ಮೂಲಕ: ರಜಿನಿ ಕೆ.ಜಿ
ಜುಲೈ 17 2023
ಈ ಪ್ರಣಾಳಿಕೆ ತೆಲಂಗಾಣ ರಾಜ್ಯ ಕಾಂಗ್ರೆಸ್ ೨೦೧೮ ರಲ್ಲಿ ಬಿಡುಗಡೆ ಮಡಿದ್ದು. ಪ್ರಣಾಳಿಕೆಯಲ್ಲಿ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಪ್ರತ್ಯೇಕಿಸಿಲ್ಲ ಅಥವಾ ಪರವಾಗಿ ಉಲ್ಲೇಖಿಸಿಲ್ಲ.
ಸಂದರ್ಭ
ಮೇ ೭ ರಂದು, ಕರ್ನಾಟಕ ಚುನಾವಣೆಗೆ ಕೆಲವು ದಿನಗಳ ಮೊದಲು, ಅನುಪ್ ರಾವತ್ ಎಂಬ ಟ್ವಿಟರ್ ಬಳಕೆದಾರರು ಸುದ್ದಿ ವಾಹಿನಿಯೊಂದರ ಪ್ರಸಾರದ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಇದು "ಕಾಂಗ್ರೆಸ್ ಕರ್ನಾಟಕ ಪ್ರಣಾಳಿಕೆಯ ಗ್ಲಿಂಪ್ಸ್" ಅನ್ನು ತೋರಿಸುತ್ತದೆ ಎಂದು ಬರೆದಿದ್ದಾರೆ. "ಮುಸ್ಲಿಂ ಯುವಕರಿಗೆ ಎಲ್ಲಾ ಸರ್ಕಾರಿ ಒಪ್ಪಂದಗಳು, ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ೨೦ ಲಕ್ಷ ಆರ್ಥಿಕ ನೆರವು, ಮುಸ್ಲಿಮರಿಗೆ ವಸತಿ ಶಾಲೆಗಳು, ಅಲ್ಪಸಂಖ್ಯಾತರಿಗೆ ಮಾತ್ರ ಆಸ್ಪತ್ರೆಗಳು" ಮತ್ತು "ಮಸೀದಿಗಳು ಮತ್ತು ಚರ್ಚ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು" ಎಂದು ಕಾಂಗ್ರೆಸ್ ಭರವಸೆ ನೀಡಿದೆ ಎಂದು ಶೀರ್ಷಿಕೆ ಹೇಳುತ್ತದೆ. ಪ್ರಣಾಳಿಕೆಯನ್ನು ಟೀಕಿಸಿದ ಟೈಮ್ಸ್ ನೌ (Times Now) ಸುದ್ದಿ ವಾಹಿನಿಯ ವಿಶೇಷ ಬುಲೆಟಿನ್ ಅನ್ನು ವೀಡಿಯೋ ತೋರಿಸಿದೆ.
ಆದರೆ, ಈ ಹೇಳಿಕೆ ಸಂದರ್ಭದಿಂದ ಹೊರಗಿದೆ. ಟೈಮ್ಸ್ ನೌ (Times Now) ಪ್ರಸಾರವು ೨೦೧೮ ರದ್ದು, ಮತ್ತು ಪೋಷ್ಟ್ ಈ ಪ್ರಸಾರವನ್ನು ಮತ್ತು ಪ್ರಣಾಳಿಕೆಯನ್ನು ಇತ್ತೀಚಿನದು ಎಂದು ತಪ್ಪಾಗಿ ಪ್ರತಿನಿಧಿಸುತ್ತದೆ.
ವಾಸ್ತವವಾಗಿ
ಲಾಜಿಕಲಿ ಫ್ಯಾಕ್ಟ್ಸ್ ಮೂಲ ಪ್ರಸಾರವನ್ನು ನವೆಂಬರ್ ೨೬, ೨೦೧೮ ರಂದು ಟೈಮ್ಸ್ ನೌ ಪ್ರಸಾರ ಮಾಡಿದೆ ಎಂದು ಕಂಡುಹಿಡಿದಿದೆ. ಕಾರ್ಯಕ್ರಮವನ್ನು 'ಇಂಡಿಯಾ ಅಪ್‌ಫ್ರಂಟ್ ವಿತ್ ರಾಹುಲ್ ಶಿವಶಂಕರ್' ಎಂದು ಕರೆಯಲಾಗಿದೆ ಮತ್ತು ಇದು ೨೦೧೮ ರ ತೆಲಂಗಾಣ ರಾಜ್ಯ ಚುನಾವಣೆಗಾಗಿ ಬಿಡುಗಡೆಯಾದ ಕಾಂಗ್ರೆಸ್‌ನ ಪ್ರಣಾಳಿಕೆಯ ಬಗ್ಗೆ ಚರ್ಚಿಸಿತ್ತು.
ವೈರಲ್ ಪೋಷ್ಟ್‌ನಲ್ಲಿ ಉಲ್ಲೇಖಿಸಲಾದ ಯಾವುದೇ ಭರವಸೆಗಳು ಮೇ ೨, ೨೦೨೩ ರಂದು ಬಿಡುಗಡೆಯಾದ ೨೦೨೩ ರ ವಿಧಾನಸಭಾ ಚುನಾವಣೆಯ ಕರ್ನಾಟಕ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿಲ್ಲ. ಈ ಚುನಾವಣಾ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಮೀಸಲಾತಿ ಕೋಟಾವನ್ನು ಶೇಕಡಾ ೭೫ ಕ್ಕೆ ಹೆಚ್ಚಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಮುಸ್ಲಿಮರಿಗೆ ೪ ಪ್ರತಿಶತ ಕೋಟಾವನ್ನು ಮರಳಿ ತರುವುದಾಗಿ ಭರವಸೆ ನೀಡಿದೆ.
ಇದು ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು ಮತ್ತು ಇತರ ಸಮುದಾಯಗಳಿಗೆ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಆರ್ಥಿಕ ನಿಧಿಯನ್ನು ಹೆಚ್ಚಿಸಿದೆ ಮತ್ತು ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಇತರರ ಧಾರ್ಮಿಕ ಸ್ಥಳಗಳನ್ನು ನವೀಕರಿಸಲು ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದೆ. ಇದು ನಿರ್ದಿಷ್ಟ ಸಮುದಾಯವನ್ನು ಪ್ರತ್ಯೇಕಿಸುವುದಿಲ್ಲ.
ಟೈಮ್ಸ್ ನೌ ಉಲ್ಲೇಖಿಸಿರುವ ಪ್ರಣಾಳಿಕೆಯ ಸ್ಪಷ್ಟೀಕರಣಕ್ಕಾಗಿ ನಾವು ತೆಲಂಗಾಣ ರಾಜ್ಯ ಕಾಂಗ್ರೆಸ್ ಅನ್ನು ಸಹ ಸಂಪರ್ಕಿಸಿದ್ದೇವೆ. ಲಾಜಿಕಲಿ ಫ್ಯಾಕ್ಟ್ಸ್ ಜೊತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಹರಿ ಪ್ರಸಾದ್ ಹೀಗೆ ಹೇಳಿದರು “ಇದು ತೆಲಂಗಾಣದ ೨೦೧೮ ರ ಹಳೆಯ ಪ್ರಣಾಳಿಕೆಯಾಗಿದೆ. ಇದು ಇತ್ತೀಚಿನ ಕರ್ನಾಟಕದ ಪ್ರಣಾಳಿಕೆಯಂತೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವುದನ್ನು ನಾವು ಕರ್ನಾಟಕ ಕಾಂಗ್ರೆಸ್ ಜನರ ಗಮನಕ್ಕೆ ತಂದಿದ್ದೆವೆ. ಇದಲ್ಲದೆ, ಅದರಲ್ಲಿರುವ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ. ಇದು ಕೇವಲ ಮುಸ್ಲಿಮರಿಗೆ ನೀಡಿದ ಭರವಸೆ ಎಂದು ತೋರಿಸಲಾಗಿದೆ, ಆದರೆ ಇದು ನಿಜವಲ್ಲ. ಅವುಗಳನ್ನು ಸಂದರ್ಭದಿಂದ ಹೊರತೆಗೆಯಲಾಗಿದೆ.”
ಟೈಮ್ಸ್ ನೌ ನೀಡಿದ ಹೇಳಿಕೆಗಳು ನಿಖರವಾಗಿವೆಯೇ ಎಂದು ಪರಿಶೀಲಿಸಲು ಲಾಜಿಕಲಿ ಫ್ಯಾಕ್ಟ್ಸ್ ೨೦೧೮ ರ ತೆಲಂಗಾಣ ಕಾಂಗ್ರೆಸ್ ಪ್ರಣಾಳಿಕೆಯನ್ನು ಪರಿಶೀಲಿಸಿತು. ೨೦೧೮ ರ ತೆಲಂಗಾಣ ಪ್ರಣಾಳಿಕೆಯು ಮುಸ್ಲಿಮರಿಗೆ ಮಾತ್ರವಲ್ಲದೆ ಕ್ರಿಶ್ಚಿಯನ್ನರು, ದಲಿತರು, ಎಸ್‌ಸಿ ಮತ್ತು ಎಸ್‌ಟಿ ಸೇರಿದಂತೆ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಉಲ್ಲೇಖಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ.
೨೦೧೮ ರಿಂದ ಟೈಮ್ಸ್ ನೌ ಪ್ರಸಾರವು ಪ್ರಣಾಳಿಕೆಯು ಎಲ್ಲಾ ಮುಸ್ಲಿಂ ಯುವಕರಿಗೆ ಸರ್ಕಾರಿ ಗುತ್ತಿಗೆಗಳನ್ನು ಭರವಸೆ ನೀಡಿದೆ ಎಂದು ಹೇಳಿಕೊಂಡಿದೆ. ಆದರೆ, ಪ್ರಣಾಳಿಕೆಯಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಹಣಕಾಸು ನಿಗಮ, ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಹಣಕಾಸು ನಿಗಮ ಮತ್ತು ಭಾಷಾವಾರು ಎಂಬ ಮೂರು ನಿಗಮಗಳನ್ನು ರಚಿಸುವುದಾಗಿ ಉಲ್ಲೇಖಿಸಲಾಗಿದೆ.
ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ರೂ. ೨೦ ಲಕ್ಷ ಧನಸಹಾಯ ಘೋಷಣೆ ಮಾಡಿರುವುದು ಕೂಡ ಸುಳ್ಳಾಗಿದ್ದು, ಪ್ರಣಾಳಿಕೆಯಲ್ಲಿ ರೂ. ೨೦ ಲಕ್ಷ ನೆರವು ಮುಸ್ಲಿಮರಿಗೆ ಮತ್ತು ಎಸ್‌ಸಿ, ಎಸ್‌ಟಿ ಸಮುದಾಯದ ಅಭ್ಯರ್ಥಿಗಳಿಗೆ ವಿದೇಶಿ ಶಿಕ್ಷಣಕ್ಕಾಗಿ ನೀಡಲಾಗುವುದು ಎಂದು ಉಲ್ಲೇಖಿಸಿದೆ.
ಪ್ರಣಾಳಿಕೆಯಲ್ಲಿ ಹೆಣ್ಣು ಮಕ್ಕಳು, ಬುಡಕಟ್ಟು ಜನಾಂಗದವರು, ಅಲ್ಪಸಂಖ್ಯಾತ ವಿದ್ಯಾರ್ಥಿಗಳು, ದೃಷ್ಟಿ ವಿಕಲಚೇತನರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗಾಗಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿರುವುದರಿಂದ ಮುಸ್ಲಿಮರಿಗೆ ಮಾತ್ರ ವಸತಿ ಶಾಲೆಗಳನ್ನು ತೆರೆಯಲಾಗುವುದು ಎಂಬ ಹೇಳಿಕೆಯು ಸಂದರ್ಭದಿಂದ ಹೊರಗಿಡಲಾಗಿದೆ.
ಪ್ರಣಾಳಿಕೆ ಅಲ್ಪಸಂಖ್ಯಾತರಿಗೆ ಮಾತ್ರ ಆಸ್ಪತ್ರೆಗಳ ಭರವಸೆ ಎಂದು ಟೈಮ್ಸ್ ನೌ (Times now) ಹೇಳಿಕೊಂಡರೆ, ಅಲ್ಪಸಂಖ್ಯಾತರು ಕೇಂದ್ರೀಕೃತ ಪ್ರದೇಶಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು ಮತ್ತು ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದು ಪ್ರಣಾಳಿಕೆ ಹೇಳುತ್ತದೆ.
ಮಸೀದಿಗಳು ಮತ್ತು ಚರ್ಚ್‌ಗಳಿಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುವುದು ಎಂದು ಟೈಮ್ಸ್ ನೌ ಹೇಳಿಕೊಂಡಿದೆ. ಆದರೆ, ಪ್ರಣಾಳಿಕೆಯು ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಮತ್ತು ಇತರ ಪೂಜಾ ಸ್ಥಳಗಳಿಗೆ ಉಚಿತ ವಿದ್ಯುತ್ ಒದಗಿಸುವುದರ ಬಗ್ಗೆ ಪ್ರಸ್ತಾಪಿಸುತ್ತದೆ.
೨೦೧೮ ರಲ್ಲಿ, ದಿ ಕ್ವಿಂಟ್ (The Quint ) ಈ ಪ್ರಸಾರವನ್ನು ನಿರಾಕರಿಸಿತ್ತು ಮತ್ತು ೨೦೧೮ ರ ತೆಲಂಗಾಣ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯನ್ನು ಟೈಮ್ಸ್ ನೌ ತಪ್ಪುದಾರಿಗೆಳೆಯುವ ನಿರೂಪಣೆಗಳೊಂದಿಗೆ ಪ್ರಸಾರ ಮಾಡಿದೆ ಎಂದು ವರದಿ ಮಾಡಿದೆ.
ತೀರ್ಪು
೨೦೧೮ ರ ತೆಲಂಗಾಣ ವಿಧಾನಸಭೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ತಪ್ಪಾಗಿ ಅರ್ಥೈಸುವ ಹಳೆಯ ಸುದ್ದಿ ಪ್ರಸಾರವನ್ನು ಮತ್ತೆ ಹಂಚಿಕೊಳ್ಳಲಾಗಿದೆ. ಅದನ್ನು ೨೦೨೩ ರ ಕರ್ನಾಟಕ ಚುನಾವಣೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಗುರುತಿಸಿದ್ದೇವೆ.