ಮೂಲಕ: ಉಮ್ಮೆ ಕುಲ್ಸುಮ್
ಆಗಸ್ಟ್ 5 2024
೨೦೦೧ ರಲ್ಲಿ ಎಲ್ ಸಾಲ್ವಡಾರ್‌ನಲ್ಲಿ ಭೂಕಂಪದಿಂದ ಉಂಟಾದ ಭೂಕುಸಿತವನ್ನು ಈ ಚಿತ್ರವು ತೋರಿಸುತ್ತದೆ, ಅದು ಭಾರತದಲ್ಲಿ ಸೆರೆಹಿಡಿಯಲಾಗಿಲ್ಲ.
ಹೇಳಿಕೆ ಏನು?
ಬೆಟ್ಟವೊಂದರ ಇಳಿಜಾರಿನಲ್ಲಿ ಒಂದು ಭಾಗದ ಭೂಮಿ ಕಾಣೆಯಾಗಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತದ ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ವೈಮಾನಿಕ ನೋಟ ಎಂದು ಹೇಳಲಾಗುತ್ತದೆ.
ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಪೋಷ್ಟ್ ಮಾಡಿದ್ದು, "ಕೇರಳ ವಯನಾಡಿನ ವೈಮಾನಿಕ ನೋಟ, ಕೇರಳ ವಯನಾಡಿನಲ್ಲಿ ಭೂಕುಸಿತವನ್ನು ತೋರಿಸುತ್ತದೆ. ವಯನಾಡಿನಲ್ಲಿ ೨೯೧ ಜನರು ಸಾವನ್ನಪ್ಪಿದ್ದಾರೆ," ಎಂದು ಹೇಳಲಾಗಿದೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಚಿತ್ರವು ಎಕ್ಸ್‌ನಲ್ಲಿಯೂ (ಹಿಂದೆ ಟ್ವಿಟರ್ ) ಹಂಚಿಕೊಂಡಿದ್ದು, ಅನೇಕರು ಇದು ವಯನಾಡ್‌ನಿಂದ ಬಂದಿದೆ ಎಂದು ನಂಬಿದ್ದಾರೆ. ಎಕ್ಸ್ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಯ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ನಮ್ಮ ತನಿಖೆಯಲ್ಲಿ ಚಿತ್ರವು ವಯನಾಡಿಗೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ; ಇದು ವಾಸ್ತವವಾಗಿ ೨೦೦೧ ರ ಎಲ್ ಸಾಲ್ವಡಾರ್ ಭೂಕಂಪದಿಂದ ಬಂದಿದೆ.
ನಾವು ಕಂಡುಕೊಂಡದ್ದು ಏನು?
ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಚಿತ್ರವು ವಯನಾಡ್‌ಗೆ ಸಂಬಂಧಿಸಿಲ್ಲ ಆದರೆ ೨೦೦೧ ರ ಎಲ್ ಸಾಲ್ವಡಾರ್ ಭೂಕಂಪಕ್ಕೆ ಸಂಬಂಧಿಸಿದೆ ಎಂದು ಬಹಿರಂಗಪಡಿಸುತ್ತದೆ. ಫೆಬ್ರವರಿ ೨೦೦೬ ರಲ್ಲಿ ಪ್ರಕಟವಾದ ಜಾಗತಿಕ ನೈಸರ್ಗಿಕ ವಿಕೋಪದ ಹಾಟ್‌ಸ್ಪಾಟ್‌ಗಳ ಕುರಿತಾದ ನಾಸಾ ಲೇಖನದಲ್ಲಿ ಅದೇ ಚಿತ್ರವು ಕಾಣಿಸಿಕೊಂಡಿದೆ. ಶೀರ್ಷಿಕೆಯು, "೨೦೦೧ ರ ಎಲ್ ಸಾಲ್ವಡಾರ್ ಭೂಕಂಪ-ಪ್ರೇರಿತ ಭೂಕುಸಿತ, ಎಲ್ ಸಾಲ್ವಡಾರ್‌ನ ಸಾಂಟಾ ಟೆಕ್ಲಾ ಬಳಿ ನೆರೆಹೊರೆಯಲ್ಲಿ ಹಲವಾರು ಮನೆಗಳು ಕುಸಿದವು," ಎಂದು ಹೇಳಲಾಗಿದೆ . ಫೋಟೋವನ್ನು ಛಾಯಾಗ್ರಾಹಕ ಎಡ್ವಿನ್ ಎಲ್ ಹಾರ್ಪ್ ಮತ್ತು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಗೆ ಸಲಿಸಲಾಗಿದೆ.
೨೦೦೧ ರ ಚಿತ್ರದ ಸ್ಕ್ರೀನ್‌ಶಾಟ್ ಅನ್ನು ನಾಸಾ ಹಂಚಿಕೊಂಡಿದೆ. (ಮೂಲ: ನಾಸಾ ಭೂಮಿಯ ಡೇಟಾ)
ಎಲ್ ಸಾಲ್ವಡಾರ್ ಭೂಕಂಪದ ಬಗ್ಗೆ ಜನವರಿ ೨೦೦೧ ರಂದು ಬಿಬಿಸಿ ವರದಿ ಸೇರಿದಂತೆ ಹಲವಾರು ಲೇಖನಗಳಲ್ಲಿ ಈ ಚಿತ್ರವು ಕಾಣಿಸಿಕೊಂಡಿದೆ. ಸಾಂಟಾ ಟೆಕ್ಲಾ ನಗರವನ್ನು ಸಮಾಧಿ ಮಾಡಿದ ಭೂಕುಸಿತವನ್ನು ಚಿತ್ರವು ಚಿತ್ರಿಸುತ್ತದೆ ಎಂದು ಈ ವರದಿ ಹೇಳಿದೆ.
೨೦೦೧ ಎಲ್ ಸಾಲ್ವಡಾರ್ ಭೂಕಂಪ
ಜನವರಿ ೧೩, ೨೦೦೧ ರಂದು, ಸ್ಯಾನ್ ಮಿಗುಯೆಲ್ ಪಟ್ಟಣದ ಬಳಿ ಪೆಸಿಫಿಕ್ ಸಾಗರದ ಎಲ್ ಸಾಲ್ವಡಾರ್ ಕರಾವಳಿಯಲ್ಲಿ ೭.೬ ತೀವ್ರತೆಯ ಭೂಕಂಪ ಸಂಭವಿಸಿತು. ಭೂಕಂಪವು ಬೃಹತ್ ಭೂಕುಸಿತಗಳನ್ನು ಉಂಟುಮಾಡಿತು, ವಿಶೇಷವಾಗಿ ಸಾಂಟಾ ಟೆಕ್ಲಾ ಪ್ರದೇಶದಲ್ಲಿ, ಇದು ಸಂಪೂರ್ಣ ನೆರೆಹೊರೆಗಳನ್ನು ಸಮಾಧಿ ಮಾಡಿತ್ತು.
ಸರಿಸುಮಾರು ೮೦೦ ಜನರು ಕೊಲ್ಲಲ್ಪಟ್ಟರು ಮತ್ತು ೧೦೦,೦೦೦ ಮನೆಗಳು ಹಾನಿಗೊಳಗಾದವು ಅಥವಾ ನಾಶವಾದವು ಎಂದು ವರದಿಗಳು ಸೂಚಿಸುತ್ತವೆ. ಈ ದುರಂತವು ನೂರಾರು ಸಾವಿರ ಜನರನ್ನು ಸ್ಥಳಾಂತರಿಸಿತು, ಗಮನಾರ್ಹವಾದ ಮಾನವೀಯ ಸವಾಲುಗಳನ್ನು ಸೃಷ್ಟಿಸಿತು.
ವಯನಾಡ್ ಭೂಕುಸಿತ
ಜುಲೈ ೩೦ ರಂದು ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದ ದಿನಗಳ ನಂತರ, ಸಾವಿನ ಸಂಖ್ಯೆ ೩೦೦ ಕ್ಕೆ ಏರಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಭಾರತೀಯ ನೌಕಾಪಡೆ, ವಾಯುಪಡೆ, ರಾಜ್ಯ ರಕ್ಷಣಾ ತಂಡಗಳು ಮತ್ತು ಕೋಸ್ಟ್ ಗಾರ್ಡ್ ಕಾರ್ಯಾಚರಣೆಯಲ್ಲಿ ಭಾಗವಹಿಸುವುದರೊಂದಿಗೆ ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ.
ತೀರ್ಪು
ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ವೈಮಾನಿಕ ದೃಶ್ಯಗಳೆಂದು ಹಳೆಯ ಮತ್ತು ಸಂಬಂಧವಿಲ್ಲದ ಚಿತ್ರವನ್ನು ತಪ್ಪಾಗಿ ಪ್ರಸ್ತುತಪಡಿಸಲಾಗುತ್ತಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.