ಮೂಲಕ: ವಿವೇಕ್ ಜೆ
ಜೂನ್ 27 2023
ವೀಡಿಯೋದಲ್ಲಿ ಕಂಡುಬಂದ ವ್ಯಕ್ತಿ ತೆಲಂಗಾಣದ ನಾಂಪಲ್ಲಿ ಕ್ಷೇತ್ರದ ಎಐಎಂಐಎಂ ಶಾಸಕ. ಈ ವೀಡಿಯೋ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ.
ಸಂದರ್ಭ
೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಗಮನಾರ್ಹ ಅಂತರದಿಂದ ಸೋಲಿಸಿದ ನಂತರ ಸಿದ್ದರಾಮಯ್ಯ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಗುರುವಾರ, ಮೇ ೧೮ ರಂದು, ಹಲವು ದಿನಗಳ ಚರ್ಚೆಯ ನಂತರ ಕಾಂಗ್ರೆಸ್ ಒಂದು ನಿರ್ಧಾರಕ್ಕೆ ಬಂದಿತು ಮತ್ತು ಸಿದ್ದರಾಮಯ್ಯ ಅವರನ್ನು ಸಿಎಂ ಮತ್ತು ಡಿಕೆ ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಿತು.
ಹೀಗಿರುವಾಗ, ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರು ಪೊಲೀಸ್ ಸಿಬ್ಬಂದಿಯ ಜೊತೆ ಒರಟಾಗಿ ವಾದ ಮಾಡುತ್ತಿದ್ದಾರೆ ಮತ್ತು ಪೋಲೀಸರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಜನರ ಒಂದು ಗುಂಪನ್ನು ಕಾಣಬಹುದು ಮತ್ತು ಅವರ ಮಧ್ಯೆ ಪೊಲೀಸ್ ವಸ್ತ್ರ ಧರಿಸಿರುವ ಒಬ್ಬ ವ್ಯಕ್ತಿಯೂ ಇದ್ದಾರೆ. ಒಬ್ಬ ವ್ಯಕ್ತಿಯು ಆ ಪೊಲೀಸ್ ಆಫೀಸರ್ ನೊಂದಿಗೆ ಸಂಭಾಷಣೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಪೊಲೀಸರಿಗೆ ಕಿರುಕುಳ ನೀಡುತ್ತಿರುವ ಈ ವ್ಯಕ್ತಿ ಕರ್ನಾಟಕದ ಕಾಂಗ್ರೆಸ್ ಶಾಸಕ ಎಂದು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಹೇಳಿಕೊಂಡಿವೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕೋಮು ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅಂತಹ ಶೀರ್ಷಿಕೆಯೊಂದು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, "ನಾವು ಹೇಳಿದಂತೆ ನೀವು ಮಾಡಬೇಕು.” “ಕರ್ನಾಟಕದ ಕಾಂಗ್ರೆಸ್ ಶಾಸಕರು ಪೊಲೀಸ್ ಅಧಿಕಾರಿಯನ್ನು ತಮ್ಮ ಮನೆಗೆ ಕರೆದು ಶಾಂತಿಯುತ ರೀತಿಯಲ್ಲಿ ವಿವರಿಸುತ್ತಿದ್ದಾರೆ."
ಇಂತಹ ಹೇಳಿಕೆಗಳಲ್ಲಿ 'ಶಾಂತಿಯುತ' ಎಂಬುದು ವ್ಯಂಗ್ಯಾತ್ಮಕ ಉಲ್ಲೇಖವಾಗಿದ್ದು, ಇಸ್ಲಾಂ ಎನ್ನುವುದು 'ಶಾಂತಿಯ ಧರ್ಮ' ಎಂಬ ಹೇಳಿಕೆಯ ಸಂದರ್ಭದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ವಾಸ್ತವವಾಗಿ
ಪ್ರಶ್ನೆಯಲ್ಲಿರುವ ವ್ಯಕ್ತಿಯನ್ನು "ಜಗ್ತಿಯಾಲ್‌ನಲ್ಲಿರುವ ಜಾಫರ್ ಹುಸೇನ್ ಮೆರಾಜ್ ಎಸ್‌ಬಿ (ಎಂಎಲ್‌ಎ. ನಾಂಪಲ್ಲಿ)" ಎಂದು ವೀಡಿಯೋದಲ್ಲಿ ಗುರುತಿಸಿರುವುದನ್ನು ನಾವು ಗಮನಿಸಿದ್ದೇವೆ. ಮೆರಾಜ್ ನಾಂಪಲ್ಲಿಯಿಂದ ತೆಲಂಗಾಣ ವಿಧಾನಸಭೆಯಲ್ಲಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಸದಸ್ಯರಾಗಿದ್ದಾರೆ. ತೆಲಂಗಾಣ ಸರ್ಕಾರದ ವೆಬ್‌ಸೈಟ್ ಕೂಡ ಜಾಫರ್ ಹುಸೇನ್ ಅವರನ್ನು ನಾಂಪಲ್ಲಿಯ ಶಾಸಕ ಎಂದು ಪಟ್ಟಿ ಮಾಡಿದೆ.
ಇದಲ್ಲದೆ, ಮೇ ೧೧, ೨೦೨೩ ರಂದು ಡೆಕ್ಕನ್ ಕ್ರಾನಿಕಲ್ ಪ್ರಕಟಿಸಿದ ವರದಿಯು ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಹೊಂದಿದ್ದು, ಜಗ್ತಿಯಾಲ್ ರೂರಲ್‌ನ ಸಬ್-ಇನ್‌ಸ್ಪೆಕ್ಟರ್ ಎ. ಅನಿಲ್ ಸರಕಾರಿ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರ ಮೇಲೆ - ತಾಯಿ ಮತ್ತು ಅವರ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಿಂದಾಗಿ ಸಬ್ ಇನ್ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ. ಎಐಎಂಐಎಂ ಸಹ ಪಂಕ್ತಿಯಲ್ಲಿ ಒಳಗೊಂಡಿದ್ದು, ಸಂತ್ರಸ್ತರ ಮನೆಗೆ ಭೇಟಿ ನೀಡಿದ ಜಾಫರ್ ಹುಸೇನ್ ಮೆರಾಜ್, ಪೊಲೀಸ್ ವರಿಷ್ಠಾಧಿಕಾರಿ ಎ ಭಾಸ್ಕರ್ ಅವರ ಕಚೇರಿಗೆ ತೆರಳಿದ್ದರು.
ಇದಲ್ಲದೆ, ಹೈದರಾಬಾದ್ ಮೂಲದ ಸ್ಥಳೀಯ ಸುದ್ದಿ ಪೋರ್ಟಲ್, ಬಿಬಿಎನ್ ಚಾನೆಲ್, "ಎಐಎಂಐಎಂ ಶಾಸಕ ಜಾಫರ್ ಹುಸೇನ್ ಮೆರಾಜ್ ಜಗ್ತಿಯಲ್ ಸಂತ್ರಸ್ತ ಕುಟುಂಬವನ್ನು ಭೇಟಿಯಾದರು" ಎಂಬ ಶೀರ್ಷಿಕೆಯೊಂದಿಗೆ ವಿವರವಾದ ವೀಡಿಯೋ ವರದಿಯನ್ನು ಪ್ರಕಟಿಸಿದೆ. ಈ ವೀಡಿಯೋದಲ್ಲಿ ಮೆರಾಜ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನೂ ಕೂಡ ಒಳಗೊಂಡಿದೆ. ಅವರು ಹೇಳಿದ್ದು, "ಸಂತ್ರಸ್ತ ಬಾಲಕಿ ಶೇಕ್ ಫರಾಹ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಸಹಪ್ರಯಾಣಿಕಿಯೊಬ್ಬಳು ತನ್ನ ಪತಿ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಆಕೆಯೊಂದಿಗೆ ಜಗಳವಾಡಿದಳು. ವಾಗ್ವಾದ ವಿಕೋಪಕ್ಕೆ ಹೋಗಿದ್ದು, ನಂತರ ಸಹ ಪ್ರಯಾಣಿಕರ ಪತಿ ಆಗಮಿಸಿ ಬಸ್ ನಿಲ್ಲಿಸಿ ಸಂತ್ರಸ್ತ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಸ್ಸಾದುದ್ದೀನ್ ಓವೈಸಿ ಅವರ ಸೂಚನೆ ಮೇರೆಗೆ ನಾನು ನನ್ನ ಸಹೋದರಿ ಫರಾಳನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದೇನೆ. ಸಬ್ ಇನ್ಸ್‌ಪೆಕ್ಟರ್ ಅನಿಲ್ ಅವರನ್ನು ಅಮಾನತುಗೊಳಿಸಲಾಗಿದ್ದು, ಸೆಕ್ಷನ್ ೩೫೪ (ಮಹಿಳೆಯೊಬ್ಬಳ ನಮ್ರತೆಗೆ ಆಕ್ರೋಶ) ವಿಧಿಸುವಂತೆ ಎಸ್‌ಪಿಗೆ ಮನವಿ ಮಾಡಿದ್ದೇನೆ.”
ವೈರಲ್ ವೀಡಿಯೋವನ್ನು ಮೇ ೧೧ ರಂದು ಅಧಿಕೃತ ಎಐಎಂಐಎಂ ಫೇಸ್‌ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ಪ್ರದರ್ಶಿಸಲಾದ ಶೀರ್ಷಿಕೆಯು ಹೀಗಿದೆ: "ಎಐಎಂಐಎಂ ಎಂಎಲ್ಎ ಮತ್ತು ಎಐಎಂಐಎಂ ತಂಡ ಜಗ್ತಿಯಾಲ್."
ಮೆರಾಜ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್ ನಲ್ಲಿ ಎಸ್‌ಪಿ ಭಾಸ್ಕರ್ ಅವರೊಂದಿಗಿನ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ವೈರಲ್ ವೀಡಿಯೋದಲ್ಲಿ ಮಾತನಾಡುತಿದ್ದವರಂತಹದ್ದೇ ಆದ ಉಡುಪಿನಲ್ಲಿ ಇರುವುದನ್ನು ನಾವು ನೋಡಬಹುದು. ಘಟನೆಯಲ್ಲಿ ಭಾಗಿಯಾಗಿರುವ ಕುಟುಂಬವನ್ನು ಭೇಟಿಯಾದ ಫೋಟೋಗಳನ್ನು ಸಹ ಶಾಸಕರು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ವೈರಲ್ ವೀಡಿಯೋದಲ್ಲಿರುವ ವ್ಯಕ್ತಿ ಎಂದು ಸ್ಪಷ್ಟವಾಗಿ ಗುರುತಿಸಬಹುದು.
ಪೊಲೀಸ್ ಸಿಬ್ಬಂದಿ ಮತ್ತು ಎಐಎಂಐಎಂ ಶಾಸಕ ಜಾಫರ್ ಹುಸೇನ್ ಮೆರಾಜ್ ನಡುವಿನ ಸಂಭಾಷಣಯನ್ನು ತೋರಿಸುವ ವೈರಲ್ ವೀಡಿಯೋ ತೆಲಂಗಾಣದಿಂದ ಬಂದಿದೆ ಎಂಬುದು ಸ್ಪಷ್ಟವಾಗಿದೆ. ಈ ಕ್ಲಿಪ್ ಕಾಂಗ್ರೆಸ್ ಪಕ್ಷಕ್ಕೂ ಮತ್ತು ಕರ್ನಾಟಕ ಚುನಾವಣೆಗೂ ಯಾವುದೇ ಸಂಬಂಧವಿಲ್ಲ.
ತೀರ್ಪು
ತೆಲಂಗಾಣದ ಎಐಎಂಐಎಂ ಶಾಸಕ ಜಾಫರ್ ಹುಸೇನ್ ಮೆರಾಜ್ ಅವರು ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿಯೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು ತೋರಿಸುವ ವೀಡಿಯೋವನ್ನು ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರು ಪೊಲೀಸ್ ಅಧಿಕಾರಿಯೊಂದಿಗೆ ಜಗಳವಾಡುತ್ತಿದ್ದಾರೆ ಎಂಬ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ನಿಜವಾಗಿ ಓರ್ವ ಸಬ್ ಇನ್ಸ್‌ಪೆಕ್ಟರ್ ಇಬ್ಬರು ನಾಗರಿಕರಿಗೆ ಕಿರುಕುಳ ನೀಡಿದ ವಿಷಯದ ಬಗ್ಗೆ ಶಾಸಕರು ಪೊಲೀಸ್ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಆದ್ದರಿಂದ ಈ ಹೇಳಿಕೆಯನ್ನು ನಾವು ತಪ್ಪು ಎಂದು ಗುರುತಿಸಿದ್ದೇವೆ.