ಮುಖಪುಟ ಮಹಾರಾಷ್ಟ್ರದಲ್ಲಿ ನಡೆದ ಕೋಮು ಘರ್ಷಣೆಯ ವೀಡಿಯೋವನ್ನು ಕರ್ನಾಟಕದದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮಹಾರಾಷ್ಟ್ರದಲ್ಲಿ ನಡೆದ ಕೋಮು ಘರ್ಷಣೆಯ ವೀಡಿಯೋವನ್ನು ಕರ್ನಾಟಕದದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ರೋಹಿತ್ ಗುಟ್ಟಾ

ನವೆಂಬರ್ 27 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮಹಾರಾಷ್ಟ್ರದಲ್ಲಿ ನಡೆದ ಕೋಮು ಘರ್ಷಣೆಯ ವೀಡಿಯೋವನ್ನು ಕರ್ನಾಟಕದದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಕಾಂಗ್ರೆಸ್ ಆಡಳಿತದ ಕರ್ನಾಟಕ ರಾಜ್ಯದಲ್ಲಿ ಹಿಂದೂಗಳನ್ನು ಥಳಿಸಲಾಗಿದೆ ಎಂದು ಹೇಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ನವೆಂಬರ್ ೧೩ ರಂದು ಎರಡು ಸಮುದಾಯಗಳ ನಡುವೆ ನಡೆದ ಗಲಭೆಯನ್ನು ಈ ವೀಡಿಯೋ ತೋರಿಸುತ್ತದೆ.

ಇಲ್ಲಿನ ಹೇಳಿಕೆಯೇನು?
ತೆಲಂಗಾಣದಲ್ಲಿ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಘರ್ಷಣೆಯ ವೀಡಿಯೋವೊಂದು ಹರಿದಾಡುತ್ತಿದ್ದು, ಹಿಂದೂ ಮತದಾರರು 'ಬುದ್ಧಿವಂತಿಕೆಯಿಂದ ಮತ ಚಲಾಯಿಸಿ' ಎಂದು ಎಚ್ಚರಿಸಲಾಗಿದೆ. ಕ್ಲಿಪ್‌ನಲ್ಲಿ ಸೆರೆಹಿಡಿಯಲಾದ ಘಟನೆ ಕರ್ನಾಟಕದದ್ದು ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಎರಡು ನಿಮಿಷಗಳ ವೀಡಿಯೋವನ್ನು ಇಸ್ಲಾಮೋಫೋಬಿಕ್ ಶೀರ್ಷಿಕೆಯೊಂದಿಗೆ ಹೀಗೆ ಹಂಚಿಕೊಂಡಿದ್ದಾರೆ: "ಕರ್ನಾಟಕ: ಮುಸ್ಲಿಮರು ದೇವಸ್ಥಾನದ ಮುಂದೆ ಸೇರುವುದಕ್ಕಾಗಿ ಹಿಂದೂಗಳಿಗೆ ತಮ್ಮ ನೈಸರ್ಗಿಕ ಚಿಕಿತ್ಸೆ ನೀಡುತ್ತಿದ್ದಾರೆ. ಆಕ್ರಮಣಕಾರಿ, ನಿರ್ದಯ ಧರ್ಮ + ಹೆಚ್ಚು ಪಕ್ಷಪಾತದ ಸರ್ಕಾರ. ತೆಲಂಗಾಣದ ಹಿಂದೂಗಳು, ದಯವಿಟ್ಟು ನಿಮ್ಮ ಮತವನ್ನು ಬುದ್ಧಿವಂತಿಕೆಯಿಂದ ಚಲಾಯಿಸಿ..... ಏಕೆಂದರೆ ಮುಸ್ಲಿಮರು ಬಹಳ ಬುದ್ಧಿವಂತಿಕೆಯಿಂದ ಮತ ಚಲಾಯಿಸಲಿದ್ದಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ)."

ಕೆಲವು ತಿಂಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರವನ್ನು ರಚಿಸಿದ್ದು, ಇದೀಗ ಅಲ್ಲಿನ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ತೆಲಂಗಾಣದ ಮೇಲೆ ಕಣ್ಣಿಟ್ಟಿದೆ. ತೆಲಂಗಾಣದಲ್ಲಿ ನವೆಂಬರ್ ೩೦ ರಂದು ಚುನಾವಣೆ ನಡೆಯಲಿದೆ.

ವೈರಲ್ ವೀಡಿಯೋದಲ್ಲಿ ಜನರ ಗುಂಪು ಹಿಂದೂ ಪುರೋಹಿತರೆಂದೆನಿಸುವ ಇಬ್ಬರು ಕೇಸರಿ ಧರಿಸಿದ ವ್ಯಕ್ತಿಗಳನ್ನು ಒಬ್ಬರಿಗೊಬ್ಬರು ಕಿರುಚುತ್ತಾ ಕೂಗುತ್ತಾ ಥಳಿಸುತ್ತಿರುವುದನ್ನು ತೋರಿಸುತ್ತದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಅದೇ ವೀಡಿಯೋದ ದೀರ್ಘ ಆವೃತ್ತಿಯನ್ನು ಫೇಸ್‌ಬುಕ್‌ನಲ್ಲಿ ಇದೇ ರೀತಿಯ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಆಡಳಿತವು ಹೆಚ್ಚು ಅಂತರ್ಧರ್ಮೀಯ ಘರ್ಷಣೆಗಳಿಗೆ ಕಾರಣವಾಗುತ್ತದೆ ಎಂದು ಸೂಚಿಸುತ್ತದೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ವೀಡಿಯೋವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋ ಕರ್ನಾಟಕದ್ದಲ್ಲ.

ನಾವು ಕಂಡುಹಿಡಿದುದ್ದೇನು?
ವೀಡಿಯೋದಲ್ಲಿರುವ ಜನರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಿಲ್ಲ, ಬದಲಿಗೆ ಮರಾಠಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ನಾವು ಗಮನಿಸಿದ್ದೇವೆ. ಇದು ವೀಡಿಯೋ ಮಹಾರಾಷ್ಟ್ರ ಅಥವಾ ಮರಾಠಿ ಭಾಷೆ ವ್ಯಾಪಕವಾಗಿ ಮಾತನಾಡುವ ಉತ್ತರ ಕರ್ನಾಟಕದಿಂದ ಬಂದಿರಬಹುದು ಎಂಬುದನ್ನು ಸೂಚಿಸುತ್ತದೆ. ನಾವು ವೈರಲ್ ಕ್ಲಿಪ್‌ನ ಕೀಫ್ರೇಮ್‌ಗಳ ರಿವರ್ಸ್-ಇಮೇಜ್ ಸರ್ಚ್ ಮಾಡಿದ್ದೇವೆ ಮತ್ತು ಪ್ರಶ್ನಾರ್ಹ ಘಟನೆಯ ವಿವರಗಳನ್ನು ಹಂಚಿಕೊಳ್ಳುವ ವಿವಿಧ ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ.

ಮರಾಠಿ ಸುದ್ದಿ ವಾಹಿನಿ ನ್ಯೂಸ್ ೧೮ ಲೋಕಮತ್ ಪ್ರಕಟಿಸಿದ ವೀಡಿಯೋ ವರದಿಯು ವೈರಲ್ ವೀಡಿಯೋದಲ್ಲಿ ಸೆರೆಹಿಡಿಯಲಾದ ಕೆಲವು ದೃಶ್ಯಗಳನ್ನು ಹೊಂದಿದೆ. ವೀಡಿಯೋ ವರದಿಯ ಮರಾಠಿ ಶೀರ್ಷಿಕೆಯು, "ಕನಿಫ್‌ನಾಥ್ ಮಂದಿರದ ಅರ್ಚಕರನ್ನು ಹೊಡೆದದ್ದು ಯಾರು? ಕನಿಫ್‌ನಾಥ್ ದೇವಸ್ಥಾನದಲ್ಲಿ ಏನಾಯಿತು? (ಕನ್ನಡಕ್ಕೆ ಅನುವಾದಸಿಲಾಗಿದೆ)" ವರದಿಯು ಘಟನೆಯ ಸ್ಥಳವನ್ನು ಮಹಾರಾಷ್ಟ್ರದ ಅಹಲ್ಯಾನಗರ (ಹಿಂದೆ ಅಹ್ಮದ್‌ನಗರ ಎಂದು ಕರೆಯಲಾಗುತ್ತಿತ್ತು) ಜಿಲ್ಲೆಯ ರಾಹುರಿ ಎಂದು ಗುರುತಿಸಿದೆ. ವರದಿಯ ಪ್ರಕಾರ, "ರಾಹುಲಿಯ ಕನಿಫ್‌ನಾಥ್ ದೇವಸ್ಥಾನದಲ್ಲಿ ಅರ್ಚಕರನ್ನು ಅಮಾನುಷವಾಗಿ ಥಳಿಸಿದ ಘಟನೆ ಬೆಳಕಿಗೆ ಬಂದಿದೆ. ಜನಸಮೂಹವು ಅರ್ಚಕರನ್ನು ನಿಂದಿಸಿ ಥಳಿಸಿತು (ಕನ್ನಡಕ್ಕೆ ಅನುವಾದಿಸಲಾಗಿದೆ)."

ಟಿವಿ ೯ ಹಿಂದಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ವೈರಲ್ ಕ್ಲಿಪ್‌ನಂತೆಯೇ ಹಲವಾರು ದೃಶ್ಯಗಳನ್ನು ಹೊಂದಿದ್ದು, ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ರಾಹುರಿ ತಹಸಿಲ್‌ನ ಗುಣ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕನಿಫ್‌ನಾಥ್ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರು ಘರ್ಷಣೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

ಮರಾಠಿ ದೈನಿಕ ಸಕಲ್ ಪ್ರಕಾರ, ನವೆಂಬರ್ ೧೩ ರಂದು, ಸೋಮಾವತಿ ಅಮಾವಾಸ್ಯೆಯ ಸಂದರ್ಭದಲ್ಲಿ ಕನಿಫ್‌ನಾಥ್ ದೇವಾಲಯದಲ್ಲಿ ಪ್ರಾರ್ಥನೆಗಳು ನಡೆಯುತ್ತಿತ್ತು. ಮುಸ್ಲಿಂ ಸಮುದಾಯದ ಸದಸ್ಯರು ಪ್ರಾರ್ಥನೆಗಳನ್ನು ಪ್ರಸಾರ ಮಾಡಲು ಧ್ವನಿವರ್ಧಕಗಳನ್ನು ಬಳಸುವುದನ್ನು ವಿರೋಧಿಸಿದ್ದಾರೆ ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರನ್ನು ವರದಿ ಉಲ್ಲೇಖಿಸಿದೆ. ವಾದ ವಿವಾದಗಳು ಎರಡು ಸಮುದಾಯಗಳ ಸದಸ್ಯರ ನಡುವೆ ಮಾರಾಮಾರಿಯಾಗಿ ಶುರುವಾಯಿತು.

ನವೆಂಬರ್ ೧೪ ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ವರದಿಯು ಕನಿಫ್‌ನಾಥ್  ದೇವಾಲಯವು ನಿಂತಿರುವ ಭೂಮಿ ಎರಡು ಸಮುದಾಯಗಳ ನಡುವಿನ ವಿವಾದದ ವಿಷಯವಾಗಿದೆ ಎಂದು ಗಮನಿಸಿದೆ. ದೇವಾಲಯದ ಸಮೀಪದಲ್ಲಿ ದರ್ಗಾವನ್ನು ಹೊಂದಿರುವ ಜಮೀನಿನ ಮಾಲೀಕತ್ವವನ್ನು ಎರಡು ಸ್ಮಉದಯದವರೂ ಹಕ್ಕು ಸಾಧಿಸಿದ್ದಾರೆ. ವಿವಾದದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳನ್ನು - ಒಂದು ಹಿಂದೂ ಸಮುದಾಯದ ದೂರಿನ ಆಧಾರದ ಮೇಲೆ ಮತ್ತು ಇನ್ನೊಂದು ಮುಸ್ಲಿಂ ಸಮುದಾಯದ ದೂರಿನ ಆಧಾರದ ಮೇಲೆ - ರಾಹುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಕೂಡ ವರದಿ ಗಮನಿಸಿದೆ.

ಘಟನೆಗೆ ಸಂಬಂಧಿಸಿದಂತೆ ದಾಖಲಾದ ಎರಡು ಎಫ್‌ಐಆರ್‌ಗಳನ್ನು (ಪ್ರಥಮ ಮಾಹಿತಿ ವರದಿಗಳು) ಲಾಜಿಕಲಿ ಫ್ಯಾಕ್ಟ್ಸ್ ಪರಿಶೀಲಿಸಿ, ಎರಡೂ ಸಮುದಾಯದ ಒಟ್ಟು ೧೨೦ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕಂಡುಕೊಂಡಿದೆ. ಘರ್ಷಣೆಯ ನಂತರ ಪೊಲೀಸರು ಮಧ್ಯಪ್ರವೇಶಿಸಿ ಅಲ್ಲಿನ ಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಏಕನಾಥ್ ಶಿಂಧೆಯವರ ಶಿವಸೇನೆ ಪಕ್ಷದ ಮೈತ್ರಿ ಸರ್ಕಾರವು ಆಡಳಿತದಲ್ಲಿದೆ ಎಂಬುದನ್ನು ಗಮನಿಸಬೇಕು. ಘಟನೆ ನಡೆದಿರುವುದು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವ ಕರ್ನಾಟಕದ್ದಲ್ಲ.

ತೀರ್ಪು 

ಮಹಾರಾಷ್ಟ್ರದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಗಲಾಟೆಯ ವೀಡಿಯೋವನ್ನು ಕರ್ನಾಟಕದಲ್ಲಿ ನಡೆದ ಘಟನೆಯದ್ದು ಎಂದು ಹೇಳಿ ಶೇರ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ