ಮುಖಪುಟ ಆಂಧ್ರಪ್ರದೇಶದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ವೀಡಿಯೋ ಫೆಬ್ರವರಿಯದ್ದು, ಇತ್ತೀಚಿನದಲ್ಲ

ಆಂಧ್ರಪ್ರದೇಶದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ವೀಡಿಯೋ ಫೆಬ್ರವರಿಯದ್ದು, ಇತ್ತೀಚಿನದಲ್ಲ

ಮೂಲಕ: ರೋಹಿತ್ ಗುಟ್ಟಾ

ಜುಲೈ 29 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ವೀಡಿಯೋ ಫೆಬ್ರವರಿಯದ್ದು, ಇತ್ತೀಚಿನದಲ್ಲ ಈ ರ‍್ಯಾಗಿಂಗ್ ಘಟನೆಯು ಆಂಧ್ರಪ್ರದೇಶದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಗೆ ಪುರಾವೆಯಾಗಿದೆ ಎಂದು ವೈಎಸ್‌ಆರ್‌ಸಿಪಿಯ ಸಾಮಾಜಿಕ ಮಾಧ್ಯಮ ಪೋಷ್ಟ್‌ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಈ ವೀಡಿಯೋ ಇತ್ತೀಚೆಗೆ ಕಾಣಿಸಿಕೊಂಡಿದ್ದರೂ, ೨೦೨೪ ರ ಫೆಬ್ರವರಿಯಲ್ಲಿ ವೈಎಸ್‌ಆರ್‌ಸಿಪಿ ಅಧಿಕಾರದಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

(ಪ್ರಚೋದಕ ಎಚ್ಚರಿಕೆ: ಕೆಳಗಿನ ಲೇಖನವು ದುಃಖದ ದೃಶ್ಯಗಳು ಮತ್ತು ಹಿಂಸೆಯ ಉಲ್ಲೇಖಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಹೇಳಿಕೆ ಏನು?

೫:೪೪ ನಿಮಿಷಗಳ ಗ್ರಾಫಿಕ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತೆಲುಗು ದೇಶಂ ಪಕ್ಷ (ಟಿಡಿಪಿ) ಅಧಿಕಾರಕ್ಕೆ ಬಂದ ಇತ್ತೀಚಿನ ಅಸೆಂಬ್ಲಿ ಚುನಾವಣೆಯ ನಂತರ ಆಂಧ್ರಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವುದನ್ನು ಈ ವೀಡಿಯೋ ವಿವರಿಸುತ್ತದೆ ಎಂದು ಹೇಳಲಾಗಿದೆ. ಇದು ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಎಸ್‌ಎಸ್‌ಎನ್ ಕಾಲೇಜಿನಲ್ಲಿ ರ‍್ಯಾಗಿಂಗ್ ಘಟನೆಯನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಆರಂಭದಲ್ಲಿ ಹಂಚಿಕೊಳ್ಳಲಾಗಿತ್ತು. 

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆಯಿಂದಲೂ ವೀಡಿಯೋವನ್ನು ಪೋಷ್ಟ್ ಮಾಡಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಪಕ್ಷವು ವಿಶಾಲವಾದ ಹೇಳಿಕೆಗಳನ್ನು ನೀಡದಿದ್ದರೂ, ಅದು ರಾಜ್ಯದ ಗೃಹ ಸಚಿವ ವಂಗಲಪುಡಿ ಅನಿತಾ ಅವರನ್ನು ಟ್ಯಾಗ್ ಮಾಡಿದ್ದು, ರಾಜ್ಯದಲ್ಲಿ "ರ‍್ಯಾಗಿಂಗ್ ಘಟನೆಗಳ ಹೆಚ್ಚಳ" ಕುರಿತು ಸರ್ಕಾರವನ್ನು ಪ್ರಶ್ನಿಸಿದೆ.

ಪೋಷ್ಟ್ #SaveAPFROMTDP ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದೆ ಮತ್ತು ಇತರ ಬಳಕೆದಾರರು #TDPJSPGOVT ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದೇ ರೀತಿಯ ಪೋಷ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ತೆಲುಗು ದೇಶಂ ಪಕ್ಷ (ಟಿಡಿಪಿ), ಜನಸೇನಾ ಪಕ್ಷ (ಜೆಎಸ್‌ಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಮೈತ್ರಿಕೂಟವು ಇತ್ತೀಚಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಬದಲಿಗೆ ಸರ್ಕಾರವನ್ನು ರಚಿಸಿತು. 

ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಘಟನೆಯು ವೈಎಸ್‌ಆರ್‌ಸಿಪಿಯ ಅಧಿಕಾರಾವಧಿಯಲ್ಲಿ ಫೆಬ್ರವರಿ ೨೦೨೪ ರಲ್ಲಿ ಸಂಭವಿಸಿದೆ.

ನಾವು ಏನು ಕಂಡುಕೊಂಡಿದ್ದೇವೆ?

ಈ ಘಟನೆಯ ಕುರಿತು ಸುದ್ದಿ ವರದಿಗಳಿಗಾಗಿ ಹುಡುಕಾಟವು ಜುಲೈ ೨೫, ೨೦೨೪ ರಂದು ತೆಲುಗು ದಿನಪತ್ರಿಕೆ ಈನಾಡುನಲ್ಲಿನ ಲೇಖನಕ್ಕೆ ಕರೆದೊಯಿತು, ಇದರಲ್ಲಿ ವೀಡಿಯೋದ ಸ್ಕ್ರೀನ್‌ಶಾಟ್‌ಗಳು ಸೇರಿವೆ. ವರದಿಯ ಪ್ರಕಾರ, ಈ ಘಟನೆಯು ಫೆಬ್ರವರಿ ೨, ೨೦೨೪ ರಂದು ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯಲ್ಲಿರುವ ಶ್ರೀ ಸುಬ್ಬರಾಯ ನಾರಾಯಣ (ಎಸ್‌ಎಸ್‌ಎನ್) ಅನುದಾನಿತ ಪದವಿ ಕಾಲೇಜಿನ ಬಾಲಕರ ಹಾಸ್ಟೆಲ್‌ನಲ್ಲಿ ಸಂಭವಿಸಿದೆ.

ಆದರೆ, ಅದು ವೀಡಿಯೋ ಜುಲೈ ೨೪, ೨೦೨೪ ರಂದು ಮಾತ್ರ ಹೊರಹೊಮ್ಮಿತು. ಇನ್ನೊಂದು ತೆಲುಗು ದಿನಪತ್ರಿಕೆ, ಆಂಧ್ರಜ್ಯೋತಿ ಕೂಡ ವೀಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿತ್ತು ಮತ್ತು ಘಟನೆಯು ಜುಲೈ ೨೪, ೨೦೨೪ ರಂದು ಬೆಳಕಿಗೆ ಬಂದಿದೆ ಎಂದು ವರದಿ ಮಾಡಿದೆ.  ಇದರ ಬೆನ್ನಲ್ಲೇ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಟಿವಿ ಭಾರತ್ ಮತ್ತು ಡೆಕ್ಕನ್ ಕ್ರಾನಿಕಲ್‌ನ ವರದಿಗಳು ಈ ವಿವರಗಳನ್ನು ಖಚಿತಪಡಿಸುತ್ತವೆ.

ಆಂಧ್ರಜ್ಯೋತಿಯಲ್ಲಿ ವರದಿಯ ಸ್ಕ್ರೀನ್‌ಶಾಟ್ (ಮೂಲ: ಆಂಧ್ರಜ್ಯೋತಿ)

ನಾವು ನರಸರಾವ್ ಪೇಟೆ ಒನ್ ಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಅವರ ವ್ಯಾಪ್ತಿಯ ಈ ಘಟನೆ ನಡೆದಿದೆ. ಫೆಬ್ರವರಿ ೨, ೨೦೨೪ ರಂದು ಈ ಘಟನೆ ಸಂಭವಿಸಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ (ಸಿಐ) ಸಿ ಕೃಷ್ಣಾ ರೆಡ್ಡಿ ಅವರು ಲಾಜಿಕಲಿ ಫ್ಯಾಕ್ಟ್ಸ್ ಗೆ ಮಾಹಿತಿ ನೀಡಿದ್ದಾರೆ. ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿಗಳು ರ‍್ಯಾಗಿಂಗ್ ಆಚರಣೆಯ ಭಾಗವಾಗಿ ಎರಡನೇ ವರ್ಷದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ವಿವರಿಸಿದರು. ಆರೋಪಿಗಳು ತಮ್ಮ ಕೋರ್ಸ್ ಮುಗಿದ ಮೇಲೆ ಕಾಲೇಜು ತೊರೆದಿದ್ದರೂ, ಜುಲೈ ೨೪, ೨೦೨೪ ರಂದು ೯೧/೨೦೨೪ ಸಂಖ್ಯೆಯ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಸದ್ಯಕ್ಕೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್ ಅನ್ನು ಲಾಜಿಕಲಿ ಫ್ಯಾಕ್ಟ್ಸ್ ಪರಿಶೀಲಿಸಿದೆ, ಇದು ಫೆಬ್ರವರಿ ೨, ೨೦೨೪ ರಂದು ಈ ಘಟನೆ ನಡೆದಿದೆ ಎಂದು ಹೇಳುತ್ತದೆ. 

ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ (ಮೂಲ: ಆಂಧ್ರಪ್ರದೇಶ ಪೊಲೀಸರು)

ಆಂಧ್ರಪ್ರದೇಶ ಸರ್ಕಾರದ ಅಧಿಕೃತ ಸತ್ಯ-ಪರಿಶೀಲನಾ ಘಟಕವು ಜುಲೈ ೨೫, ೨೦೨೪ ರಂದು ಎಕ್ಸ್ ನಲ್ಲಿ ಸ್ಪಷ್ಟಪಡಿಸಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಘಟನೆಯು ಫೆಬ್ರವರಿ ೨೦೨೪ ರಲ್ಲಿ ನಡೆದಿದೆ, ಇತ್ತೀಚೆಗೆ ಅಲ್ಲ.

ಆಂಧ್ರಪ್ರದೇಶ ಸರ್ಕಾರದ ಫ್ಯಾಕ್ಟ್ ಚೆಕ್ ಯುನಿಟ್ ನೀಡಿದ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/FactCheck.AP.Gov.in)

ವೈಎಸ್‌ಆರ್‌ಸಿಪಿ ಆಂಧ್ರಪ್ರದೇಶದಲ್ಲಿ ಮೇ ೨೦೧೯ ರಿಂದ ಏಪ್ರಿಲ್ ೨೦೨೪ ರವರೆಗೆ ಅಧಿಕಾರದಲ್ಲಿತ್ತು. ಟಿಡಿಪಿ-ಜೆಎಸ್ಪಿ-ಬಿಜೆಪಿ ಮೈತ್ರಿ ಸರ್ಕಾರವು ಜೂನ್ ೧೨, ೨೦೨೪ ರಂದು ಪ್ರಮಾಣವಚನ ಸ್ವೀಕರಿಸಿತು.

ತೀರ್ಪು

ಪ್ರಸ್ತುತ ಟಿಡಿಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸೂಚಿಸಲು ಆಂಧ್ರಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ವೀಡಿಯೋವನ್ನು ಸಂದರ್ಭದಿಂದ ಹೊರಗೆ ಹಂಚಿಕೊಳ್ಳಲಾಗಿದೆ. ವಾಸ್ತವದಲ್ಲಿ, ಈ ವಿಡಿಯೋ ವೈಎಸ್‌ಆರ್‌ಸಿಪಿ ಆಡಳಿತದ ಅವಧಿಯಲ್ಲಿ ಫೆಬ್ರವರಿ ೨೦೨೪ ರದ್ದು.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ