ಮೂಲಕ: ಅಂಕಿತಾ ಕುಲಕರ್ಣಿ
ಮೇ 27 2024
ಈ ಪೇಂಟಿಂಗ್ 'ಮಡೋನಾ ಒರಿಫ್ಲಾಮಾ' ಎಂದು ಹೆಸರಿಸಲಾದ ರಷ್ಯಾದ ಕಲಾವಿದ ನಿಕೋಲಸ್ ರೋರಿಚ್ ಅವರು ಚಿತ್ರೀಕರಿಸಿದ್ದು.
ಹೇಳಿಕೆ ಏನು?
ನಡೆಯುತ್ತಿರುವ ಲೋಕಸಭೆ ಚುನಾವಣೆಯ ಆರನೇ ಹಂತದಲ್ಲಿ ನವದೆಹಲಿಯಲ್ಲಿ ಮತ ಚಲಾಯಿಸಿದ ನಂತರ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ತಮ್ಮ ಶಾಯಿಯ ಬೆರಳುಗಳನ್ನು ತೋರಿಸುತ್ತಿರುವ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಹಿನ್ನೆಲೆಯಲ್ಲಿ ಕಾಣುವ ಚಿತ್ರಕಲೆ ಯೇಸುಕ್ರಿಸ್ತನನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಚೌಕಟ್ಟಿನೊಳಗಿನ ಚಿತ್ರವು ಬಿಳಿ ಬಣ್ಣದ ಬ್ಯಾನರ್ ಅನ್ನು ಹಿಡಿದಿರುವ ವ್ಯಕ್ತಿಯನ್ನು ತೋರಿಸುತ್ತದೆ ಹಾಗು ಅದರ ಮೇಲೆ ವೃತ್ತದೊಳಗೆ ಮೂರು ಕೆಂಪು ಚುಕ್ಕೆಗಳನ್ನು ನೋಡಬಹುದು.
ತಪ್ಪು ಮಾಹಿತಿಯನ್ನು ಹರಡಲು ಹೆಸರುವಾಸಿಯಾದ 'Mr Sinha' ಎಂಬ ಹೆಸರಿನ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಿಂದ ಹಂಚಿಕೊಂಡ ಅಂತಹ ಒಂದು ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೀಗೆ ಹೇಳುತ್ತದೆ, "ಜನೇಧಾರಿ ಬ್ರಾಹ್ಮಣ (ಹಿಂದೂ ಬ್ರಾಹ್ಮಣ ಮತ್ತು ಕ್ಷತ್ರಿಯ ಸಮುದಾಯಗಳು ಧರಿಸಿರುವ ಪವಿತ್ರ ದಾರ) ರಾಹುಲ್ ಗಾಂಧಿ ಅವರ ಕೋಣೆಯಲ್ಲಿ ಯೇಸುವಿನ ಚಿತ್ರವಿದೆ. ಕೋಣೆಯಲ್ಲಿ ಒಂದು ಹಿಂದೂ ದೇವರುಗಳ ಚಿತ್ರವಿಲ್ಲ." ಈ ಫ್ಯಾಕ್ಟ್- ಚೆಕ್ ಅನ್ನು ಬರೆಯುವ ಸಮಯದಲ್ಲಿ ಪೋಷ್ಟ್ ೧,೨೦೦,೦೦೦ ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಇತರ ಬಳಕೆದಾರರೂ ಸಹ ಇದೇ ರೀತಿಯ ಹೇಳಿಕೆಗಳೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಫೋಟೋ ಫ್ರೇಮ್ ಮಡೋನಾ ಒರಿಫ್ಲಾಮಾ ಎಂಬ ಪೇಂಟಿಂಗ್ ಅನ್ನು ತೋರಿಸುತ್ತದೆ, ಇದನ್ನು ರಷ್ಯಾದ ಕಲಾವಿದ ನಿಕೋಲಸ್ ರೋರಿಚ್ ಅವರು ರಚಿಸಿದ್ದು
ಸಂಸ್ಕೃತಿಯಲ್ಲಿ ಮಾನವ ಏಕತೆಯನ್ನು ಸಂಕೇತಿಸುತ್ತದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಹಿಡಿದಿದೆ.
ವಾಸ್ತವಾಂಶಗಳೇನು?
ಗಾಂಧಿಯವರ ವೈರಲ್ ಚಿತ್ರದ ಹಿಂದೆ ಗೋಚರಿಸುವ ಪೇಂಟಿಂಗ್‌ನ ರಿವರ್ಸ್ ಇಮೇಜ್ ಸರ್ಚ್, ಗೆಟ್ಟಿ ಇಮೇಜಸ್‌ನಲ್ಲಿ ಪೋಷ್ಟ್ ಮಾಡಲಾದ ಚಿತ್ರಕ್ಕೆ ನಮ್ಮನ್ನು ಕರೆದೊಯ್ಯಿತು ಮತ್ತು "ಮಡೋನಾ ಒರಿಫ್ಲಾಮಾ, ೧೯೩೨. ನ್ಯೂಯಾರ್ಕ್‌ನ ನಿಕೋಲಸ್ ರೋರಿಚ್ ಮ್ಯೂಸಿಯಂ ಸಂಗ್ರಹಣೆಯಲ್ಲಿ ಕಂಡುಬಂದಿದೆ" ಎಂದು ಶೀರ್ಷಿಕೆ ಹೇಳುತ್ತದೆ.
ವೈರಲ್ ಚಿತ್ರ ಮತ್ತು ನಿಕೋಲಸ್ ರೋರಿಚ್ ಅವರ ವರ್ಣಚಿತ್ರದ ನಡುವಿನ ಹೋಲಿಕೆ.
(ಮೂಲ: ಎಕ್ಸ್/ಗೆಟ್ಟಿ ಇಮ್ಯಾಜೆಸ್/ಸ್ಕ್ರೀನ್‌ಶಾಟ್)
ನಾವು ಕಲಾವಿದರ ವೆಬ್‌ಸೈಟ್ ಅನ್ನು ನೋಡಿದ್ದೇವೆ ಮತ್ತು ವರ್ಣಚಿತ್ರದ ವಿವರವಾದ ವಿವರಣೆಯನ್ನು ಕಂಡುಕೊಂಡಿದ್ದೇವೆ. ಬಿಳಿ ಹಿನ್ನೆಲೆಯಲ್ಲಿ ಮೂರು ಕೆಂಪು ಚುಕ್ಕೆಗಳು ಮತ್ತು ವೃತ್ತವನ್ನು ರೋರಿಚ್ ಅವರು "ಬ್ಯಾನರ್ ಆಫ್ ಪೀಸ್" ಎಂದು ಕರೆದಿದ್ದರು, ಸಂಸ್ಕೃತಿಯಲ್ಲಿ ಏಕತೆಯನ್ನು ಸಂಕೇತಿಸುತ್ತದೆ ಎಂದು ವೆಬ್‌ಸೈಟ್ ವಿವರಿಸಿದೆ. ಮೊದಲನೆಯ ಮಹಾಯುದ್ಧದಿಂದ ಉಂಟಾದ ವಿನಾಶದಿಂದ ಸೃಜನಶೀಲ ಚಟುವಟಿಕೆಗಳು, ವಿಶ್ವವಿದ್ಯಾನಿಲಯಗಳು, ಗ್ರಂಥಾಲಯಗಳು, ಆಸ್ಪತ್ರೆಗಳು, ಕನ್ಸರ್ಟ್ ಹಾಲ್‌ಗಳು ಮತ್ತು ಥಿಯೇಟರ್‌ಗಳನ್ನು ಸಂರಕ್ಷಿಸಲು ಬ್ಯಾನರ್ ಆಫ್ ಪೀಸ್ ಅನ್ನು ಆರಂಭದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅದು ಉಲ್ಲೇಖಿಸಿದೆ.
ವೆಬ್‌ಸೈಟ್ ಪ್ರಕಾರ ರೋರಿಚ್ ವೃತ್ತವನ್ನು ಸಂಸ್ಕೃತಿಯ ಸಂಪೂರ್ಣತೆ ಮತ್ತು ಮೂರು ಚುಕ್ಕೆಗಳು- ಕಲೆ, ವಿಜ್ಞಾನ ಮತ್ತು ಧರ್ಮವನ್ನು ಸಂಕೇತಿಸುತ್ತದೆ ಎಂದು ವಿವರಿಸಿದ್ದರು. ೧೯೬೦ ರಿಂದ ನಿಕೋಲಸ್ ರೋರಿಚ್ ಮ್ಯೂಸಿಯಂಗೆ ಪೇಂಟಿಂಗ್ ಅನ್ನು ಲೋನ್ ಆಗಿ ನೀಡಲಾಗಿದೆ ಎಂದು ಅದು ಹೇಳುತ್ತದೆ.
ನಿಕೋಲಸ್ ರೋರಿಚ್ ಮ್ಯೂಸಿಯಂನ ಫೇಸ್‌ಬುಕ್ ಪುಟವು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಚಿತ್ರಕಲೆಯ ಛಾಯಾಚಿತ್ರವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ, “ಮೂರು ಚುಕ್ಕೆಗಳ ಚಿಹ್ನೆಯ ಅರ್ಥವೇನೆಂದು ಎಂದಾದರೂ ಆಶ್ಚರ್ಯಪಡುತ್ತೀರಾ? ಇದು ಈ ವರ್ಣಚಿತ್ರದಲ್ಲಿ ಕಾಣಿಸಿಕೊಳ್ಳುತ್ತದೆ, "ಮಡೋನಾ ಒರಿಫ್ಲಾಮಾ" (೧೯೩೨), ಮತ್ತು ರೋರಿಚ್ ಒಪ್ಪಂದ ಮತ್ತು ಶಾಂತಿಯ ಬ್ಯಾನರ್‌ನ ಸಂಕೇತವಾಗಿ."
ನ್ಯೂಯಾರ್ಕ್ ನಗರದ ನಿಕೋಲಸ್ ರೋರಿಚ್ ಮ್ಯೂಸಿಯಂ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್
(ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್)
ತೀರ್ಪು
ಗಾಂಧಿಯವರ ವೈರಲ್ ಚಿತ್ರದಲ್ಲಿರುವ ಪೇಂಟಿಂಗ್ ವಾಸ್ತವವಾಗಿ ಮಡೋನಾ ಒರಿಫ್ಲಾಮಾ ಎಂಬ ಚಿತ್ರಕಲೆಯಾಗಿದೆ, ಇದನ್ನು ಯೇಸುಕ್ರಿಸ್ತನ ಫೋಟೋ ಎಂದು ತಪ್ಪಾಗಿ ಗ್ರಹಿಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
Read this fact-check in English here.