ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಅಕ್ಟೋಬರ್ 28 2024
ಉತ್ತರಾಖಂಡ್‌ನಲ್ಲಿ ಹಿಂದೂ ಗುಂಪುಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯನ್ನು ವೀಡಿಯೋ ತೋರಿಸುತ್ತದೆ.
ಹೇಳಿಕೆ ಏನು?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ೧೯ ಸೆಕೆಂಡ್‌ಗಳ ವೀಡಿಯೋವನ್ನು ಪೊಲೀಸರು ಸೇರಿದಂತೆ ಜನಸಮೂಹವು ಹಿನ್ನಲೆಯಲ್ಲಿ 'ಮುಸ್ಲಿಮರು, ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ಎಸೆಯುತ್ತಿದ್ದಾರೆ' ಎಂಬ ಧ್ವನಿಯೊಂದಿಗೆ ಹಂಚಿಕೊಳ್ಳಲಾಗಿದೆ. ಭಾರತದ ಉತ್ತರಾಖಂಡ್ ರಾಜ್ಯದಲ್ಲಿನ ಇತ್ತೀಚಿನ ಘಟನೆಯನ್ನು ಚಿತ್ರಿಸುತ್ತದೆ ಎಂದು ಸೂಚಿಸಲು ಈ ವೀಡಿಯೋವನ್ನು ಬಳಸಲಾಗುತ್ತಿದೆ.
ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್), ಉತ್ತರಕಾಶಿಯಂತಹ ಪವಿತ್ರ ಸ್ಥಳಗಳಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ಕಲ್ಲುಗಳನ್ನು ಎಸೆಯುವುದನ್ನು ತೋರಿಸುತ್ತದೆ ಎಂದು ಹೇಳುವ ವೀಡಿಯೋವನ್ನು ಹಿಂದಿ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಒಂದು ಪೋಷ್ಟ್ ೧,೪೦೦ ಲೈಕ್‌ಗಳನ್ನು ಮತ್ತು ೨೮,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದರೆ, ಇನ್ನೊಂದು ಪೋಷ್ಟ್ ಈ ವರದಿಯನ್ನು ಬರೆಯುವ ಸಮಯದಲ್ಲಿ ೫,೭೦೦ ಲೈಕ್‌ಗಳನ್ನು ಮತ್ತು ಸುಮಾರು ೮೮,೦೦೦ ವೀಕ್ಷಣೆಗಳನ್ನು ಗಳಿಸಿದೆ. ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ನಿರೂಪಣೆಯು ಫೇಸ್‌ಬುಕ್‌ನಲ್ಲಿಯೂ ಕಾಣಿಸಿಕೊಂಡಿದೆ, ಪೋಷ್ಟ್‌ಗಳ ಆರ್ಕೈವ್ ಅನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಏನಿದು ಘಟನೆ?
ಅಕ್ಟೋಬರ್ ೨೫, ೨೦೨೪ ರಂದು, ದಿ ಇಂಡಿಯನ್ ಎಕ್ಸ್‌ಪ್ರೆಸ್ ಅಕ್ಟೋಬರ್ ೨೪ ರಂದು ಉತ್ತರಕಾಶಿಯಲ್ಲಿ ನಡೆದ ಮಾರಾಮಾರಿ ಮತ್ತು ಕಲ್ಲು ತೂರಾಟದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವಾರು ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಸಂಯುಕ್ತ ಸನಾತನ ಧರ್ಮದ ಅಡಿಯಲ್ಲಿ ಹಿಂದೂ ಗುಂಪುಗಳು ಆಯೋಜಿಸಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಈ ಅಶಾಂತಿ ಸಂಭವಿಸಿದೆ. ಉತ್ತರಕಾಶಿಯ ಮಸೀದಿಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ರಕ್ಷಕ ಸಂಘ, ಇದು ಸರ್ಕಾರದ ಅಧಿಕೃತ ಕಂದಾಯ ದಾಖಲೆಗಳಲ್ಲಿ ನೋಂದಣಿಯಾಗಿಲ್ಲ ಎಂದು ಪ್ರತಿಪಾದಿಸಿತು.
ವರದಿಯ ಪ್ರಕಾರ, ಉತ್ತರಕಾಶಿ ಪೊಲೀಸ್ ಅಧೀಕ್ಷಕ (ಎಸ್ಪಿ) ಅಮಿತ್ ಶ್ರೀವಾಸ್ತವ ಅವರು ಘಟನೆಯು ಸುಮಾರು ೨:೩೦ ಕ್ಕೆ ಪ್ರಾರಂಭವಾಯಿತು ಎಂದು ಹೇಳಿದ್ದಾರೆ. ಅಕ್ಟೋಬರ್ ೨೪ ರಂದು ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿದ ಮಾರ್ಗದಿಂದ ಹೊರಗುಳಿದರು ಮತ್ತು ಮಸೀದಿಗೆ ಪ್ರವೇಶವನ್ನು ಒತ್ತಾಯಿಸಿದರು. ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಪೊಲೀಸರು ಅವರ ಮನವಿಯನ್ನು ನಿರಾಕರಿಸಿದ ನಂತರ ಉದ್ವಿಗ್ನತೆ ಉಲ್ಬಣಗೊಂಡಿತು, ಇದು ಹೊಡೆದಾಟ ಮತ್ತು ಕಲ್ಲು ತೂರಾಟಕ್ಕೆ ಕಾರಣವಾಯಿತು.
ಟೈಮ್ಸ್ ನೌ ನವಭಾರತ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ಎಬಿಪಿ ಲೈವ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರತಿಭಟನೆಯ ದೃಶ್ಯಗಳನ್ನು ಹಂಚಿಕೊಂಡಿದ್ದು, ಮಸೀದಿ ವಿಷಯದ ಕುರಿತು ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯನ್ನು ಎತ್ತಿ ತೋರಿಸುತ್ತದೆ. ಟೈಮ್ಸ್ ನೌ ನವಭಾರತದ ದೃಶ್ಯಾವಳಿಗಳು ಅದೇ ಪ್ರದೇಶದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯನ್ನು ತೋರಿಸುತ್ತದೆ.
ಲಾಜಿಕಲಿ ಫ್ಯಾಕ್ಟ್ಸ್ ಉತ್ತರಾಖಂಡದ ಸ್ಥಳೀಯ ವರದಿಗಾರ ಮಧು ಜೋಶಿ ಅವರನ್ನು ಸಂಪರ್ಕಿಸಿತು ಮತ್ತು ವೈರಲ್ ವೀಡಿಯೋವನ್ನು ಅವರೊಂದಿಗೆ ಹಂಚಿಕೊಂಡಿತು. ಅಕ್ಟೋಬರ್ ೨೪ ರಂದು ಮಸೀದಿ ಧ್ವಂಸಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ವೀಡಿಯೋವನ್ನು ಚಿತ್ರಿಸಲಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ.
ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಎಸೆದರು ಎಂದು ಜೋಶಿ ಗಮನಿಸಿದರು, ಅವರು ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದರು. ಈ ರ‍್ಯಾಲಿಯನ್ನು ಸಂಯುಕ್ತ ಸನಾತನ ಧರ್ಮ ರಕ್ಷಕ ದಳ ಆಯೋಜಿಸಿದ್ದು, ಭಜರಂಗದಳ, ದೇವಭೂಮಿ ರಕ್ಷಣಾ ಅಭಿಯಾನ ಮತ್ತು ಇತರ ಹಿಂದೂ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
ಸಾಮಾಜಿಕ ಮಾಧ್ಯಮದ ಆರೋಪಗಳಿಗೆ ಸಂಬಂಧಿಸಿದಂತೆ, ಘಟನೆಯಲ್ಲಿ ಯಾವುದೇ ಕೋಮುವಾದ ಅಂಶವಿಲ್ಲ ಎಂದು ಸ್ಪಷ್ಟಪಡಿಸಿದ ಜೋಶಿ, ಕಲ್ಲು ತೂರಾಟದಲ್ಲಿ ಯಾವುದೇ ಮುಸ್ಲಿಮರು ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ಹೇಳಿದ್ದೇನು?
ರ‍್ಯಾಲಿಯಲ್ಲಿ ಮುಸ್ಲಿಂ ಸಮುದಾಯದಿಂದ ಕಲ್ಲು ತೂರಾಟದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಉತ್ತರಕಾಶಿ ಪೊಲೀಸರು (ಇಲ್ಲಿ ಸಂಗ್ರಹಿಸಲಾಗಿದೆ) ಈ ಹೇಳಿಕೆಗಳು ತಪ್ಪು ಮತ್ತು ತಪ್ಪುದಾರಿಗೆಳೆಯುವ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿದೆ ಎಂದು ಹೇಳಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ಹಿಂದೂ ಸಂಘಟನೆಯು ರ‍್ಯಾಲಿಗಾಗಿ ಗೊತ್ತುಪಡಿಸಿದ ಮಾರ್ಗವನ್ನು ಅನುಸರಿಸಲಿಲ್ಲ ಎಂದು ಅವರು ಗಮನಿಸಿದ್ದಾರೆ. ಪೊಲೀಸ್ ಬ್ಯಾರಿಕೇಡ್‌ಗಳಿಂದ ನಿಲ್ಲಿಸಿದಾಗ, ಪ್ರತಿಭಟನಾಕಾರರು ಕಲ್ಲು ಮತ್ತು ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದರು, ನಂತರ ಕೆಲವರು ಅಂಬೇಡ್ಕರ್ ಭವನವನ್ನು ಗುರಿಯಾಗಿಸಿದರು.
ಅಕ್ಟೋಬರ್ ೨೫, ೨೦೨೪ ರಂದು ಉತ್ತರಕಾಶಿ ಪೊಲೀಸರ ಪೋಷ್ಟ್‌ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್).
ನಿರ್ದಿಷ್ಟ ಮಾರ್ಗ ಮತ್ತು ಸಮಯಕ್ಕೆ ಅನುಮತಿ ನೀಡಲಾಗಿದೆ ಎಂದು ದೃಢಪಡಿಸುವ ಹೇಳಿಕೆಯನ್ನು (ಇಲ್ಲಿ ಸಂಗ್ರಹಿಸಲಾಗಿದೆ) ಎಸ್ಪಿ ಶ್ರೀವಾಸ್ತವ ಬಿಡುಗಡೆ ಮಾಡಿದರು. ಆದರೆ, ಪ್ರತಿಭಟನಾಕಾರರು ಬೇರೆ ಮಾರ್ಗವನ್ನು ಆರಿಸಿಕೊಂಡಿದ್ದು, ಪೊಲೀಸರೊಂದಿಗೆ ಘರ್ಷಣೆಗೆ ಕಾರಣವಾಯಿತು. ಎಂಟು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅವರು ವರದಿ ಮಾಡಿದರು ಮತ್ತು ನಿಖರವಾದ ಸಂಖ್ಯೆ ಅಸ್ಪಷ್ಟವಾಗಿದ್ದರೂ ಕೆಲವು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಒಪ್ಪಿಕೊಂಡರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ೨೦೦ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಉತ್ತರಕಾಶಿಯ ನಿವಾಸಿಗಳಾದ ಜಿತೇಂದ್ರ ಚೌಹಾಣ್, ಸೋನು ನೇಗಿ, ಸೂರಜ್ ದಬ್ರಾಲ್, ಕುಲ್ವೀರ್ ರಾಣಾ, ಸುಶೀಲ್ ಶರ್ಮಾ, ಗೌತಮ್ ರಾವತ್, ಅಲೋಕ್ ರಾವತ್ ಮತ್ತು ಸಚೇಂದ್ರ ಪರ್ಮಾರ್ ಅವರನ್ನು ಹಿಂಸಾಚಾರದ ಶಂಕಿತರು ಎಂದು ಎಫ್‌ಐಆರ್ ನಿರ್ದಿಷ್ಟವಾಗಿ ಹೆಸರಿಸಿದೆ.
ಪ್ರತಿಭಟನೆಗಳು ಯಾವುದರ ಬಗ್ಗೆ ನಡೆದವು?
ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಇರುವ ಮಸೀದಿಯನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಆದರೆ, ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೆಹರ್ಬನ್ ಸಿಂಗ್ ಬಿಶ್ತ್ ಅವರು ಅಕ್ಟೋಬರ್ ತಿಂಗಳ ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ಮಸೀದಿಯು ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿದೆ ಮತ್ತು ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ತೀರ್ಪು
ಸಂಯುಕ್ತ ಸನಾತನ ಧರ್ಮ ರಕ್ಷಕ ಸಂಘ ಆಯೋಜಿಸಿದ್ದ ಪ್ರತಿಭಟನಾ ರ‍್ಯಾಲಿಯ ಕ್ಲಿಪ್‌ನಲ್ಲಿ ಮುಸ್ಲಿಮರು, ಸ್ಥಳೀಯರು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗಿದೆ. ವಾಸ್ತವದಲ್ಲಿ, ದೃಶ್ಯಗಳು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಗಲಾಟೆಯನ್ನು ತೋರಿಸುತ್ತವೆ, ಮುಸ್ಲಿಂ ಸಮುದಾಯದ ಭಾಗಿಯನ್ನು ಎಲ್ಲೂ ವರದಿಯಾಗಿಲ್ಲ.
(ಅನುವಾದಿಸಿದವರು: ರಜಿನಿ ಕೆ.ಜಿ.)
Read this fact-check in English here.