ಮೂಲಕ: ಅಜ್ರಾ ಅಲಿ
ಫೆಬ್ರವರಿ 1 2024
ಈ ಎರಡೂ ವೀಡಿಯೋಗಳು ೨೦೨೨ ರದಾಗಿದ್ದು, ಕ್ರಮವಾಗಿ ಹೈದರಾಬಾದ್ ಮತ್ತು ಉತ್ತರ ಪ್ರದೇಶದಿಂದ ಬಂದಿವೆ, ಹಾಗು ಮೀರಾ ರೋಡ್ ಸಂಘರ್ಷಣೆಗೆ ಸಂಬಂಧಿಸಿಲ್ಲ.
ಸಂದರ್ಭ
ಜನವರಿ ೨೧, ೨೦೨೪, ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ ಕೇವಲ ಒಂದು ದಿನದ ಮೊದಲು, ಭಾರತದ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಮೀರಾ ರೋಡ್‌ನ ನಯಾ ನಗರದಲ್ಲಿ ಹಿಂಸಾಚಾರ ಮತ್ತು ಕೋಮು ಸಂಘರ್ಷಣೆ ಭುಗಿಲೆದ್ದಿತು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ದೇವಾಲಯದ ಪ್ರತಿಷ್ಠಾಪನೆಯನ್ನು ಆಚರಿಸುವ ಮೆರವಣಿಗೆಯು ಮುಸ್ಲಿಂ ಬಹುಸಂಖ್ಯಾತ ಪ್ರದೇಶದ ಮೂಲಕ ಹಾದುಹೋದಾಗ ಅಶಾಂತಿ ಪ್ರಾರಂಭವಾಯಿತು.
ಮೆರವಣಿಗೆಯಲ್ಲಿ ವಾಹನಗಳಲ್ಲಿ ಮತ್ತು ಮೋಟಾರು ಸೈಕಲ್‌ಗಳಲ್ಲಿ ವ್ಯಕ್ತಿಗಳು ಸೇರಿದಂತೆ ಹಲವಾರು ಸ್ಥಳೀಯರು ಭಾಗವಹಿಸುವುದು ಕಂಡುಬಂದಿದೆ . ಸೈಲೆನ್ಸರ್ ಹೊಂದಿರುವ ಮೋಟಾರ್‌ಸೈಕಲ್ ಅನ್ನು ಒಳಗೊಂಡ ಘಟನೆಯು ಗುಂಡಿನ ಶಬ್ದವನ್ನು ಹೋಲುವ ಧ್ವನಿಯು ಹೂರಹೊಮ್ಮಿತ್ತು ಇದು ಪ್ರದೇಶದ ನಿವಾಸಿಗಳಲ್ಲಿ ವದಂತಿಗಳನ್ನು ಮತ್ತು ಭಯವನ್ನು ಹುಟ್ಟುಹಾಕಿತು. ಈ ಘಟನೆಯು ಎರಡು ಸಮುದಾಯಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು, ಶೀಘ್ರವಾಗಿ ಹಿಂಸಾಚಾರಕ್ಕೆ ತಿರುಗಿತು. ಮರುದಿನ ಕಲ್ಲು ತೂರಾಟ ಮತ್ತು ವಿಧ್ವಂಸಕ ಕೃತ್ಯಗಳ ವರದಿಗಳು ಕಂಡುಬಂದಿದ್ದು, ಅಧಿಕಾರಿಗಳಿಂದ ತ್ವರಿತ ಪ್ರತಿಕ್ರಿಯೆಯನ್ನು ಪ್ರೇರೇಪಿಸಿತು. ವ್ಯಕ್ತಿಗಳು ಆಸ್ತಿ ಮತ್ತು ವಾಹನಗಳನ್ನು ಧ್ವಂಸಗೊಳಿಸುತ್ತಿರುವ ದೃಶ್ಯಾವಳಿಗಳೂ ಸಹ ಕಂಡುಬಂದಿವೆ.
ಕೋಮುಗಲಭೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ೧೯ ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹೆಚ್ಚುವರಿಯಾಗಿ, ಅತಿಕ್ರಮಣವನ್ನು ಉಲ್ಲೇಖಿಸಿ ಸರ್ಕಾರಿ ಅಧಿಕಾರಿಗಳು ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಹಲವಾರು ಸಂಸ್ಥೆಗಳನ್ನು ಕೆಡವಿದರು. ಭದ್ರತೆಯನ್ನು ಹೆಚ್ಚಿಸುವ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನಗಳು ಪ್ರಸ್ತುತ ನಡೆಯುತ್ತಿವೆ.
ಹೇಳಿಕೆ ಏನು?
ಈ ಹಿನ್ನಲೆಯಲ್ಲಿ, ಮೀರಾ ರೋಡ್ ಹಿಂಸಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಪೊಲೀಸರು ಬಂಧಿಸುತ್ತಿರುವುದನ್ನು ತೋರಿಸುವ ಎರಡು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿವೆ. ಮೊದಲ ವೀಡಿಯೋದಲ್ಲಿ ಪೊಲೀಸರು ಗೇರ್‌ಗಳನ್ನು ಧರಿಸಿ ಪೋಲೀಸ್ ವಾಹನಕ್ಕೆ ವ್ಯಕ್ತಿಗಳನ್ನು ಕರೆದೊಯ್ಯುತ್ತಿರುವುದನ್ನು ಮತ್ತು ಲಾಠಿ ಚಾರ್ಜ್ ಮಾಡುವುದನ್ನು ಚಿತ್ರಿಸುತ್ತದೆ. ಎರಡನೆಯದು, ಒಂದು ಸಂಕಲನವು ಕಂಬಿಗಳ ಹಿಂದೆ ಇರುವ ಪುರುಷರೊಂದಿಗೆ ಪ್ರಾರಂಭವಾಗುತ್ತದೆ ಹಾಗು ಪೊಲೀಸ್ ಅಧಿಕಾರಿಯೊಬ್ಬರು ಕೋಲಿನಿಂದ ಜನರಿಗೆ ಹೊಡೆಯುವ ದೃಶ್ಯವನ್ನು ತೋರಿಸುತ್ತದೆ. ಈ ವೀಡಿಯೋಗಳನ್ನು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಳ್ಳಲಾಗಿದೆ, ಭಗವಾನ್ ರಾಮನಿಗಾಗಿ ಹಿಂದೂ ಮೆರವಣಿಗೆಯ ಮೇಲೆ "ದಾಳಿ" ನಡೆಸಿದ ನಂತರ ವ್ಯಕ್ತಿಗಳ ಬಂಧನವನ್ನು ಚಿತ್ರಿಸುತ್ತದೆ ಎಂದು ಹೇಳಿಕೊಳ್ಳಲಾಗಿದೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ ನೋಡಬಹುದು.
ಆದರೆ, ವೀಡಿಯೋದೊಂದಿಗೆ ಹಂಚಿಕೊಳ್ಳಲಾದ ಹೇಳಿಕೆ ತಪ್ಪಾಗಿದೆ.
1. ಪೊಲೀಸರು ಪುರುಷರನ್ನು ಬಂಧಿಸುತ್ತಿರುವ ಮೊದಲ ವೀಡಿಯೋ ಹೈದರಾಬಾದ್ ನಲ್ಲಿ ಆಗಸ್ಟ್ ೨೦೨೨ ರಂದು ಸೆರೆಹಿಡಿಯಲಾಗಿದ್ದು, ಅಲ್ಲಿ ಪ್ರಾಫೆಟ್ ಮೊಹಮ್ಮದ್ ವಿರುದ್ಧದ ಹೇಳಿಕೆಗಳನ್ನು ನೀಡಿದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಪೊಲೀಸರು ಬಂಧಿಸಿದ್ದಾರೆ.
೨. ಎರಡನೇ ವೀಡಿಯೋ ಉತ್ತರ ಪ್ರದೇಶದ ಸಹರಾನ್‌ಪುರದ್ದು, ಜೂನ್ ೨೦೨೨ ರಲ್ಲಿ ಪ್ರಾಫೆಟ್ ಮುಹಮ್ಮದ್ ವಿರುದ್ಧದ ಟೀಕೆಗಳ ಮೇಲೆ ಗಲಾಟೆಯಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಥಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಫೇಸ್‌ಬುಕ್/ ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ನಾವು ಇದನ್ನು ಕಂಡುಹಿಡಿದದ್ದು ಹೀಗೆ?
ವೀಡಿಯೋ ೧
ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪೊಲೀಸರು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು, ವೀಡಿಯೋ ಚಿತ್ರೀಕರಿಸಿದ ಸ್ಥಳವು ಮುಂಬೈ ಅಲ್ಲ ಎಂದು ಸೂಚಿಸುತ್ತದೆ, ಅಲ್ಲಿ ಮರಾಠಿ ಮತ್ತು ಹಿಂದಿಯನ್ನು ಪ್ರಧಾನವಾಗಿ ಬಳಸಲಾಗುತ್ತದೆ. ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಆಗಸ್ಟ್ ೨೫, ೨೦೨೨ ರ ದಿನಾಂಕದ "ಪ್ರತಿಭಟನಕಾರರು ಹೈದರಾಬಾದ್‌ನಲ್ಲಿ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸುತ್ತಾರೆ" ಎಂಬ ಶೀರ್ಷಿಕೆಯ ಯೂಟ್ಯೂಬ್‌ನಲ್ಲಿ ನ್ಯೂಸ್ ಮಿನಿಟ್ ವರದಿಗೆ ನಮ್ಮನ್ನು ನಿರ್ದೇಶಿಸಿತು.
ವರದಿಯು ವೈರಲ್ ವೀಡಿಯೋದಲ್ಲಿ ಕಂಡುಬರುವ ದೃಶ್ಯಗಳಿಗೆ ಹೊಂದಿಕೆಯಾಗುತ್ತದೆ. ಪ್ರಾಫೆಟ್ ಮುಹಮ್ಮದ್ ವಿರುದ್ಧದ ಕಾಮೆಂಟ್‌ಗಳಿಗಾಗಿ ಬಂಧಿಸಲಾದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರ ಆಗಸ್ಟ್ ೨೨, ೨೦೨೨, ರಂದು ಜಾಮೀನು ಬಿಡುಗಡೆಯ ನಂತರ ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆಗಳನ್ನು ಇದು ತೋರಿಸುತ್ತದೆ ಎಂದು ವಿವರಿಸಲಾಗಿದೆ. ಯುವಕರಿಂದ ಪೊಲೀಸರ ಮೇಲೆ ಕಲ್ಲು ತೂರಾಟದ ಘಟನೆಗಳ ನಂತರ, ಅಧಿಕಾರಿಗಳು ಆಗಸ್ಟ್ ೨೪, ೨೦೨೨ ರ ರಾತ್ರಿ ಮನೆ ದಾಳಿ ಮತ್ತು ಬಂಧನಗಳನ್ನು ನಡೆಸಿದರು.
ವೀಡಿಯೋ ೨
ಈ ವೀಡಿಯೋ ಎರಡು ಚಿಕ್ಕ ಕ್ಲಿಪ್‌ಗಳನ್ನು ಸಂಯೋಜಿಸಿದೆ ; ಆರಂಭಿಕ ಭಾಗವು ಸೆಲ್‌ನಲ್ಲಿರುವ ಪುರುಷರನ್ನು ತೋರಿಸುತ್ತದೆ, ಮತ್ತು ನಂತರದ ಭಾಗವು ವ್ಯಕ್ತಿಗಳನ್ನು ಪೋಲಿಸರು ಕೋಲಿನಿಂದ ಹೊಡೆಯುವುದನ್ನು ತೋರಿಸುತ್ತದೆ. ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಜೂನ್ ೧೧, ೨೦೨೨ ರಂದು ಜಾಗರನ್ ವರದಿಗೆ ನಮ್ಮನ್ನು ಕರೆದೊಯ್ಯಿತು, ವೈರಲ್ ವೀಡಿಯೋದಲ್ಲಿರುವಂತೆಯೇ ದೃಶ್ಯಗಳನ್ನು ತೋರಿಸುತ್ತದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಉತ್ತರ ಪ್ರದೇಶದಾದ್ಯಂತ ಈ ಪ್ರತಿಭಟನೆಗಳು, ಪ್ರಾಫೆಟ್ ಮುಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿಂದ ಕಿಡಿಕಾರಿದ್ದು, ಜೂನ್ ೧೦, ೨೦೨೨ ರಂದು ಹಿಂಸಾಚಾರ ಭುಗಿಲೆದ್ದ ನಂತರ ೧೪೦ ಪ್ರತಿಭಟನಾಕಾರರನ್ನು ಬಂಧಿಸಲು ಕಾರಣವಾಯಿತು.
ವೈರಲ್ ವೀಡಿಯೋ ಮತ್ತು ೨೦೨೨ ರ ಜಾಗರನ್ ಸುದ್ದಿ ವರದಿಯ ನಡುವಿನ ಹೋಲಿಕೆ.
(ಮೂಲ: ಜಾಗರನ್/ಎಕ್ಸ್ / ಸ್ಕ್ರೀನ್‌ಶಾಟ್‌ಗಳು)
ವೀಡಿಯೋದ ಎರಡನೇ ಭಾಗದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ - ಪೊಲೀಸ್ ಅಧಿಕಾರಿಗಳಿಗೆ ಕರುಣೆಗಾಗಿ ಬೇಡಿಕೊಳ್ಳುತ್ತಿರುವಾಗ ಪುರುಷರನ್ನು ಹೊಡೆಯುತ್ತಿದ್ದಾರೆ - ಜೂನ್ ೧೧, ೨೦೨೨ ರಂದು ವೀಡಿಯೋವನ್ನು ಮೊದಲು ಹಂಚಿಕೊಂಡ ಬಿಜೆಪಿ ಶಾಸಕ ಶಲಭ್ ಮಣಿ ತ್ರಿಪಾಠಿ ಅವರ ಎಕ್ಸ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಇದು ಪೊಲೀಸರಿಂದ "ಗಲಭೆಕೋರರಿಗೆ ರಿಟರ್ನ್ ಗಿಫ್ಟ್" ಎಂಬ ಶೀರ್ಷಿಕೆಯೊಂದಿಗೆ ಶಾಸಕರು ವೀಡಿಯೋವನ್ನು ಹಂಚಿಕೊಂಡಿದ್ದರು.
ಆ ಸಮಯದಲ್ಲಿ, ಕಸ್ಟಡಿಯಲ್ಲಿರುವ ಶಂಕಿತರ ಮೇಲೆ ಪೊಲೀಸರು ಕ್ರಮವನ್ನು ತೆಗೆದುಕೊಳ್ಳುವ ವೀಡಿಯೋ ಆಕ್ರೋಶವನ್ನು ಹುಟ್ಟುಹಾಕಿತು ಮತ್ತು ಮಾಧ್ಯಮಗಳು ವೀಡಿಯೋದಲ್ಲಿ ಉತ್ತರ ಪ್ರದೇಶದ ಸಹರಾನ್‌ಪುರಕ್ಕೆ ಸ್ಥಳವನ್ನು ಪತ್ತೆಹಚ್ಚಿದ್ದವು. ಎನ್‌ಡಿಟಿವಿ ನಡೆಸಿದ ತನಿಖೆಯು ಪುರುಷರ ಕುಟುಂಬವು ಅವರನ್ನು ಗುರುತಿಸಿದೆ ಮತ್ತು ಘಟನೆಯು ಸಹರಾನ್‌ಪುರದಲ್ಲಿ ಸಂಭವಿಸಿದೆ ಎಂದು ದೃಢಪಡಿಸಿದೆ ಎಂದು ತೋರಿಸಿದೆ. ಪೊಲೀಸರು ತರುವಾಯ ಘಟನೆಯ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಿದರು ಮತ್ತು ಎರಡು ವಾರಗಳ ನಂತರ, ಪುರುಷರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಜೂನ್ ೧೦, ೨೦೨೨ ರಂದು ಹಿಂಸಾಚಾರ ವರದಿಯಾದ ನಂತರ ಸಹರಾನ್‌ಪುರ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಿಂದ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ ೩೦೦ ಕ್ಕೂ ಹೆಚ್ಚು ಜನರು ಈ ವೀಡಿಯೋದಲ್ಲಿ ಕಂಡುಬಂದಿದ್ದಾರೆ ಎಂದು ಜೂನ್ ೧೨, ೨೦೨೨ ರಂದು ದಿ ವೀಕ್ ವರದಿ ಮಾಡಿದೆ. .
ಟಿವಿ ಸುದ್ದಿ ವಾಹಿನಿಯಲ್ಲಿ ಪ್ರಾಫೆಟ್ ಮೊಹಮ್ಮದ್ ಕುರಿತು ಮಾಜಿ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ಹೇಳಿಕೆಗಳ ಹಿನ್ನಲೆಯಲ್ಲಿ ಜೂನ್ ೧೦, ೨೦೨೨ ರಂದು ಶುಕ್ರವಾರದ ಪ್ರಾರ್ಥನೆಯ ನಂತರ ಉತ್ತರ ಪ್ರದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು ಎಂದು ಟೈಮ್ಸ್ ಆಫ್ ಇಂಡಿಯಾದ ಜೂನ್ ೧೧, ೨೦೨೨ ರ ವರದಿ ಹೇಳುತ್ತದೆ.
ವೈರಲ್ ವೀಡಿಯೋ ಮತ್ತು ೨೦೨೨ರ ಎನ್‌ಡಿಟಿವಿ ಸುದ್ದಿ ವರದಿಯ ನಡುವಿನ ಹೋಲಿಕೆ.
(ಮೂಲ: ಎಕ್ಸ್ /ಎನ್‌ಡಿಟಿವಿ/ ಸ್ಕ್ರೀನ್‌ಶಾಟ್‌ಗಳು)
ಮೇಲಿನ ಪುರಾವೆಗಳು ವೈರಲ್ ವೀಡಿಯೋಗಳು ಮುಂಬೈನಿಂದ ಬಂದಿಲ್ಲ ಮತ್ತು ಜನವರಿ ೨೦೨೪ ರಲ್ಲಿ ಮೀರಾ ರೋಡ್‌ನಲ್ಲಿನ ಸಂಘರ್ಷಣೆಗೆ ಸಂಬಂಧಿಸಿಲ್ಲ ಎಂದು ಸ್ಥಾಪಿಸುತ್ತದೆ. ಇವೆರಡೂ ಹಳೆಯದಾಗಿದ್ದು ಮತ್ತು ಒಟ್ಟಾರೆಯಾಗಿ ಎರಡು ವಿಭಿನ್ನ ಸ್ಥಳಗಳಿಂದ ಬಂದಿವೆ.
ತೀರ್ಪು
೨೦೨೨ರ ಹೈದರಾಬಾದ್ ಮತ್ತು ಸಹರಾನ್‌ಪುರದಲ್ಲಿ ಪೊಲೀಸ್ ಕ್ರಮಗಳನ್ನು ಚಿತ್ರಿಸುವ ಹಳೆಯ ವೀಡಿಯೋಗಳನ್ನು ಮುಂಬೈನ ಮೀರಾ ರೋಡ್‌ನಲ್ಲಿನ ಇತ್ತೀಚಿನ ಅಶಾಂತಿಯೊಂದಿಗೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ. ಈ ವೀಡಿಯೋಗಳು ಹಳೆಯದಾಗಿವೆ ಮತ್ತು ಘಟನೆಗೆ ಸಂಬಂಧಿಸಿಲ್ಲ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.