ಮೂಲಕ: ಮೊಹಮ್ಮದ್ ಸಲ್ಮಾನ್
ಸೆಪ್ಟೆಂಬರ್ 6 2023
ವೈರಲ್ ಚಿತ್ರವು ಇತ್ತೀಚಿನದ್ದಲ್ಲ. ಅದು ಜೂನ್ ೨೦೨೩ರಲ್ಲಿ ಲಂಡನ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ಸಮಯದಲ್ಲಿ ಸೆರೆಹಿಡಿಯಲಾಗಿತ್ತು.
ಇಲ್ಲಿರುವ ಹೇಳಿಕೆ ಏನು?
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯವು ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಸೆಪ್ಟೆಂಬರ್ ೨, ೨೦೨೩ ರಂದು ನಡೆಯಿತು, ಆದರೆ ಮಳೆಯಿಂದಾಗಿ ಅನಿರ್ದಿಷ್ಟವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಪಾಕಿಸ್ತಾನಕ್ಕೆ ೨೬೭ ರನ್‌ಗಳ ಗುರಿಯನ್ನು ನೀಡಿತು, ಆದರೆ ಸತತ ಮಳೆಯಿಂದಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಎಸೆತವನ್ನೂ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.
ಈಗ, ಈ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಪ್ರೇಕ್ಷಕರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬ್ಯಾನರ್ ಅನ್ನು ಹಿಡಿದಿರುವುದನ್ನು ಕಾಣಬಹುದು. ಎಕ್ಸ್ ನಲ್ಲಿ (ಹಿಂದೆ ಟ್ವಿಟರ್) ಈ ಚಿತ್ರವನ್ನು ಹಂಚಿಕೊಂಡ ಪೋಷ್ಟ್ ಒಂದರ ಶೀರ್ಷಿಕೆ, "ಕಾಂಗ್ರೆಸ್ ಬೆಂಬಲಿಗರು ತ್ರಿವರ್ಣ ಧ್ವಜದೊಂದಿಗೆ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಬಿಜೆಪಿ ಬಾವುಟ ಹಿಡಿದು ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಇದು ಸಿದ್ಧಾಂತದಲ್ಲಿನ ಸ್ಪಷ್ಟ ವ್ಯತ್ಯಾಸವನ್ನು ತೋರಿಸುತ್ತದೆ," ಎಂದು ಬರೆಯಲಾಗಿದೆ. ಈ ಪೋಷ್ಟ್ ೧೭,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ ಮತ್ತು ಈ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ.
ಆನ್‌ಲೈನ್‌ನಲ್ಲಿ ಕಂಡುಬಂದ ಪೋಷ್ಟ್ ಗಳು (ಮೂಲ: ಎಕ್ಸ್ , ಫೇಸ್‌ಬುಕ್/ ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್ ಇಂದ ಮಾರ್ಪಡಿಸಲಾಗಿದೆ)
ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದ ವೇಳೆ ಈ ಚಿತ್ರವನ್ನು ಸೆರೆಹಿಡಿಯಲಾಗಿಲ್ಲ. ವಾಸ್ತವವಾಗಿ, ಈ ವರ್ಷ ಜೂನ್‌ನಲ್ಲಿ ಲಂಡನ್‌ನ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ೨೦೨೩ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿತ್ತು.
ನಾವು ಕಂಡುಹಿಡಿದದ್ದು ಏನು?
ರಿವರ್ಸ್ ಇಮೇಜ್ ಸರ್ಚ್ ನ ಮುಖಾಂತರ ಜೂನ್ ೮, ೨೦೨೩ ರಂದು India.com ಪ್ರಕಟಿಸಿದ ವರದಿ ನಮಗೆ ಕಂಡುಬಂದಿದೆ. ಲಂಡನ್‌ನ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದ ಸಂದರ್ಭದಲ್ಲಿ ಪ್ರೇಕ್ಷಕರ ಗುಂಪೊಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಧ್ವಜವನ್ನು ಹಿಡಿದಿರುವುದು ಕಂಡುಬಂದ್ದಿತ್ತು ಎಂದು ವರದಿ ಹೇಳಿದೆ. ಆದರೆ, ಪ್ರೇಕ್ಷಕರ ಗುರುತು ಪತ್ತೆಯಾಗಿಲ್ಲ. ವೈರಲ್ ಪೋಷ್ಟ್ ಮತ್ತು India.com ವರದಿಯ ಹೋಲಿಕೆ ಇಲ್ಲಿದೆ.
ವೈರಲ್ ಪೋಷ್ಟ್ ಮತ್ತು ಜೂನ್ ೨೦೨೩ ರಿನ India.com ನ ವರದಿಯ ಹೋಲಿಕೆ (ಮೂಲ : ಎಕ್ಸ್ / India.com/ ಲಾಜಿಕಲಿ ಫ್ಯಾಕ್ಟ್ಸ್ ಇಂದ ಮಾರ್ಪಡಿಸಲಾಗಿದೆ)
ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು ಜೂನ್ ೭, ೨೦೨೩ ರಂದು ತಮ್ಮ ಎಕ್ಸ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.
ರಾಜದೀಪ್ ಸರ್ದೇಸಾಯಿ ಅವರ ಪೋಷ್ಟ್ ನ ಸ್ಕ್ರೀನ್‌ಗ್ರಾಬ್ (ಮೂಲ:ಎಕ್ಸ್/sardesairajdeep)
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಜೂನ್ ೭ ರಿಂದ ೧೧ ರವರೆಗೆ ಲಂಡನ್‌ನ ಓವಲ್ ಮೈದಾನದಲ್ಲಿ ನಡೆದಿರುವುದು ಗಮನಿಸಬೇಕಾದ ಸಂಗತಿ. ಆಸ್ಟ್ರೇಲಿಯಾ ಭಾರತವನ್ನು ೨೦೯ ರನ್‌ಗಳಿಂದ ಸೋಲಿಸಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.
ಧ್ವಜವನ್ನು ಹಿಡಿದಿರುವ ಜನರ ಗುರುತು ಮತ್ತು ಫೋಟೋ ಎಷ್ಟು ಹಳೆಯದು ಎಂಬುದನ್ನು ಸ್ವತಂತ್ರವಾಗಿ ಗುರುತಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ, ಇದು ಜೂನ್‌ನಲ್ಲಿ ವರದಿಯಾದ ಕಾರಣ, ಇದು ಇತ್ತೀಚಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯಕ್ಕೆ ಸಂಬಂಧವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ತೀರ್ಪು
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದ ಸಮಯದಲ್ಲಿ ಸೆರೆಹಿಡಿಯಲಾದ ಚಿತ್ರಣವು ಇತ್ತೀಚಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ ಎಂದು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
ಅನುವಾದಿಸಿದವರು: ಅಂಕಿತಾ ಕುಲಕರ್ಣಿ