ಮುಖಪುಟ ಇಲ್ಲ, ಬಾಂಗ್ಲಾದೇಶದಲ್ಲಿ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಿರುವುದನ್ನು ಈ ಚಿತ್ರ ತೋರಿಸುತ್ತಿಲ್ಲ

ಇಲ್ಲ, ಬಾಂಗ್ಲಾದೇಶದಲ್ಲಿ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಿರುವುದನ್ನು ಈ ಚಿತ್ರ ತೋರಿಸುತ್ತಿಲ್ಲ

ಮೂಲಕ: ಸೋಹಮ್ ಶಾ

ಆಗಸ್ಟ್ 7 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಬಾಂಗ್ಲಾದೇಶದಲ್ಲಿ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಿರುವುದನ್ನು ಈ ಚಿತ್ರ ತೋರಿಸುತ್ತಿಲ್ಲ ದೃಶ್ಯಗಳು ಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಗುಂಪೊಂದು ಬೆಂಕಿ ಹಚ್ಚುತ್ತಿರುವುದನ್ನು ತೋರಿಸುತ್ತದೆ ಎಂದು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ . (ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ಪೋಷ್ಟ್ ಗಳಲ್ಲಿ ಚಿತ್ರಿಸಲಾದ ಮನೆ ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಮತ್ತು ಅವಾಮಿ ಲೀಗ್ ರಾಜಕಾರಣಿ ಮಶ್ರಫೆ ಮೊರ್ತಜಾ ಅವರಿಗೆ ಸೇರಿದ್ದು, ಲಿಟನ್ ದಾಸ್ ಅಲ್ಲ.

ಹೇಳಿಕೆ ಏನು?

ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳುವ ಮೂಲಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಫೋಟೋಗಳು ಮತ್ತು ವೀಡಿಯೋಗಳನ್ನು ಒಳಗೊಂಡ ಹಲವಾರು ಪೋಷ್ಟ್ ಗಳನ್ನು ಹಂಚಿಕೊಳ್ಳಲಾಗಿದೆ. ಈ ಪೋಷ್ಟ್ ಗಳು “ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ” ಎಂಬ ಶೀರ್ಷಿಕೆಗಳನ್ನು ಒಳಗೊಂಡಿವೆ. ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ದೃಢೀಕರಿಸದ ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಪ್ರಕಟಿಸಲು ಹೆಸರುವಾಸಿಯಾದ ಭಾರತೀಯ ಸುದ್ದಿ ಸಂಸ್ಥೆ ಸುದರ್ಶನ್ ನ್ಯೂಸ್ ಕೂಡ ಈ ಹೇಳಿಕೆಯನ್ನು ಹಂಚಿಕೊಂಡಿದೆ.

ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳುವ ಹಲವಾರು ಫೇಸ್‌ಬುಕ್ ಪೋಷ್ಟ್ ಗಳು.
(ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆ ತಪ್ಪು ಎಂದು ನಾವು ಕಂಡುಕೊಂಡಿದ್ದೇವೆ; ಪ್ರಶ್ನೆಯಲ್ಲಿರುವ ಮನೆ ಲಿಟನ್ ದಾಸ್ ಅವರದ್ದಲ್ಲ.

ನಾವು ಕಂಡುಕೊಂಡಿದ್ದು ಏನು?

ಗೂಗಲ್ ಹುಡುಕಾಟವನ್ನು ಬಳಸಿಕೊಂಡು, ನಾವು ಆಗಸ್ಟ್ ೫, ೨೦೨೪ ರ ದಿನಾಂಕದ ಪ್ರೋಥೋಮ್ ಅಲೋ ಮತ್ತು ಬಾಂಗ್ಲಾವಿಷನ್ ನ್ಯೂಸ್‌ನಂತಹ ಸುದ್ದಿ ಸಂಸ್ಥೆಗಳಿಂದ ಹಲವಾರು ವೀಡಿಯೋ ವರದಿಗಳನ್ನು ಪತ್ತೆ ಮಾಡಿದ್ದೇವೆ. ಈ ಮನೆಯು ಮಾಜಿ ಕ್ರಿಕೆಟಿಗ ಮತ್ತು ಅವಾಮಿ ಲೀಗ್ ರಾಜಕಾರಣಿ ಮಶ್ರಫೆ ಮೊರ್ತಜಾ ಅವರಿಗೆ ಸೇರಿದ್ದು, ಲಿಟನ್ ದಾಸ್ ಅವರದಲ್ಲ ಎಂದು ಈ ವರದಿಗಳು ಸ್ಪಷ್ಟಪಡಿಸಿವೆ. ಪ್ರಥಮ್ ಅಲೋ ಅವರ ಶೀರ್ಷಿಕೆಯು, "ಮಶ್ರಫೆಯ ನರೈಲ್ ಮನೆ ಮೇಲೆ ದಾಳಿ ಮತ್ತು ಧ್ವಂಸಗೊಳಿಸಲಾಗಿದೆ" ಎಂದು ಹೇಳುತ್ತದೆ. ಆ ಸಮಯದಲ್ಲಿ, ಮಾಜಿ ಪ್ರಧಾನಿ ಹಸೀನಾ ನೇತೃತ್ವದ ಅವಾಮಿ ಲೀಗ್ ಬಾಂಗ್ಲಾದೇಶದ ಆಡಳಿತ ಪಕ್ಷವಾಗಿತ್ತು.

ಬಾಂಗ್ಲಾದೇಶದ ನರೈಲ್‌ನ ಗೂಗಲ್ ಸ್ಟ್ರೀಟ್ ವ್ಯೂ ಚಿತ್ರಗಳನ್ನು ಬಳಸಿಕೊಂಡು ಜಿಯೋಲೊಕೇಟ್ ಮಾಡುವ ಮೂಲಕ ವೈರಲ್ ವೀಡಿಯೋದಲ್ಲಿ ತೋರಿಸಿರುವ ಮನೆಯ ಸ್ಥಳವನ್ನು ನಾವು ಪರಿಶೀಲಿಸಿದ್ದೇವೆ. ಗೇಟ್‌ನ ಹಿಂದೆ ತ್ರಿಕೋನ ಕಮಾನು ಮತ್ತು ಮನೆಯ ಓರೆಯಾದ ಛಾವಣಿಯಂತಹ ಪ್ರಮುಖ ವೈಶಿಷ್ಟ್ಯಗಳು ವೈರಲ್ ದೃಶ್ಯಗಳಿಗೆ ಹೊಂದಿಕೆಯಾಗುತ್ತವೆ.

ವೈರಲ್ ದೃಶ್ಯಗಳು ಮತ್ತು ಗೂಗಲ್ ಸ್ಟ್ರೀಟ್ ವ್ಯೂ ಹೋಲಿಕೆ. (ಮೂಲ: ಎಕ್ಸ್, ಗೂಗಲ್ ಮ್ಯಾಪ್ಸ್.)

ಇದ್ದಲ್ಲದೆ, ಮನೆಯ ಹೊರಗೆ ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಗೋಚರಿಸುವ ಮೊರ್ತಜಾ ಅವರ ಭಾವಚಿತ್ರವು ಅದರ ಮಾಲೀಕತ್ವವನ್ನು ಮತ್ತಷ್ಟು ದೃಢೀಕರಿಸುತ್ತದೆ. ಮೊರ್ತಾಜಾ ಅವರ ನಿವಾಸಕ್ಕೆ ಈ ಹಿಂದೆ ಭೇಟಿ ನೀಡಿದ ವ್ಲಾಗರ್‌ಗಳು ನಮ್ಮ ಸಂಶೋಧನೆಗಳನ್ನು ಬೆಂಬಲಿಸುವ ಮೂಲಕ ಈ ಭಾವಚಿತ್ರವನ್ನು ಸಹ ರೆಕಾರ್ಡ್ ಮಾಡಿದ್ದಾರೆ.

ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಮಶ್ರಫೆ ಮೊರ್ತಾಜಾ ಅವರ ಭಾವಚಿತ್ರವು ಅವರ ಮನೆಯ ಹೊರಗೆ ಗೋಚರಿಸುತ್ತದೆ.
(ಮೂಲ: ಗೂಗಲ್ ನಕ್ಷೆಗಳು)

ಲಿಟನ್ ದಾಸ್ ಅವರ ಮನೆಯನ್ನು ಗುರಿಯಾಗಿಸಲಾಗಿದೆ ಎಂದು ಯಾವುದೇ ವಿಶ್ವಾಸಾರ್ಹ ವರದಿಗಳು ಸೂಚಿಸಿಲ್ಲ.

ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು

ಹಸೀನಾ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ೩೦ ಪ್ರತಿಶತದಷ್ಟು ಸರ್ಕಾರಿ ಉದ್ಯೋಗಗಳನ್ನು ಹಂಚಿಕೆ ಮಾಡುವ ಕೋಟಾ ವ್ಯವಸ್ಥೆಯ ವಿರುದ್ಧ ತಿಂಗಳ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ದೇಶವನ್ನು ತೊರೆದರು. ಪ್ರತಿಭಟನೆಗಳು ತೀವ್ರಗೊಂಡವು, ವಿರೋಧವನ್ನು ಹುಟ್ಟುಹಾಕಿದ ಕೆಳ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಲು ಕಾರಣವಾಯಿತು.

ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮದಿಂದ ಉಲ್ಬಣಗೊಂಡ ಅಶಾಂತಿ, ಅಂತಿಮವಾಗಿ ಹಸೀನಾ ಅವರ ಸರ್ಕಾರ ಮತ್ತು ಆಡಳಿತ ಪಕ್ಷಕ್ಕೆ ವಿಶಾಲ ಸವಾಲಾಗಿ ಪರಿಣಮಿಸಿತು. ನಂತರದ ಹಿಂಸಾಚಾರದಲ್ಲಿ ಕನಿಷ್ಠ ೩೦೦ ಜನರು ಸಾವನ್ನಪ್ಪಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

ಆಗಸ್ಟ್ ೫ ರಂದು ರಾಜೀನಾಮೆ ನೀಡಿದ ನಂತರ, ಹಸೀನಾ ಭಾರತಕ್ಕೆ ಬಂದಿಳಿದರು ಮತ್ತು ಪ್ರಸ್ತುತ ಸುರಕ್ಷಿತ ಸ್ಥಳದಲ್ಲಿದ್ದಾರೆ. ವರದಿಗಳು ಆಕೆ ಯು.ಕೆ.ಗೆ ಪ್ರಯಾಣಿಸಬಹುದೆಂದು ಸೂಚಿಸುತ್ತವೆ, ಅಲ್ಲಿ ಆಕೆಯ ಸಹೋದರಿ ಶೇಖ್ ರೆಹಾನಾ, ಬ್ರಿಟಿಷ್ ಪ್ರಜೆ ನೆಲೆಸಿದ್ದಾರೆ ಎಂದು ಹೇಳಲಾಗಿದೆ.

ಬಾಂಗ್ಲಾದೇಶದಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಮುಖ್ಯ ಸಲಹೆಗಾರರಾಗಿ ಮಧ್ಯಂತರ ಸರ್ಕಾರವನ್ನು ರಚಿಸುವುದಾಗಿ ಸೇನೆಯು ಘೋಷಿಸಿತು. ಒಂದು ದಿನದ ಉದ್ವಿಗ್ನತೆಯ ನಂತರ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಲು ರಾಜಕೀಯ ಪಕ್ಷಗಳಿಗೆ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಕರೆ ನೀಡಿದ್ದಾರೆ. ಆಗಸ್ಟ್ ೬ ರಂದು ಬೆಳಿಗ್ಗೆ ೬ ಗಂಟೆಗೆ ಕರ್ಫ್ಯೂ ಹಿಂತೆಗೆದುಕೊಳ್ಳಲಾಯಿತು, ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಕಾರ್ಯಾಚರಣೆಯನ್ನು ಪುನರಾರಂಭಿಸಲು ಅವಕಾಶ ನೀಡಲಾಯಿತು.

ತೀರ್ಪು

ವೈರಲ್ ವೀಡಿಯೋದಲ್ಲಿನ ದೃಶ್ಯಗಳು ಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿಯಿಡುವುದನ್ನು ಚಿತ್ರಿಸುವುದಿಲ್ಲ. ಪ್ರಶ್ನೆಯಲ್ಲಿರುವ ಮನೆ ಅವಾಮಿ ಲೀಗ್ ರಾಜಕಾರಣಿ ಮಶ್ರಫೆ ಮೊರ್ತಜಾ ಅವರಿಗೆ ಸೇರಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ