ಮೂಲಕ: ಉಮ್ಮೆ ಕುಲ್ಸುಮ್
ಜುಲೈ 8 2024
ಮಹಿಳೆಯೊಬ್ಬರು ರಸ್ತೆಯ ಮೇಲೆ ನೆಡೆಯುವಾಗ ಸಿಂಕ್‌ಹೋಲ್‌ಗೆ ಬೀಳುವುದನ್ನು ಚಿತ್ರಿಸುವ ವೀಡಿಯೋ ೨೦೨೨ ರದ್ದು ಮತ್ತು ಬ್ರೆಜಿಲ್‌ನ ಸಿಯಾರಾದಲ್ಲಿ ಚಿತ್ರಿಸಿದ್ದು, ಭಾರತದಲ್ಲಿ ಅಲ್ಲ.
ಹೇಳಿಕೆ ಏನು?
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೋ ಕೆಂಪು ಟಿ-ಶರ್ಟ್‌ನಲ್ಲಿ ಮಹಿಳೆಯೊಬ್ಬರು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ, ಪಾದಚಾರಿ ಮಾರ್ಗವು ಕುಸಿದಾಗ ಸಿಂಕ್‌ಹೋಲ್‌ಗೆ ಬೀಳುತ್ತಾರೆ. ಕೆಲವು ಬಳಕೆದಾರರು ಈ ಘಟನೆಯು ಭಾರತದ ಗುಜರಾತ್‌ನಲ್ಲಿ ಸಂಭವಿಸಿದೆ ಎಂದು ಪ್ರತಿಪಾದಿಸಿದ್ದಾರೆ, ಹಾಗು ಇದು ಪ್ರದೇಶದ ಮೂಲಸೌಕರ್ಯಗಳು ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ 'ರಾಮಪಥ'ದ ಸ್ಥಿತಿಯನ್ನು ವೀಡಿಯೋ ಚಿತ್ರಿಸುತ್ತದೆ ಎಂದು ಇತರರು ಪ್ರತಿಪಾದಿಸಿದ್ದಾರೆ, ಇದು ಇತ್ತೀಚಿನ ಅಭಿವೃದ್ಧಿ ಯೋಜನೆಗಳ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಎಕ್ಸ್ ನಲ್ಲಿ (ಹಿಂದೆ ಟ್ವಿಟರ್), ಒಬ್ಬ ಬಳಕೆದಾರರು ಹಿಂದಿ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ: "ಗುಜರಾತ್ ಕಂಪನಿಯೊಂದು ಅಯೋಧ್ಯೆಯ ರಾಮಪಥದ ೧೩ ಕಿಲೋಮೀಟರ್ ಅನ್ನು ಕೇವಲ ೮೪೪ ಕೋಟಿ ರೂ. ಗೆ ನಿರ್ಮಿಸಿದೆ. ಪ್ರತಿ ಕಿಲೋಮೀಟರ್ ವೆಚ್ಚ ೬೬ ಕೋಟಿ ರೂ. ಗುಜರಾತ್ ಕಂಪನಿಯು ತೆರಿಗೆದಾರರ ಹಣವನ್ನು ಪೋಲು ಮಾಡಿದೆ.” ಬರೆಯುವ ಸಮಯದಲ್ಲಿ, ಈ ಪೋಷ್ಟ್ ೧೫೬,೦೦೦ ವೀಕ್ಷಣೆಗಳನ್ನು ಗಳಿಸಿದೆ. ಅದೇ ರೀತಿಯ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಇತರ ಎಕ್ಸ್ ಬಳಕೆದಾರರು ವಿಭಿನ್ನ ಹಿಂದಿ ಶೀರ್ಷಿಕೆಯೊಂದಿಗೆ ಅದೇ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ: "ಇದು ಗುಜರಾತ್‌ನ ವೀಡಿಯೋ. ರಸ್ತೆಯಲ್ಲಿ ಚಾಲನೆ ಮಾಡುವ ಮೊದಲು ಗುಜರಾತ್ ಮಾದರಿಯನ್ನು ನೆನಪಿಡಿ." ಈ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ವೈರಲ್ ಕ್ಲಿಪ್ ಅಯೋಧ್ಯೆ ಅಥವಾ ಗುಜರಾತ್‌ನಿಂದ ಬಂದಿಲ್ಲ.
ನಾವು ಕಂಡುಕೊಂಡದ್ದು
ವೈರಲ್ ವೀಡಿಯೋದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಜೂನ್ ೪, ೨೦೨೨ ರ ದಿನಾಂಕದ ಬ್ರೆಜಿಲಿಯನ್ ನ್ಯೂಸ್ ನೆಟ್‌ವರ್ಕ್ ಜರ್ನಲ್ ಡಾ ರೆಕಾರ್ಡ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಯೂಟ್ಯೂಬ್ ವರದಿಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೋ ಶೀರ್ಷಿಕೆಯ ಇಂಗ್ಲಿಷ್ ಭಾಷಾಂತರವು, "ಸೈಡ್‌ವಾಕ್ ನ ಕ್ಷಣವನ್ನು ಕ್ಯಾಮೆರಾ ಸೆರೆಹಿಡಿದಿದೆ ಮತ್ತು ಮಹಿಳೆ ಸಿಯಾರಾದಲ್ಲಿ ರಂಧ್ರಕ್ಕೆ ಬೀಳುತ್ತಾರೆ" ಎಂದು ಹೇಳುತ್ತದೆ. ವೈರಲ್ ಕ್ಲಿಪ್‌ನ ದೃಶ್ಯಗಳನ್ನು ಯೂಟ್ಯೂಬ್ ವೀಡಿಯೋದಲ್ಲಿ ೦:೦೬ ಸೆಕೆಂಡುಗಳಲ್ಲಿ ನೋಡಬಹುದು.
ಬ್ರೆಜಿಲ್‌ನ ಫೋರ್ಟಲೆಜಾದ ಮೆಟ್ರೋಪಾಲಿಟನ್ ಪ್ರದೇಶದ ಕ್ಯಾಸ್ಕಾವೆಲ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ವೀಡಿಯೋದ ವಿವರಣೆಯು ಸೂಚಿಸುತ್ತದೆ. ಈ ಪ್ರದೇಶವನ್ನು ಟ್ರಾಫಿಕ್ ಶಂಕುಗಳಿಂದ ಮಾರ್ಕ್ ಮಾಡಲಾಗಿತು, ಮಹಿಳೆ ಅವುಗಳನ್ನು ಗಮನಿಸಲಿಲ್ಲ. ಪುರಭವನದ ಪ್ರಕಾರ, ಭಾರೀ ಮಳೆಯಿಂದಾಗಿ ನೆಲ ಕುಸಿಯಿತು ಮತ್ತು ಆ ಸಮಯದಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದವು.
ವೈರಲ್ ಕ್ಲಿಪ್‌ನಲ್ಲಿ ಮೂಲ ವೀಡಿಯೋವನ್ನು ಅಡ್ಡಲಾಗಿ ಫ್ಲಿಪ್ ಮಾಡಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.
ಜೂನ್ ೨೦೨೨ ರಲ್ಲಿ ಹಲವಾರು ಬ್ರೆಜಿಲಿಯನ್ ಸುದ್ದಿ ನೆಟ್‌ವರ್ಕ್‌ಗಳು ಈ ಘಟನೆಯನ್ನು ಒಳಗೊಂಡಿವೆ. ಹೆಚ್ಚುವರಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಸ್ಥಳೀಯ ಸುದ್ದಿವಾಹಿನಿಯಾದ ರೆವಿಸ್ಟಾ ಫೋರಮ್, ಘಟನೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ ಮತ್ತು ಮಹಿಳೆಯನ್ನು ೪೮ ವರ್ಷದ ಮರಿಯಾ ರೋಸಿಲೀನ್ ಅಲ್ಮೇಡಾ ಡಿ ಸೋಜಾ ಎಂದು ಗುರುತಿಸಿದೆ.
ಇತ್ತೀಚೆಗಿನ ಜಲಾವೃತವು ರಾಮ್‌ಪಾತ್‌ನಲ್ಲಿ (ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುವ ರಸ್ತೆ) ೧೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಂಕ್‌ಹೋಲ್‌ಗಳಿಗೆ ಕಾರಣವಾಗಿದ್ದರೆ, ಪ್ರಸ್ತುತ ಪ್ರಸಾರವಾಗುತ್ತಿರುವ ವೀಡಿಯೋ ಈ ಘಟನೆಗಳಿಗೆ ಸಂಬಂಧಿಸಿಲ್ಲ.
ತೀರ್ಪು
ಬ್ರೆಜಿಲ್‌ನ ಸಿಯಾರಾ ರಾಜ್ಯದ ಪುರಸಭೆಯಾದ ಕ್ಯಾಸ್ಕಾವೆಲ್‌ನಲ್ಲಿ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ. ಇದು ಭಾರತದಲ್ಲಿ ನಡೆದ ಘಟನೆಯನ್ನು ಚಿತ್ರಿಸುವುದಿಲ್ಲ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here