾದ ಎಕ್ಸಿಕ್ಯೂಟಿವ್ ಎಡಿಟರ್ ಶೀತಲ್ ಪವಾರ್ ಕೂಡ ಎಕ್ಸ್ ನಲ್ಲಿ ಪೋಷ್ಟ್ ಮಾಡಿ (ಇಲ್ಲಿ ಆರ್ಕೈವ್ ಮಾಡಲಾಗಿದೆ), ವೈರಲ್ ಚಿತ್ರ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.ಸಕಲ್ ಮೀಡಿಯಾದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ ಸ್ಕ್ರೀನ್‌ಶಾಟ್)
ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಈ ಹೇಳಿಕೆಗೆ ಪ್ರತಿಕ್ರಿಯಿಸಿ, ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ): "ಬಿಜೆಪಿಯ ಪರಿಸರ ವ್ಯವಸ್ಥೆಯ ಸಂಪೂರ್ಣ ಅಸಹ್ಯಕರ ಮನಸ್ಥಿತಿ. ಒಡೆದು ಆಳಿ. ಸುಳ್ಳು ಹೇಳಿ ಗೆಲ್ಲಲು ಪ್ರಯತ್ನಿಸಿ. @ECISVEEP ಮತ್ತು @MumbaiPolice ಎಂದಾದರೂ ಕಾರ್ಯನಿರ್ವಹಿಸುತ್ತದೆಯೇ? ಮತ್ತು ಅಂತಹ ಅಸಹ್ಯಕರ ದ್ವೇಷ ಸೃಷ್ಟಿಕರ್ತರನ್ನು ಮತ್ತು ಮಹಾರಾಷ್ಟ್ರ ದ್ವೇಷಿಗಳನ್ನು ಬಂಧಿಸುತ್ತದೆಯೇ? ನಿಮ್ಮ ಮತಗಳಿಗಾಗಿ ನಮ್ಮ ಭಾವನೆಗಳೊಂದಿಗೆ ಮತ್ತು ಮಹಾರಾಷ್ಟ್ರದ ಭಾವನೆಗಳು ಆಟವಾಡಬೇಡಿ ."
ಆದಿತ್ಯ ಠಾಕ್ರೆಯವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ ಸ್ಕ್ರೀನ್‌ಶಾಟ್)
ವಕ್ಫ್ ಬೋರ್ಡ್ ಮತ್ತು ಸಿದ್ಧಿವಿನಾಯಕ ದೇವಸ್ಥಾನ ಹೇಳಿದ್ದೇನು?
ಲಾಜಿಕಲಿ ಫ್ಯಾಕ್ಟ್ಸ್ ಸ್ಪಷ್ಟೀಕರಣಕ್ಕಾಗಿ ಮಹಾರಾಷ್ಟ್ರ ವಕ್ಫ್ ಮಂಡಳಿಯನ್ನು ಸಂಪರ್ಕಿಸಿದೆ. ಮಹಾರಾಷ್ಟ್ರ ವಕ್ಫ್ ಮಂಡಳಿಯ ಸಿಇಒ ಜುನೈದ್ ಸೈಯದ್ ನಮಗೆ ಹೇಳಿದರು: "ಇದು ನಕಲಿ ಸುದ್ದಿ. ಅಂತಹ ಯಾವುದೇ ಸಂವಹನವಿಲ್ಲ ಅಥವಾ ಮಂಡಳಿಯು ಅಂತಹ ಯಾವುದೇ ಹೇಳಿಕೆ ನೀಡಿಲ್ಲ."
ಶ್ರೀ ಸಿದ್ಧಿವಿನಾಯಕ ಮಂದಿರ ಟ್ರಸ್ಟ್‌ನ ಖಜಾಂಚಿ ಪವನ್ ಕುಮಾರ್ ತ್ರಿಪಾಠಿ ಅವರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಅಲ್ಲಿ ಅವರು ದೇವಾಲಯವು ಮುಂಬೈನ ಹೆಮ್ಮೆಯ ಸಂಕೇತವಾಗಿದೆ ಮತ್ತು ಯಾವುದೇ ಮಂಡಳಿಯು ಅದರ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳುವುದನ್ನು ಕೇಳಬಹುದು. ಈ ದೇವಾಲಯವು ಯಾವಾಗಲೂ ಗಣೇಶನ ಭಕ್ತರಿಗೆ ಸೇರಿದ್ದು, ಹಾಗೆಯೇ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಹೆಚ್ಚಿನ ಕಾಮೆಂಟ್‌ಗಾಗಿ ಲಾಜಿಕಲಿ ಫ್ಯಾಕ್ಟ್ಸ್ ತ್ರಿಪಾಠಿಯನ್ನು ಸಂಪರ್ಕಿಸಿದೆ. ವೀಡಿಯೋ ನಿಜವಾಗಿದೆ ಎಂದು ಅವರು ದೃಢಪಡಿಸಿದರು ಮತ್ತು ದೇವಸ್ಥಾನವು ವಕ್ಫ್ ಬೋರ್ಡ್‌ನಿಂದ ಯಾವುದೇ ಸಂವಹನವನ್ನು ಸ್ವೀಕರಿಸಿಲ್ಲ ಮತ್ತು ಅವರಿಂದ ಅಂತಹ ಯಾವುದೇ ಹೇಳಿಕೆಗಳನ್ನು ನೋಡಿಲ್ಲ ಎಂದು ಹೇಳಿದರು.
ತೀರ್ಪು
ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ಅಂತಹ ಯಾವುದೇ ಹಕ್ಕು ಮಾಡಲಾಗಿಲ್ಲ ಎಂದು ದೇವಾಲಯದ ಅಧಿಕಾರಿಗಳು ಮತ್ತು ಮಹಾರಾಷ್ಟ್ರ ವಕ್ಫ್ ಮಂಡಳಿ ಇಬ್ಬರೂ ಲಾಜಿಕಲಿ ಫ್ಯಾಕ್ಟ್ಸ್ ಗೆ ದೃಢಪಡಿಸಿದ್ದಾರೆ. ಸುದ್ದಿ ಸಂಸ್ಥೆಯ ಲೋಗೋವನ್ನು ಹೊಂದಿರುವ ವೈರಲ್ ಸಾಮಾಜಿಕ ಮಾಧ್ಯಮ ಗ್ರಾಫಿಕ್ ಫೇಕ್ ಎಂದು ಸಕಲ್ ಮೀಡಿಯಾ ಸಾರ್ವಜನಿಕ ಹೇಳಿಕೆಗಳಲ್ಲಿ ಸ್ಪಷ್ಟಪಡಿಸಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here