ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಆಗಸ್ಟ್ 18 2023
ವೈರಲ್ ಕ್ಲಿಪ್ ಉತ್ತರ ಪ್ರದೇಶದಲ್ಲಿ ಚಿತ್ರೀಕರಿಸಲಾದ ಹಿಂದಿ ಶಾರ್ಟ್ ಫಿಲಿಮ್ "ದೋಸ್ತಿ ಕಿ ಸಾಜಾ" ನ ದೃಶ್ಯವಾಗಿದೆ.
ಸಂದರ್ಭ
೩೦ ಸೆಕೆಂಡುಗಳ ವೀಡಿಯೋವೊಂದು ಪ್ಲಾಟ್‌ಫಾರ್ಮ್ ಎಕ್ಸ್ (X) ನಲ್ಲಿ (ಹಿಂದೆ ಟ್ವಿಟರ್ ಎಂದು ಕರೆಯಲಾಗಿತ್ತು) ಪ್ರಚಾರಗೊಂಡಿದ್ದು, ಅದರಲ್ಲಿ ಖಾಕಿ ಸಮವಸ್ತ್ರವನ್ನು ಧರಿಸಿರುವ ಪೊಲೀಸ್ ಅಧಿಕಾರಿಗಳು ಎಂದು ತೋರಿಸುವಂತೆ ಹಲವಾರು ಜನ, ಒಬ್ಬ ವ್ಯಕ್ತಿಯನ್ನು ನೆಲದ ಮೇಲೆ ಬಂಧಿಸಿ ಹಿಡಿದಿರುವ ದೃಶ್ಯವನ್ನು ತೋರಿಸುತ್ತದೆ. ದೃಶ್ಯದಲ್ಲಿ ಕಂಡುಬಂದ ಜನರು ಬಂಧನಕ್ಕೊಳಗಾದ ವ್ಯಕ್ತಿಯ ಮೇಲೆ ದಾಳಿ ಮಾಡುವುದು, ಬಂದೂಕಿನಿಂದ ಬೆದರಿಕೆ ಹಾಕುವುದು ಮತ್ತು ಚಿತ್ರಹಿಂಸೆ ನೀಡುವುದು, ಇವೆಲ್ಲವನ್ನೂ ಈ ವೀಡಿಯೋ ತೋರಿಸುತ್ತದೆ.
ಹರಿಯಾಣದಲ್ಲಿ ಮುಸ್ಲಿಮರನ್ನು ದಮನಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್), ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಬಲಪಂಥೀಯ ಸಂಘಟನೆಗಳ ಆಪಾದಿತ ಪ್ರಯತ್ನಗಳನ್ನು ಇದು "ಬಹಿರಂಗಪಡಿಸುತ್ತದೆ" ಎಂದು ಈ ವೀಡಿಯೋವನ್ನು ಹಂಚಿಕೊಳ್ಳುತ್ತಿರುವ ಕೆಲವು ಎಕ್ಸ್ ಬಳಕೆದಾರರು ಹೇಳಿದ್ದಾರೆ. ಜುಲೈ ೩೧ ರಂದು ಹರಿಯಾಣದ ನುಹ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರದ ನಂತರ ಇಂತಹ ಹೇಳಿಕೆಗಳು ಕಂಡುಬಂದಿವೆ.
ಈ ವೈರಲ್ ವೀಡಿಯೋವನ್ನು ಹಿಂದಿ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದ್ದು ಅದನ್ನು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ: "ನೋಡಿ ಮತ್ತು ಯೋಚಿಸಿ.. ಈ ಭಯೋತ್ಪಾದಕ ಸಂಘಟನೆಗಳು ಹರಿಯಾಣದಲ್ಲಿ ಮುಸ್ಲಿಮರನ್ನು ಎಷ್ಟು ದಬ್ಬಾಳಿಕೆ ಮಾಡುತ್ತಿವೆ, ಆರ್‌ಎಸ್‌ಎಸ್ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಜನರು.. ಮಾನವೀಯತೆ ಸಾಯುತ್ತಿದೆ.. ನೀವು ಮೌನವಾಗಿದ್ದೀರಿ."
ಈ ವೀಡಿಯೋ ಹರ್ಯಾಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹಿಂದುತ್ವ ಗುಂಪುಗಳು ಹಲ್ಲೆ ಮಾಡುತ್ತಿದ್ದಾರೆ ಎಂದು ತೋರಿಸುವಂತೆ ಹಂಚಿಕೊಳ್ಳಲಾಗಿದೆ. (ಚಿತ್ರದ ಮೂಲ: ಎಕ್ಸ್ /@Abdul_1_MS, @Sameer_asp/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಆಲ್ಟೆರ್ ಮಾಡಲಾಗಿದೆ)
ಆದರೆ, ಉತ್ತರ ಪ್ರದೇಶದ ಲಕ್ನೋದಲ್ಲಿ ಕಿರುಚಿತ್ರದ (ಶಾರ್ಟ್ ಫಿಲಿಮ್) ಭಾಗವಾಗಿ ವೀಡಿಯೋವನ್ನು ಚಿತ್ರೀಕರಿಸಲಾಗಿದೆ ಮತ್ತು ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯೊಂದಿಗೆ ತಪ್ಪಾಗಿ ಜೋಡಿಸಲಾಗಿದೆ.
ವಾಸ್ತವವಾಗಿ
ವೈರಲ್ ವೀಡಿಯೋದ ಕೀಫ್ರೇಮ್ ಅನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದ ನಂತರ, ಅದನ್ನು ವಿಪಿನ್ ಪಾಂಡೆ ಎಂಬ ಬಳಕೆದಾರರಿಂದ ಫೇಸ್‌ಬುಕ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋವನ್ನು ಜುಲೈ ೨೮, ೨೦೨೩ ರಂದು ಹರಿಯಾಣದಲ್ಲಿ ಹಿಂಸಾಚಾರ ಭುಗಿಲೆದ್ದ ಮೂರು ದಿನಗಳ ಮೊದಲು ಪೋಷ್ಟ್ ಮಾಡಲಾಗಿದೆ. ಪೋಷ್ಟ್ ನ ಶೀರ್ಷಿಕೆಯು "ಶೀಘ್ರದಲ್ಲೇ ಬರಲಿದೆ ವೀಡಿಯೋ, ಆದ್ದರಿಂದ ದಯವಿಟ್ಟು ನನ್ನ ಯೂಟ್ಯೂಬ್ ಚಾನಲ್ ಅನ್ನು ಬೆಂಬಲಿಸಿ" ಎಂದು ಓದಿದೆ ಮತ್ತು ಬಳಕೆದಾರರನ್ನು ತನ್ನ ಯೂಟ್ಯೂಬ್ ಚಾನಲ್‌ಗೆ ನಿರ್ದೇಶಿಸುವ ಹೈಪರ್‌ಲಿಂಕ್ ಅನ್ನು ಒಳಗೊಂಡಿದೆ.
ಜುಲೈ ೨೦೨೩ರ ಪಾಂಡೆ ಅವರ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಚಿತ್ರದ ಮೂಲ: ಫೇಸ್ಬುಕ್/Vipin Pandey)
ಜುಲೈ ೩೧ ರಂದು, ಪಾಂಡೆ ಮಾಲೀಕತ್ವದ "ವಿಪಿನ್ ಪಾಂಡೆ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್" ಯೂಟ್ಯೂಬ್ ಚಾನೆಲ್ ವೈರಲ್ ವೀಡಿಯೋದ ವಿಸ್ತೃತ ಆವೃತ್ತಿಯನ್ನು ಅಪ್‌ಲೋಡ್ ಮಾಡಿದೆ. ಈ ವೀಡಿಯೋದಲ್ಲಿ, ಹತ್ತು ನಿಮಿಷ ಮತ್ತು ೪೫ ಸೆಕೆಂಡುಗಳಲ್ಲಿ, ವೈರಲ್ ವೀಡಿಯೋದಲ್ಲಿರುವ ಒಂದೇ ರೀತಿಯ ದೃಶ್ಯವನ್ನು ವಿಭಿನ್ನ ಕ್ಯಾಮೆರಾ ಕೋನದಿಂದ ಸೆರೆಹಿಡಿದಿರುವುದನ್ನು ನಾವು ನೋಡಬಹುದು.
ವೈರಲ್ ವೀಡಿಯೋ ಮತ್ತು ವಿಪಿನ್ ಪಾಂಡೆ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಷ್ಟ್ ಮಾಡಿದ ವೀಡಿಯೋ ನಡುವಿನ ಹೋಲಿಕೆ. (ಚಿತ್ರದ ಮೂಲ: ಎಕ್ಸ್/ @Abdul_1_MS/ಯೂಟ್ಯೂಬ್)
ಹೆಚ್ಚುವರಿಯಾಗಿ, ಕಿರುಚಿತ್ರದ ಚಿತ್ರೀಕರಣದ ಕೆಲವು ತುಣುಕುಗಳನ್ನು ಪಾಂಡೆಯವರ ಯೂಟ್ಯೂಬ್ ಚಾನೆಲ್ ನಲ್ಲಿ ಸಂಕ್ಷಿಪ್ತ ಕ್ಲಿಪ್‌ಗಳಾಗಿ ಅಪ್‌ಲೋಡ್ ಮಾಡಲಾಗಿದೆ.
ವಿಪಿನ್ ಪಾಂಡೆ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಷ್ಟ್ ಮಾಡಿದ ವೀಡಿಯೋಗಳ ಸ್ಕ್ರೀನ್‌ಶಾಟ್. (ಚಿತ್ರದ ಮೂಲ: ಯೂಟ್ಯೂಬ್/Vipin Pandey)
ಲಾಜಿಕಲಿ ಫ್ಯಾಕ್ಟ್ಸ್ ಪಾಂಡೆಯವರನ್ನು ಸಂಪರ್ಕಿಸಿ ಈ ವೀಡಿಯೋ ಅವರದ್ದು ಹಾಗು ಕಿರುಚಿತ್ರದಲ್ಲಿನದ್ದು ಎಂದು ಧೃಡೀಕರಣವನ್ನು ಪಡೆದುಕೊಂಡಿದೆ. ಈ ವೀಡಿಯೋ ಯಾವುದೇ ನಿರ್ದಿಷ್ಟ ಧಾರ್ಮಿಕ ಗುಂಪಿಗೆ ಸಂಬಂಧಿಸಿಲ್ಲ ಮತ್ತು ಹಿಂದೂ ಅಥವಾ ಮುಸ್ಲಿಂ ವಿಷಯಗಳಿಗೆ ಸಂಬಂಧಿಸಿಲ್ಲ ಎಂದು ಅವರು ಒತ್ತಿ ಹೇಳಿದರು. ತಪ್ಪಾದ ಶೀರ್ಷಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಳ್ಳುವುದರಿಂದ ದೂರವಿರಲು ಅವರು ಜನರನ್ನು ಒತ್ತಾಯಿಸಿದರು. ಪಾಂಡೆ, "ಇಲ್ಲಿ ಅಂತಹದ್ದೇನೂ ಇಲ್ಲ, ಮತ್ತು ನಾನು ರಾಜಕೀಯ ಸಂಬಂಧಗಳಿಂದ ದೂರವಿದ್ದೇನೆ" ಎಂದು ಹೇಳಿದ್ದಾರೆ.
ತೀರ್ಪು
ಹರ್ಯಾಣದ ಮೇವಾತ್‌ನಲ್ಲಿ ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಸಂಘಟನೆಗಳು ಮುಸ್ಲಿಂ ವ್ಯಕ್ತಿಯನ್ನು ಬಂಧಿಸುವುದನ್ನು ತೋರಿಸುತ್ತದೆ ಎಂಬ ಸಮರ್ಥನೆಯೊಂದಿಗೆ ಪ್ರಸಾರವಾದ ವೀಡಿಯೋ ನಿಜಕ್ಕೂ "ದೋಸ್ತಿ ಕಿ ಸಾಜಾ" ಎಂಬ ಹಿಂದಿ ಕಿರುಚಿತ್ರದ ಭಾಗವಾಗಿದೆ. ಲಕ್ನೋದಲ್ಲಿ ಕಿರುಚಿತ್ರವನ್ನು ಚಿತ್ರೀಕರಿಸುವಾಗ ವೈರಲ್ ವೀಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಚಿತ್ರದ ಸೃಷ್ಟಿಕರ್ತ ಪಾಂಡೆ ಲಾಜಿಕಲಿ ಫ್ಯಾಕ್ಟ್ಸ್‌ಗೆ ಮಾಹಿತಿ ನೀಡಿದ್ದಾರೆ.
Translated by: Vivek J