ಮೂಲಕ: ಸೋಹಮ್ ಶಾ
ಜನವರಿ 24 2024
ಬುರ್ಜ್ ಖಲೀಫಾದ ಈ ಚಿತ್ರವು ೨೦೧೯ ರಿಂದ ಆನ್‌ಲೈನ್‌ನಲ್ಲಿದೆ ಮತ್ತು ಭಗವಾನ್ ರಾಮನ ಚಿತ್ರವನ್ನು ಹೊಂದಿಲ್ಲ, ಈಗ ಇದನ್ನು ಎಡಿಟ್ ಮಾಡಲಾಗಿದೆ.
ಹೇಳಿಕೆ ಏನು?
ಜನವರಿ ೨೩, ೨೦೨೪ ರಂದು ಆಜ್ ತಕ್, ಹಿಂದಿ ಪತ್ರಿಕೆ ಪ್ರಕಟಿಸಿದ ವರದಿಯು, ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಸಂಭ್ರಮದಲ್ಲಿ ಜನವರಿ ೨೨ ರಂದು ದುಬೈನ ಬುರ್ಜ್ ಖಲೀಫಾದ ಮೇಲೆ ಹಿಂದೂ ದೇವರಾದ ಶ್ರೀರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ಹೇಳಲಾಗಿದೆ. ಈ ವರದಿಯನ್ನು ನವೀಕರಿಸಲಾಗಿದೆ, ಆದರೆ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಪ್ರವೇಶಿಸಬಹುದು.
ಅದೇ ರೀತಿ ಕನ್ನಡ ದಿನ ಪತ್ರಿಕೆ, ವಿಜಯವಾಣಿಯ ಜನವರಿ ೨೩ ರ ಪ್ರಕಟಣೆಯಲ್ಲಿಯೂ ಕಂಡು ಬಂದಿದೆ. ಅದರ e -ಪೇಪರ್ ಅನ್ನು ಇಲ್ಲಿ ಕಾಣಬಹುದು.
ವಿಜಯವಾಣಿ ಪ್ರಕಟಿಸಿದ ವರದಿಯ ಸ್ಕ್ರೀನ್‌ಶಾಟ್.
(ಮೂಲ: ವಿಜಯವಾಣಿ/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ರೀತಿಯ ಹೇಳಿಕೆಗಳನ್ನು ಪೋಷ್ಟ್ ಮಾಡಲಾಗಿದೆ. ಇವುಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್
( ಮೂಲ: ಎಕ್ಸ್/ ಇನ್‌ಸ್ಟಾಗ್ರಾಮ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಆದರೆ, ನಮ್ಮ ತನಿಖೆಯಲ್ಲಿ ಜನವರಿ ೨೨ ರಂದು ಬುರ್ಜ್ ಖಲೀಫಾದ ಮೇಲೆ ಭಗವಾನ್ ರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ.
ವಾಸ್ತವಾಂಶಗಳು
ಯಾಂಡೆಕ್ಸ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಕಟ್ಟಡದ ಅದೇ ಚಿತ್ರವನ್ನು ಪಿಂಟರೆಸ್ಟ್ ಪೋಷ್ಟ್ ಒಂದನ್ನು ನಾವು ಕಂಡುಕೊಂಡೆವು ಮತ್ತು ಅದರ ಮೇಲೆ ರಾಮನ ಚಿತ್ರವಿಲ್ಲ. ಈ ಪೋಷ್ಟ್ ಅಕ್ಟೋಬರ್ ೨೨, ೨೦೧೯ರ ದಿನಾಂಕದ 'ಜೂಲಿಯಾಸ್ ಆಲ್ಬಮ್' ನಲ್ಲಿನ ಬ್ಲಾಗ್ ಗೆ ನಮ್ಮನ್ನು ನಿರ್ದೇಶಿಸುತ್ತದೆ, ಇದು ಕಟ್ಟಡದ ಅದೇ ಚಿತ್ರವನ್ನು ಬಳಸಿದೆ.
ಕ್ರೇನ್‌ಗಳ ಸ್ಥಾನಗಳು ಮತ್ತು ಬೆಳಗಿದ ಕಿಟಕಿಗಳಂತಹ ಬುರ್ಜ್ ಖಲೀಫಾದ ವೈಶಿಷ್ಟ್ಯಗಳನ್ನು ಹೋಲಿಸಿ, ಎರಡೂ ಚಿತ್ರಗಳು ಒಂದೇ ಎಂದು ನಾವು ಖಚಿತಪಡಿಸಿಕೊಂಡೆವು.
ನೈಜ ಚಿತ್ರ ಮತ್ತು ವೈರಲ್ ಚಿತ್ರದ ಹೋಲಿಕೆ (ಮೂಲ: ಜೂಲಿಯಾ ಆಲ್ಬಮ್/ ಎಕ್ಸ್)
ಬ್ಲಾಗ್ ನೈಜ ಚಿತ್ರದ ಮೂಲ ಅಥವಾ ದಿನಾಂಕವನ್ನು ನಿರ್ದಿಷ್ಟಪಡಿಸದಿದ್ದರೂ, ೨೦೧೯ ರಿಂದ ಅದರ ಆನ್‌ಲೈನ್ ಉಪಸ್ಥಿತಿಯು ಅದು ಜನವರಿ ೨೨, ೨೦೨೪ ರಂದು ಹುಟ್ಟಿಕೊಂಡಿರಲು ಸಾಧ್ಯವಿಲ್ಲ ಎಂದು ತೋರಿಸುತ್ತದೆ.
ಇದಲ್ಲದೆ, ಬುರ್ಜ್ ಖಲೀಫಾದ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅಂತಹ ಯಾವುದೇ ಚಿತ್ರವು ಕಂಡುಬಂದಿಲ್ಲ. ಇದು ವಿವಿಧ ಚಿತ್ರಗಳಿಂದ ಪ್ರಕಾಶಿಸಲ್ಪಟ್ಟ ಕಟ್ಟಡದ ದೃಶ್ಯಗಳನ್ನು ನಿಯಮಿತವಾಗಿ ಪೋಷ್ಟ್ ಮಾಡುತ್ತದೆ. ಇತ್ತೀಚಿನ ಪೋಷ್ಟ್ ಗಳು ಬುರ್ಜ್ ಖಲೀಫಾದ ಸುತ್ತಲೂ ಯಾವುದೇ ಕ್ರೇನ್‌ಗಳನ್ನು ತೋರಿಸುವುದಿಲ್ಲ, ಇದು ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಮತ್ತಷ್ಟು ನಿರಾಕರಿಸುತ್ತದೆ.
ಕಾಮೆಂಟ್‌ಗಾಗಿ ಬುರ್ಜ್ ಖಲೀಫಾದ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುವ ಕಂಪನಿಯಾದ ಎಮಾರ್ ಎಂಟರ್‌ಟೈನ್‌ಮೆಂಟ್‌ಗೆ ಲಾಜಿಕಲಿ ಫ್ಯಾಕ್ಟ್ಸ್ ತಲುಪಿದೆ. ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ಲೇಖನವನ್ನು ನವೀಕರಿಸಲಾಗುವುದು.
ತೀರ್ಪು
ಪ್ರಶ್ನೆಯಲ್ಲಿರುವ ಚಿತ್ರವು ಹಳೆಯದಾಗಿದೆ ಮತ್ತು ಎಡಿಟ್ ಮಾಡಲಾಗಿದೆ. ಹಾಗೂ, ಬುರ್ಜ್ ಖಲೀಫಾದ ಮೇಲೆ ಅಂತಹ ಯಾವುದೇ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ . ಹೀಗಾಗಿ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.