ಮುಖಪುಟ ಹಳೆಯ, ಸಂಬಂಧವಿಲ್ಲದ ಚಿತ್ರಗಳನ್ನು 'ಇರಾನ್ ಅಧ್ಯಕ್ಷ ರೈಸಿ ಅವರ ಹೆಲಿಕಾಪ್ಟರ್‌ನ ಅವಶೇಷಗಳು' ಎಂದು ಹಂಚಿಕೊಳ್ಳಲಾಗಿದೆ

ಹಳೆಯ, ಸಂಬಂಧವಿಲ್ಲದ ಚಿತ್ರಗಳನ್ನು 'ಇರಾನ್ ಅಧ್ಯಕ್ಷ ರೈಸಿ ಅವರ ಹೆಲಿಕಾಪ್ಟರ್‌ನ ಅವಶೇಷಗಳು' ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಮೇ 22 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಹಳೆಯ, ಸಂಬಂಧವಿಲ್ಲದ ಚಿತ್ರಗಳನ್ನು 'ಇರಾನ್ ಅಧ್ಯಕ್ಷ ರೈಸಿ ಅವರ ಹೆಲಿಕಾಪ್ಟರ್‌ನ ಅವಶೇಷಗಳು' ಎಂದು ಹಂಚಿಕೊಳ್ಳಲಾಗಿದೆ ಈ ಚಿತ್ರಗಳು ಇರಾನ್ ಅಧ್ಯಕ್ಷ ರೈಸಿ ಅವರ ಹೆಲಿಕಾಪ್ಟರ್‌ನ ಅವಶೇಷಗಳನ್ನು ತೋರಿಸುತ್ತವೆ ಎಂದು ಹೇಳುವ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೂರು ಚಿತ್ರಗಳು ೨೦೨೦ ರಲ್ಲಿ ಇರಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸೆರೆಹಿಡಿಯಲಾಗಿದ್ದು, ಇನ್ನೊಂದು ಚಿತ್ರವು ೨೦೧೯ ರಲ್ಲಿ ಮೊರಾಕೊದಲ್ಲಿ ಕಂಡುಬಂದದ್ದು.

ಹೇಳಿಕೆ ಏನು? 

ಮೇ ೧೯, ೨೦೨೪ ರಂದು ಪತನಗೊಂಡ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್‌ನ ಸುಟ್ಟ ಅವಶೇಷಗಳನ್ನು ಈ ಚಿತ್ರಗಳು ಬಿಂಬಿಸುತ್ತವೆ ಎಂದು ಹೇಳಿಕೊಂಡು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ರೈಸಿ, ಇರಾನ್‌ನ ವಿದೇಶಾಂಗ ಸಚಿವ ಹೊಸೈನ್ ಅಮಿರಬ್ದೊಲ್ಲಾಹಿಯಾನ್ ಮತ್ತು ಇತರ ಆರು ಪ್ರಯಾಣಿಕರು ಇರಾನ್-ಅಜೆರ್ಬೈಜಾನ್ ಗಡಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಕ್ಷಕರು ಸ್ಥಳದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ವೈರಲ್ ಚಿತ್ರಗಳನ್ನು ಹೊಂದಿರುವ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೈರಲ್ ಚಿತ್ರಗಳು ಹಳೆಯದಾಗಿದ್ದು, ರೈಸಿಯವರ ಸಾವಿಗೆ ಸಂಬಂಧವಿಲ್ಲ.

ವಾಸ್ತವಾಂಶಗಳೇನು?

ಈ ಚಿತ್ರಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅವು ರೈಸಿಯ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿಲ್ಲ ಎಂದು ತೋರಿಸಿದೆ.

ಚಿತ್ರ ೧

ಪೋಷ್ಟ್ ಗಳಲ್ಲಿ ( ಆರ್ಕೈವ್ ಇಲ್ಲಿ ಮತ್ತು ಇಲ್ಲಿ)  ರೈಸಿಯ ಹೆಲಿಕಾಪ್ಟರ್ ಅಪಘಾತದ ನಂತರ ಚಿತ್ರಿಸಲಾಗಿದೆ ಎಂದು ಹೇಳಿಕೊಂಡು ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದು ರೆಡ್ ಕ್ರೆಸೆಂಟ್ ಕೆಲಸಗಾರರು ಟಾರ್ಚ್‌ಗಳೊಂದಿಗೆ ಪ್ರದೇಶವನ್ನು ಪರಿಶೀಲಿಸುವುದನ್ನು ತೋರಿಸುತ್ತದೆ, ಇನ್ನೊಂದು ಹೆಲಿಕಾಪ್ಟರ್‌ನ ಬಾಲವನ್ನು '1136' ಎಂದು ಗುರುತಿಸಲಾಗಿದೆ ಮತ್ತು ಮೂರನೆಯದು, ವ್ಯಕ್ತಿಯನ್ನು ಹೆಲಿಕಾಪ್ಟರ್‌ನ ಬಾಲದ ಮುಂಭಾಗದಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಸೂಟ್ ಅನ್ನು ಧರಿಸಿರುವುದನ್ನು ತೋರಿಸುತ್ತದೆ. ನಿಯಮಿತವಾಗಿ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುವ ಖಾತೆಗಳಾದ ಮ್ಯಾಟ್ ವ್ಯಾಲೇಸ್ (@MattWallace888) ಮತ್ತು ಸುಲೈಮಾನ್ ಅಹ್ಮದ್ (@ShaykhSulaiman) ನಿಂದಲೂ ಈ ಕೆಲವು ವೈರಲ್ ಚಿತ್ರಗಳನ್ನು ಪ್ರಸಾರ ಮಾಡಲಾಗಿದೆ.

ಎಕ್ಸ್‌ನಲ್ಲಿ ಅಂತಹ ಒಂದು ಪೋಷ್ಟ್ ನೊಂದಿಗಿನ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಶೀರ್ಷಿಕೆಯು, "ಹೆಲಿಕಾಪ್ಟರ್‌ನ ಅಪಘಾತದ ಸ್ಥಳದ ಚಿತ್ರ. ಅಶುರಾ ಕಾರ್ಪ್ಸ್‌ನ ಕಮಾಂಡರ್: 'ದುರದೃಷ್ಟವಶಾತ್, ಕೆಲವು ಹುತಾತ್ಮರ ದೇಹಗಳು  ಸುಟ್ಟುಹೋಗಿವೆ ಮತ್ತು ಗುರುತಿಸಲು ಸಾಧ್ಯವಿಲ್ಲ,"  ಎಂದು ಹೇಳುತ್ತದೆ. ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವ ಸಮಯದಲ್ಲಿ ಪೋಷ್ಟ್ ೫೦೦,೦೦೦ ವೀಕ್ಷಣೆಗಳನ್ನು ಗಳಿಸಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ತನಿಖೆಯ ನಂತರ, ಎಲ್ಲಾ ಚಿತ್ರಗಳು ಏಪ್ರಿಲ್ ೨೦೨೦ ರ ಹಿಂದಿನದ್ದಾಗಿದ್ದು, ಅದು ಇರಾನ್‌ನ ಮಜಾಂದರನ್ ಪ್ರಾಂತ್ಯದಲ್ಲಿ ಪೊಲೀಸ್ ಪಡೆಯ ತರಬೇತಿ ವಿಮಾನ ಅಪಘಾತಕ್ಕೀಡಾದ ದೃಶ್ಯವನ್ನು ತೋರಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಏಪ್ರಿಲ್ ೨೦೨೦ ರಲ್ಲಿ ಇರಾನ್ ಸುದ್ದಿ ಸಂಸ್ಥೆಯಾದ ರೊಕ್ನಾ ಪ್ರೆಸ್‌ನ ವರದಿಯು ಈ ಚಿತ್ರಗಳನ್ನು ಒಳಗೊಂಡಿತ್ತು, ಮುತಲಾಕ್ ಪ್ರದೇಶದ ಬಳಿ ಬಿಶೆಹ್ ಕೊಲಾಹ್‌ನಿಂದ ತೆಹೆರಾನ್ ಗೆ ಹಾರುತ್ತಿದ್ದ ನಜಾ ತರಬೇತಿ ವಿಮಾನದ ಅಪಘಾತವನ್ನು ವಿವರಿಸುತ್ತದೆ. ಅಪಘಾತದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದು, ಅರಣ್ಯದಲ್ಲಿ ಅವಶೇಷಗಳು ಪತ್ತೆಮಾಡಲಾಗಿತ್ತು.

ಮತ್ತೊಂದು ಸ್ಥಳೀಯ ಮಾಧ್ಯಮ, ಅಮೋಲ್‌ನ್ಯೂಸ್, ಘಟನೆಯ ಕುರಿತು ವರದಿ ಮಾಡಿದೆ. ಅದು  ಹೆಲಿಕಾಪ್ಟರ್ ಬಾಲದ ಚಿತ್ರವನ್ನು ಹೊಂದಿದೆ. ಅದರ ಮೇಲೆಯೂ ಸಹ ವೈರಲ್ ಚಿತ್ರದಲ್ಲಿ ನೋಡಿದ ಹಾಗೆ, ಸಂಖ್ಯೆ "1136" ಅನ್ನು ಗುರುತಿಸಬಹುದು. ಮೃತರನ್ನು ಮೇಜರ್ ಪೈಲಟ್ ಅಲಿ ಈದಿ ಮತ್ತು ಕ್ಯಾಪ್ಟನ್ ಪೈಲಟ್ ಅಲಿ ಇಸ್ಲಾಮಿ ಎಂದು ವರದಿ ಗುರುತಿಸಿದೆ.

ಈ ಮೂರು ಚಿತ್ರಗಳು ಏಪ್ರಿಲ್ ೨೨, ೨೦೨೦ ರಂದು ಇರಾನ್‌ನ ರೆಡ್ ಕ್ರೆಸೆಂಟ್ ಸೊಸೈಟಿಯಿಂದ ಎಕ್ಸ್ ನಲ್ಲಿ ಹಂಚಿಕೊಂಡ ಪೋಷ್ಟ್ ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಅಪಘಾತದ ಸ್ಥಳವನ್ನು ಮಜಂದರನ್ ಪ್ರಾಂತ್ಯ ಎಂದು ಅಂಗೀಕರಿಸಲಾಗಿದೆ. ರೆಡ್ ಕ್ರೆಸೆಂಟ್ ಸರ್ಕಾರೇತರ ಮಾನವೀಯ ಆಂದೋಲನವಾಗಿದ್ದು, ವಿಪತ್ತುಗಳು ಮತ್ತು ಬಿಕ್ಕಟ್ಟುಗಳ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ಸ್ವಯಂಸೇವಕರನ್ನು ಹೊಂದಿದೆ.

ಚಿತ್ರ ೨

ಇದೇ ರೀತಿ ಮತ್ತೊಂದು ಚಿತ್ರವು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೆಲಿಕಾಪ್ಟರ್‌ನ ತಲೆಯ ಅವಶೇಷಗಳನ್ನು ಚಿತ್ರಿಸುತ್ತದೆ, ಜೊತೆಗೆ ಪರ್ಷಿಯನ್ ಪಠ್ಯವನ್ನು ಹೊಂದಿದೆ, ಅದನ್ನು ಅನುವಾದಿಸಿದಾಗ, "ಸಯದ್ ಇಬ್ರಾಹಿಂ ರೈಸಿ ವಿಮಾನದ ಅವಶೇಷಗಳು ಕಂಡುಬಂದಿವೆ," ಎಂದು ಹೇಳುತ್ತದೆ.  ಈ ಪೋಷ್ಟ್ ಎಕ್ಸ್ ನಲ್ಲಿ ೪೮೦,೦೦೦ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಇದೇ ರೀತಿಯ ಆರ್ಕೈವ್ ಮಾಡಿದ ಪೋಷ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಚಿತ್ರವು ರೈಸಿಯ ಮಾರಣಾಂತಿಕ ಹೆಲಿಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿಲ್ಲ ಮತ್ತು ೨೦೧೯ ರಲ್ಲಿ ಮೊರಾಕೊದಲ್ಲಿ ಸೆರೆಹಿಡಿಯಲಾಗಿದೆ. ಸೆಪ್ಟೆಂಬರ್ ೬, ೨೦೧೯ ರಂದು ಸ್ಥಳೀಯ ಮಾಧ್ಯಮ ಸಂಸ್ಥೆ ಮೊರಾಕೊ ವರ್ಲ್ಡ್ ನ್ಯೂಸ್‌ನ ವರದಿಯು ಮೊರಾಕೊದ ಅಸ್ಸಿಲಾಹ್ ಬಳಿಯ ಸಬ್ತ್ ಅಲ್-ಜಿನಾತ್‌ನಲ್ಲಿ ಕೊಕೇನ್ ಸಾಗಿಸುತ್ತಿದ್ದ ವಿಮಾನದ ಅಪಘಾತವನ್ನು ಸೂಚಿಸುವ ಒಂದೇ ರೀತಿಯ ಚಿತ್ರವನ್ನು ಒಳಗೊಂಡಿದೆ. 

ಸೆಪ್ಟೆಂಬರ್ ೮, ೨೦೧೯ ರಂದು ಬಾಲ್ಡಿ.ನೆಟ್ ಪ್ರಕಟಿಸಿದ ವರದಿಯು ಈಗ ವೈರಲ್ ಚಿತ್ರವನ್ನು ಒಳಗೊಂಡಿದೆ. ಅಪಘಾತದ ಕಾರಣಗಳು ಸ್ಪಷ್ಟವಾಗಿಲ್ಲ ಮತ್ತು ತನಿಖೆ ನಡೆಸಲಾಗುವುದು ಎಂದು ಅದು ಹೇಳಿದೆ.

ಇದಲ್ಲದೆ, ರೈಸಿಯ ಹೆಲಿಕಾಪ್ಟರ್ ಅಪಘಾತದ ನೈಜ ಸೈಟ್‌ನಿಂದ ರಾಯಿಟರ್ಸ್ ಮತ್ತು ಎನ್‌ಬಿಸಿ ನ್ಯೂಸ್ ಇಲ್ಲಿ ಮತ್ತು ಇಲ್ಲಿ ದಾಖಲಿಸಿರುವ ಚಿತ್ರಗಳು ಮತ್ತು ದೃಶ್ಯಗಳು ವೈರಲ್ ಛಾಯಾಚಿತ್ರಗಳಗೆ ಹೊಂದಿಕೆಯಾಗುವುದಿಲ್ಲ.

ಮೇಲಿನ ಸಾಕ್ಷ್ಯವು ವೈರಲ್ ಚಿತ್ರಗಳು ಹಳೆಯದಾಗಿದೆ ಮತ್ತು ರೈಸಿಯ ಹೆಲಿಕಾಪ್ಟರ್ ಅಪಘಾತದ ನಂತರದ ಪರಿಣಾಮಗಳನ್ನು ಚಿತ್ರಿಸುವುದಿಲ್ಲ ಎಂದು ನಿಸ್ಸಂದಿಗ್ಧವಾಗಿ ಸ್ಥಾಪಿಸುತ್ತದೆ.

ತೀರ್ಪು

೨೦೧೯ ಮತ್ತು ೨೦೨೦ ರ ಹಳೆಯ, ಸಂಬಂಧವಿಲ್ಲದ ಚಿತ್ರಗಳನ್ನು ಇರಾನ್ ಅಧ್ಯಕ್ಷ ರೈಸಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್‌ನ ಅವಶೇಷಗಳನ್ನು ಚಿತ್ರಿಸಲಾಗಿದೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ