ಮುಖಪುಟ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಪ್ರೇಕ್ಷಕರು ಹನುಮಾನ್ ಚಾಲೀಸಾ ಪಠಿಸುವುದಾಗಿ ತೋರಿಸುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ

ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಪ್ರೇಕ್ಷಕರು ಹನುಮಾನ್ ಚಾಲೀಸಾ ಪಠಿಸುವುದಾಗಿ ತೋರಿಸುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್

ನವೆಂಬರ್ 22 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಪ್ರೇಕ್ಷಕರು ಹನುಮಾನ್ ಚಾಲೀಸಾ ಪಠಿಸುವುದಾಗಿ ತೋರಿಸುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ವಿಶ್ವಕಪ್ ಫೈನಲ್‌ನಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲಾಗಿದೆ ಎಂದು ಹೇಳುವ ವೀಡಿಯೋದೊಂದಿಗೆ ಹಂಚಿಕೊಳ್ಳಲಾದ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಝೀ ನ್ಯೂಸ್/ಆಪ್ ಇಂಡಿಯಾ/ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೂಲ ವೀಡಿಯೋದ ಆಡಿಯೊವನ್ನು ಡಿಜಿಟಲ್ ಆಗಿ ಎಡಿಟ್ ಮಾಡಿರುವುದರಿಂದ ವೀಡಿಯೋದೊಂದಿಗೆ ಮಾಡಲಾದ ಹೇಳಿಕೆಗಳಲ್ಲಿ ಯಾವುದೇ ಸತ್ಯವಿಲ್ಲ.

ಇಲ್ಲಿನ ಹೇಳಿಕೆಯೇನು?

ನವೆಂಬರ್ ೧೯, ೨೦೨೩ ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಲಿಂಕ್ ಮಾಡುವ ವೀಡಿಯೋವೊಂದನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋದಲ್ಲಿ, ಪ್ರೇಕ್ಷಕರು ಹನುಮಾನ್ ಚಾಲೀಸಾ (ಹಿಂದೂ ಭಕ್ತಿ ಪಠಣ) ಪಠಿಸುವುದನ್ನು ಕೇಳಬಹುದು. ಸುಮಾರು ೧೫೦,೦೦೦ ಪ್ರೇಕ್ಷಕರು ಹನುಮಾನ್ ಚಾಲೀಸಾವನ್ನು ಪಠಿಸಿದ್ದಾರೆ ಎಂದು ಹೇಳುವ ಮೂಲಕ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಹಲವಾರು ಬಲಪಂಥೀಯ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಇದೇ ರೀತಿಯ ನಿರೂಪಣೆಗಳೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆರ್ ಎಸ್ ಎಸ್ ಮ್ಯಾಗಜೀನ್ ಆದ ಪಾಂಚಜನ್ಯ ಎಕ್ಸ್ ನಲ್ಲಿ ಹಂಚಿಕೊಂಡ ಇದೇ ವೀಡಿಯೋ, ಈ ಫ್ಯಾಕ್ಟ್-ಚೆಕ್ ಬರೆಯುವ ಸಮಯದಲ್ಲಿ ಸುಮಾರು ೧೧೦,೦೦೦ ವೀಕ್ಷಣೆಗಳನ್ನು ಪಡೆದುಕೊಂಡಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಎಕ್ಸ್, ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಝೀ ನ್ಯೂಸ್, ಏಷ್ಯಾನೆಟ್ ನ್ಯೂಸ್ ಹಿಂದಿ, ಬಲಪಂಥೀಯ ಸುದ್ದಿ ವೆಬ್‌ಸೈಟ್ ಆಪ್‌ ಇಂಡಿಯಾ ಮತ್ತು ಸಕಲ್ ಮೀಡಿಯಾದಂತಹ ಮಾಧ್ಯಮಗಳು ಸಹ ಇದೇ ರೀತಿಯ ಸುದ್ದಿ ವರದಿಗಳನ್ನು ಪ್ರಕಟಿಸಿವೆ ಮತ್ತು ಈ ವೈರಲ್ ವೀಡಿಯೋವನ್ನು ಅದೇ ಹೇಳಿಕೆಗಳೊಂದಿಗೆ ಹಂಚಿಕೊಂಡಿವೆ. ಆಪ್‌ ಇಂಡಿಯಾ ನಂತರ ತನ್ನ ಕಥೆಯನ್ನು ನವೀಕರಿಸಿದೆ ಮತ್ತು ಅದರ ವರದಿಯ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು. ಇತರ ಸುದ್ದಿ ವರದಿಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸುದ್ದಿ ವರದಿಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಝೀ ನ್ಯೂಸ್, ಆಪ್ಇಂಡಿಯಾ, ಏಷ್ಯಾನೆಟ್ ನ್ಯೂಸ್ ಹಿಂದಿ/ ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋವನ್ನು ಬಳಸಿಕೊಂಡು ಮಾಡಿದ ಅಂತಹ ಹೇಳಿಕೆಗಳು ತಪ್ಪು. ಏಕೆಂದರೆ ಮೂಲ ವೀಡಿಯೋದಿಂದ ಆಡಿಯೋವನ್ನೂ ಸಂಪಾದಿಸಲಾಗಿದೆ ಮತ್ತು ಟ್ಯಾಂಪರ್ ಮಾಡಲಾಗಿದೆ. ಮೂಲ ವೀಡಿಯೋದಲ್ಲಿ ಗಾಯಕ ದರ್ಶನ್ ರಾವಲ್ ಅವರು "ಚೋಗಡಾ" ಹಾಡನ್ನು ಹಾಡುವುದನ್ನು ಕೇಳಬಹುದು ಮತ್ತು ವೈರಲ್ ವೀಡಿಯೋದೊಂದಿಗೆ ಒಳಗೊಂಡಿರುವ ಆಡಿಯೊವನ್ನು ಜೈಪುರದಲ್ಲಿ ನಡೆದ ಸಾಮೂಹಿಕ ಹನುಮಾನ್ ಚಾಲೀಸಾ ಪಠಣದ ವೀಡಿಯೋದಿಂದ ತೆಗೆದುಕೊಳ್ಳಲಾಗಿದೆ.

ನಾವು ಸತ್ಯವನ್ನು ಹೇಗೆ ಕಂಡುಕೊಂಡಿದ್ದೇವೆ?

ಸಂಬಂಧಿತ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದಾಗ, ಅಕ್ಟೋಬರ್ ೨೭, ೨೦೨೩ ರಂದು ಯೂಟ್ಯೂಬ್ ಶಾರ್ಟ್ಸ್ ಆಗಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಇದನ್ನು ಸದಾಶಿವ್ (sadashiv52815) ಹೆಸರಿನ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೈರಲ್ ವೀಡಿಯೋದ ಅದೇ ದೃಶ್ಯಗಳು ಮತ್ತು ಹನುಮಾನ್ ಚಾಲೀಸಾ ಪಠಣವನ್ನು ಸಹ ಅದರಲ್ಲಿ ಕೇಳಬಹುದು. ಈ ಯೂಟ್ಯೂಬ್ ಶಾರ್ಟ್ಸ್‌ನ ಶೀರ್ಷಿಕೆಗಳಲ್ಲಿ, ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್‌ಗಳನ್ನು ಕೂಡ ಸೇರಿಸಲಾಗಿದೆ.

ನವೆಂಬರ್ ೧೯ ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆದಿದ್ದು, ಅಕ್ಟೋಬರ್‌ನಿಂದ ಈ ವೀಡಿಯೋ ಆನ್‌ಲೈನ್‌ನಲ್ಲಿದೆ. ಆದ್ದರಿಂದ ಈ ವೀಡಿಯೋ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಯೂಟ್ಯೂಬ್ ಚಾನಲ್ (sadashiv52815) ನ ಇನ್ನಷ್ಟು ವೀಡಿಯೋಗಳನ್ನು ನೋಡಿದಾಗ, ಅಕ್ಟೋಬರ್ ೧೬, ೨೦೨೩ ರಂದು ಅಪ್‌ಲೋಡ್ ಮಾಡಿದ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಆದರೆ, ಈ ಅಕ್ಟೋಬರ್ ೧೬ ರ ವೀಡಿಯೋದಲ್ಲಿ "ಹನುಮಾನ್ ಚಾಲೀಸಾ" ಪಠಣ ಮಾಡುವ ಆಡಿಯೋ ಇಲ್ಲ. ಬದಲಾಗಿ, ಗಾಯಕ ದರ್ಶನ್ ರಾವಲ್ ಅವರ “ಚೋಗಡಾ” ಹಾಡನ್ನು ಹಿನ್ನೆಲೆಯಲ್ಲಿ ನಾವು ಕೇಳಬಹುದು. ಈ ವೀಡಿಯೋದ ವಿವರಣೆಯು "ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದರ್ಶನ್ ರಾವಲ್ (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಓದುತ್ತದೆ, ಜೊತೆಗೆ "ಭಾರತ vs ಪಾಕಿಸ್ತಾನ" ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಹೊಂದಿದೆ.

ಯೂಟ್ಯೂಬ್‌ನಲ್ಲಿ ವೀಕ್ಷಕರು ಚಿತ್ರೀಕರಿಸಿದ ಭಾರತ-ಪಾಕಿಸ್ತಾನ ಪಂದ್ಯದ ವೀಡಿಯೋವನ್ನು ಹುಡುಕಿದಾಗ, ವಿಭಿನ್ನ ಕೋನದಿಂದ ಚಿತ್ರೀಕರಿಸಲಾದ ಮತ್ತೊಂದು ವೀಡಿಯೋವನ್ನು ನಾವು “ಅಂಶು ಕಶ್ಯಪ್ ಬ್ಲಾಗ್” ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿರುವುದನ್ನು ಕಂಡುಕೊಂಡಿದ್ದೇವೆ. ಈ ವೀಡಿಯೋದ ಶೀರ್ಷಿಕೆಯು, "ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದರ್ಶನ್ ರಾವಲ್ ಅವರ ಲೈವ್ ವೀಡಿಯೊ|ಭಾರತ ವಿರುದ್ಧ ಪಾಕಿಸ್ತಾನ|ಕ್ರಿಕೆಟ್ ವಿಶ್ವಕಪ್ (ಕನ್ನಡಕ್ಕೆ ಅನುವಾದಿಸಲಾಗಿದೆ)." ಈ ವೀಡಿಯೋದ ಹಿನ್ನೆಲೆಯಲ್ಲಿ, ಸುಮಾರು ಮೂರು ನಿಮಿಷಗಳ ಅವಧಿಯಲ್ಲಿ, ದರ್ಶನ್ ರಾವಲ್ ಅವರ ಚೋಗಡಾ ಹಾಡನ್ನು ಹಿನ್ನೆಲೆಯಲ್ಲಿ ಕೇಳಬಹುದು ಮತ್ತು ದರ್ಶನ್ ಮೈದಾನದಲ್ಲಿ ಪ್ರದರ್ಶನ ನೀಡುವುದನ್ನು ಕಾಣಬಹುದು.

ಈ ವೀಡಿಯೋ ಮತ್ತು ವೈರಲ್ ವೀಡಿಯೋವನ್ನು ಹೋಲಿಸಿ ನೋಡುವ ಮೂಲಕ, ನಾವು ಇವೆರಡರ ನಡುವೆ ಹೋಲಿಕೆಯನ್ನು ಕಂಡುಕೊಂಡಿದ್ದೇವೆ.

ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳು ಮತ್ತು ಭಾರತ-ಪಾಕಿಸ್ತಾನ ಪಂದ್ಯದ ಸಮಯದಲ್ಲಿ ದರ್ಶನ್ ರಾವಲ್ ಅವರ ಪ್ರದರ್ಶನ. (ಮೂಲ: ಎಕ್ಸ್, ಯೂಟ್ಯೂಬ್/ಸ್ಕ್ರೀನ್‌ಶಾಟ್)

ವೈರಲ್ ವೀಡಿಯೋ ಮತ್ತು ಭಾರತ-ಪಾಕಿಸ್ತಾನ ಪಂದ್ಯದ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಯೂಟ್ಯೂಬ್/ಸ್ಕ್ರೀನ್‌ಶಾಟ್)

ಅಕ್ಟೋಬರ್ ೧೫, ೨೦೨೩ ರಂದು ದರ್ಶನ್ ರಾವಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪ್ರದರ್ಶನದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಗುಂಪು ಹಂತದ ಪಂದ್ಯವನ್ನು ಅಕ್ಟೋಬರ್ ೧೪, ೨೦೨೩ ರಂದು ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಾಯಿತು.

ಹನುಮಾನ್ ಚಾಲೀಸಾ ಪಠಣದ ಆಡಿಯೋ

“ಹನುಮಾನ್ ಚಾಲೀಸಾ” ಪಠಣದ ಆಡಿಯೋದೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾದ ಯೂಟ್ಯೂಬ್ ಚಾನಲ್‌ನಲ್ಲಿ, ವೀಡಿಯೊದ ಕೆಳಗಿನ ಬಲಭಾಗದಲ್ಲಿ, ಆಡಿಯೋ ಮೂಲವನ್ನು “ಜೈಪುರದಲ್ಲಿ ಹನುಮಾನ್ ಚಾಲೀಸಾ ಪಠಣ” ಎಂದು ನಮೂದಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ.

ಆಡಿಯೋದ  ಮೂಲವನ್ನು ತೋರಿಸುವ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್)

ಇದಲ್ಲದೆ, "ಜೈಪುರ್ ವಾಲೆ" ಎಂಬ ಹೆಸರಿನ ಯೂಟ್ಯೂಬ್ ಚಾನಲ್ ಅನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಜೂನ್ ೩, ೨೦೨೩ ರಂದು ಅಪ್‌ಲೋಡ್ ಮಾಡಿದ ವೀಡಿಯೋದಲ್ಲಿ ನೂರಾರು ಜನರು ದೇವಸ್ಥಾನದ ಮುಂದೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸುತ್ತಿರುವುದನ್ನು ತೋರಿಸುತ್ತದೆ. "ಜೈಪುರವಾಲೆ" ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಠಣದ ಆಡಿಯೋದೊಂದಿಗೆ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ.

ಜೈಪುರದಲ್ಲಿ ನಡೆದ ಈ ಪಠಣ ಕಾರ್ಯಕ್ರಮದ ಕುರಿತು ಸುದ್ದಿ ವರದಿಗಳನ್ನು ಹುಡುಕುತ್ತಿರುವಾಗ, ಜೂನ್ ೪, ೨೦೨೩ ರಂದು ಎಬಿಪಿ ನ್ಯೂಸ್‌ನ ಫೇಸ್‌ಬುಕ್ ಪೋಷ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಈ ಪೋಷ್ಟ್ ಜೈಪುರದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಿದ ಭವ್ಯ ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಿದ ಸುದ್ದಿ ಬುಲೆಟಿನ್ ಅನ್ನು ಒಳಗೊಂಡಿದೆ.

ತೀರ್ಪು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಫೈನಲ್‌ನಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರೇಕ್ಷಕರು "ಹನುಮಾನ್ ಚಾಲೀಸಾ" ವನ್ನು ಪಠಿಸಿರುವುದಾಗಿ ತೋರಿಸಿ ಹಂಚಿಕೊಂಡ ಹೇಳಿಕೆಗಳು ತಪ್ಪು. ಈ ವೀಡಿಯೋವನ್ನು ಮೂಲತಃ ಅಕ್ಟೋಬರ್ ೧೪, ೨೦೨೩ ರಂದು ಅದೇ ಸ್ಟೇಡಿಯಂ ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ವೈರಲ್ ವೀಡಿಯೋದಲ್ಲಿನ ಆಡಿಯೋವನ್ನು ಈ ಪಂದ್ಯಾವಳಿಗೆ ಸಂಬಂಧಿಸದ ವೀಡಿಯೋದಿಂದ ತೆಗೆದುಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ