ಮೂಲಕ: ರೋಹಿತ್ ಗುಟ್ಟಾ
ಫೆಬ್ರವರಿ 2 2024
ನ್ಯೂಸ್ ಕ್ಲಿಪ್ ಅನ್ನು ಎಡಿಟ್ ಮಾಡಲಾದಿಗೆ. ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ವೈಎಸ್ ಶರ್ಮಿಳಾ ಅವರು ಯಾವುದೇ ಆರೋಪ ಮಾಡಿಲ್ಲ.
(ಪ್ರಚೋದಕ ಎಚ್ಚರಿಕೆ: ಈ ಕಥೆಯು ಆಕ್ರಮಣದ ಉಲ್ಲೇಖಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)
ಹೇಳಿಕೆ ಏನು?
ಹೈದರಾಬಾದ್ ಮೂಲದ ಮೊಬೈಲ್ ನ್ಯೂಸ್ ಅಪ್ಲಿಕೇಶನ್ ವೇ2ನ್ಯೂಸ್‌ನ ಸುದ್ದಿ ವರದಿಯ ಉದ್ದೇಶಿತ ಸ್ಕ್ರೀನ್‌ಶಾಟ್ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ಹಲ್ಲೆಯ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಭಾರತದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಮತ್ತು ಇತ್ತೀಚೆಗೆ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ (ಎಪಿಸಿಸಿ) ಅಧ್ಯಕ್ಷೆಯಾಗಿ ನೇಮಕಗೊಂಡ ವೈ.ಎಸ್. ಶರ್ಮಿಳಾ ಅವರ ಪ್ರಕಾರ, ಜಗನ್ ಅವರು ತಮ್ಮ ತಾಯಿಯ ಸಮ್ಮುಖದಲ್ಲಿ ಈ ಹಿಂದೆ ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಉದ್ದೇಶಿತ ಸುದ್ದಿ ವರದಿ ಹೇಳುತ್ತದೆ.
ಉದ್ದೇಶಿತ ತೆಲುಗು ಲೇಖನದ ಶೀರ್ಷಿಕೆಯು, "ಅಂದು ಜಗನ್ ನನ್ನ ಗಂಟಲು ಹಿಡಿದು ಗೋಡೆಗೆ ತಳ್ಳಿದರು - ವೈ.ಎಸ್ ಶರ್ಮಿಳಾ (ಕನ್ನಡಕ್ಕೆ ಅನುವಾಡಿಸಲಾಗಿದೆ)" ಎಂದು ಹೇಳುತ್ತದೆ. ಜನವರಿ ೨೬ ರಂದು ಎಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶರ್ಮಿಳಾ ಅವರು, ಒಂದು ಕಾಲದಲ್ಲಿ ನನಗೆ ತುಂಬಾ ಹತ್ತಿರವಿರುವ ಜನರು ಈಗ ತೆಲುಗು ದಿನಪತ್ರಿಕೆ ಸಾಕ್ಷಿ (ಜಗನ್ ಅವರ ಕುಟುಂಬದ ಒಡೆತನದ ಪತ್ರಿಕೆ) ನಲ್ಲಿ ತಮ್ಮ ಬಗ್ಗೆ ವದಂತಿಗಳನ್ನು ಹರಡುತ್ತಿದ್ದರು ಎಂದು ಶರ್ಮಿಳಾ ಹೇಳಿದ್ದಾರೆ ಎಂದು ಸುದ್ದಿಯು ಹೇಳುತ್ತದೆ. ಒಮ್ಮೆ, ಪೂರ್ವಿಕರ ಆಸ್ತಿಯಲ್ಲಿ ತನಗೆ ಪಾಲು ಕೇಳಲು ಶರ್ಮಿಳಾ ಜಗನ್ ಅವರನ್ನು ಸಂಪರ್ಕಿಸಿದಾಗ, ಅವನು ತನ್ನ ಕುತ್ತಿಗೆಯನ್ನು ಹಿಡಿದು ಗೋಡೆಗೆ ತಳ್ಳಿದರು ಎಂದು ಸ್ಕ್ರೀನ್‌ಶಾಟ್‌ನಲ್ಲಿರುವ ಪಠ್ಯವು ಓದುತ್ತದೆ. ಅವರ ತಾಯಿ ಕೂಡ ಆಪಾದಿತ ಘಟನೆಗೆ ಸಾಕ್ಷಿಯಾಗಿದ್ದರು ಎಂದು ಪಠ್ಯದಲ್ಲಿ ವಿವರಿಸಲಾಗಿದೆ. ಉದ್ದೇಶಿತ ಸುದ್ದಿ ವರದಿಯನ್ನು ಹಂಚಿಕೊಳ್ಳುವ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ವೈ.ಎಸ್ ಶರ್ಮಿಳಾ ಅವರು ತಮ್ಮ ಸಹೋದರ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ (ವೈಎಸ್‌ಆರ್‌ಸಿಪಿ) ಬೇರ್ಪಟ್ಟ ನಂತರ ಜುಲೈ ೨೦೨೧ ರಲ್ಲಿ ಸ್ಥಾಪಿಸಿದ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು (ವೈಎಸ್‌ಆರ್‌ಟಿಪಿ) ಜನವರಿ ೪ ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದರು.
ಆದರೆ, ಶರ್ಮಿಳಾ ತನ್ನ ಸಹೋದರ ಮತ್ತು ಆಂಧ್ರಪ್ರದೇಶ ಸಿಎಂ ಜಗನ್ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ ಎಂಬ ಆರೋಪವು ತಪ್ಪಾಗಿದೆ. ವೇ2ನ್ಯೂಸ್ ಅಂತಹ ಸುದ್ದಿ ವರದಿಯನ್ನು ಪ್ರಕಟಿಸಿಲ್ಲ, ಕಾಂಗ್ರೆಸ್ ರಾಜಕಾರಣಿಯೂ ಅಂತಹ ಆರೋಪಗಳನ್ನು ಮಾಡಿಲ್ಲ.
ನಾವು ಕಂಡುಹಿಡಿದದ್ದು ಏನು?
ವೈರಲ್ ಪೋಷ್ಟ್ ಗಳಲ್ಲಿ ಹಂಚಿಕೊಳ್ಳಲಾದ ಉದ್ದೇಶಿತ ವೇ2ನ್ಯೂಸ್ ಸ್ಕ್ರೀನ್‌ಶಾಟ್‌ನಲ್ಲಿ ನಾವು ಹಲವಾರು ವ್ಯತ್ಯಾಸಗಳನ್ನು ಕಂಡುಹಿಡಿದೆವು. ಸ್ಕ್ರೀನ್‌ಶಾಟ್‌ನಲ್ಲಿರುವ ಪಠ್ಯದ ಫಾಂಟ್ ವೇ2ನ್ಯೂಸ್ ವರದಿಗಳಲ್ಲಿ ಬಳಸಿದ ಫಾಂಟ್‌ಗಿಂತ ಭಿನ್ನವಾಗಿದೆ. ವೈರಲ್ ಸ್ಕ್ರೀನ್‌ಶಾಟ್ ಸುದ್ದಿ ವರದಿಯ ಪ್ರಕಟಣೆಯ ದಿನಾಂಕ ಮತ್ತು ಸಮಯವನ್ನು ಸಹ ಪಟ್ಟಿ ಮಾಡಿಲ್ಲ, ಸಾಮಾನ್ಯವಾಗಿ ವೇ2ನ್ಯೂಸ್ ಈ ವಿವರಗಳನ್ನು ಪ್ರಕಟಿಸುತ್ತದೆ.
ವೇ2ನ್ಯೂಸ್ ಸಾಮಾನ್ಯವಾಗಿ ಲೇಖನದ ಮುಖ್ಯ ಚಿತ್ರದ ಕೆಳಗೆ ಸಂಬಂಧಿತ ಸುದ್ದಿಗಳಿಗೆ ಹೈಪರ್‌ಲಿಂಕ್‌ಗಳನ್ನು ನೀಡುತ್ತದೆ, ಅದು ಓದುಗರನ್ನು ಅವರ ಮೊಬೈಲ್ ಅಪ್ಲಿಕೇಶನ್‌ಗೆ ನಿರ್ದೇಶಿಸುತ್ತದೆ. ಆದರೆ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಲಿಂಕ್ ಮಾರ್ಚ್ ೨೧, ೨೦೨೩ ರಂದು ವೇ2ನ್ಯೂಸ್ ವೆಬ್ ಅಪ್ಲಿಕೇಶನ್‌ನಿಂದ ಪ್ರಕಟಿಸಲಾದ ಪ್ರಸಿದ್ಧ ವ್ಯಕ್ತಿಗಳ ಅಡ್ಡಹೆಸರುಗಳ ಕುರಿತಾದ ಕಥೆಯನ್ನು ತೆಗೆದುಕೊಳ್ಳುತ್ತದೆ. ಕಥೆಯ ಶೀರ್ಷಿಕೆಯು , "ಜಿಕೆ : ಸೋಬ್ರಿಕ್ಯೂಟ್ಸ್ ಆಫ್ ಫೇಮಸ್ ಪೆರ್ಸನಲೈಟಿಸ್" ಎಂದು ಓದುತ್ತದೆ. ಇದು ಚಿತ್ತರಂಜನ್ ದಾಸ್, ಚಕ್ರವರ್ತಿ ರಾಜಗೋಪಾಲಾಚಾರಿ, ರವೀಂದ್ರನಾಥ ಟ್ಯಾಗೋರ್ ಮತ್ತು ಇತರರಂತಹ ವಿವಿಧ ವ್ಯಕ್ತಿಗಳ ಹೆಸರುಗಳನ್ನು ಅವರ ಅಡ್ಡಹೆಸರುಗಳೊಂದಿಗೆ ಪಟ್ಟಿಮಾಡುತ್ತದೆ.
ವೆಬ್ ಬ್ರೌಸರ್‌ನಲ್ಲಿ ಲಿಂಕ್ ಅನ್ನು ತೆರೆದಾಗ, ಅದು ನಮ್ಮನ್ನು ವೇ2ನ್ಯೂಸ್ ಅವರ ಎಚ್ಚರಿಕೆಯ ಪುಟಕ್ಕೆ ಮರುನಿರ್ದೇಶಿಸುತ್ತದೆ ಮತ್ತು ನಕಲಿ ಸ್ಕ್ರೀನ್‌ಶಾಟ್‌ಗಳಿಗೆ ಬೀಳದಂತೆ ಓದುಗರಿಗೆ ಎಚ್ಚರಿಕೆ ನೀಡುತ್ತದೆ ಹಾಗು ಅವುಗಳನ್ನು ಅಸಲಿ ಎಂದು ಹಂಚಿಕೊಳ್ಳಲಾರದಂತೆ ಹೇಳುತ್ತದೆ. ವೇ2ನ್ಯೂಸ್ ಪ್ರಾರಂಭಿಸಿದ ಫ್ಯಾಕ್ಟ್- ಚೆಕ್ ಪುಟಕ್ಕೆ ಲಿಂಕ್ ತೆರೆಯುತ್ತದೆ, ಓದುಗರಿಗೆ ಲಿಂಕ್ ನ ಕೊನೆಯಲ್ಲಿ 'ಲೇಖನ ಐಡಿ ' ಅನ್ನು ನಮೂದಿಸಲು ಮತ್ತು ಅಪ್ಲಿಕೇಶನ್ ಅಂತಹ ಸುದ್ದಿ ಲೇಖನವನ್ನು ಪ್ರಕಟಿಸಿದೆಯೇ ಎಂದು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.
ನಕಲಿ ಲೇಖನ ಮತ್ತು ಮೂಲ ವೇ2ನ್ಯೂಸ್ ವರದಿಯ ನಡುವಿನ ಹೋಲಿಕೆ.(ಮೂಲ: ಎಕ್ಸ್/ವೇ2ನ್ಯೂಸ್ /ಸ್ಕ್ರೀನ್‌ಶಾಟ್)
ಔಟ್ಲೆಟ್ ಉದ್ದೇಶಿತ ಸುದ್ದಿ ವರದಿಯನ್ನು ಪ್ರಕಟಿಸಿದೆಯೇ ಎಂದು ನಿರ್ಧರಿಸಲು ನಾವು ವೇ೨2ನ್ಯೂಸ್ ಅನ್ನು ಸಹ ಸಂಪರ್ಕಿಸಿದ್ದೇವೆ. ಅಂತಹ ಲೇಖನವನ್ನು ಅವರು ಎಂದಿಗೂ ಪ್ರಕಟಿಸಿಲ್ಲ ಮತ್ತು ಅದು "ಅವರ ಹೆಸರಿನಲ್ಲಿ ಹರಡುತ್ತಿರುವ ತಪ್ಪು ಮಾಹಿತಿ" ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಶರ್ಮಿಳಾ ಹೇಳಿದ್ದೇನು?
ಜನವರಿ ೨೬ ರಂದು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದಾಗ ಶರ್ಮಿಳಾ ಅವರ ಚಿತ್ರವನ್ನು ಉದ್ದೇಶಿತ ಸ್ಕ್ರೀನ್‌ಶಾಟ್‌ನಲ್ಲಿ ಬಳಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ತೆಲುಗು ಸುದ್ದಿ ವಾಹಿನಿ ಟಿವಿ೫ ನ್ಯೂಸ್ ನಲ್ಲಿ ಗಣರಾಜ್ಯೋತ್ಸವವನ್ನು ಮುಗಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಶರ್ಮಿಳಾ ಅವರ ಹೇಳಿಕೆಯ ವೀಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ತನ್ನ ಸಹೋದರ ಮತ್ತು ಆತನನ್ನು ಅಗಲಿದ ನಂತರ ತನ್ನ ಹೆಸರಿನಲ್ಲಿ 'ವೈಎಸ್' ಎಂಬ ಕುಟುಂಬದ ಶೀರ್ಷಿಕೆಯನ್ನು ಬಳಸುತ್ತಿರುವ ಬಗ್ಗೆ ಕೇಳಿದಾಗ, ಶರ್ಮಿಳಾ ಅವರು ಹೀಗೆ ಪ್ರತಿಕ್ರಿಯಿಸುತ್ತಾರೆ, "ಒಂದು ಕಾಲದಲ್ಲಿ ನನಗೆ ತುಂಬಾ ಹತ್ತಿರವಾಗಿದ್ದವರು ಈಗ ಸಾಕ್ಷಿ ಪತ್ರಿಕೆಯಲ್ಲಿ ನನ್ನ ಬಗ್ಗೆ ವದಂತಿಗಳನ್ನು ಹರಡುತ್ತಿದ್ದಾರೆ." ೨೦೧೯ ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಜಗನ್ ಅವರು ನಡೆಸಿದ ವಾಕಥಾನ್‌ನಲ್ಲಿ ಅವರ ಕೋರಿಕೆಯ ಮೇರೆಗೆ ಭಾಗವಹಿಸಿದ್ದೇನೆ ಮತ್ತು ಅವರು ಬಯಸಿದ್ದರಿಂದ ಅಲ್ಲ ಎಂದು ಅವರು ಹೇಳಿದರು. “ನಾನು ವಾಕಥಾನ್ ಅನ್ನು ನಿಸ್ವಾರ್ಥವಾಗಿ ನಡೆಸಿದ್ದೇನೆ. ಅದರ ನಂತರ ನಾನು ಮುಖ್ಯಮಂತ್ರಿ (ಜಗನ್) ಬಳಿ ಯಾವತ್ತೂ ಕೃಪೆ ಕೇಳಿಲ್ಲ. ಇದಕ್ಕೆ ನಮ್ಮ ತಾಯಿಯೇ ಸಾಕ್ಷಿ.” ಮೂಲ ಹೇಳಿಕೆಯಲ್ಲಿ, ವೈರಲ್ ಪೋಷ್ಟ್ ನಲ್ಲಿ ಹೇಳಿಕೊಂಡಂತೆ ಅವರು ಯಾವುದೇ ಆಕ್ರಮಣದ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡುವುದಿಲ್ಲ.
ತೀರ್ಪು
ಸುದ್ದಿ ವಾಹಿನಿಯ ಫೇಕ್ ಸ್ಕ್ರೀನ್‌ಶಾಟ್ ಅನ್ನು ಬಳಸಿ ಆಂಧ್ರಪ್ರದೇಶ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಎಪಿಸಿಸಿ ಅಧ್ಯಕ್ಷ ವೈ.ಎಸ್. ಶರ್ಮಿಳಾ ಅವರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಆರೋಪ ಮಾಡಿದ್ದಾರೆ ಎಂದು ತಪ್ಪಾಗಿ ಹೇಳಲಾಗಿದೆ. ಆದ್ದರಿಂದ ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.