ಮೂಲಕ: ಉಮ್ಮೆ ಕುಲ್ಸುಮ್
ಜೂನ್ 21 2024
ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು, ಏಪ್ರಿಲ್ ೨೦೨೪ ರಲ್ಲಿ ಮಾಧವಿ ಲತಾ ಅವರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಈ ವೀಡಿಯೋವನ್ನು ರೆಕಾರ್ಡ್ ಮಾಡಲಾಗಿದೆ.
ಹೇಳಿಕೆ ಏನು?
ತೆಲಂಗಾಣದ ಹೈದರಾಬಾದ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಲೋಕಸಭಾ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ "ಭಾರತೀಯ ಮುಸ್ಲಿಮರು ಭಯೋತ್ಪಾದಕರಾಗಲು ಸಾಧ್ಯವಿಲ್ಲ" ಎಂದು ಹೇಳುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ವಿರುದ್ಧ ಹೈದರಾಬಾದ್ ಲೋಕಸಭಾ ಸ್ಥಾನವನ್ನು ಕಳೆದುಕೊಂಡ ನಂತರ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ವೀಡಿಯೋ ಜೊತೆಗಿನ ಹೇಳಿಕೆ ಸೂಚಿಸುತ್ತದೆ.
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಶೀರ್ಷಿಕೆ ಹೀಗಿದೆ, "ನಾನು ಚುನಾವಣೆಯಲ್ಲಿ ಸೋತ ತಕ್ಷಣ, ನಾನು ಬುದ್ಧಿವಂತನಾಗಿದ್ದೇನೆ." ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವ ಸಮಯದಲ್ಲಿ, ಪೋಷ್ಟ್ ೨೪,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿತ್ತು. ಎಕ್ಸ್ ನಲ್ಲಿ ಅಂತಹ ಇನ್ನೊಂದು ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಕ್ಲಿಪ್ ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿಯೂ ಸಹ ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗಿದೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆನ್‌ಲೈನ್‌ನಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಜೂನ್ ೪, ೨೦೨೪ ರಂದು ಚುನಾವಣಾ ಫಲಿತಾಂಶಗಳನ್ನು ಘೋಷಿಸಿದ ನಂತರ ಅಲ್ಲ, ಏಪ್ರಿಲ್ ೨೦೨೪ ರಲ್ಲಿ ಅವರ ಪ್ರಚಾರದ ಸಮಯದಲ್ಲಿ ವೀಡಿಯೋವನ್ನು ರೆಕಾರ್ಡ್ ಮಾಲಾಗಿದ್ದು ಈಗ ಅದನ್ನು ಸಂದರ್ಭರತಿಹ ಹಂಚಿಕೊಳ್ಳಲಾಗಿದೆ.
ನಾವು ಕಂಡುಕೊಂಡದ್ದು ಏನು?
ವೈರಲ್ ಕ್ಲಿಪ್‌ನಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಲಾಜಿಕಲಿ ಫ್ಯಾಕ್ಟ್ಸ್ ಯೂಟ್ಯೂಬ್‌ನಲ್ಲಿ ದೀರ್ಘವಾದ ಆವೃತ್ತಿಯನ್ನು ಕಂಡುಕೊಂಡಿದೆ, ಇದನ್ನು ಏಪ್ರಿಲ್ ೨೪, ೨೦೨೪ ರಂದು ಇಂಡಿಯಾ ಟುಡೆ ಸೊಸೌತ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಮಾಡಿದೆ. ಮುಸ್ಲಿಮರು ಭಯೋತ್ಪಾದಕರು ಎಂದು ನಂಬುತ್ತೀರಾ ಎಂದು ಕೇಳುವ ವರದಿಗಾರರಿಗೆ ಪ್ರತಿಕ್ರಿಯೆಯಾಗಿ ವೀಡಿಯೋದಲ್ಲಿ ೨:೨೭ ನಿಮಿಷಗಳ ಗುರುತಿನಲ್ಲಿ, ಲತಾ ಅವರು ಹೀಗೆ ಹೇಳುತ್ತಾರೆ, "ಭಾರತೀಯ ಮುಸ್ಲಿಮರು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ, ಆದರೆ ಬಡವರು ಅಥವಾ ಧರ್ಮದ ಹೆಸರಿನಲ್ಲಿ ದಾರಿ ತಪ್ಪಿದ ಮಕ್ಕಳು, ಅವರ ಬಗ್ಗೆ ನಾವು ಏನು ಹೇಳಬಹುದು?"
ಈ ವೀಡಿಯೋವನ್ನು ಏಪ್ರಿಲ್ ೨೨, ೨೦೨೪ ರಂದು ಹೈದರಾಬಾದ್ ಫೆಸ್ಟಿವಲ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಲಾಗಿದೆ. ವೈರಲ್ ಭಾಗವನ್ನು ೧:೧೮-ನಿಮಿಷಗಳಲ್ಲಿ ಕೇಳಬಹುದು.
ಏಪ್ರಿಲ್ ೨೦, ೨೦೨೪ ರಂದು ಪ್ರಕಟವಾದ ದಿ ಪ್ರಿಂಟ್‌ನ ವರದಿಯಲ್ಲಿ ಕಾಣುವ ಲತಾ ಅವರ ಚಿತ್ರಗಳನ್ನು ವೈರಲ್ ಕ್ಲಿಪ್‌ಗೆ ಹೋಲುತ್ತದೆ. ವರದಿಯ ಪ್ರಕಾರ, ಮುಸ್ಲಿಂ ಕಾನೂನು ವಿದ್ಯಾರ್ಥಿನಿಯೊಬ್ಬಳು ಅವರಿಗೆ ಈ ಪ್ರಶ್ನೆಯನ್ನು ಕೇಳಿದ್ದು, "ಭಾರತೀಯ ಮುಸ್ಲಿಮರು ಭಯೋತ್ಪಾದಕರಾಗಲು ಸಾಧ್ಯವಿಲ್ಲ" ಎಂಬ ಅವರ ಪ್ರತಿಕ್ರಿಯೆ ಈಗ ವೈರಲ್ ಆಗುತ್ತಿದೆ. ಲೇಖನದ ಪ್ರಕಾರ, ಅವರು ಏಪ್ರಿಲ್ ೧೩, ೨೦೨೪ ರಂದು ಹೈದರಾಬಾದ್‌ನಲ್ಲಿ ತಮ್ಮ ಪಾದಯಾತ್ರೆಯ ಸಮಯದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಆದ್ದರಿಂದ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು ವೀಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಅದು ಖಚಿತಪಡಿಸುತ್ತದೆ.
ಈ ಹಿಂದೆ, ಚುನಾವಣಾ ರ‍್ಯಾಲಿಯಲ್ಲಿ ಮಸೀದಿಯೊಂದರ ಬಳಿ ಕಾಲ್ಪನಿಕ ಬಾಣವನ್ನು ಹಾರಿಸುತ್ತಿರುವ ಲತಾ ಅವರ ವೀಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಇದು ವಿವಾದವನ್ನು ಹುಟ್ಟುಹಾಕಿತು, ಅವರು ನಿರ್ದಿಷ್ಟವಾಗಿ ಮಸೀದಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ಪ್ರಚೋದನಕಾರಿ ಸನ್ನೆ ಎಂದು ಗ್ರಹಿಸಲಾಗಿದೆ ಎಂದು ಆರೋಪಿಸಿದರು. ನಂತರ, ಲತಾ ಅವರು ಎಕ್ಸ್‌ನಲ್ಲಿನ ವೈರಲ್ ಕ್ಲಿಪ್ ಅನ್ನು ಸ್ಪಷ್ಟಪಡಿಸಿದರು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅವರನ್ನು ನಕಾರಾತ್ಮಕವಾಗಿ ಚಿತ್ರಿಸಲು “ಸಂಪಾದಿಸಲಾಗಿದೆ” ಮತ್ತು ವೀಡಿಯೋದಿಂದ ಯಾರಿಗಾದರೂ ನೋವುಂಟುಮಾಡಿದ್ದರೆ ಕ್ಷಮೆಯಾಚಿಸಿದರು. ಘಟನೆಯ ನಂತರ ಆಕೆಯ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು.
ತೀರ್ಪು
ಲತಾ ಅವರು ಚುನಾವಣೆಯಲ್ಲಿ ಸೋತ ನಂತರ ಭಾರತೀಯ ಮುಸ್ಲಿಮರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ ಎಂದು ತಪ್ಪಾಗಿ ಆರೋಪಿಸಿ ಚುನಾವಣಾ ಪ್ರಚಾರದ ವೀಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.