ಮೂಲಕ: ಸೋಹಮ್ ಶಾ
ಆಗಸ್ಟ್ 25 2023
ಈ ಚಿತ್ರವು ನೈಜವಾದುದ್ದಲ್ಲ ಮತ್ತು ಚಿತ್ರದ ಮೂಲವನ್ನು ತೋರಿಸುವ ಪೋಷ್ಟ್ ದೃಢೀಕರಿಸಿದಂತೆ ಅಡೋಬ್ ಫೋಟೋಶಾಪ್ ಬಳಸಿ ರಚಿಸಲಾಗಿದೆ.
ಸಂದರ್ಭ
ಚಂದ್ರಯಾನ-೩ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ ೧ ಮತ್ತು ೨ ರ ನಂತರದ ಇತ್ತೀಚಿನ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾಗಿದೆ. ಇದನ್ನು ಜೂಲೈ ೧೪, ೨೦೨೩ ರಂದು ಉಡಾವಣೆ ಮಾಡಲಾಯಿತು ಮತ್ತು ವಿಕ್ರಮ್ ಎಂಬ ಲ್ಯಾಂಡರ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ ಅನ್ನು ಹೊಂದಿದೆ. ವಿಕ್ರಮ್ ಆಗಸ್ಟ್ ೨೩ರ ಸಂಜೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಿತು ಮತ್ತು ಪ್ರಗ್ಯಾನ್ ರೋವರ್ ಕೂಡ ಚಂದ್ರನ ಮೇಲ್ಮೈಯಲ್ಲಿ ಹೊರಳಿತು. ಇಸ್ರೋ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ಚಂದ್ರನ ಹಲವಾರು ದೃಶ್ಯಗಳನ್ನು ಹಂಚಿಕೊಂಡಿದೆ.
ಇಲ್ಲಿ ಮಾಡಲಾದ ಹೇಳಿಕೆಯೇನು?
ಈ ಹಿನ್ನೆಲೆಯಲ್ಲಿ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇಸ್ರೋ ಲೋಗೋದ ಚಿತ್ರವನ್ನು, ಹಾಗು ಭಾರತದ ರಾಷ್ಟ್ರೀಯ ಲಾಂಛನವಾದ ಅಶೋಕ್ ಸ್ತಂಭದ ಚಿತ್ರವನ್ನು ಬಿಳಿ ಹಿನ್ನಲೆಯೊಂದಿಗೆ ಹಂಚಿಕೊಂಡಿದ್ದಾರೆ. ಚಂದ್ರಯಾನ-೩ರ ಪ್ರಗ್ಯಾನ್ ರೋವರ್‌ನ ಚಕ್ರದ ಮುದ್ರೆಯನ್ನು ಚಂದ್ರನ ಮೇಲೆ ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್ ಎಂದು ಕರೆಯಲಾಗಿತ್ತು) ಅಂತಹ ಒಂದು ಪೋಷ್ಟ್ ಅನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ, “ರೋವರ್‌ನ ಮುದ್ರೆ ಇಂದು ಚಂದ್ರನ ಮೇಲ್ಮೈಯಲ್ಲಿ ಶಾಶ್ವತವಾಗಿ ಅಚ್ಚೊತ್ತಿರುವ ಚಿತ್ರ, ಚಂದ್ರನತ್ತ ಗಾಳಿಯಿಲ್ಲದಿರುವುದರಿಂದ ಈ ಗುರುತುಗಳು ಶಾಶ್ವತವಾಗಿರುತ್ತವೆ.”
ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಚಿತ್ರ (ಮೂಲ:ಎಕ್ಸ್/@chikhani_manish,@Pushpendraamu/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಆಲ್ಟೆರ್ ಮಾಡಲಾಗಿದೆ)
ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವುದನ್ನು ಕೂಡ ನಾವು ಕಂಡುಕೊಂಡಿದ್ದೇವೆ.
ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಚಿತ್ರ. (ಮೂಲ: ಫೇಸ್‌ಬುಕ್/ Sunita Parihar/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಆಲ್ಟೆರ್ ಮಾಡಲಾಗಿದೆ)
ವಾಟ್ಸಾಪ್ ನಲ್ಲಿ ಕೂಡ ಈ ಚಿತ್ರ ವೈರಲ್ ಆಗಿದೆ.
ಆದರೆ, ಹಂಚಿಕೊಂಡ ಈ ಚಿತ್ರವು ಅಸಲಿ ಅಲ್ಲ, ಇದು ಇಮೇಜ್ ಎಡಿಟಿಂಗ್ ಪರಿಕರಗಳನ್ನು ಬಳಸಿಕೊಂಡು ರಚಿಸಲಾದ ನಕಲಿ ಚಿತ್ರ ಎಂದು ನಾವು ಕಂಡುಕೊಂಡಿದ್ದೇವೆ.
ಈ ಚಿತ್ರದ ಹಿಂದಿನ ಸತ್ಯ ಏನು?
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಹೆಚ್ಚಿನ ಚಿತ್ರಗಳಲ್ಲೂ '@Krishanshu Garg' ಎಂಬ ವಾಟರ್‌ಮಾರ್ಕ್ ಹೊಂದಿರುವುದನ್ನು ನಾವು ಕಂಡುಕೊಂಡಿದ್ದೇವೆ.
ವೈರಲ್ ಚಿತ್ರದ ಮೇಲೆ ಕೃಷ್ಣಾಂಶು ಗಾರ್ಗ್ ಎಂದು ಹೇಳುವ ವಾಟರ್‌ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ. (ಮೂಲ: ಎಕ್ಸ್)
ಈ ಸುಳಿವನ್ನು ಬಳಸಿಕೊಂಡು, ಚಿತ್ರವನ್ನು ಮೂಲತಃ ಎಕ್ಸ್ ಬಳಕೆದಾರರಾದ @KrishanshuGarg ಅವರು ಆಗಸ್ಟ್ ೨೩, ೨೦೨೩ ರಂದು ಪೋಷ್ಟ್ ಮಾಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.
ಎಕ್ಸ್ ನಲ್ಲಿ ಕೃಷ್ಣಾಂಶು ಗಾರ್ಗ್ ಅವರು ಹಂಚಿಕೊಂಡ ಚಿತ್ರ. (ಮೂಲ ಎಕ್ಸ್ /@KrishanshuGarg)
ಲಾಜಿಕಲಿ ಫ್ಯಾಕ್ಟ್ಸ್ ಲಕ್ನೋ ಮೂಲದ ಉದ್ಯಮಿ ಮತ್ತು ಬಾಹ್ಯಾಕಾಶ ಉತ್ಸಾಹಿ ಗಾರ್ಗ್ ಅವರನ್ನು ಸಂಪರ್ಕಿಸಿತು. ಅವರು ಇಮೇಜ್ ಎಡಿಟಿಂಗ್ ಸಾಫ್ಟ್‌ವೇರ್ ಅಡೋಬ್ ಫೋಟೋಶಾಪ್ ಬಳಸಿ ಚಿತ್ರವನ್ನು ರಚಿಸಿದ್ದಾರೆ ಎಂದು ಖಚಿತಪಡಿಸಿದರು. ಚಂದ್ರಯಾನ-೩ ಚಂದ್ರನ ಮೇಲೆ ಇಳಿಯುವ ಕೌಂಟ್‌ಡೌನ್‌ನ ಭಾಗವಾಗಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ ಎಂದು ನಮಗೆ ಹೇಳಿದರು.
ಗಾರ್ಗ್ ಅವರ ಇನ್ಸ್ಟಾಗ್ರಾಮ್ ಸ್ಟೋರಿ ಹೈಲೈಟ್ (ಮೂಲ: ಇನ್ಸ್ಟಾಗ್ರಾಮ್)
“ನನ್ನ ಉದ್ದೇಶವು ಎಂದಿಗೂ ಯಾವುದೇ ರೀತಿಯ ನಕಲಿ ಸುದ್ದಿಗಳನ್ನು ಹರಡುವುದಲ್ಲ. ನಾನು ಲ್ಯಾಂಡಿಂಗ್‌ಗೆ ೧೦ ಗಂಟೆಗಳ ಮೊದಲು ಕೌಂಟ್‌ಡೌನ್ ಸ್ಟೋರಿಯನ್ನು ಪೋಷ್ಟ್ ಮಾಡಿದ್ದೇನೆ. ಆದರೆ ಜನರು ಲ್ಯಾಂಡಿಂಗ್ ನಂತರ ಅದನ್ನು ನಿಜವಾದ ಚಿತ್ರವಾಗಿ ಹೇಗೆ ಹಂಚಿಕೊಳ್ಳುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ. ನಾನು ಕೂಡ ಆಘಾತಕ್ಕೊಳಗಾಗಿದ್ದೇನೆ.” ಎಂದು ಗಾರ್ಗ್ ಅವರು ನಮ್ಮನ್ನು ತಿಳಿಸಿದರು.
ಬುಧವಾರ ಸಂಜೆ ಪ್ರಗ್ಯಾನ್ ರೋವರ್ ಹೊರತರುವ ಮೊದಲು ಚಿತ್ರವನ್ನು ಹಂಚಿಕೊಳ್ಳಲಾಗಿದೆ ಎಂದು ಗಾರ್ಗ್ ಅವರ ಇನ್ಸ್ಟಾಗ್ರಾಮ್ ಸ್ಟೋರಿ ಕೂಡ ಸಾಬೀತುಪಡಿಸುತ್ತದೆ.
ಹಾಗಾದರೆ ಮುದ್ರೆಯ ವಿಷಯ?
ಪ್ರಗ್ಯಾನ್ ರೋವರ್ ನಿಜವಾಗಿಯೂ ಚಂದ್ರನ ಮೇಲ್ಮೈಯಲ್ಲಿ ಭಾರತದ ರಾಷ್ಟ್ರೀಯ ಲಾಂಛನ ಮತ್ತು ಇಸ್ರೋ ಲೋಗೋದ ಮುದ್ರೆಯನ್ನು ಬಿಡುತ್ತದೆ. ಜುಲೈ ೧೨, ೨೦೨೩ ರಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ಚಂದ್ರಯಾನ-೩ ಮಿಷನ್‌ನ ಇಸ್ರೋನ ಅನಿಮೇಟೆಡ್ ಕರ್ಟನ್ ರೈಸರ್ ವೀಡಿಯೋ, ೪:೦೮ ಟೈಮ್‌ಸ್ಟ್ಯಾಂಪ್‌ನಲ್ಲಿ ಮುದ್ರೆ ಹೇಗಿರುತ್ತದೆ ಎಂಬುದನ್ನು ತೋರಿಸುತ್ತದೆ.
ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಅನ್ನು ಪ್ರತಿನಿಧಿಸುವ ಇಸ್ರೋದ ಕರ್ಟನ್ ರೈಸರ್ ವೀಡಿಯೋ. ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್ ಬಿಟ್ಟುಹೋಗುವ ಭಾರತದ ರಾಷ್ಟ್ರೀಯ ಲಾಂಛನ ಮತ್ತು ಇಸ್ರೋ ಲೋಗೋದ ಮುದ್ರೆಯನ್ನು ವೀಡಿಯೋ ತೋರಿಸಿದೆ (ಮೂಲ: ಸ್ಕ್ರೀನ್‌ಶಾಟ್/ಇಸ್ರೋ)
ಇದಲ್ಲದೆ, ಸೆಪ್ಟೆಂಬರ್ ೨, ೨೦೧೯ ರಂದು, ಇಸ್ರೋ ಚಂದ್ರಯಾನ -೨ರ ಪ್ರಗ್ಯಾನ್ ರೋವರ್‌ನ ಅನಿಮೇಟೆಡ್ ವೀಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೋ, ೨:೪೬ ಟೈಮ್‌ಸ್ಟ್ಯಾಂಪ್‌ನಲ್ಲಿ, ರೋವರ್ ಚಂದ್ರನ ಮೇಲೆ ಇದೇ ರೀತಿಯ ಮುದ್ರೆಗಳನ್ನು ಬಿಡುವುದನ್ನು ಸಹ ತೋರಿಸಿದೆ. ಆದರೆ, ಎರಡೂ ವೀಡಿಯೋಗಳ ಲಾಂಛನ ಮತ್ತು ಇಸ್ರೋ ಲೋಗೋವನ್ನು ಟ್ರ್ಯಾಕ್‌ನ ಎರಡೂ ಬದಿಗಳಲ್ಲಿ ತೋರಿಸುತ್ತವೆ. ಇವು ಗಾರ್ಗ್ ಅವರು ಹಂಚಿಕೊಂಡಿರುವಂತೆ ಮತ್ತು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರಗಳಿಂದ ವಿಭಿನ್ನವಾಗಿವೆ.
ಇಂಡಿಯಾ ಟುಡೇ ಮೊದಲಾದ ಮಾಧ್ಯಮಗಳು ಇಸ್ರೋ ಲೋಗೋ ಮತ್ತು ರಾಷ್ಟ್ರೀಯ ಲಾಂಛನವನ್ನು ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್‌ನಿಂದ ಕೆತ್ತಲಾಗುತ್ತದೆ ಮತ್ತು ಚಂದ್ರನ ಮೇಲೆ ಈ ಮುದ್ರೆಯು ಹೇಗೆ ಕಾಣುತ್ತದೆ ಎಂಬುದರ ವೀಡಿಯೋ ನಿರೂಪಣೆಯನ್ನು ಪ್ರಕಟಿಸಿದ್ದಾರೆ.
ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಚಿತ್ರವು ನಕಲಿ ಚಿತ್ರವಾಗಿದ್ದು, ಈ ಕಥೆಯನ್ನು ಪ್ರಕಟಿಸುವ ಸಮಯದಲ್ಲಿ ಇಸ್ರೋ ಸ್ವತಃ ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ನ ನಿಜವಾದ ಮುದ್ರೆಯ ಫೋಟೋವನ್ನು ಇನ್ನೂ ಹಂಚಿಕೊಂಡಿಲ್ಲ.
ತೀರ್ಪು
ಫೋಟೋಶಾಪ್ ಬಳಸಿ ವೈರಲ್ ಚಿತ್ರವನ್ನು ರಚಿಸಲಾಗಿದೆ ಮತ್ತು ಇದು ಚಂದ್ರಯಾನ-೩ರ ಪ್ರಗ್ಯಾನ್ ರೋವರ್ ಮುದ್ರೆಯ ನಿಜವಾದ ಫೋಟೋ ಅಲ್ಲದ ಕಾರಣ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.
Translated by Vivek J