ಮೂಲಕ: ರೋಹಿತ್ ಗುಟ್ಟಾ
ಅಕ್ಟೋಬರ್ 18 2023
ಸೆಪ್ಟೆಂಬರ್ ೨೦೨೩ ರಲ್ಲಿ ಉತ್ತರ ಪ್ರದೇಶದ ರಾಜ್ಯದ ಉಪಮುಖ್ಯಮಂತ್ರಿಯ ಬೆಂಗಾವಲು ಪಡೆ ಹಾದುಹೋದಾಗ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ.
ನಿರೂಪಣೆ ಏನು?
ಅಕ್ಟೋಬರ್ ೧೨ ರಂದು ಎಕ್ಸ್ (ಹಿಂದೆ ಟ್ವಿಟ್ಟರ್) ಬಳಕೆದಾರರು ಹಂಚಿಕೊಂಡ ಪೋಷ್ಟ್ ನಲ್ಲಿ ಟ್ರಾಫಿಕ್ ಪೋಲೀಸ್ ಕಾನ್‌ಸ್ಟೆಬಲ್ ಒಬ್ಬರು ಸೈಕಲ್‌ನಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಳ್ಳುತ್ತಿರುವುದನ್ನು ತೋರಿಸುತ್ತದೆ. ಈ ಘಟನೆಯು ಬೆಂಗಾವಲಿನ ಭಾಗವಾಗಿ ಸಾಗುತ್ತಿದ್ದ ವಾಹನಗಳ ನಡುವೆ ನಡೆದಿದೆ ಎಂದು ವೀಡಿಯೋ ತೋರಿದೆ. ವೀಡಿಯೋದಲ್ಲಿ ಕಂಡಂತೆ ಟ್ರಾಫಿಕ್ ಕಾನ್‌ಸ್ಟೆಬಲ್ ಸವಾರನನ್ನು ನಿಲ್ಲಿಸಿ ನಂತರ ಅವನ ಸೈಕಲ್ ಅನ್ನು ರಸ್ತೆಯಿಂದ ತಳ್ಳುತ್ತಾನೆ. ಇದರಿಂದ ಸವಾರನು ಕೆಳಗೆ ಬೀಳುವುದನ್ನು ನಾವು ನೋಡಬಹುದು.
ಆಂಧ್ರಪ್ರದೇಶ ರಾಜ್ಯ ಸರ್ಕಾರದ ಸಲಹೆಗಾರ್ತಿ ಸಜ್ಜಲಾ ರಾಮಕೃಷ್ಣ ರೆಡ್ಡಿ ಅವರ ಬೆಂಗಾವಲು ಪಡೆ ಹಾದುಹೋಗುತ್ತಿದ್ದಾಗ ಇದು ಸಂಭವಿಸಿದೆ ಮತ್ತು ಈ ವೀಡಿಯೋ "ಆಂಧ್ರಪ್ರದೇಶದ ಸರ್ಕಾರದ ಕೆಟ್ಟ ಆಡಳಿತಕ್ಕೆ ಉದಾಹರಣೆಯಾಗಿದೆ" ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ರೆಡ್ಡಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೂ ಹೌದು. ಪ್ರಕಟಣೆಯ ಸಮಯದಲ್ಲಿ ಪೋಷ್ಟ್ ೧೨,೦೦೦ ವೀಕ್ಷಣೆಗಳನ್ನು ಹೊಂದಿತ್ತು (ಇಲ್ಲಿ ಆರ್ಕೈವ್ ಮಾಡಲಾಗಿದೆ)
ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ವೀಡಿಯೋವನ್ನು ಆಂಧ್ರಪ್ರದೇಶದಲ್ಲ ಸೆರೆಹಿಡಿಯಲಾಗಿಲ್ಲ.
ವಾಸ್ತವಾಂಶಗಳು
ಪಂಜಾಬ್ ಕೇಸರಿಯ ವಾಟರ್‌ಮಾರ್ಕ್ ಅನ್ನು ವೀಡಿಯೋದಲ್ಲಿ ಸೇರಿಸಲಾಗಿದೆ. ಪಂಜಾಬ್ ಕೇಸರಿ ಒಂದು ಹಿಂದಿ ಪತ್ರಿಕೆಯಾಗಿದ್ದು ಅದು ಮುಖ್ಯವಾಗಿ ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ. ಕೀವರ್ಡ್ ಹುಡುಕಾಟವು ವಿವಿಧ ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು, ಅವುಗಳು ಈ ವೀಡಿಯೋ ಉತ್ತರ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ ಎಂದು ಸೂಚಿಸುತ್ತವೆ.
ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಅಡಿಯಲ್ಲಿರುವ ಹಿಂದಿ ಪತ್ರಿಕೆಯಾದ ಜನ್ ಸತ್ತಾ ಸೆಪ್ಟೆಂಬರ್ ೧, ೨೦೨೩ ರಂದು ವೀಡಿಯೋದ ಸ್ಕ್ರೀನ್‌ಶಾಟ್‌ಗಳೊಂದಿಗೆ ವರದಿಯನ್ನು ಪ್ರಕಟಿಸಿದೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿಯ ಬೆಂಗಾವಲು ಪಡೆ ಹಾದು ಹೋಗುತ್ತಿದ್ದಾಗ ಸೈಕಲ್ ಸವಾರನನ್ನು ಟ್ರಾಫಿಕ್ ಕಾನ್‌ಸ್ಟೆಬಲ್ ತಳ್ಳಿದ ಘಟನೆಯೆಂದು ವರದಿಯಾಗಿದೆ. ವರದಿಯು ಈ ಘಟನೆಯ ಸ್ಥಳವನ್ನು ಉತ್ತರ ಪ್ರದೇಶದ ಮೌ ಎಂಬ ಜಿಲ್ಲೆ ಎಂದು ಗುರುತಿಸಿದೆ. ಉತ್ತರ ಪ್ರದೇಶ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದಿದೆ. ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್. ಇದು ಯಾರ ಬೆಂಗಾವಲು ಪಡೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಲಿಲ್ಲ.
ವೀಡಿಯೋದಲ್ಲಿ ಟ್ರಾಫಿಕ್ ಕಾನ್ಸ್‌ಟೇಬಲ್ ಸವಾರನನ್ನು ದಾರಿಯಿಂದ ಹೊರಹೋಗುವಂತೆ ಹಿಂದಿಯಲ್ಲಿ ಕಿರುಚುವುದನ್ನು ನಾವು ಕೇಳಬಹುದು, ನಂತರ ಅವನು ಸೈಕಲ್ ಅನ್ನು ಪಕ್ಕದ ಹೊಲಗಳಿಗೆ ತಳ್ಳುವುದನ್ನು ಕಾಣಬಹುದು ಮತ್ತು ಇದರಿಂದಾಗಿ ವ್ಯಕ್ತಿ ಕೆಳಗೆ ಬಿದ್ದಿದ್ದನ್ನೂ ಸಹ ನಾವು ವೀಕ್ಷಿಸಬಹುದು.
ಕ್ವಿಂಟ್ ಹಿಂದಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಕೂಡ ಘಟನೆಯ ಬಗ್ಗೆ ವರದಿ ಮಾಡಿದೆ.
ಎರಡೂ ವೀಡಿಯೋಗಳಲ್ಲಿ ಹೋಲಿಕೆಗಳನ್ನು ಗಮನಿಸಬಹುದು, ಉದಾಹರಣೆಗೆ- ಬೆಂಗಾವಲು ಪಡೆ ಹಳದಿ ಬಣ್ಣದ ಆಟೋರಿಕ್ಷಾ ಹಳದಿ ಧ್ವಜಗಳನ್ನು ಹೊಂದಿದೆ ನೀರಿನ ಟ್ರಾಲಿ, ಟ್ರಾಫಿಕ್ ಕಾನ್‌ಸ್ಟೆಬಲ್ ಮತ್ತು ಸವಾರನನ್ನು ತೋರಿಸುತ್ತವೆ.
ವೈರಲ್ ವೀಡಿಯೋ ಮತ್ತು ಮೂಲ ವೀಡಿಯೋದ ಹೋಲಿಕೆ (ಮೂಲ: ಎಕ್ಸ್/ಜನ್ ಸತ್ತ/ಸ್ಕ್ರೀನ್‌ಶಾಟ್‌ಗಳು)
ಹಿಂದಿ ಸುದ್ದಿ ಪೋರ್ಟಲ್, ಒನ್ ಇಂಡಿಯಾ ಹಿಂದಿ, ಸೆಪ್ಟೆಂಬರ್ ೫, ೨೦೨೩ ಘೋಸಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ ಎಂದು ವರದಿ ಮಾಡಿದೆ.
ಉತ್ತರ ಪ್ರದೇಶದ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದ ವಕ್ತಾರರು ಸೆಪ್ಟೆಂಬರ್ ೧, ೨೦೨೩ ರಂದು ತಮ್ಮ ಎಕ್ಸ್ ಖಾತೆಯಲ್ಲಿ ಈ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತವು ಮೌ ಘೋಸಿಯ ಮತದಾರರನ್ನು ದೂರ ತಳ್ಳುತ್ತಿದೆ, ಆ ಮೂಲಕ ಪಾದಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ರಸ್ತೆಗಳಲ್ಲಿ ಸಂಚರಿಸಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಮನೋಜ್ ಸಿಂಗ್ ಅವರ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್)
ತೀರ್ಪು
ಉತ್ತರ ಪ್ರದೇಶದಲ್ಲಿ ಟ್ರಾಫಿಕ್ ಕಾನ್‌ಸ್ಟೆಬಲ್ ಒಬ್ಬರು ಸೈಕಲ್ ಸವಾರನೊಂದಿಗೆ ಅನುಚಿತವಾಗಿ ವರ್ತಿಸಿದ ವೀಡಿಯೋವನ್ನು ಆಂಧ್ರಪ್ರದೇಶದ ಘಟನೆ ಎಂದು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)