ಮುಖಪುಟ ಆಂಧ್ರಪ್ರದೇಶದಲ್ಲಿ ನಡೆದ ಬರ್ಬರ ಹತ್ಯೆಯ ವೀಡಿಯೋವನ್ನು ತಪ್ಪು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ

ಆಂಧ್ರಪ್ರದೇಶದಲ್ಲಿ ನಡೆದ ಬರ್ಬರ ಹತ್ಯೆಯ ವೀಡಿಯೋವನ್ನು ತಪ್ಪು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ

ಜುಲೈ 29 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶದಲ್ಲಿ ನಡೆದ ಬರ್ಬರ ಹತ್ಯೆಯ ವೀಡಿಯೋವನ್ನು ತಪ್ಪು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ತಪ್ಪು ಕೋಮು ಸ್ಪಿನ್‌ನೊಂದಿಗೆ ಹಂಚಿಕೊಳ್ಳಲಾದ ಸಾಮಾಜಿಕ ಮಾಧ್ಯಮದಲ್ಲಿನ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ ಫೇಸ್‌ಬುಕ್‌/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಆರೋಪಿ ಮತ್ತು ಮೃತನು ಇಬ್ಬರೂ ಮುಸ್ಲಿಂ ಸಮುದಾಯದವರು ಎಂದು ಪ್ರಕರಣದ ಎಫ್‌ಐಆರ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಲಾಜಿಕಲಿ ಫ್ಯಾಕ್ಟ್ಸ್ ಗೆ ದೃಢಪಡಿಸಿದ್ದಾರೆ.

(ಪ್ರಚೋದಕ ಎಚ್ಚರಿಕೆ: ಈ ವರದಿಯು ಗ್ರಾಫಿಕ್ ಹಿಂಸಾಚಾರದ ವಿವರಣೆಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ. ಲಾಜಿಕಲಿ ಫ್ಯಾಕ್ಟ್ಸ್ ಅದರ ಹಿಂಸಾತ್ಮಕ ಸ್ವಭಾವದ ಕಾರಣ ವೀಡಿಯೋಗೆ ಲಿಂಕ್‌ಗಳನ್ನು ಒಳಗೊಂಡಿಲ್ಲ.)

ಹೇಳಿಕೆ ಏನು?

ಕ್ರೂರ ಹಲ್ಲೆಯ ಗ್ರಾಫಿಕ್ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮುಸ್ಲಿಂ ಸಮುದಾಯದ ಜಾವೇದ್ ಎಂಬ ವ್ಯಕ್ತಿ, ಹಿಂದೂ ಸಮುದಾಯದ ವ್ಯಕ್ತಿಯನ್ನು ಕೊಂದಿದ್ದಾನೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ.

ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೋ ಈ ಶೀರ್ಷಿಕೆಯನ್ನು ಹೊಂದಿದೆ: “ಭಯೋತ್ಪಾದಕ ಜಾವೇದ್ ಅವನನ್ನು ಕೊಂದ. ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಹಿಂದೂ ಸಹೋದರ ಕೈಗಳನ್ನು ಕಟ್ಟಿ ಕೇಳಿಕೊಂಡರು, ಜಿಹಾದಿ ಜಾವೇದ್ ಹಿಂದೂ ಸಹೋದರನನ್ನು ಕೊಂದನು. (ಹಿಂದಿಯಿಂದ ಅನುವಾದಿಸಲಾಗಿದೆ) "

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್)

ಹೇಳಿಕೆ ತಪ್ಪು. ಆಂಧ್ರಪ್ರದೇಶದ ಪಲನಾಡು ಜಿಲ್ಲೆಯಲ್ಲಿರುವ ವಿನುಕೊಂಡದಲ್ಲಿ ನಡೆದ ಘಟನೆಯನ್ನು ವೀಡಿಯೋ ವಾಸ್ತವವಾಗಿ ಚಿತ್ರಿಸುತ್ತದೆ, ಅಲ್ಲಿ ಮೃತನು ಮತ್ತು ಆರೋಪಿ ಇಬ್ಬರೂ ಮುಸ್ಲಿಂ ಪುರುಷರು.

ನಾವು ಕಂಡುಕೊಂಡದ್ದು

ವೈರಲ್ ವೀಡಿಯೋದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್, ಮಸುಕಾದ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿರುವ ದೈನಿಕ್ ಭಾಸ್ಕರ್ ಲೇಖನಕ್ಕೆ ನಮ್ಮನ್ನು ಕರೆದೊಯ್ಯಿತು. ಜುಲೈ ೧೭ ರಂದು ರಾತ್ರಿ ೮:೩೦ ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ವರದಿ ಹೇಳಿದೆ. ಯುವಜನ ಶ್ರಮಿಕ ರೈತ (ವೈಎಸ್‌ಆರ್) ಕಾಂಗ್ರೆಸ್ ಯುವ ಘಟಕದ ಸದಸ್ಯ ಶೇಖ್ ರಶೀದ್ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ. ಆರೋಪಿಯನ್ನು ತೆಲುಗು ದೇಶಂ ಪಕ್ಷದ (ಟಿಡಿಪಿ) ಸ್ಥಳೀಯ ನಾಯಕ ಶೇಖ್ ಜಿಲಾನಿ ಎಂದು ಗುರುತಿಸಲಾಗಿದೆ.

ಘಟನೆಗೆ ಯಾವುದೇ ರಾಜಕೀಯ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದ ಜಿಲ್ಲಾ ಪೊಲೀಸ್ ಮುಖ್ಯಸ್ಥ ಕಂಚಿ ಶ್ರೀನಿವಾಸ್ ರಾವ್ ಅವರನ್ನೂ ದೈನಿಕ್ ಭಾಸ್ಕರ್ ಲೇಖನ ಉಲ್ಲೇಖಿಸಿದೆ.

ಜುಲೈ ೧೮, ೨೦೨೪ ರ ಹಿಂದೂಸ್ತಾನ್ ಟೈಮ್ಸ್ ವರದಿಯು, ೨೭ ವರ್ಷದ ರಶೀದ್ ಮನೆಗೆ ಹಿಂದಿರುಗುತ್ತಿದ್ದಾಗ ಜಿಲಾನಿ ದಾಳಿ ಮಾಡಿದ್ದಾನೆ ಎಂದು ಬಹಿರಂಗಪಡಿಸುತ್ತದೆ. ಮಂಡಲಮುಡಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ಚಿತ್ರೀಕರಣ ಕೂಡ ನಡೆದಿದೆ. ರಶೀದ್‌ನನ್ನು ತೀವ್ರವಾಗಿ ಥಳಿಸಿ ನಂತರ ಕೊಡಲಿಯಿಂದ ಕೊಲೆ ಮಾಡಿರುವುದನ್ನು ದೃಶ್ಯಾವಳಿಗಳು ತೋರಿಸುತ್ತವೆ. ದಾಳಿಯ ನಂತರ, ಆಡಳಿತಾರೂಢ ಟಿಡಿಪಿ ಮತ್ತು ವಿರೋಧ ಪಕ್ಷ ವೈಎಸ್‌ಆರ್‌ಸಿಪಿ ದಾಳಿಕೋರನ ಪಕ್ಷದ ಸಂಬಂಧದ ಬಗ್ಗೆ ಆರೋಪಗಳನ್ನು ವಿನಿಮಯ ಮಾಡಿಕೊಂಡವು.

ದಿ ಹಿಂದೂ, ಡೆಕ್ಕನ್ ಹೆರಾಲ್ಡ್, ಮತ್ತು ಅಮರ್ ಉಜಾಲಾ ಸೇರಿದಂತೆ ವಿವಿಧ ಮಾಧ್ಯಮಗಳು ಘಟನೆಯ ಬಗ್ಗೆ ವರದಿ ಮಾಡಿ, ಮೃತನನ್ನು ರಶೀದ್ ಮತ್ತು ದಾಳಿಕೋರ ಜಿಲಾನಿ ಎಂದು ದೃಢಪಡಿಸಿವೆ. 

ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡಿದ ವಿನುಕೊಂಡ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಸಾಂಬಶಿವ ರಾವ್ ಹೀಗೆ ಹೇಳಿದ್ದಾರೆ, ''ಆರೋಪಿ ಜಿಲಾನಿ ಮತ್ತು ಮೃತ ರಶೀದ್ ಹಳೇ ಸ್ನೇಹಿತರಾಗಿದ್ದು, ಅವರ ನಡುವೆ ಮನಸ್ತಾಪವಿತ್ತು. ದಾಳಿ ನಡೆಸಲು ಜಿಲಾನಿ ತನ್ನ ಸ್ನೇಹಿತರಾದ ಮುಸ್ಲಿಂ ಮತ್ತು ಹಿಂದೂಗಳ ಸಹಾಯವನ್ನು ಪಡೆದನು. ನಾವು ಇಲ್ಲಿಯವರೆಗೆ ಏಳು ಜನರನ್ನು ಬಂಧಿಸಿದ್ದೇವೆ."

ಇನ್‌ಸ್ಪೆಕ್ಟರ್ ರಾವ್, "ಈ ಘಟನೆಯು ಹಿಂದೂ-ಮುಸ್ಲಿಂ ಸಂಘರ್ಷ ಎಂಬ ಹೇಳಿಕೆ ಸಂಪೂರ್ಣವಾಗಿ ಸುಳ್ಳು, ಇದು ಹಳೆಯ ದ್ವೇಷದ ಪರಿಣಾಮವಾಗಿದೆ, ಆರೋಪಿ ಮತ್ತು ಮೃತ ಇಬ್ಬರೂ ಮುಸ್ಲಿಮರು" ಎಂದು ಹೇಳಿದರು.

ವಿನುಕೊಂಡ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅನ್ನು ಸಹ ನಾವು ಪರಿಶೀಲಿಸಿದ್ದೇವೆ, ಇದು ಹಳೆ ದ್ವೇಷವು ದಾಳಿಯ ಹಿಂದಿನ ಉದ್ದೇಶ ಎಂದು ಸಮರ್ಥಿಸುತ್ತದೆ. ಎಫ್‌ಐಆರ್‌ನಲ್ಲಿ ಜಿಲಾನಿ, ಸುದ್ದು, ಶಫಿ, ಇಮ್ರಾನ್, ರಫಿ ಮತ್ತು ಇತರರನ್ನು ರಶೀದ್ ಮೇಲಿನ ದಾಳಿಯಲ್ಲಿ ಭಾಗಿಗಳೆಂದು ಹೆಸರಿಸಲಾಗಿದೆ.

ಈ ಘಟನೆಯಲ್ಲಿ ಯಾವುದೇ ಕೋಮುವಾದಿ ಕೋನವಿಲ್ಲ ಎಂದು ನಮ್ಮ ತನಿಖೆ ದೃಢಪಡಿಸುತ್ತದೆ. ವಿನುಕೊಂಡ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಎಫ್‌ಐಆರ್, ಆರೋಪಿ ಮತ್ತು ಮೃತನು ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಧೃಡಪಡಿಸುತ್ತದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ