ಮೂಲಕ: ಉಮ್ಮೆ ಕುಲ್ಸುಮ್
ಜೂನ್ 5 2024
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಕೊಯಮತ್ತೂರಿನ ನಿರ್ದಿಷ್ಟ ಮತಗಟ್ಟೆಯಲ್ಲಿ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಒಂದಲ್ಲ ೧೦೧ ಮತಗಳನ್ನು ಪಡೆದಿದ್ದಾರೆ.
ಹೇಳಿಕೆ ಏನು?
ಜೂನ್ ೪ ರಂದು ೨೦೨೪ ರ ಲೋಕಸಭಾ ಚುನಾವಣಾ ಫಲಿತಾಂಶಗಳ ಘೋಷಣೆಯ ಸಮಯದಲ್ಲಿ, ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದ ಫಲಿತಾಂಶದ ಹಾಳೆಯನ್ನು ತೋರಿಸುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಮತಗಟ್ಟೆಯಲ್ಲಿ ಕೇವಲ ಒಂದು ಮತ ಪಡೆದಿದ್ದಾರೆ ಎಂದು ಚಿತ್ರದಲ್ಲಿ ಹೇಳಲಾಗಿದೆ. ಅಣ್ಣಾಮಲೈ ಕೊಯಮತ್ತೂರು ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಕ್ತಾರರಾದ ಸೇಲಂ ಧರಣೀಧರನ್ ಅವರು ಚಿತ್ರವನ್ನು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ, “ಆಡು ಅಣ್ಣಾಮಲೈ ಅವರು ಬೂತ್‌ನಲ್ಲಿ ಕೇವಲ ಒಂದು ಮತವನ್ನು ಪಡೆದಿದ್ದಾರೆ. ಒಂದು ಪ್ಲೇಟ್ ಮಟನ್ ಚುಕ್ಕಾ ಪಾರ್ಸೆಲ್ (sic).”
ಪೋಷ್ಟ್ ಬರೆಯುವ ಸಮಯದಲ್ಲಿ ೩೮,೦೦೦ ವೀಕ್ಷಣೆಗಳನ್ನು ಗಳಿಸಿದೆ. ಅದೇ ಚಿತ್ರವನ್ನು ಒಳಗೊಂಡಿರುವ ಮತ್ತೊಂದು ಪೋಷ್ಟ್ ೫೦೦,೦೦೦ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಚುನಾವಣೆ ಸಂದರ್ಭದಲ್ಲಿ ಅಣ್ಣಾಮಲೈ ಅವರ ಕಾರ್ಯವೈಖರಿಯನ್ನು ಅಪಹಾಸ್ಯ ಮಾಡಿದೆ. ಅಂತಹ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಇದಲ್ಲದೆ, ಮಲಯಾಳಂ ಸುದ್ದಿವಾಹಿನಿಗಳಾದ ಏಷ್ಯಾನೆಟ್ ನ್ಯೂಸ್ ಮತ್ತು ಕೇರಳ ಕೌಮುದಿ ಕೂಡ ಚಿತ್ರವನ್ನು ಪ್ರಕಟಿಸಿದ್ದು, ಕೊಯಮತ್ತೂರಿನ ಮತಗಟ್ಟೆಯಲ್ಲಿ ಅಣ್ಣಾಮಲೈ ಅವರು "ಕೇವಲ ಒಂದು ಮತ" ಪಡೆದಿದ್ದಾರೆ ಎಂದು ಹೇಳಿಕೊಂಡಿವೆ.
ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ನಾವು ಕಂಡುಕೊಂಡದ್ದು
ಫಲಿತಾಂಶದ ದಿನದಂದು ನೇರ ಮತ ಎಣಿಕೆ ನವೀಕರಣಗಳನ್ನು ಒದಗಿಸಿದ ತಮಿಳು ಸುದ್ದಿ ವಾಹಿನಿಯ ಸನ್ ನ್ಯೂಸ್‌ನ ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಅನ್ನು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ಪೋಷ್ಟ್‌ನಲ್ಲಿ ಮೂಲ ಚಿತ್ರ ದಾಖಲೆ ಕಾಣಿಸಿಕೊಂಡಿದ್ದು, ‘BCUAF 07464 - 312’ ಸಂಖ್ಯೆಯ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ೧೦೧ ಮತಗಳನ್ನು ಪಡೆದಿದ್ದಾರೆ ಎಂದು ಬಹಿರಂಗಪಡಿಸಿದೆ.
ಹೆಚ್ಚುವರಿಯಾಗಿ, ಇದೇ ಬೂತ್‌ನಲ್ಲಿ, ಮೊದಲ ಸುತ್ತಿನಲ್ಲಿ ಎಐಎಡಿಎಂಕೆ (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ಅಭ್ಯರ್ಥಿ ಸಿಂಗೈ ಜಿ ರಾಮಚಂದ್ರನ್ ೨೪ ಮತಗಳನ್ನು ಪಡೆದರೆ, ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಅಭ್ಯರ್ಥಿ ಗಣಪತಿ ಪಿ. ರಾಜ್‌ಕುಮಾರ್ ೧೬೪ ಮತಗಳನ್ನು ಪಡೆದಿದ್ದಾರೆ ಎಂದು ದಾಖಲೆ ಸೂಚಿಸಿದೆ.
ವೈರಲ್ ಚಿತ್ರ ಮತ್ತು ಸನ್ ನ್ಯೂಸ್ ಹಂಚಿಕೊಂಡ ಚಿತ್ರದ ಹೋಲಿಕೆ. (ಮೂಲ: ಎಕ್ಸ್/@sunnewstamil)
ಲಾಜಿಕಲಿ ಫ್ಯಾಕ್ಟ್ಸ್ ಕೂಡ ಕೊಯಮತ್ತೂರಿನ ಸ್ಥಳೀಯ ಪತ್ರಕರ್ತರನ್ನು ಸಂಪರ್ಕಿಸಿದೆ, ಅವರು ಮೂಲ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅಣ್ಣಾಮಲೈ ಅವರು ‘BCUAF 07464 - 312’’ ಮತಗಟ್ಟೆಯಲ್ಲಿ ಕೇವಲ ಒಂದು ಮತವಲ್ಲ ೧೦೧ ಮತಗಳನ್ನು ಪಡೆಡಿದ್ದಾರೆ ಎಂದು ಖಚಿತಪಡಿಸಿದರು.
ಇದಲ್ಲದೆ, ಕೊಯಮತ್ತೂರು ಸಂಸದೀಯ ಕ್ಷೇತ್ರದ ಯಾವುದೇ ಬೂತ್‌ನಲ್ಲಿ ಅಣ್ಣಾಮಲೈ ಒಂದೇ ಅಂಕೆಯಲ್ಲಿ ಮತ ಪಡೆದಿಲ್ಲ ಎಂದು ಉಳಿದ ದಾಖಲೆ ಬಹಿರಂಗಪಡಿಸಿದೆ. ಎಕ್ಸ್ ನಲ್ಲಿ ಸನ್ ನ್ಯೂಸ್ ಹಂಚಿಕೊಂಡ ಫಲಿತಾಂಶಗಳ ದಾಖಲೆಯ ಪ್ರಕಾರ, 'BCUEK 74482 - 564' ಮತಗಟ್ಟೆಯಲ್ಲಿ ಅವರು ಪಡೆದ ಕಡಿಮೆ ಸಂಖ್ಯೆಯ ಮತಗಳು ೬೨ ಆಗಿದೆ.
ಸನ್ ನ್ಯೂಸ್‌ನ ಎಕ್ಸ್ ಪೋಷ್ಟ್‌ನ ಸ್ಕ್ರೀನ್‌ಶಾಟ್.(ಮೂಲ: ಎಕ್ಸ್/@sunnewstamil)
ನಾವು ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಅನ್ನು ಸಹ ಪರಿಶೀಲಿಸಿದ್ದೇವೆ, ಅಲ್ಲಿ ಕ್ಷೇತ್ರವಾರು ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಅಣ್ಣಾಮಲೈ ಅವರು ಒಟ್ಟು ೪,೫೦,೧೩೨ ಮತಗಳನ್ನು ಪಡೆದರು ಆದರೆ ಚುನಾವಣೆಯಲ್ಲಿ ಡಿಎಂಕೆಯ ಪಿ ಗಣಪತಿ ರಾಜ್‌ಕುಮಾರ್ ವಿರುದ್ಧ ಸೋತರು, ಅವರು ಒಟ್ಟು ೫,೬೮,೨೦೦ ಮತಗಳನ್ನು ಗಳಿಸಿದರು ಮತ್ತು ೧,೧೮,೦೬೮ ಮತಗಳ ಅಂತರದಿಂದ ಗೆದ್ದರು.
ತೀರ್ಪು
ಕೊಯಮತ್ತೂರಿನ ನಿರ್ದಿಷ್ಟ ಮತಗಟ್ಟೆಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಕೇವಲ ಒಂದು ಮತ ಪಡೆದಿದ್ದಾರೆ ಎಂದು ಹೇಳುವ ಚಿತ್ರವನ್ನು ಎಡಿಟ್ ಮಾಡಲಾಗಿದೆ. ಆ ನಿರ್ದಿಷ್ಟ ಮತಗಟ್ಟೆಯಲ್ಲಿ ಅಣ್ಣಾಮಲೈ ಅವರು ೧೦೧ ಮತಗಳನ್ನು ಪಡೆದರು. ಪರಿಣಾಮವಾಗಿ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.