ಮೂಲಕ: ರೋಹಿತ್ ಗುಟ್ಟಾ
ಜುಲೈ 19 2024
ವೀಡಿಯೋ ೨೦೨೧ ರ ಹಿಂದಿನದ್ದು, ಸಿಹೆಚ್. ಅಯ್ಯಣ್ಣ ಪಾತ್ರುಡು ಅವರು ಆಗಿನ ವೈಎಸ್‌ಆರ್‌ಸಿಪಿ ಸರ್ಕಾರ ಕಸ ಸಂಗ್ರಹಣೆ ತೆರಿಗೆ ವಿಧಿಸಿದಕ್ಕೆ ಟೀಕಿಸಿದ್ದರು.
ಹೇಳಿಕೆ ಏನು?
ಆಂಧ್ರಪ್ರದೇಶ ವಿಧಾನಸಭೆಯ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಸಿಹೆಚ್. ಅಯ್ಯಣ್ಣ ಪಾತ್ರುಡು ಅವರನ್ನು ಒಳಗೊಂಡ ೧೯-ಸೆಕೆಂಡ್ ವೀಡಿಯೋ ಅವರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ (ಜೆಎಸ್‌ಪಿ) ನಾಯಕ ಪವನ್ ಕಲ್ಯಾಣ್ ಅವರನ್ನು ಟೀಕಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ವೀಡಿಯೋದಲ್ಲಿ, ಪತ್ರುಡು ಅವರು ಹೀಗೆ ಹೇಳುವುದನ್ನು ಕೇಳಬಹುದು (ತೆಲುಗಿನಿಂದ ಅನುವಾದಿಸಲಾಗಿದೆ), “ಅದಕ್ಕಾಗಿಯೇ ನಾನು ಅವರನ್ನು ವೇಸ್ಟ್ ಫೆಲೋ ಎಂದು ಕರೆಯುತ್ತೇನೆ. ನಮ್ಮನ್ನು ಆಳುತ್ತಿರುವವರು ವೇಸ್ಟ್ ಫೆಲೋಗಳು ಎಂದು ನಾನು ಹೇಳುತ್ತೇನೆ. ಕಸದ ಮೇಲೆ ತೆರಿಗೆ ವಿಧಿಸುವುದರಿಂದ ಅವರು ವೇಸ್ಟ್ ಫೆಲೋಗಳು. ಕಸದ ಮೇಲೆ ತೆರಿಗೆ ವಿಧಿಸುವವರನ್ನು ವೇಸ್ಟ್ ಫೆಲೋ ಎಂದು ಕರೆಯದಿದ್ದರೆ ಬೇರೆ ಏನು ಕರೆಯಬೇಕು?
ಕಲ್ಯಾಣ್ ಅವರು ವಿಧಾನಸಭೆಯಲ್ಲಿ ಪ್ರತಿನಿಧಿಸುವ ಕ್ಷೇತ್ರವಾದ ಪಿಠಾಪುರಂ ಪಟ್ಟಣದಲ್ಲಿ ಸಂಭಾವ್ಯ ಕಸ ತೆರಿಗೆಯ ಬಗ್ಗೆ ಊಹಿಸುವ ಈನಾಡು ಪತ್ರಿಕೆಯ ಲೇಖನದ ಚಿತ್ರವನ್ನು ವೀಡಿಯೋ ಒಳಗೊಂಡಿದೆ.
ಅಯ್ಯಣ್ಣ, ಕಲ್ಯಾಣ್ ಅವರನ್ನು ಟೀಕಿಸುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಆರ್ಕೈವ್ ಮಾಡಿದ ಪೋಷ್ಟ್ ನ ಲಿಂಕ್ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸಾಮಾಜಿಕ ಮಾಧ್ಯಮದಳ್ಳಾಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ .
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಪಟ್ರುಡು ಆಗಿನ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಸರ್ಕಾರವನ್ನು ಟೀಕಿಸುತ್ತಿರುವ ವೀಡಿಯೋ ೨೦೨೧ ರ ಹಿಂದಿನದ್ದು.
ನಾವು ಕಂಡುಕೊಂಡಿದ್ದು ಏನು?
ಆಂಧ್ರ ಪ್ರದೇಶ ಅಸೆಂಬ್ಲಿ ಸ್ಪೀಕರ್ ಮಾಡಿದ ಆಪಾದಿತ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಸುದ್ದಿ ವರದಿಗಳ ಕುರಿತು ನಮ್ಮ ತನಿಖೆಯು ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ನಾವು ನಂತರ ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದಾಗ ಸೆಪ್ಟೆಂಬರ್ ೧೮, ೨೦೨೧ ರಂದು ತೆಲುಗು ಸುದ್ದಿ ವಾಹಿನಿ ಮಹಾ ನ್ಯೂಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅಪ್‌ಲೋಡ್ ಮಾಡಿದ ವೀಡಿಯೋವನ್ನು ಪತ್ತೆ ಮಾಡಿದೆವು.
ತೆಲುಗಿನಲ್ಲಿ “ವೈಸಿಪಿ ಮಂತ್ರಿಗಳು ವೇಸ್ಟ್ ಫೆಲೋಗಳು: ಅಯ್ಯಣ್ಣಪತ್ರುಡು ವೈಸಿಪಿ ಸರ್ಕಾರ್ ಕುರಿತು ಸಂವೇದನಾಶೀಲ ಕಾಮೆಂಟ್‌ಗಳು” ಎಂಬ ಶೀರ್ಷಿಕೆಯ ವೀಡಿಯೋದಲ್ಲಿ ಪಟ್ರುಡು ಅವರು "ಪ್ರಸ್ತುತ ಮುಖ್ಯಮಂತ್ರಿ" ಮತ್ತು ಇತರ ಸರ್ಕಾರದ ಮಂತ್ರಿಗಳನ್ನು ಟೀಕಿಸುತ್ತಿದ್ದಾರೆ. ವೈರಲ್ ಕ್ಲಿಪ್ ಅನ್ನು ವೀಡಿಯೋದಲ್ಲಿ ೦:೩೮ ರಿಂದ ೦:೫೪ ರವರೆಗೆ ವೀಕ್ಷಿಸಬಹುದು.
ಇದೇ ವೀಡಿಯೋವನ್ನು ವಿಸ್ತೃತ ಅವಧಿಯೊಂದಿಗೆ, ಜಗನ್ ಮೋಹನ್ ರೆಡ್ಡಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ, ಸೆಪ್ಟೆಂಬರ್ ೧೬, ೨೦೨೧ ರಂದು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿತ್ತು (ಇಲ್ಲಿ ಆರ್ಕೈವ್ ಮಾಡಲಾಗಿದೆ).
ಜುಲೈ ೧೫, ೨೦೨೧ ರಂದು ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಅಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ಕ್ಲೀನ್ ಆಂಧ್ರ ಪ್ರದೇಶ (ಸಿಎಲ್ಎಪಿ ) ಯೋಜನೆಯ ಭಾಗವಾಗಿ ಕಸ ಸಂಗ್ರಹಣೆಯ ಮೇಲೆ ಬಳಕೆದಾರರ ತೆರಿಗೆಯನ್ನು ಪರಿಚಯಿಸಿತು. ಏಪ್ರಿಲ್ ೧೯, ೨೦೨೪ ರಂದು ದಿ ಹಿಂದೂ ಪತ್ರಿಕೆಯ ವರದಿಯು ಈ ತೆರಿಗೆಯು ಮನೆಗಳಿಗೆ ತಿಂಗಳಿಗೆ ರೂ ೩೦-೧೨೦ ಮತ್ತು ವ್ಯವಹಾರಗಳಿಗೆ ತಿಂಗಳಿಗೆ ರೂ ೨೦೦-೧೫,೦೦೦ ವರೆಗೆ ಇರುತ್ತದೆ ಎಂದು ಸೂಚಿಸಿತ್ತು.
ಅದೇ ರೀತಿ, ಡಿಸೆಂಬರ್ ೧೪, ೨೦೨೩ ರಂದು ಈನಾಡು ವರದಿಯಲ್ಲಿ ಸರ್ಕಾರವು ರೂ. ೧೬೫ ಕೋಟಿ ಈ ಕಸದ ತೆರಿಗೆ ಮೂಲಕ ಸಂಗ್ರಹಿಸಿತ್ತು ಎಂದು ಹೇಳುತ್ತದೆ.
ಚುನಾವಣಾ ಪ್ರಚಾರದ ಸಮಯದಲ್ಲಿ, ತೆಲುಗು ದೇಶಂ ಪಕ್ಷ, ಜನಸೇನಾ ಪಕ್ಷ ಮತ್ತು ಭಾರತೀಯ ಜನತಾ ಪಕ್ಷವನ್ನು ಒಳಗೊಂಡಿರುವ ಮೈತ್ರಿ ಸರ್ಕಾರವು ಚುನಾವಣೆಯ ವೇಳೆ ಕಸದ ತೆರಿಗೆಯನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು. ಚುನಾವಣೆಯಲ್ಲಿ ಗೆದ್ದ ನಂತರ, ಅವರು ಜೂನ್‌ನಲ್ಲಿ ತೆರಿಗೆಯನ್ನು ರದ್ದುಗೊಳಿಸುವ ಮೂಲಕ ಈ ಭರವಸೆಯನ್ನು ಈಡೇರಿಸಿದರು.
ತೀರ್ಪು
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೋದಲ್ಲಿ, ಟಿಡಿಪಿ ನಾಯಕ ಸಿ.ಎಚ್. ಅಯ್ಯಣ್ಣ ಪತ್ರುಡು ಅವರು ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ಕಸದ ತೆರಿಗೆಯನ್ನು ವಿಧಿಸಿದ್ದಕ್ಕಾಗಿ ಟೀಕಿಸಿದ ಹೇಳಿಕೆಯನ್ನು ಅವರು ಈಗ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ಮಾಡಿದ ಟೀಕೆಗಳು ಎಂದು ತಪ್ಪಾಗಿ ಬಿಂಬಿಸಲಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here