ಮೂಲಕ: ಚಂದನ್ ಬೋರ್ಗೊಹೈನ್
ಅಕ್ಟೋಬರ್ 17 2024
ವೈರಲ್ ಹೇಳಿಕೆಗಳು ತಪ್ಪು. ಆಹಾರವನ್ನು ಹುಡುಕುತ್ತಾ ಪೆಂಡಾಲ್ ಗೆ ನುಗ್ಗಿದ ನಿರಾಶ್ರಿತ ವ್ಯಕ್ತಿ ಕೃಷ್ಣಯ್ಯ ಗೌಡ್ ಇಂದ ದುರ್ಗಾ ಮೂರ್ತಿಗೆ ಹಾನಿ ಮಾಡಲಾಗಿತ್ತು.
ಹೇಳಿಕೆ ಏನು?
ತೆಲಂಗಾಣದ ಹೈದರಾಬಾದ್‌ನಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ದುರ್ಗಾ ಪೆಂಡಾಲ್ ಅನ್ನು ಧ್ವಂಸಗೊಳಿಸಿ, ಹಿಂದೂ ದೇವತೆ ದುರ್ಗಾ ದೇವಿಯ ಮೂರ್ತಿಯನ್ನು ಹಾನಿಗೊಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೋ ಹೇಳಿಕೊಂಡಿದೆ. ವೀಡಿಯೋದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪೆಂಡಾಲದೊಳಗೆ ಜನರ ಗುಂಪನ್ನು ತೋರಿಸುತ್ತದೆ, ಅಲ್ಲಿ ವಿಗ್ರಹದ ಒಂದು ಕೈ ಮುರಿದಿರುವುದು ಕಂಡುಬರುತ್ತದೆ ಮತ್ತು ದೇವಾಲಯದ ಸುತ್ತಲೂ ಕಾಣಿಕೆಗಳನ್ನು ಹರಡಲಾಗಿದೆ.
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಇದು ಪಾಕಿಸ್ತಾನ, ಬಾಂಗ್ಲಾದೇಶ ಅಲ್ಲ.. ಇದು ಹೈದರಾಬಾದ್. ಹೈದರಾಬಾದ್‌ನಲ್ಲಿ ಮಾತೆ ದುರ್ಗಾ ಮೂರ್ತಿ ಧ್ವಂಸ ಮಾಡಿದ ಜಿಹಾದಿ ಮುಸ್ಲಿಮರು. ಗಣೇಶನ ಮೂರ್ತಿ ಆಯಿತು ಈಗ ದುರ್ಗಾ ಮೂರ್ತಿ.. ಹಿಂದೂಗಳೆ ಇನ್ನಾದರು ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಸನಾತನ ಧರ್ಮ ನಾಶ ನಿಶ್ಚಿತ." ಅದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವೈರಲ್ ವೀಡಿಯೋವನ್ನು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್)
ಆದರೆ, ಘಟನೆಯನ್ನು ತಪ್ಪಾದ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಸುದ್ದಿ ವರದಿಗಳು ಮತ್ತು ಹೈದರಾಬಾದ್ ಪೋಲೀಸರ ಪ್ರಕಾರ, ವಿಧ್ವಂಸಕ ಕೃತ್ಯವನ್ನು ಮಾನಸಿಕ ಆರೋಗ್ಯ ಸ್ಥಿತಿಯಿರುವ ನಿರಾಶ್ರಿತ ಹಿಂದೂ ವ್ಯಕ್ತಿ ಮಾಡಿದ್ದಾನೆ, ಹೇಳಿಕೊಂಡಂತೆ ಮುಸ್ಲಿಂ ವ್ಯಕ್ತಿ ಅಲ್ಲ.
ನಾವು ಏನು ಕಂಡುಕೊಂಡಿದ್ದೇವೆ?
ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಸ್ಥಳೀಯ ಸುದ್ದಿ ಸಂಸ್ಥೆ ತೆಲಂಗಾಣ ಟುಡೆ ವರದಿಯನ್ನು ಕಂಡುಕೊಂಡೆವು, ಇದೇ ರೀತಿಯ ದೃಶ್ಯಗಳನ್ನು ಒಳಗೊಂಡಿದೆ. ಹೈದರಾಬಾದ್‌ನ ನಾಂಪಲ್ಲಿಯಲ್ಲಿರುವ ಎಕ್ಸಿಬಿಷನ್ ಗ್ರೌಂಡ್‌ನಲ್ಲಿರುವ ದುರ್ಗಾ ಪೆಂಡಾಲ್ ನಲ್ಲಿ ಈ ಘಟನೆ ನಡೆದಿದೆ. ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ನಾಗರಕರ್ನೂಲ್ ಜಿಲ್ಲೆಯ ನಿರಾಶ್ರಿತ ವ್ಯಕ್ತಿ ಕೃಷ್ಣಯ್ಯ ಗೌಡ್ ನನ್ನು ಬೇಗಂ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ವಲಯದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಕ್ಷಾಂಶ್ ಯಾದವ್ ಅವರು ಗೌಡ್ ಮಾನಸಿಕ ಆರೋಗ್ಯವನ್ನು ಹೊಂದಿದ್ದಾರೆಂದು ದೃಢಪಡಿಸಿದರು ಮತ್ತು ವರದಿಯ ಪ್ರಕಾರ ಆಹಾರವನ್ನು ಹುಡುಕುತ್ತಾ ಸ್ಥಳಕ್ಕೆ ಪ್ರವೇಶಿಸಿದ್ದನು.
ವೈರಲ್ ದೃಶ್ಯಗಳನ್ನು ಒಳಗೊಂಡಿರುವ ತೆಲಂಗಾಣ ಟುಡೆ ವರದಿಯ ಸ್ಕ್ರೀನ್‌ಶಾಟ್. (ಮೂಲ: ತೆಲಂಗಾಣ ಟುಡೇ/ಸ್ಕ್ರೀನ್‌ಶಾಟ್)
ಈ ಘಟನೆಯು ಅಕ್ಟೋಬರ್ ೧೦, ೨೦೨೪ ರ ರಾತ್ರಿ ನಡೆದಿದೆ ಎಂದು ನಿರ್ದಿಷ್ಟಪಡಿಸುವ ಸಿಯಾಸತ್ ಡೈಲಿ ಕೂಡ ವರದಿ ಮಾಡಿದೆ. "ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ" ಎಂದು ಡಿಸಿಪಿಯನ್ನು ವರದಿ ಉಲ್ಲೇಖಿಸಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯು ಈ ಸಂಶೋಧನೆಗಳನ್ನು ದೃಢಪಡಿಸಿದೆ, ಗೌಡ್ ಮಾನಸಿಕ ಆರೋಗ್ಯ ಸ್ಥಿತಿಯಿಂದ ಬಳಲುತ್ತಿದ್ದಾರೆ ಎಂದು ದೃಢಪಡಿಸಿದರು ಮತ್ತು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗಮನಿಸಿದರು.
ಪೊಲೀಸರು ಹೇಳಿದ್ದೇನು?
ಈ ವರದಿಗಳ ಆಧಾರದ ಮೇಲೆ, ಸುದ್ದಿ ಸಂಸ್ಥೆ ಎಎನ್‌ಐನಿಂದ ನಾವು ಎಕ್ಸ್ ಪೋಷ್ಟ್ ಅನ್ನು ಕಂಡುಕೊಂಡಿದ್ದೇವೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅಲ್ಲಿ ಡಿಸಿಪಿ ಯಾದವ್ ಆರೋಪಿಯನ್ನು ನಾಗರ್‌ಕರ್ನೂಲ್‌ನ ೪೫-೫೦ ವರ್ಷದ ನಿರಾಶ್ರಿತ ವ್ಯಕ್ತಿ ಕೃಷ್ಣಯ್ಯ ಗೌಡ್ ಎಂದು ಗುರುತಿಸಿದ್ದಾರೆ. ಯಾದವ್, “ಅವನು ಬೀದಿಗಳಲ್ಲಿ ತಿರುಗಾಡುವ ಮತ್ತು ಫುಟ್‌ಪಾತ್‌ಗಳಲ್ಲಿ ಮಲಗುವ ಅಲೆಮಾರಿ. ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಹಸಿವು ಅನುಭವಿಸಿ ಆಹಾರ ಹುಡುಕುತ್ತಾ ಪೆಂಡಾಲ್ ಅನ್ನು ಪ್ರವೇಶಿಸಿದ್ದನು. ಹುಡುಕುತ್ತಿರುವಾಗ ಪ್ರಸಾದಕ್ಕೆ ಭಂಗ ತಂದಿದ್ದರಿಂದ ವಿಗ್ರಹಕ್ಕೆ ಧಕ್ಕೆಯಾಯಿತು. ಪೂಜಾ ಸಂಘಟಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ, ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಯಾದವ್ ತಿಳಿಸಿದ್ದಾರೆ.
ಅಕ್ಟೋಬರ್ ೧೨, ೨೦೨೪ ರಂದು ಅಪ್‌ಲೋಡ್ ಮಾಡಲಾದ ಓವರ್‌ಸೀಸ್ ನ್ಯೂಸ್ ನ ಯೂಟ್ಯೂಬ್ ವೀಡಿಯೋದಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಗೌಡ್ ಅವರ ಒಳಗೊಳ್ಳುವಿಕೆ, ಅವರ ಮಾನಸಿಕ ಆರೋಗ್ಯ ಸ್ಥಿತಿ ಮತ್ತು ಎರಡು ಪ್ರಕರಣಗಳ ನೋಂದಣಿ-ಒಂದು ಸಂಘಟಕರ ವಿರುದ್ಧ ಮತ್ತು ಒಂದು ಗೌಡ್ ವಿರುದ್ಧ ಮಾಡಲಾಗಿದೆ ಎಂದು ಹೇಳಲಾಗಿದೆ.
ಬೇಗಂ ಬಜಾರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಜಿ.ವಿಜಯ್ ಕುಮಾರ್, ಯಾವುದೇ ಕೋಮುವಾದಿ ನಿರೂಪಣೆಯನ್ನು ತಳ್ಳಿಹಾಕಿ, “ನಾವು ಮಾನಸಿಕ ಆರೋಗ್ಯ ಸ್ಥಿತಿ ಹೊಂದಿರುವ ಮತ್ತು ಹಿಂದೂ ಆಗಿರುವ ಕೃಷ್ಣಯ್ಯ ಗೌಡ್ ನನ್ನು ಬಂಧಿಸಿದ್ದೇವೆ. ಈ ಪ್ರಕರಣದಲ್ಲಿ ಯಾವುದೇ ಕೋಮು ಕೋನವಿಲ್ಲ." ಪೊಲೀಸ್ ಹೇಳಿಕೆಗಳು ಮತ್ತು ಮಾಧ್ಯಮ ವರದಿಗಳು ವಿಧ್ವಂಸಕ ಕೃತ್ಯವನ್ನು ಮುಸ್ಲಿಂ ವ್ಯಕ್ತಿಯಿಂದ ನಡೆಸಲಾಗಿಲ್ಲ ಎಂದು ಖಚಿತಪಡಿಸುತ್ತದೆ.
ತೀರ್ಪು
ಆಹಾರವನ್ನು ಹುಡುಕುತ್ತಾ ಪೆಂಡಾಲ್ ಗೆ ನುಗ್ಗಿದ ಮಾನಸಿಕ ಅಸ್ವಸ್ಥ ಹಿಂದೂ ವ್ಯಕ್ತಿಯೊಬ್ಬ ದುರ್ಗಾ ವಿಗ್ರಹಕ್ಕೆ ಹಾನಿ ಮಾಡಿದ್ದಾನೆ. ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ, ಸಾಮಾಜಿಕ ಮಾಧ್ಯಮದಲ್ಲಿನ ಹೇಳಿಕೆಗಳಿಗೆ ವಿರುದ್ಧವಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.