ಮೂಲಕ: ಉಮ್ಮೆ ಕುಲ್ಸುಮ್
ಅಕ್ಟೋಬರ್ 5 2023
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಘೋಷಣೆಗಳನ್ನು ಡಿಜಿಟಲ್ ಮ್ಯಾನಿಪ್ಯುಲೇಷನ್ ಮೂಲಕ ವೀಡಿಯೋವಿಗೆ ಸೇರಿಸಲಾಗಿದೆ.
ಇಲ್ಲಿನ ಹೇಳಿಕೆಯೇನು?
ಉತ್ತರ ಭಾರತದ ರಾಜ್ಯವಾದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಘೋಷಣೆಗಳು ಗೆಹ್ಲೋಟ್ ಅವರ ರಾಲಿಯಲ್ಲಿ ಕೇಳಿಬಂತು ಎಂದು ಹೇಳಲಾಗಿದೆ. ಈ ವೀಡಿಯೋ ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನ ಹಂಚಿಕೊಳ್ಳಲಾಗಿದ್ದು, ಅಲ್ಲಿ ಗೆಹ್ಲೋಟ್ ಅವರ ಕಾಂಗ್ರೆಸ್ ಪಕ್ಷ ಮತ್ತು ಮೋದಿಯವರ ಭಾರತೀಯ ಜನತಾ ಪಕ್ಷ (ಬಿಜೆಪಿ), ಸರ್ಕಾರವನ್ನು ರಚಿಸಲು ಹೋರಾಡುತ್ತಿವೆ.
ಜನಸಮೂಹವು 'ಮೋದಿ-ಮೋದಿ' ಘೋಷಣೆಗಳನ್ನು ಎತ್ತುತ್ತಿರುವಾಗ ಗೆಹ್ಲೋಟ್ ವೇದಿಕೆಯಿಂದ ಜನಸಮೂಹದತ್ತ ಕೈ ಬೀಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಕ್ಲಿಪ್‌ನಲ್ಲಿ ಸುಮಾರು ೧೫ ಸೆಕೆಂಡುಗಳಲ್ಲಿ, ಫ್ರೇಮ್ ಒಂದು ವೇದಿಕೆಯ ಲಾಂಗ್ ಶಾಟ್‌ಗೆ ಬದಲಾಗುತ್ತದೆ, ಅಲ್ಲಿ ಒಬ್ಬ ವ್ಯಕ್ತಿಯು ದಿವಂಗತ ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸಿಎಂ ಗೆಹ್ಲೋಟ್‌ಗಾಗಿ ಘೋಷಣೆಗಳನ್ನು ಎತ್ತುವಂತೆ ಜನರನ್ನು ಒತ್ತಾಯಿಸುವುದನ್ನು ಕಾಣಬಹುದು.
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ವೀಡಿಯೋವನ್ನು ಹಂಚಿಕೊಳ್ಳುತ್ತಾ, ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹೀಗೆ ಬರೆದಿದ್ದಾರೆ, “नेता जी बोल रहें है दो नारों के अलावा तीसरा नारा कोई नहीं लगाएगा पर #राजस्थान की जनता मानती ही नहीं। (ಎರಡು ಘೋಷಣೆಗಳನ್ನು ಹೊರತುಪಡಿಸಿ, ಯಾರೂ ಮೂರನೇ ಘೋಷಣೆಯನ್ನು ಎತ್ತುವುದಿಲ್ಲ ಎಂದು ರಾಜಕೀಯ ಮುಖಂಡರು ಹೇಳುತ್ತಿದ್ದಾರೆ, ಆದರೆ #ರಾಜಸ್ಥಾನದ ಜನರು ಒಪ್ಪುವುದಿಲ್ಲ(ಕನ್ನಡಕ್ಕೆ ಅನುವಾದಿಸಿದಾಗ))." ಪೋಷ್ಟ್ ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ವೀಕ್ಷಿಸಬಹುದು.
ಇದೇ ರೀತಿಯ ನಿರೂಪಣೆಯೊಂದಿಗೆ ಫೇಸ್‌ಬುಕ್‌ನಲ್ಲಿ ವೀಡಿಯೋ ವೈರಲ್ ಆಗಿದೆ. ಅಂತಹ ಪೋಷ್ಟ್ ಒಂದರ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಆನ್‌ಲೈನ್‌ನಲ್ಲಿ ಮಾಡಿದ ತಪ್ಪು ಹೇಳಿಕೆಗಳನ್ನು ಹೊಂದಿರುವ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಆದರೆ, ವೈರಲ್ ಕ್ಲಿಪ್‌ಗೆ ಮೋದಿ ಪರ ಘೋಷಣೆಗಳನ್ನು ಡಿಜಿಟಲ್ ಆಗಿ ಸೇರಿಸಲಾಗಿದೆ.
ನಾವು ಕಂಡುಹಿಡಿದದ್ದೇನು?
ಲಾಜಿಕಲಿ ಫ್ಯಾಕ್ಟ್ಸ್ ನ ಸಂಶೋಧನೆಯು ತಪ್ಪು ನಿರೂಪಣೆಯನ್ನು ಹರಡಲು ವಿವಿಧ ಕ್ರೀಡಾಕೂಟಗಳ ಎರಡು ವೀಡಿಯೋಗಳ ತುಣುಕುಗಳನ್ನು ಒಟ್ಟಿಗೆ ಸೇರಿಸಲಾಗಿದೆ ಎಂದು ಕಂಡುಹಿಡಿದಿದೆ. ಹೆಚ್ಚುವರಿಯಾಗಿ, ಸಿಎಂ ಗೆಹ್ಲೋಟ್ ಜನಸಮೂಹದತ್ತ ಕೈಬೀಸುತ್ತಿರುವುದನ್ನು ನೋಡಿದ ವೀಡಿಯೋವಿಗೆ ಪಿಎಂ ಮೋದಿಯನ್ನು ಬೆಂಬಲಿಸುವ ಘೋಷಣೆಗಳ ಆಡಿಯೊವನ್ನು ಡಿಜಿಟಲ್ ಆಗಿ ಸೇರಿಸಲಾಗಿದೆ.
ಜನಸಮೂಹವು ಮೋದಿ ಪರ ಘೋಷಣೆಗಳನ್ನು ಕೂಗುತ್ತಿರುವುದಾಗಿ ತೋರಿಸುವ ವೀಡಿಯೋ
ಮೂಲ ವೀಡಿಯೋವನ್ನು ಗೆಹ್ಲೋಟ್ ಅವರು ತಮ್ಮ ಅಧಿಕೃತ ಎಕ್ಸ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಸೆಪ್ಟೆಂಬರ್ ೧೩ ರಂದು ಹಂಚಿಕೊಂಡಿದ್ದರು ಎಂದು ನಾವು ಕಂಡುಕೊಂಡಿದ್ದೇವೆ. ವೀಡಿಯೋ ಕ್ಲಿಪ್ ನ ಶೀರ್ಷಿಕೆ ಹೀಗಿದೆ, “मंत्री श्री राजेन्द्र यादव के साथ राजीव गांधी ग्रामीण ओलंपिक खेलों के ब्लॉक स्तरीय आयोजन में शामिल होने नावां, नागौर पहुंचेI (ಸಚಿವ ರಾಜೇಂದ್ರ ಯಾದವ್ ಅವರೊಂದಿಗೆ, ನಾನು ರಾಜೀವ್ ಗಾಂಧಿ ಗ್ರಾಮೀಣ್ ಒಲಿಂಪಿಕ್ ಖೇಲ್ ೨೦೨೨ ರಲ್ಲಿ ಪಾಲ್ಗೊಳ್ಳಲು ನವಾನ್, ನಾಗೌರ್‌ಗೆ ಭೇಟಿ ನೀಡಿದ್ದೇನೆ)." ಈ ದೃಶ್ಯಾವಳಿಯಲ್ಲಿ ಯಾವುದೇ ‘ಮೋದಿ-ಮೋದಿ’ ಘೋಷಣೆಗಳು ಕೇಳಿಬರುವುದಿಲ್ಲ.
ಸೆಪ್ಟೆಂಬರ್ ೨೦೨೨ ರಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಪೋಷ್ಟ್ ಮಾಡಿದ ವೀಡಿಯೋವಿನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/@ashokgehlot51)
ಸೆಪ್ಟೆಂಬರ್ ೨೦೨೨ ರಲ್ಲಿ ರಾಜಸ್ಥಾನದ ನವನ್‌ನಲ್ಲಿ ನಡೆದ ಬ್ಲಾಕ್-ಲೆವೆಲ್ ರಾಜೀವ್ ಗಾಂಧಿ ಗ್ರಾಮೀಣ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆಹ್ಲೋಟ್ ಭಾಗವಹಿಸಿದಾಗ ಮೋದಿ ಘೋಷಣೆಗಳನ್ನು ಎತ್ತಲಾಗಿದೆಯೇ ಎಂದು ಪರಿಶೀಲಿಸಲು ನಾವು ಸುದ್ದಿ ವರದಿಗಳನ್ನು ನೋಡಿದ್ದೇವೆ. ಆದರೆ, ಅಂತಹ ಘಟನೆಯ ಬಗ್ಗೆ ಯಾವುದೇ ಸುದ್ದಿ ವರದಿಗಳನ್ನು ನಾವು ಕಾಣಲಿಲ್ಲ. ಆದ್ದರಿಂದ, ಪ್ರಧಾನಿ ಮೋದಿಯನ್ನು ಬೆಂಬಲಿಸುವ ಘೋಷಣೆಗಳ ಆಡಿಯೊ ಕ್ಲಿಪ್ ಅನ್ನು ಉದ್ದೇಶಪೂರ್ವಕವಾಗಿ ಮೂಲ ಕ್ಲಿಪ್‌ಗೆ ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ರಾಜೀವ್ ಗಾಂಧಿ ಮತ್ತು ಗೆಹ್ಲೋಟ್ ಅವರ ಹೆಸರಲ್ಲಿ ಘೋಷಣೆಗಳನ್ನು ಕೂಗಲು ಪ್ರೇಕ್ಷಕರನ್ನು ಕೇಳುವ ವ್ಯಕ್ತಿ?ವೈರಲ್ ವೀಡಿಯೋದಲ್ಲಿನ ಎರಡನೇ ಕ್ಲಿಪ್‌ನಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಅದು ನ್ಯೂಸ್ ೧೮ ಹಿಂದಿಯ ವರದಿಗೆ ನಮ್ಮನ್ನು ಕರೆದೊಯ್ಯಿತು. ಹಿಂದಿಯಲ್ಲಿರುವ ಈ ಸುದ್ದಿವರದಿಯ ಶೀರ್ಷಿಕೆ, “ವೀಡಿಯೊ: गहलोत के कार्यक्रम से पहले सलाहकार नागर की भीड़ को धमकी, कहा- केवल 2 ही नारे लगाने और ताली बजानी है (ಗೆಹ್ಲೋಟ್ ಅವರ ಕಾರ್ಯಕ್ರಮಕ್ಕೂ ಮುನ್ನ, ಸಲಹೆಗಾರನಿಂದ ನಗರ್ ಗುಂಪನ್ನು ಬೆದರಿಸಲಾಯಿತು. ಅವರು ಹೇಳಿದರು- ಕೇವಲ ೨ ಘೋಷಣೆಗಳನ್ನು ಎತ್ತಬೇಕು ಮತ್ತು ಚಪ್ಪಾಳೆ ತಟ್ಟಬೇಕು,)" ಎಂದು ಹೇಳುತ್ತದೆ. ಕ್ಲಿಪ್‌ನ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ ಈ ವರದಿಯು, ಸೆಪ್ಟೆಂಬರ್ ೧೩, ೨೦೨೨ ರಂದು, ರಾಜಸ್ಥಾನದ ದಾದುದಲ್ಲಿ ನಡೆದ ಗ್ರಾಮೀಣ ಒಲಿಂಪಿಕ್ ಕ್ರೀಡಾಕೂಟದ ಸಂದರ್ಭದಲ್ಲಿ, ಗೆಹ್ಲೋಟ್‌ರ ಸಲಹೆಗಾರರು ಕಾರ್ಯಕ್ರಮಕ್ಕೆ ಸ್ವಲ್ಪ ಮೊದಲು ಪ್ರೇಕ್ಷಕರನ್ನು ಉದ್ದೇಶಿಸಿ ಮತ್ತು ಭಾಗವಹಿಸಿದವರಿಗೆ ಕೇವಲ ರಾಜೀವ್ ಗಾಂಧೀಜಿ ಮತ್ತು ರಾಜಸ್ಥಾನ ಸಿಎಂಗಾಗಿ ಘೋಷಣೆಗಳನ್ನು ಕೂಗುವಂತೆ ಕೇಳಿಕೊಂಡರು.
ಈ ನ್ಯೂಸ್ ೧೮ ಹಿಂದಿ ವೀಡಿಯೋದಿಂದ ಸುಳಿವನ್ನು ತೆಗೆದುಕೊಂಡು, ನಾವು ಹೆಚ್ಚುವರಿ ಮಾಧ್ಯಮ ಪ್ರಸಾರಕ್ಕಾಗಿ ಹುಡುಕಿದಾಗ ಈ ಘಟನೆಯನ್ನು ಒಳಗೊಂಡ ಹಲವಾರು ಸುದ್ದಿ ವರದಿಗಳು ಕಂಡುಬಂದವು. ದಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸಿಎಂ ಗೆಹ್ಲೋಟ್ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಮೊದಲು, ಬಾಬುಲಾಲ್ ನಗರ್ ಸಾರ್ವಜನಿಕರಿಗೆ ಬೆದರಿಕೆ ಹಾಕಿದರು ಮತ್ತು "ಕೇವಲ ೨ ಘೋಷಣೆಗಳನ್ನು ಮಾತ್ರ ಎತ್ತಿ- 'ರಾಜೀವ್ ಗಾಂಧಿ ಅಮರ್ ರಹೇ' ಮತ್ತು 'ಅಶೋಕ್ ಗೆಹ್ಲೋಟ್ ಜಿಂದಾಬಾದ್' ಎಂದು ಹೇಳಿದರು. ಬೇರೆ ಯಾವುದೇ ಘೋಷಣೆ ಕೂಗಿದರೆ, ಪೊಲೀಸರು ನಿಮ್ಮನ್ನು ಕಂಬಿ ಹಿಂದೆ ಹಾಕುತ್ತಾರೆ ಮತ್ತು ಪ್ರಕರಣ ದಾಖಲಿಸುತ್ತಾರೆ," ಎಂದು ವರದಿ ಮಾಡಿದೆ. ಸುದ್ದಿ ಸಂಸ್ಥೆ ಏಎನ್ಐ ಗೆ ಕ್ರೆಡಿಟ್ ನೀಡಿಕೊಂಡು, ಟೈಮ್ಸ್ ಆಫ್ ಇಂಡಿಯಾ ವೈರಲ್ ವೀಡಿಯೋದಲ್ಲಿ ಕಂಡುಬಂದಿರುವ ಎರಡನೆಯ ಕ್ಲಿಪ್ ಅನ್ನು ಹಂಚಿಕೊಂಡಿದೆ.
ಟೈಮ್ಸ್ ಆಫ್ ಇಂಡಿಯಾ ಸುದ್ದಿ ವರದಿಯಿಂದ ವೀಡಿಯೋ ಕ್ಲಿಪ್‌ನ ಸ್ಕ್ರೀನ್‌ಶಾಟ್. (ಮೂಲ: ಟೈಮ್ಸ್ ಆಫ್ ಇಂಡಿಯಾ)
ನ್ಯೂಸ್ ೧೮ ಹಿಂದಿ ಪ್ರಕಾರ, ಸೆಪ್ಟೆಂಬರ್ ೧೩, ೨೦೨೨ ರಂದು, ಅಶೋಕ್ ಗೆಹ್ಲೋಟ್ ಎರಡು ಗ್ರಾಮೀಣ ಒಲಿಂಪಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಒಂದು ನವನ್ ಮತ್ತು ಇನ್ನೊಂದು ದಾದು ಎಂಬಲ್ಲಿ ನಡೆದ ಎರಡು ವಿಭಿನ್ನ ಸ್ಪರ್ಧೆಗಳು. ವೈರಲ್ ವೀಡಿಯೋವಿನಲ್ಲಿ ಈ ಎರಡು ಸ್ಥಳಗಳ ದೃಶ್ಯಗಳನ್ನೂ ಎಡಿಟ್ ಮಾಡಿ ಸೇರಿಸಲಾಗಿದೆ.
ತೀರ್ಪು
ಒಂದೇ ದಿನ ರಾಜಸ್ಥಾನದಲ್ಲಿ ನಡೆದ ಎರಡು ಕಾರ್ಯಕ್ರಮಗಳ ವಿಭಿನ್ನ ತುಣುಕುಗಳನ್ನು ಒಟ್ಟಿಗೆ ಕ್ಲಿಪ್ ಮಾಡಿ ತಪ್ಪು ನಿರೂಪಣೆಯನ್ನು ಹರಡಲಾಗಿದೆ. ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಘೋಷಣೆಗಳನ್ನು ಒಳಗೊಂಡ ಮೊದಲ ವೀಡಿಯೋವನ್ನು ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ.
(ಅನುವಾದಿಸಿದವರು: ವಿವೇಕ್.ಜೆ)