ಮೂಲಕ: ಉಮ್ಮೆ ಕುಲ್ಸುಮ್
ಅಕ್ಟೋಬರ್ 30 2024
ಈ ವೀಡಿಯೋ ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಪ್ರಿಯಾಂಕಾ ಗಾಂಧಿಯವರ ೨೦೨೪ ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸರೆಹಿಡಿದದ್ದು. ಈಗಿನ ವಯನಾಡ್ ಉಪಚುನಾವಣೆಗೆ ಸಂಬಂಧಿಸಿಲ್ಲ.
ಹೇಳಿಕೆ ಏನು?
ದೊಡ್ಡ ಜನಸಮೂಹವು ಉತ್ಸಾಹದಿಂದ ಕೈ ಎತ್ತುತ್ತಿರುವುದನ್ನು ಮತ್ತು ಕಾಂಗ್ರೆಸ್ ಧ್ವಜಗಳನ್ನು ಬೀಸುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಿಳಿ ನೀಲಿ ಬಣ್ಣದ ಬಟ್ಟೆ ಧರಿಸಿ, ಕಾರಿನ ಮೇಲೆ ನಿಂತು ಬೆಂಬಲಿಗರನ್ನು ಸ್ವಾಗತಿಸುತ್ತಿರುವುದನ್ನು ವೀಡಿಯೋ ಒಳಗೊಂಡಿದೆ.
ನವೆಂಬರ್ ೧೩, ೨೦೨೪ ರ ಉಪಚುನಾವಣೆಯ ಮೊದಲು ದಕ್ಷಿಣ ಭಾರತದ ಕೇರಳದ ವಯನಾಡ್ ಸಂಸದೀಯ ಕ್ಷೇತ್ರದಲ್ಲಿ ಗಾಂಧಿಯವರ ಇತ್ತೀಚಿನ ರ‍್ಯಾಲಿಯನ್ನು ಸೆರೆಹಿಡಿಯಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಶೇರ್ ಮಾಡಲಾಗುತ್ತಿದೆ.
ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಬಳಕೆದಾರರು ಕ್ಲಿಪ್ ಅನ್ನು ಹಿಂದಿಯಲ್ಲಿ "ಪ್ರಿಯಾಂಕಾ ಗಾಂಧಿಯವರ ವಯನಾಡ್ ಪ್ರಚಾರಕ್ಕೆ ಅಪಾರ ಜನರು ನೆರೆದಿದ್ದರು " ಎಂದು ಅನುವಾದಿಸುವ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವ ಹೊತ್ತಿಗೆ, ಪೋಷ್ಟ್ ೨೫,೦೦೦ ವೀಕ್ಷಣೆಗಳು, ೪,೦೦೦ ಲೈಕ್ ಗಳು ಮತ್ತು ೬೦೦ ಕ್ಕೂ ಹೆಚ್ಚು ಮರು ಪೋಷ್ಟ್ ಗಳನ್ನು ಗಳಿಸಿದೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ವೀಡಿಯೋ ಹಳೆಯದಾಗಿದ್ದು, ವಯನಾಡ್ ಉಪಚುನಾವಣೆಗೆ ಸಂಬಂಧವಿಲ್ಲ ಎಂಬುದು ನಮ್ಮ ತನಿಖೆಯಿಂದ ತಿಳಿದುಬಂದಿದೆ.
ನಾವು ಕಂಡುಕೊಂಡದ್ದು ಏನು?
ರಿವರ್ಸ್ ಇಮೇಜ್ ಸರ್ಚ್ ಮೂಲಕ, ಲಾಜಿಕಲಿ ಫ್ಯಾಕ್ಟ್ಸ್ ಅದೇ ಕ್ಲಿಪ್ ಅನ್ನು ಒಳಗೊಂಡಿರುವ ಫೇಸ್‌ಬುಕ್ ಪೋಷ್ಟ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕಂಡುಕೊಂಡಿದೆ, ಇದನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್ ಪಾಟ್ಕರ್ ಅವರು ಮೇ ೧೧, ೨೦೨೪ ರಂದು ಹಂಚಿಕೊಂಡಿದ್ದಾರೆ. ಈ ಸುಳಿವನ್ನು ಬಳಸಿಕೊಂಡು; ಗಾಂಧಿ ಲೋಕಸಭೆ ಚುನಾವಣಾ ಪ್ರಚಾರ ರ‍್ಯಾಲಿಯನ್ನು ಉದ್ದೇಶಿಸಿ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋವಾಲ್ ಪಾದ್ವಿ ಪರ ಮಾತನಾಡಿರುವುದು ನಮಗೆ ಕಂಡುಬಂದಿದೆ.
ಮೇ ೧೧, ೨೦೨೪ ರಂದು, ಗಾಂಧಿಯವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ರೀತಿಯ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), "ನಂದೂರ್‌ಬಾರ್, ಮಹಾರಾಷ್ಟ್ರ" ಎಂದು ಶೀರ್ಷಿಕೆ ನೀಡಿದ್ದಾರೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇನ್‌ಸ್ಟಾಗ್ರಾಮ್ ವೀಡಿಯೋ ಮತ್ತು ವೈರಲ್ ಕ್ಲಿಪ್ ಎರಡೂ ಗಮನಾರ್ಹವಾದ ದೃಶ್ಯ ಅಂಶಗಳನ್ನು ಹಂಚಿಕೊಳ್ಳುತ್ತವೆ, ವಿಶೇಷವಾಗಿ ಎರಡರಲ್ಲೂ ಗೋಚರಿಸುವ ವಿಶಿಷ್ಟವಾದ ಕಂದು ಕಟ್ಟಡ ಕಾಣುತ್ತದೆ.
ಹೆಚ್ಚುವರಿಯಾಗಿ, ವೀಡಿಯೋದಲ್ಲಿ ಗಾಂಧಿ ಅದೇ ನೀಲಿ ಉಡುಪಿನಲ್ಲಿ ಬೆಂಬಲಿಗರನ್ನು ಸ್ವಾಗತಿಸುತ್ತಿದ್ದಾರೆ. ನಂದೂರ್‌ಬಾರ್‌ನಲ್ಲಿ ನಡೆದ ಆಕೆಯ ರ‍್ಯಾಲಿ ಈ ದೃಶ್ಯಗಳು ಹುಟ್ಟಿಕೊಂಡಿವೆ ಎಂದು ಈ ವಿವರಗಳು ಬಲವಾಗಿ ಸೂಚಿಸುತ್ತವೆ.
ವೈರಲ್ ಕ್ಲಿಪ್ ಮತ್ತು ಪ್ರಿಯಾಂಕಾ ಗಾಂಧಿ ಹಂಚಿಕೊಂಡ ಇನ್‌ಸ್ಟಾಗ್ರಾಮ್ ವೀಡಿಯೋದ ನಡುವೆ ಹೋಲಿಕೆ. (ಮೂಲ: ಎಕ್ಸ್/ಇನ್‌ಸ್ಟಾಗ್ರಾಮ್/@priyankagandhivadra/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಕ್ಲಿಪ್ ಅನ್ನು ಭಾರತೀಯ ಯುವ ಕಾಂಗ್ರೆಸ್ ಮೇ ೧೧ ರಂದು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿದೆ. ಅದೇ ದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದೇ ವೀಡಿಯೋವನ್ನು ಹಂಚಿಕೊಂಡಿದೆ.
ಮೇ ೧೧ ರಂದು ನಂದೂರ್‌ಬಾರ್‌ನಲ್ಲಿ ಗಾಂಧಿಯವರ ರ‍್ಯಾಲಿಯನ್ನು ಹಲವಾರು ಸುದ್ದಿ ವರದಿಗಳು ಒಳಗೊಂಡಿವೆ, ಮರಾಠಿ ಸುದ್ದಿ ಔಟ್‌ಲೆಟ್ ಸಾಮ್ ಟಿವಿ ವರದಿಯನ್ನು ಒಳಗೊಂಡಂತೆ, ಇದು ಈಗ ವೈರಲ್ ಆಗಿರುವ ವೀಡಿಯೋದ ದೃಶ್ಯಕ್ಕೆ ಹೊಂದಿಕೆಯಾಗುವ ರ‍್ಯಾಲಿಯ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿದೆ.
ವಯನಾಡಿನಲ್ಲಿ ಲೋಕಸಭಾ ಉಪಚುನಾವಣೆ
ಈ ವರ್ಷದ ಆರಂಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅವರು ಗೆದ್ದ ಮತ್ತೊಂದು ಕ್ಷೇತ್ರವಾದ ರಾಯ್ ಬರೇಲಿಯ ಮೇಲೆ ಕೇಂದ್ರೀಕರಿಸಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಸ್ಥಾನವನ್ನು ಖಾಲಿ ಮಾಡುವ ನಿರ್ಧಾರದಿಂದ ವಯನಾಡ್ ಲೋಕಸಭಾ ಉಪಚುನಾವಣೆ ಅಗತ್ಯವಾಗಿತ್ತು.
ಅಕ್ಟೋಬರ್ ೧೫ ರಂದು ಚುನಾವಣಾ ಆಯೋಗವು ನವೆಂಬರ್ ೧೩ ರಂದು ವಯನಾಡ್‌ಗೆ ಉಪಚುನಾವಣೆ ನಡೆಯಲಿದೆ ಎಂದು ಘೋಷಿಸಿತು. ಕಾಂಗ್ರೆಸ್ ಪಕ್ಷವು ಈ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿಯನ್ನು ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಗಾಂಧಿಯವರು ಅಕ್ಟೋಬರ್ ೨೮, ೨೦೨೪ ರಂದು ವಯನಾಡಿನಲ್ಲಿ ಪ್ರಚಾರ ಮಾಡಿದರು.
ತೀರ್ಪು
೨೦೨೪ ರ ಲೋಕಸಭೆ ಚುನಾವಣೆಯ ಮಹಾರಾಷ್ಟ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರ‍್ಯಾಲಿಯ ವೀಡಿಯೋವನ್ನು ಕೇರಳದ ವಯನಾಡ್‌ನಲ್ಲಿ ಮುಂಬರುವ ಉಪಚುನಾವಣೆಯ ಪ್ರಚಾರಕ್ಕಾಗಿ ಆನ್‌ಲೈನ್‌ನಲ್ಲಿ ತಪ್ಪಾಗಿ ಲಿಂಕ್ ಮಾಡಲಾಗಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here