ಮೂಲಕ: ಇಶಿತಾ ಗೋಯಲ್ ಜೆ
ಜೂನ್ 12 2024
ರಿಯಾಸಿಯಲ್ಲಿ ದಾಳಿಗೆ ಒಳಗಾದ ಬಸ್ ಯಾತ್ರಿಕರನ್ನು ಹೊಂದಿತ್ತು ಮತ್ತು ಭಾರತೀಯ ಸೈನಿಕರಲ್ಲ ಎಂದು ವರದಿಗಳು ಹಾಗು ಪೊಲೀಸ್ ಹೇಳಿಕೆಗಳು ದೃಢಪಡಿಸುತ್ತದೆ.
ಹೇಳಿಕೆ ಏನು?
ಭಾರತದ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಸೈನಿಕರನ್ನು ಸಾಗಿಸುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ಹತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಯೊಂದಿಗೆ ಭದ್ರತಾ ಸಿಬ್ಬಂದಿಯು ತಪಾಸಣೆಗೆ ನಡೆಸುತ್ತಿರುವ ಹಸಿರು ಬಣ್ಣದ ಬಸ್ ಅನ್ನು ಚಿತ್ರಿಸುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಜೂನ್ ೯ ರಂದು ಭಾರತೀಯ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ಬಸ್ಸೊಂದು ಭಯೋತ್ಪಾದಕರ ಹೊಂಚುದಾಳಿ ನಂತರ ರಿಯಾಸಿಯ ಆಳವಾದ ಕಮರಿಯಲ್ಲಿ ಬಿದ್ದ ಘಟನೆಯ ನಂತರ ಈ ಹೇಳಿಕೆ ಹೊರಹೊಮ್ಮಿದೆ.
ಫೇಸ್‌ಬುಕ್ ಬಳಕೆದಾರರು ವೈರಲ್ ಫೋಟೋವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, "ಈಗಷ್ಟೇ, ಜಮ್ಮು ಮತ್ತು ಕಾಶ್ಮೀರದ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಾರತೀಯ ಭಯೋತ್ಪಾದಕರ ಸೇನಾ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ನ ಮೇಲೆ ಕಾಶ್ಮೀರಿ ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ ಭಾರಿ ದಾಳಿ. ಹತ್ತು (೧೦) ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ." ಮತ್ತೊಬ್ಬರು, "#Reasi #JammuKashmir ನಲ್ಲಿ #ಭಾರತೀಯ ಸೇನೆಯ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನ ಮೇಲೆ ದೊಡ್ಡ ದಾಳಿ ನಡೆದಿದೆ ಎಂದು ವರದಿಯಾಗಿದೆ. ಹತ್ತು (೧೦)ಭಾರತೀಯ ಸೈನಿಕರು ಹತರಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ," ಎಂದು ಹೇಳಿಕೊಂಡು ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ನಮ್ಮ ತನಿಖೆಯು ದಾಳಿಯಲ್ಲಿ ಯಾವುದೇ ಭಾರತೀಯ ಸೈನಿಕರು ಸಾವನ್ನಪ್ಪಿಲ್ಲ ಎಂದು ಬಹಿರಂಗಪಡಿಸುತ್ತದೆ ಮತ್ತು ಹೇಳಿಕೆ ಪ್ರಚಾರಕ್ಕಾಗಿ ಬಳಸಲಾಗುತ್ತಿರುವ ಫೋಟೋ ೨೦೧೪ ರದ್ದು ಹಾಗು ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಸೆರೆಹಿಡಿಯಲಾಗಿದೆ.
ನಾವು ಕಂಡುಕೊಂಡಿದ್ದು ಏನು?
ಜೂನ್ ೯ ರಂದು, ಸುಮಾರು ೬:೧೦ ಗಂಟೆಗೆ, "ರಾಜೌರಿ ಜಿಲ್ಲೆಯ ಗಡಿಯಲ್ಲಿರುವ ರಿಯಾಸಿ ಜಿಲ್ಲೆಯ ಪೌನಿ ಪ್ರದೇಶದಲ್ಲಿ, ಶಿವ ಖೋರಿಯಿಂದ ಕತ್ರಾಕ್ಕೆ ಯಾತ್ರಿಗಳನ್ನು (ಯಾತ್ರಾರ್ಥಿಗಳು) ಹೊತ್ತೊಯ್ಯುವ ಬಸ್ಸು ಅನ್ನು ಬಂದೂಕುಗಳನ್ನು ಬಳಸಿ ಭಯೋತ್ಪಾದಕರು ಸ್ಪಷ್ಟವಾಗಿ ಗುರಿಯಾಗಿಸಿಕೊಂಡಿದ್ದಾರೆ," ಎಂದು ಸೂಚಿಸುವ ಜಿಲ್ಲಾ ಪೊಲೀಸ್ ರಿಯಾಸಿ ಅವರ ಹೇಳಿಕೆಯನ್ನು (ಆರ್ಕೈವ್ ಇಲ್ಲಿದೆ) ನಾವು ಕಂಡುಕೊಂಡಿದ್ದೇವೆ.
ಶಿವ ಖೋರಿ ರಿಯಾಸಿಯಲ್ಲಿರುವ ಹಿಂದೂ ದೇವಾಲಯವಾಗಿದೆ. ಕತ್ರಾ ಪ್ರಸಿದ್ಧ ಹಿಂದೂ ದೇವಾಲಯ ಮಾತಾ ವೈಷ್ಣೋ ದೇವಿಯ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುತ್ತದೆ, ಇದು ಬಸ್ ನ ಮಾರ್ಗವಾಗಿ ವರದಿಯಾಗಿದೆ.
ಘಟನೆ ಕುರಿತು ರಿಯಾಸಿ ಜಿಲ್ಲಾ ಪೊಲೀಸ್ ಮಾಡಿದ ಪೋಷ್ಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್)
ಇದಲ್ಲದೆ, ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾ ದಂತಹ ಹಲವಾರು ಸುದ್ದಿವಾಹಿನಿಗಳು ಈ ಘಟನೆಯನ್ನು ವರದಿ ಮಾಡಿ, ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿವೆ.
ಅದೇ ದಿನ, ಪೊಲೀಸರ ಮತ್ತೊಂದು ಹೇಳಿಕೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಘಟನೆಯಲ್ಲಿ ಒಂಬತ್ತು ವ್ಯಕ್ತಿಗಳ ಸಾವನ್ನು ದೃಢಪಡಿಸಿದರು.
ಘಟನೆ ಕುರಿತು ರಿಯಾಸಿ ಜಿಲ್ಲಾ ಪೊಲೀಸ್ ಮಾಡಿದ ಪೋಷ್ಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್)
ಚಾಲಕ (ವಿಜಯ್ ಕುಮಾರ್) ಮತ್ತು ಕಂಡಕ್ಟರ್ (ಅರುಣ್ ಕುಮಾರ್) ಸೇರಿದಂತೆ ಒಂಬತ್ತು ವ್ಯಕ್ತಿಗಳ ಗುರುತನ್ನು ದೃಢಪಡಿಸಿದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ರಿಯಾಸಿ), ವಿಶೇಷ್ ಪಾಲ್ ಮಹಾಜನ್ ಅವರನ್ನು ಉಲ್ಲೇಖಿಸಿ ದಿ ಹಿಂದೂ ವರದಿ ಮಾಡಿದೆ.
ಮಹಾಜನ್ ಅನ್ನು ಉಲ್ಲೇಖಿಸಿ ವರದಿಯು ಇತರ ವ್ಯಕ್ತಿಗಳನ್ನು ರಾಜಸ್ಥಾನದ ಜೈಪುರದ ರಾಜಿಂದರ್ ಪ್ರಸಾದ್ ಪಾಂಡೆ ಸಾಹ್ನಿ, ಮಮತಾ ಸಾಹ್ನಿ, ಪೂಜಾ ಸಾಹ್ನಿ ಮತ್ತು ಅವರ ಎರಡು ವರ್ಷದ ಮಗ ಟಿಟು ಸಾಹ್ನಿ ಎಂದು ಗುರುತಿಸಲಾಗಿದೆ. ಮತ್ತು ಉತ್ತರ ಪ್ರದೇಶದ ಶಿವಂ ಗುಪ್ತಾ, ರೂಬಿ ಮತ್ತು ೧೪ ವರ್ಷದ ಅನುರಾಗ್ ವರ್ಮಾ.
ಯಾವುದೇ ಭಾರತೀಯ ಸೈನಿಕರು ದಾಳಿಗೆ ಬಲಿಯಾದ ಬಗ್ಗೆ ಸುದ್ದಿಯಲ್ಲಿ ವರದಿಯಾಗಿಲ್ಲ.
ವೈರಲ್ ಪೋಷ್ಟ್ ಗಳಲ್ಲಿನ ಚಿತ್ರ
ರಿವರ್ಸ್ ಇಮೇಜ್ ಸರ್ಚ್ ಮೂಲಕ, ಪ್ರಶ್ನೆಯಲ್ಲಿರುವ ಚಿತ್ರವು ೨೦೧೪ ರದ್ದು ಎಂದು ಕಂಡುಕೊಂಡೆವು. ಬಿಬಿಸಿ ಜುಲೈ ೨, ೨೦೧೪ ರಂದು "ಅಫ್ಘಾನ್ ಸುಯಿಸೈಡ್ ಬಾಂಬರ್ ಅಟ್ಟಾಕ್ಸ್ ಮಿಲಿಟರಿ ಬಸ್ ಇನ್ ಕಾಬುಲ್" ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಿದೆ ಮತ್ತು ಘಟನೆಯ ವೀಡಿಯೋವನ್ನು ಹಂಚಿಕೊಂಡಿದೆ. ಕ್ಲಿಪ್ ನ ೦:೦೬ ಮಾರ್ಕ್‌ನಲ್ಲಿ, ವೀಡಿಯೋ ಫ್ರೇಮ್ ವೈರಲ್ ಚಿತ್ರಕ್ಕೆ ಹೊಂದಿಕೆಯಾಗುತ್ತದೆ.
ಅಂತೆಯೇ, ಯುರೋ ನ್ಯೂಸ್ ಜುಲೈ ೨, ೨೦೧೪ ರಂದು ಯೂಟ್ಯೂಬ್‌ನಲ್ಲಿ ವೀಡಿಯೋವನ್ನು ಪೋಷ್ಟ್ ಮಾಡಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ಅದರ ಶೀರ್ಷಿಕೆ ಹೀಗಿದೆ, "ಅಫ್ಘಾನಿಸ್ತಾನ್: ಆತ್ಮಹತ್ಯಾ ಬಾಂಬರ್ ಮಿಲಿಟರಿ ಬಸ್ ಸ್ಫೋಟದಲ್ಲಿ ಎಂಟು ಮಂದಿಯನ್ನು ಕೊಂದರು." ೦:೦೫ ಮಾರ್ಕ್‌ನಲ್ಲಿ, ವೀಡಿಯೋ ಫ್ರೇಮ್ ವೈರಲ್ ಚಿತ್ರಕ್ಕೆ ಹೊಂದಿಕೆಯಾಗುತ್ತದೆ.
೨೦೧೪ ರಲ್ಲಿ, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವಾಯುಪಡೆಯ ಬಸ್ ಅನ್ನು ಗುರಿಯಾಗಿಸಿ ಆತ್ಮಹತ್ಯಾ ಬಾಂಬರ್ ಎಂಟು ಮಿಲಿಟರಿ ಅಧಿಕಾರಿಗಳ ಸಾವಿಗೆ ಕಾರಣವಾಯಿತು.
ರಿಯಾಸಿ ದಾಳಿಯ ಚಿತ್ರಗಳು ಬಸ್ ಅನ್ನು ನೀಲಿ ಅಂಚುಗಳೊಂದಿಗೆ ಬಿಳಿಯಾಗಿ ಚಿತ್ರಿಸುತ್ತವೆ ಮತ್ತು ವೈರಲ್ ಚಿತ್ರದಲ್ಲಿರುವಂತೆ ಹಸಿರು ಅಲ್ಲ. ಹೆಚ್ಚುವರಿಯಾಗಿ, ರಿಯಾಸಿ ಘಟನೆಯಲ್ಲಿ ಬಸ್ ಅನ್ನು ಆಳವಾದ ಕಮರಿಯಲ್ಲಿ ಪತ್ತೆಯಾಗಿದ್ದು, ವೈರಲ್ ಚಿತ್ರದಲ್ಲಿ ತೋರಿಸುವಂತೆ ರಸ್ತೆಯಲ್ಲಿ ಅಲ್ಲ.
ತೀರ್ಪು
ರಿಯಾಸಿಯಲ್ಲಿ ದಾಳಿಗೆ ಒಳಗಾದ ಬಸ್ ನಾಗರಿಕರನ್ನು (ಯಾತ್ರಿಕರು) ಹೊಂದಿತ್ತು, ಭಾರತೀಯ ಸೈನಿಕರಲ್ಲ ಎಂದು ಸುದ್ದಿ ವರದಿಗಳು ಮತ್ತು ಪೊಲೀಸ್ ಹೇಳಿಕೆಗಳು ದೃಢಪಡಿಸುತ್ತದೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡವರು ನಾಗರಿಕರೇ ಹೊರತು ಸೈನಿಕರಲ್ಲ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here