ಮೂಲಕ: ಚಂದನ್ ಬೋರ್ಗೊಹೈನ್
ಜುಲೈ 15 2024
ಸುದ್ದಿ ವರದಿಗಳಲ್ಲಿ ಪ್ರಕಟವಾದ ಗಾಂಧಿಯವರ ಚಿತ್ರಗಳು ಮಣಿಪುರ ಹಿಂಸಾಚಾರದಿಂದ ಸ್ಥಳಾಂತರಗೊಂಡ ಸಂತ್ರಸ್ತರಿಗೆ ಅಸ್ಸಾಂನ ಪರಿಹಾರ ಕೇಂದ್ರ, ಪ್ರವಾಹ-ಪರಿಹಾರ ಶಿಬಿರವಲ್ಲ.
ಹೇಳಿಕೆ ಏನು?
ಜುಲೈ ೮, ೨೦೨೪ ರಂದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಸ್ಸಾಂನ ಸಿಲ್ಚಾರ್‌ನ ಫುಲೆರ್ಟಲ್‌ನಲ್ಲಿರುವ ಪ್ರವಾಹ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ್ದಾರೆ ಎಂದು ಬಹು ಮುಖ್ಯವಾಹಿನಿಯ ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. ನೆರೆಯ ರಾಜ್ಯವಾದ ಮಣಿಪುರಕ್ಕೆ ತೆರಳುವ ಮೊದಲು ಕಾಂಗ್ರೆಸ್ ಪಕ್ಷದ ನಾಯಕರು ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದರು ಎಂದು ಈ ವರದಿಗಳು ಹೇಳಿವೆ.
ಎಎನ್ಐ ಸುದ್ದಿ ಸಂಸ್ಥೆ ಪ್ರಕಟಿಸಿದ ವರದಿಯ ತಲೆಬರಹ ಹೀಗಿದೆ, (ಇಲ್ಲಿ ಆರ್ಕೈವ್ ಮಾಡಲಾಗಿದೆ) 'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಫುಲೆರ್ಟಲ್‌ನಲ್ಲಿನ ಪರಿಹಾರ ಶಿಬಿರದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ,' ಶಿಬಿರದಲ್ಲಿ ಗಾಂಧಿಯವರು ನಿವಾಸಿಗಳೊಂದಿಗೆ ಸಂವಾದ ನಡೆಸುತ್ತಿರುವ ಚಿತ್ರಗಳನ್ನು ಒಳಗೊಂಡಿದೆ. ಅಂತೆಯೇ, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಬೆಂಬಲವನ್ನು ವ್ಯಕ್ತಪಡಿಸುವ ಮೂಲಕ ಗಾಂಧಿಯವರ ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಅನ್ನು ಉಲ್ಲೇಖಿಸಿದೆ ಮತ್ತು ಫುಲೆರ್ಟಲ್‌ನಲ್ಲಿನ ಪ್ರವಾಹ ಪರಿಹಾರ ಶಿಬಿರಕ್ಕೆ ಅವರ ಭೇಟಿಯನ್ನು ವರದಿ ಮಾಡಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ).
ಡೆಕ್ಕನ್ ಕ್ರಾನಿಕಲ್, ಜೀ ನ್ಯೂಸ್, ಎನ್‌ಡಿಟಿವಿ, ದಿ ವೀಕ್ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವಾರು ಮಾಧ್ಯಮಗಳು ಅಸ್ಸಾಂನ ಫುಲೆರ್ಟಲ್‌ನಲ್ಲಿನ ಪ್ರವಾಹ ಪರಿಹಾರ ಶಿಬಿರಕ್ಕೆ ಗಾಂಧಿಯವರ ಹೇಳಲಾದ ಭೇಟಿಯ ಬಗ್ಗೆ ವರದಿಗಳನ್ನು ಪ್ರಕಟಿಸಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ, ಪತ್ರಕರ್ತ ತಮಾಲ್ ಸಹಾ ಅವರು ಎಕ್ಸ್ ನಲ್ಲಿ ಗಾಂಧಿಯವರ ಚಿತ್ರಗಳನ್ನು ಹಂಚಿಕೊಂಡು, ಹೀಗೆ ಬರೆದಿದ್ದಾರೆ: "#ರಾಹುಲ್ ಗಾಂಧಿ #ಅಸ್ಸಾಂನ ಫುಲೆರ್ಟಾಲ್‌ನಲ್ಲಿರುವ ಹ್ಮಾರ್ ಪರಿಹಾರ ಶಿಬಿರದಲ್ಲಿ #ಅಸ್ಸಾಂ ಪ್ರವಾಹದ ಸಂತ್ರಸ್ತರೊಂದಿಗೆ. ೭೦ ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಲಕ್ಷ ಜನರು ನಿರಾಶ್ರಿತರಾಗಿದ್ದಾರೆ."
ಫೇಸ್‌ಬುಕ್ ಬಳಕೆದಾರರು ಇದೇ ಚಿತ್ರಗಳನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ : "ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಅಸ್ಸಾಂನಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದರು. ಫುಲೆರ್ಟಲ್, ಅಸ್ಸಾಂ."
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಆದರೆ, ನೆರೆಯ ಮಣಿಪುರದಲ್ಲಿ ಹಿಂಸಾಚಾರದಿಂದ ಸಂತ್ರಸ್ತರಾದ ಜನರಿಗಾಗಿ ಅಸ್ಸಾಂನ ಸಿಲ್ಚಾರ್‌ನಲ್ಲಿನ ಪರಿಹಾರ ಶಿಬಿರದಲ್ಲಿ ಈ ಚಿತ್ರಗಳು ನಿಜವಾಗಿ ಸರೆಹಿಡಿಯಲಾಗಿದೆ. ಗಾಂಧಿಯವರು ಅಸ್ಸಾಂನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜನರನ್ನು ಭೇಟಿಯಾಗಿದ್ದರೂ, ಈ ನಿರ್ದಿಷ್ಟ ಚಿತ್ರಗಳು ಆ ಮುಖಾಮುಖಿಯನ್ನು ಬಿಂಬಿಸುವುದಿಲ್ಲ. ಅವರು ಅಸ್ಸಾಂನಲ್ಲಿ ಭೇಟಿ ನೀಡಿದ ಶಿಬಿರದಲ್ಲಿ ಮಣಿಪುರ ಹಿಂಸಾಚಾರದ ಸಂತ್ರಸ್ತರನ್ನು ಇರಿಸಲಾಗಿತ್ತು, ಪ್ರವಾಹ ಪೀಡಿತ ವ್ಯಕ್ತಿಗಳಲ್ಲ.
ಫೋಟೋಗಳು ನಿಜವಾಗಿಯೂ ಏನನ್ನು ತೋರಿಸುತ್ತವೆ?
ಜುಲೈ ೮, ೨೦೨೪ರಂದು ಅಧಿಕೃತ ಕಾಂಗ್ರೆಸ್ ಖಾತೆಯಿಂದ ಹಂಚಿಕೊಂಡ ಎಕ್ಸ್ ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಮಗೆ ಕಂಡುಬಂದಿದೆ. ಈ ಪೋಷ್ಟ್ ಗೆ ಮೂಲತಃ ಹಿಂದಿಯಲ್ಲಿ ಶೀರ್ಷಿಕೆ ನೀಡಲಾಗಿದೆ: "ಪ್ರತಿಪಕ್ಷದ ನಾಯಕ ಶ್ರೀ @ರಾಹುಲ್ ಗಾಂಧಿ ಅವರು ಅಸ್ಸಾಂನ ಪರಿಹಾರ ಶಿಬಿರದಲ್ಲಿ ಮಣಿಪುರ ಹಿಂಸಾಚಾರದ ನಿರಾಶ್ರಿತರನ್ನು ಭೇಟಿಯಾದರು. ಫುಲೆರ್ಟಲ್, ಅಸ್ಸಾಂ."
ಕಾಂಗ್ರೆಸ್ ನ ಅಧಿಕೃತ ಖಾತೆಯ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/@INCindia)
ಗಾಂಧಿಯವರ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ವೀಡಿಯೋವನ್ನೂ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸಹ ನಾವು ಕಂಡುಕೊಂಡಿದ್ದೇವೆ, ಕಾಂಗ್ರೆಸ್ ನಾಯಕ ಜನರೊಂದಿಗೆ ಸಂವಹನ ನಡೆಸುತ್ತಿರುವ ದೃಶ್ಯಗಳನ್ನು ತೋರಿಸುತ್ತದೆ. "ಪ್ರೀತಿಯ ಮಣಿಪುರದ ಜನರೇ, ನಾನು ನಿಮ್ಮ ಸಹೋದರನಾಗಿ ನಿಮ್ಮ ಬಳಿಗೆ ಬರುತ್ತೇನೆ. ನಿಮ್ಮ ಜೀವನಕ್ಕೆ ಶಾಂತಿಯನ್ನು ಮರಳಿ ತರಲು ನಾನು ಎಲ್ಲವನ್ನೂ ಮಾಡುತ್ತೇನೆ" ಎಂದು ವೀಡಿಯೋ ಶೀರ್ಷಿಕೆ ಹೇಳುತ್ತದೆ.
ಕ್ಲಿಪ್‌ನಲ್ಲಿ, "ಹಾಗಾದರೆ ನಿಮಗೆ ಭದ್ರತೆ ಬೇಕು ಮತ್ತು ನೀವು ಹಿಂತಿರುಗಲು ಬಯಸುವಿರಾ?" ಎಂದು ಗಾಂಧಿ ಜನರಿಗೆ ಕೇಳುವುದನ್ನು ಕೇಳಬಹುದು. ಜನರು ಪ್ರತಿಕ್ರಿಯಲ್ಲಿ, "ಹೌದು, ನಾವು ಹಿಂತಿರುಗಲು ಬಯಸುತ್ತೇವೆ." ಒಂದು ಹಂತದಲ್ಲಿ, ಮಹಿಳೆಯೊಬ್ಬರು "ನಮಗೆ ಶಾಂತಿ ಬೇಕು" ಎಂದು ಹೇಳುತ್ತಾರೆ. ದೃಶ್ಯಗಳಲ್ಲಿ ಕಂಡುಬರುವ ಜನರು ಮಣಿಪುರ ಹಿಂಸಾಚಾರದ ಬಲಿಪಶುಗಳು, ಹೇಳಿಕೊಂಡಂತೆ ಪ್ರವಾಹ ಸಂತ್ರಸ್ತರಲ್ಲ ಎಂದು ಇದು ಸ್ಥಾಪಿಸುತ್ತದೆ.
ಸ್ಥಳೀಯ ಮಾಧ್ಯಮವಾದ ಬರಾಕ್ ಬುಲೆಟಿನ್ ಪ್ರಕಾರ, ಗಾಂಧಿ ಅವರು ಅಸ್ಸಾಂ ಕಾಂಗ್ರೆಸ್‌ನ ತಂಡದೊಂದಿಗೆ ಸಿಲ್ಚಾರ್‌ನ ಫುಲೆರ್ಟಲ್‌ನಲ್ಲಿರುವ ಶಿಬಿರಕ್ಕೆ ಭೇಟಿ ನೀಡಿದರು ಮತ್ತು "ಮಣಿಪುರ ನಿರಾಶ್ರಿತರಿಗೆ ಅಗತ್ಯ ಆಹಾರ ಸರಬರಾಜುಗಳನ್ನು ವಿತರಿಸಿದರು," ಎಂದು ಹೇಳಲಾಗಿದೆ. "ನಿರಾಶ್ರಿತರು" ಕಾಂಗ್ರೆಸ್ ನಾಯಕನಿಗೆ ಹೇಗೆ ತಮ್ಮ ಸಂಕಟವನ್ನು ವ್ಯಕ್ತಪಡಿಸಿದರು ಮತ್ತು "ಮನೆಗೆ ಮರಳಲು ಮತ್ತು ತಮ್ಮ ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಅವರ ಬಯಕೆಯನ್ನು ತಿಳಿಸಿದರು" ಎಂಬುದನ್ನು ವರದಿಯಲ್ಲಿ ಸೂಚಿಸಲಾಗಿದೆ.
ಇಂಡಿಯಾ ಟುಡೇ ಎನ್ಇ ಸಹ ಫೇಸ್‌ಬುಕ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಗಾಂಧಿಯವರು ಅದೇ ಜನರೊಂದಿಗೆ ಸಂವಹನ ನಡೆಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಷ್ಟ್ ನ ಶೀರ್ಷಿಕೆ ಹೀಗಿದೆ: "ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿಯವರಿಗೆ ಹ್ಮಾರ್ ವಿದ್ಯಾರ್ಥಿಗಳ ಸಂಘವು ಕೃತಜ್ಞತೆ ಸಲ್ಲಿಸುತ್ತದೆ."
ಕಾಂಗ್ರೆಸ್ ಹೇಳಿದ್ದೇನು?
ಲಾಜಿಕಲಿ ಫ್ಯಾಕ್ಟ್ಸ್ ಅಸ್ಸಾಂ ಪ್ರದೇಶದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಭೂಪೇನ್ ಕುಮಾರ್ ಬೋರಾ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅವರನ್ನು ಸಂಪರ್ಕಿಸಿತು, ಬೋರಾ ಅವರು ಗಾಂಧಿಯವರ ಭೇಟಿಯ ಸಂದರ್ಭದಲ್ಲಿ ಅವರೊಂದಿಗಿದ್ದರು. ಸಿಲ್ಚಾರ್‌ನಲ್ಲಿನ ಯಾವುದೇ ಪ್ರವಾಹ ಪರಿಹಾರ ಶಿಬಿರಕ್ಕೆ ವಿರೋಧ ಪಕ್ಷದ ನಾಯಕರು ಭೇಟಿ ನೀಡಿಲ್ಲ ಎಂದು ಅವರು ದೃಢಪಡಿಸಿದರು ಮತ್ತು ಅವರು ಮಣಿಪುರ ಹಿಂಸಾಚಾರದಿಂದ ನಿರಾಶ್ರಿತ ಜನರಿಗೆ ವಸತಿ ಕಲ್ಪಿಸಲು ತೆರಳಿದ್ದರು.
"ನಾವು ಯಾವುದೇ ಪ್ರವಾಹ ಪರಿಹಾರ ಶಿಬಿರಕ್ಕೆ ಭೇಟಿ ನೀಡಿಲ್ಲ.ಆದರೆ, ನಾವು ಅಸ್ಸಾಂನಿಂದ ಮಣಿಪುರಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯಲ್ಲಿ ಕೆಲವು ಪ್ರವಾಹ ಪೀಡಿತ ಜನರನ್ನು ಭೇಟಿಯಾದೆವು. ನಾವು ಎರಡು ಶಿಬಿರಗಳಿಗೆ ಹೋದೆವು-ಒಂದು ಮಣಿಪುರದ ಜಿರಿಬಾಮ್‌ನಲ್ಲಿ ಮತ್ತು ಇನ್ನೊಂದು ಅಸ್ಸಾಂನ ಸಿಲ್ಚಾರ್‌ನಲ್ಲಿ -ಎರಡೂ ಶಿಬಿರಗಳು ಮಣಿಪುರ ಹಿಂಸಾಚಾರದಿಂದ ಸಂತ್ರಸ್ತರಾದ ಜನರಿಗಾಗಿವೆ" ಎಂದು ಅವರು ಹೇಳಿದರು.
ಆದರೆ, ಅಸ್ಸಾಂ ಕಾಂಗ್ರೆಸ್‌ನ ತಂಡವು ಅಸ್ಸಾಂನ ಪ್ರಸ್ತುತ ಪ್ರವಾಹ ಪರಿಸ್ಥಿತಿಯ ಬಗ್ಗೆ ಗಾಂಧಿಗೆ ತಿಳಿಸಿತು ಮತ್ತು ಅವರಿಗೆ ಜ್ಞಾಪಕ ಪತ್ರವನ್ನು ನೀಡಿದೆ ಎಂದು ಅವರು ಹೇಳಿದರು. ಗಾಂಧಿಯವರು ತಮ್ಮ ಅಧಿಕೃತ ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಖಾತೆಯಲ್ಲಿ ಈ ಬಗ್ಗೆ ಪೋಷ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಅವರು ಜುಲೈ ೮ ರಂದು ಎಕ್ಸ್ ಪೋಷ್ಟ್ ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಗಾಂಧಿಯವರು ಅಸ್ಸಾಂನಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದರು ಮತ್ತು ಅಸ್ಸಾಂ ಹಾಗು ಮಣಿಪುರದ ಮಣಿಪುರಿ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದರು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್ .
(ಮೂಲ: ಎಕ್ಸ್/@kcvenugopalmp)
ಮಣಿಪುರ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಹ್ಮಾರ್ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಯಾದ ಹ್ಮಾರ್ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಲಾಲ್ಹ್ರಿಲ್ತಾಂಗ್ ಹ್ಮಾರ್ ಅವರನ್ನು ನಾವು ಸಂಪರ್ಕಿಸಿದ್ದೇವೆ. ಬರಾಕ್ ಕಣಿವೆಯ ಜಂಟಿ ಪ್ರಧಾನ ಕಚೇರಿಯಿಂದ ಹ್ಮಾರ್, ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ನಾಯಕರು ಮಣಿಪುರದಿಂದ ಸ್ಥಳಾಂತರಗೊಂಡ ಜನರಿಗಾಗಿ ಫುಲೆರ್ಟಲ್ ಬಳಿಯ ಲಖಿಪುರದ ಹ್ಮಾರ್‌ಖಾವ್ಲಿಯನ್ ಗ್ರಾಮದಲ್ಲಿ ಸಮುದಾಯ ಬೆಂಬಲ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದರು.
"ರಾಹುಲ್ ಗಾಂಧಿ ಅವರು ಲಖಿಪುರದ ಹ್ಮಾರ್‌ಖಾವ್ಲಿಯನ್‌ನಲ್ಲಿರುವ ಥಲೈ ಇನ್‌ನಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ನಮ್ಮಲ್ಲಿ ೧೭೦-೧೮೦ ಜನರಿಗೆ ಸ್ಥಳಾವಕಾಶವಿರುವ ಎರಡು ಪರಿಹಾರ ಕೇಂದ್ರಗಳಿವೆ. ಇವರು ಮಣಿಪುರದಲ್ಲಿ ಹಿಂಸಾಚಾರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳು; ಇಲ್ಲಿ ಯಾವುದೇ ಪ್ರವಾಹ ಪೀಡಿತ ಜನರಿಲ್ಲ" ಎಂದು ಅವರು ಹೇಳಿದರು. . ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಕಾಣಿಸಿಕೊಂಡಿರುವ ಪರಿಹಾರ ಕೇಂದ್ರಕ್ಕೆ ಗಾಂಧಿಯವರ ಭೇಟಿಯ ಚಿತ್ರಗಳನ್ನು ಹ್ಮಾರ್ ಹಂಚಿಕೊಂಡಿದ್ದಾರೆ.
ಲಾಲ್‌ರಿಲ್ತಾಂಗ್ ಹ್ಮಾರ್ ಅವರು ಹಂಚಿಕೊಂಡ ಚಿತ್ರಗಳು ಕಾಂಗ್ರೆಸ್‌ನ ಎಕ್ಸ್ ಪೋಷ್ಟ್ ನಲ್ಲಿರುವ ಚಿತ್ರಗಳಿಗೆ ಹೋಲುತ್ತವೆ. (ಮೂಲ: ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ)
ಈ ಸಂಶೋಧನೆಗಳು ಕೆಲವು ಭಾರತೀಯ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಮಣಿಪುರ ಹಿಂಸಾಚಾರದ ಸಂತ್ರಸ್ತರ ಪರಿಹಾರ ಶಿಬಿರಕ್ಕೆ ಗಾಂಧಿ ಭೇಟಿ ನೀಡಿದ ಚಿತ್ರಗಳನ್ನು ಅದು ಅಸ್ಸಾಂನ ಪ್ರವಾಹ ಪರಿಹಾರ ಶಿಬಿರ ಎಂದು ತಪ್ಪಾಗಿ ಹೇಳಲಾಗಿದೆ.
ತೀರ್ಪು
ರಾಹುಲ್ ಗಾಂಧಿ ಅವರು ಇತ್ತೀಚೆಗೆ ಅಸ್ಸಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಯಾಚಾರ್ ಜಿಲ್ಲೆಯ ಪ್ರವಾಹ ಪರಿಹಾರ ಶಿಬಿರಕ್ಕೆ ಭೇಟಿ ನೀಡಿರಲಿಲ್ಲ. ಸುದ್ದಿ ವರದಿಗಳು ಮತ್ತು ಆನ್‌ಲೈನ್‌ನಲ್ಲಿ ಹಂಚಿಕೊಂಡ ಚಿತ್ರಗಳು, ಗಾಂಧಿಯವರ ಮಣಿಪುರ ಹಿಂಸಾಚಾರದಿಂದ ಸ್ಥಳಾಂತರಗೊಂಡ ಜನರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡುತ್ತಿರುವುದನ್ನು ತೋರಿಸುತ್ತವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here