ಮುಖಪುಟ ಇಸ್ರೇಲಿ ಟ್ಯಾಂಕ್ ಅನ್ನು ಹೆಜ್ಬೊಲ್ಲಾ ನಾಶಗೊಳಿಸಿದೆ ಎಂದು ಹಳೆಯ ವೀಡಿಯೋ ವೈರಲ್

ಇಸ್ರೇಲಿ ಟ್ಯಾಂಕ್ ಅನ್ನು ಹೆಜ್ಬೊಲ್ಲಾ ನಾಶಗೊಳಿಸಿದೆ ಎಂದು ಹಳೆಯ ವೀಡಿಯೋ ವೈರಲ್

ಮೂಲಕ: ಅಂಕಿತಾ ಕುಲಕರ್ಣಿ

ಅಕ್ಟೋಬರ್ 4 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪ್ರಸ್ತುತ ಯುದ್ಧದ ನಡುವೆ ಇಸ್ರೇಲ್‌ನ ಮರ್ಕವಾ ಟ್ಯಾಂಕ್ ಅನ್ನು ಹೆಜ್ಬೊಲ್ಲಾ ಪಡೆಗಳು ನಾಶಪಡಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. ಪ್ರಸ್ತುತ ಯುದ್ಧದ ನಡುವೆ ಇಸ್ರೇಲ್‌ನ ಮರ್ಕವಾ ಟ್ಯಾಂಕ್ ಅನ್ನು ಹಿಜ್ಬುಲ್ಲಾ ಪಡೆಗಳು ನಾಶಪಡಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್. (ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋ ಅಕ್ಟೋಬರ್ ೨೦೨೩ ರ ಹಿಂದಿನದು ಮತ್ತು ರಷ್ಯಾದ ಟಿ-೯೦ ಟ್ಯಾಂಕ್ ಅನ್ನು ಉಕ್ರೇನ್ ಪಡೆಗಳು ನಾಶಪಡಿಸುತ್ತಿರುವುದನ್ನು ತೋರಿಸುತ್ತದೆ.

ಹೇಳಿಕೆ ಏನು?

ಬಂಜರು ಭೂಮಿಯಲ್ಲಿ ಮಿಲಿಟರಿ ಟ್ಯಾಂಕ್ ಚಲಿಸುವ ಮತ್ತು ನಂತರ ಸ್ಫೋಟಗೊಳ್ಳುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇರಾನ್ ಬೆಂಬಲಿತ ಹೆಜ್ಬುಲ್ಲಾದ ರಾಡ್ವಾನ್ ಪಡೆಗಳು ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಮೆರ್ಕವಾ ಯುದ್ಧ ಟ್ಯಾಂಕ್ ಅನ್ನು ನಾಶಪಡಿಸುವುದನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳಲಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಈ ಹೇಳಿಕೆಗಳು ಹೊರಹೊಮ್ಮಿವೆ, ಇರಾನ್ ಇತ್ತೀಚೆಗೆ ಅಕ್ಟೋಬರ್ ೧, ೨೦೨೪ ರಂದು ಇಸ್ರೇಲ್‌ನಲ್ಲಿ ಸುಮಾರು ೧೮೦ ಕ್ಷಿಪಣಿಗಳನ್ನು ಉಡಾಯಿಸಿತು.

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಅಂತಹ ಒಂದು ಪೋಷ್ಟ್ ಅರೇಬಿಕ್ ಭಾಷೆಯಲ್ಲಿ ಶೀರ್ಷಿಕೆಯನ್ನು ಹೊಂದಿದ್ದು ಅದು ಹೀಗಿದೆ: "ತುರ್ತು. ರಾಡ್ವಾನ್ ಫೋರ್ಸ್ ಲೆಬನಾನಿನ ಗಡಿಯಲ್ಲಿ ಕಾರ್ನೆಟ್ ಮಾರ್ಗದರ್ಶಿ ಕ್ಷಿಪಣಿಯೊಂದಿಗೆ ಮೆರ್ಕಾವಾ ಟ್ಯಾಂಕ್ ಅನ್ನು ಗುರಿಪಡಿಸುತ್ತದೆ." (ಗೂಗಲ್ ಬಳಸಿ ಅನುವಾದಿಸಲಾಗಿದೆ) 

ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವ ಸಮಯದವರೆಗೆ, ಪೋಷ್ಟ್ ೧.೨ ಮಿಲಿಯನ್ ವೀಕ್ಷಣೆಗಳನ್ನು , ೧೫,೦೦೦ ಲೈಕ್ ಗಳು ಮತ್ತು ಸುಮಾರು ೩,೦೦೦ ಬಾರಿ ಮರುಪೋಷ್ಟ್  ಮಾಡಲಾಗಿದೆ.  ಅದೇ ರೀತಿಯ ಇತರ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. 
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ ವೀಡಿಯೋ ಹಳೆಯದು ಹಾಗು ಇರಾನ್ ಮತ್ತು ಇಸ್ರೇಲ್ ನಡುವಿನ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿಲ್ಲ. 

ನಾವು ಕಂಡುಕೊಂಡಿದ್ದು ಏನು?

ವೈರಲ್ ಕ್ಲಿಪ್‌ನ ರಿವರ್ಸ್ ಇಮೇಜ್ ಸರ್ಚ್ ನಿಂದ ಅಕ್ಟೋಬರ್ ೯, ೨೦೨೩ ರಂದು ಬ್ರಿಟಿಷ್ ಪತ್ರಿಕೆ ದಿ ಟೆಲಿಗ್ರಾಫ್ ಹಂಚಿಕೊಂಡ ಯೂಟ್ಯೂಬ್ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕಂಡುಕೊಂಡೆವು. ಅದರ ಶೀರ್ಷಿಕೆ, "ರಷ್ಯನ್ ಟಿ-೯೦ ಟ್ಯಾಂಕ್ ಅನ್ನು ಉಕ್ರೇನ್ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಯಿಂದ ಡೊನೆಟ್ಸ್ಕ್‌ನ ಮಕಿವ್ಕಾ ಬಳಿ ನಾಶಪಡಿಸಿತು," ಎಂದು ಹೇಳಲಾಗಿದೆ. ವೈರಲ್ ಕ್ಲಿಪ್‌ನಲ್ಲಿರುವಂತೆಯೇ ಈ ವೀಡಿಯೋ ನಿಖರವಾದ ದೃಶ್ಯಗಳನ್ನು ಒಳಗೊಂಡಿದೆ.

ದಿ ಟೆಲಿಗ್ರಾಫ್ ಹಂಚಿಕೊಂಡಿರುವ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್)

ಉಕ್ರೇನ್ ಪಡೆಗಳ ಕಾರ್ಯತಂತ್ರ ಸಂವಹನ ವಿಭಾಗವು ಅಕ್ಟೋಬರ್ ೮, ೨೦೨೩ ರಂದು ತನ್ನ ಅಧಿಕೃತ ಟೆಲಿಗ್ರಾಮ್ ಚಾನೆಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಇದೇ ವೀಡಿಯೋವನ್ನು ಹಂಚಿಕೊಂಡಿದೆ. ಉಕ್ರೇನಿಯನ್ ಭಾಷೆಯಲ್ಲಿ ಬರೆಯಲಾದ ಶೀರ್ಷಿಕೆಯಲ್ಲಿ, "ರಷ್ಯನ್ನರು ತಮ್ಮ ಪ್ರಚಾರದ ಟಿ-೯೦ "ಬ್ರೇಕ್‌ಥ್ರೂ" ಟ್ಯಾಂಕ್ ಅನ್ನು ಸಮೀಪದಲ್ಲಿ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಮಕಿವ್ಕಾ ಗ್ರಾಮ (ಲುಹಾನ್ಸ್ಕ್ ಪ್ರದೇಶ, ಉಕ್ರೇನ್).

ಉಕ್ರೇನ್ ಸಶಸ್ತ್ರ ಪಡೆಗಳ ಕಾರ್ಯತಂತ್ರದ ಸಂವಹನ ವಿಭಾಗವು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಟೆಲಿಗ್ರಾಮ್/ಸ್ಕ್ರೀನ್‌ಶಾಟ್)

ಕೈವ್ ಪೋಷ್ಟ್ ನ ವರದಿಯು ವೈರಲ್ ಕ್ಲಿಪ್‌ನಿಂದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿತ್ತು, ರಷ್ಯಾದ ಟಿ-೯೦ ಎಂ ಪ್ರೊರಿವ್ ಟ್ಯಾಂಕ್ ಅನ್ನು ಉಕ್ರೇನ್‌ನ ಟ್ಯಾಂಕ್ ವಿರೋಧಿ ಕ್ಷಿಪಣಿಯಿಂದ ನಾಶಪಡಿಸಲಾಗಿದೆ ಎಂದು ಇದೇ ರೀತಿಯ ವಿವರಗಳನ್ನು ನೀಡುತ್ತದೆ. ಫೆಬ್ರವರಿ ೨೦೨೨ ರಲ್ಲಿ ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿತು ಮತ್ತು ಅಂದಿನಿಂದ ಎರಡೂ ದೇಶಗಳು ಯುದ್ಧದಲ್ಲಿವೆ. 

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ 

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸದಸ್ಯರಿಗೆ ಸೇರಿದ ಹಲವಾರು ಪೇಜರ್‌ಗಳು ಮತ್ತು ಕೈಯಲ್ಲಿ ಹಿಡಿದ ಸಾಧನಗಳು ಏಕಕಾಲದಲ್ಲಿ ಸ್ಫೋಟಗೊಂಡ ನಂತರ ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಉದ್ವಿಗ್ನತೆಗಳು ಉಲ್ಬಣಗೊಂಡವು, ಇದರಿಂದಾಗಿ ಡಜನ್ಗಟ್ಟಲೆ ಸಾವುಗಳು ಮತ್ತು ಸಾವಿರಾರು ಗಾಯಗಳು ಸಂಭವಿಸಿದವು. ಆನಂತರ, ಸೆಪ್ಟೆಂಬರ್ ೨೮ ರಂದು ಇಸ್ರೇಲ್ ಬೈರುತ್‌ನಲ್ಲಿ ವೈಮಾನಿಕ ದಾಳಿ ನಡೆಸಿತು, ಅದು ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಕೊಂದಿತು. ಪ್ರತೀಕಾರವಾಗಿ, ಅಕ್ಟೋಬರ್ ೧, ೨೦೨೪ ರಂದು, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ ಜಿಸಿ) ಇಸ್ರೇಲಿ ಪ್ರದೇಶದ ಕಡೆಗೆ ೧೮೦ ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿತು.

ತೀರ್ಪು

ಉಕ್ರೇನಿಯನ್ ಪಡೆಗಳು ರಷ್ಯಾದ ಮಿಲಿಟರಿ ಟ್ಯಾಂಕ್ ಅನ್ನು ನಾಶಪಡಿಸುವ ಒಂದು ವರ್ಷದ ಹಳೆಯ ವೀಡಿಯೋವನ್ನು ಈಗ ಹೆಜ್ಬೊಲ್ಲಾ ಪಡೆಗಳು ಐಡಿಎಫ್ ಯುದ್ಧ ಟ್ಯಾಂಕ್‌ಗಳನ್ನು ನಾಶಪಡಿಸುವುದನ್ನು ತೋರಿಸುತ್ತದೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ