ಮೂಲಕ: ಅಂಕಿತಾ ಕುಲಕರ್ಣಿ
ನವೆಂಬರ್ 5 2024
ಸಿಎಎ ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಪೌರತ್ವವನ್ನು ರಾಜನಾಥ್ ಸಿಂಗ್ ದೃಢಪಡಿಸುತ್ತಿದ್ದನ್ನು ಮೂಲ ವೀಡಿಯೋ ತೋರಿಸುತ್ತದೆ, ಲಾರೆನ್ಸ್ ಬಿಷ್ಣೋಯಿಗೆ ಯಾವುದೇ ಸಂಬಂಧವಿಲ್ಲ.
ಹೇಳಿಕೆ ಏನು?
ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ೧೫ ಸೆಕೆಂಡುಗಳ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಅವರು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ 'ರಕ್ಷಣೆ ಭರವಸೆ ನೀಡಿದ್ದಾರೆ' ಎಂದು ಹೇಳಲಾಗುತ್ತಿದೆ.
ವೀಡಿಯೋದಲ್ಲಿ, ಸಿಂಗ್ ಹಿಂದಿಯಲ್ಲಿ ಮಾತನಾಡುತ್ತಾ, (ಅನುವಾದಿಸಲಾಗಿದೆ), “ನಿಮ್ಮ ರಕ್ಷಣಾ ಸಚಿವರಾಗಿ, ಅವರ ಪೌರತ್ವವನ್ನು ಹಿಂಪಡೆಯುವುದನ್ನು ಮರೆತುಬಿಡಿ, ನಾನು ವಿಶ್ವಾಸದಿಂದ ಹೇಳಬಲ್ಲೆ. ಆತನನ್ನು ಬೆರಳಿನಿಂದಲೂ ಯಾರೂ ಮುಟ್ಟಲಾರರು; ನಾನು ನಿಮಗೆ ಸಂಪೂರ್ಣವಾಗಿ ಭರವಸೆ ನೀಡಬಲ್ಲೆ. ”
ಕ್ಲಿಪ್ ನ ಮೇಲೆ ಹಿಂದಿಯಲ್ಲಿ ಬರೆದ ಪಠ್ಯವು ಹೀಗಿದೆ, “ರಕ್ಷಣಾ ಸಚಿವ ರಾಜನಾಥ್ ಸಿಂಗ್. ಲಾರೆನ್ಸ್ ಬಿಷ್ಣೋಯಿಯನ್ನು ಯಾರೂ ಬೆರಳಿನಿಂದ ಮುಟ್ಟುವಂತಿಲ್ಲ. ರಕ್ಷಣಾ ಸಚಿವಾಲಯದ ಆದೇಶ."
ಈ ವೈರಲ್ ಕ್ಲಿಪ್ ಅನ್ನು ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಇದೇ ರೀತಿಯ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಲಿಂಕ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಇನ್‌ಸ್ಟಾಗ್ರಾಮ್/ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಅಕ್ಟೋಬರ್ ೧೨, ೨೦೨೪ ರಂದು ಮುಂಬೈನ ಬಾಂದ್ರಾದಲ್ಲಿರುವ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲ್ಪಟ್ಟ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣ) ೬೬ ವರ್ಷದ ನಾಯಕ ಭಾರತೀಯ ರಾಜಕಾರಣಿ ಬಾಬಾ ಸಿದ್ದಿಕ್ ಅವರ ಹತ್ಯೆಯ ನಂತರ ಈ ಹೇಳಿಕೆಗಳು ಹೊರಹೊಮ್ಮಿವೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ ಸಂಪರ್ಕ ಹೊಂದಿರುವ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರು ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ಆದರೆ, ವೈರಲ್ ಕ್ಲಿಪ್ ಹಳೆಯದು ಮತ್ತು ಬಿಷ್ಣೋಯಿಗೆ ಸಂಬಂಧಿಸಿಲ್ಲ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ೨೦೧೯ ರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಅಶಾಂತಿಯ ನಡುವೆ ಮುಸ್ಲಿಂ ಜನಸಂಖ್ಯೆಗೆ ಸಿಂಗ್ ಪೌರತ್ವದ ಭರವಸೆ ನೀಡುವುದನ್ನು ಮೂಲ ವೀಡಿಯೋ ಒಳಗೊಂಡಿದೆ.
ನಾವು ಕಂಡುಕೊಂಡಿದ್ದು ಏನು?
ಗೂಗಲ್ ಹುಡುಕಾಟದಿಂದ ವೀಡಿಯೋದ ವಿಸ್ತೃತ ಆವೃತ್ತಿಯನ್ನು ಕಂಡುಕೊಂಡೆವು (ಇಲ್ಲಿ ಆರ್ಕೈವ್ ಮಾಡಲಾಗಿದೆ), ಅದು ಸಿಂಗ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಜನವರಿ ೨೯, ೨೦೨೦ ರಂದು ನೇರ ಪ್ರಸಾರ ಮಾಡಲಾಗಿತ್ತು. “ಆರ್‌ಎಂ ಶ್ರೀ ರಾಜನಾಥ್ ಸಿಂಗ್ ದೆಹಲಿಯ ಆದರ್ಶ್ ನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿದರು” ಎಂಬ ಶೀರ್ಷಿಕೆಯನ್ನು ವೀಡಿಯೋ ಹೊಂದಿದೆ. ೨೦೨೦ರ ದೆಹಲಿ ವಿಧಾನಸಭೆ ಚುನಾವಣೆಯ ಮುನ್ನ ಈ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು .
ಪೂರ್ಣ ವೀಡಿಯೋದ ೪೬:೩೫ ಮಾರ್ಕ್‌ನಲ್ಲಿ, ಸಿಂಗ್ ಮುಸ್ಲಿಂ ಜನಸಂಖ್ಯೆಯ ಪೌರತ್ವವನ್ನು ಚರ್ಚಿಸುತ್ತಾರೆ, ಬಿಷ್ಣೋಯಿಯ ರಕ್ಷಣೆಯ ಬಗ್ಗೆ ಅಲ್ಲ. ಅವರು ಹೇಳುತ್ತಾರೆ, “ನಾನು ನನ್ನ ಮುಸ್ಲಿಂ ಸಹೋದರರಿಗೆ ಇದನ್ನು ಹಲವಾರು ಬಾರಿ ಹೇಳಿದ್ದೇನೆ. ನಾನು ಪದೇ ಪದೇ ಹೇಳುತ್ತೇನೆ. ನೀವು ನನಗೆ ಮತ ನೀಡುತ್ತೀರೋ ಇಲ್ಲವೋ, ಅದು ನಿಮ್ಮ ನಿರ್ಧಾರ, ಆದರೆ ದಯವಿಟ್ಟು ನಮ್ಮ (ಭಾರತೀಯ ಜನತಾ ಪಕ್ಷದ) ಸಮಗ್ರತೆಯನ್ನು ಅನುಮಾನಿಸಬೇಡಿ. ಭಾರತದ ಪ್ರತಿಯೊಬ್ಬ ಮುಸ್ಲಿಂ ಪ್ರಜೆ: ಭಾರತದ ರಕ್ಷಣಾ ಮಂತ್ರಿಯಾಗಿ, ಪ್ರತಿಯೊಬ್ಬ ಮುಸಲ್ಮಾನನೂ ಈ ದೇಶದ ಪ್ರಜೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಅವನ ಪೌರತ್ವವನ್ನು ಕೊನೆಗೊಳಿಸುವುದನ್ನು ಮರೆತುಬಿಡಿ; ಯಾರೂ ಅವರನ್ನು ಮುಟ್ಟಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ."
ಸಿಂಗ್ ಅವರು ಡಿಸೆಂಬರ್ ೨೦೧೯ ರಲ್ಲಿ ಭಾರತ ಸರ್ಕಾರವು ಅಂಗೀಕರಿಸಿದ ಸಿಎಎ ಯನ್ನು ಉಲ್ಲೇಖಿಸುತ್ತಿದ್ದರು. ಈ ಕಾನೂನು ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮತ್ತು ಪಾಕಿಸ್ತಾನ- ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರು (ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು) ಡಿಸೆಂಬರ್ ೩೧, ೨೦೧೪ ರಂದು ಅಥವಾ ಅದಕ್ಕೂ ಮೊದಲು ಭಾರತವನ್ನು ಪ್ರವೇಶಿಸಿದವರಿಗೆ ಭಾರತೀಯ ಪೌರತ್ವಕ್ಕೆ ತ್ವರಿತ ಮಾರ್ಗವನ್ನು ಒದಗಿಸುತ್ತದೆ. ಇದು ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು, ಈ ನೆರೆಹೊರೆಯ ದೇಶಗಳಿಂದ ಮುಸ್ಲಿಮರನ್ನು ಹೊರಗಿಡಲು ಕಾಯಿದೆಯನ್ನು ಟೀಕಿಸಿತು, ಇದು ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಪೌರತ್ವದ ನಷ್ಟವಾಗಬಹುದು ಎಂದು ಕಳವಳವನ್ನು ಉಂಟುಮಾಡಿತು.
ಇದೇ ಕ್ಲಿಪ್ ಅನ್ನು ಸುದ್ದಿ ಸಂಸ್ಥೆ ಎಎನ್ಐ ಭಾರತ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಜನವರಿ ೨೯, ೨೦೨೦ ರಂದು ಪ್ರಕಟಿಸಿದೆ. ವೀಡಿಯೋದ ವಿಮರ್ಶೆಯು ೦:೩೨ ಟೈಮ್‌ಸ್ಟ್ಯಾಂಪ್‌ನಲ್ಲಿ, ಮುಸ್ಲಿಂ ಜನಸಂಖ್ಯೆಗೆ ಪೌರತ್ವದ ಭರವಸೆಯನ್ನು ಸಿಂಗ್ ಪುನರುಚ್ಚರಿಸಿದ್ದಾರೆ ಎಂದು ಖಚಿತಪಡಿಸುತ್ತದೆ. ಅವರು ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸುತ್ತಿದ್ದರು, ಬಿಷ್ಣೋಯಿ ಅಲ್ಲ ಎಂದು ಇದು ಮತ್ತಷ್ಟು ಮೌಲ್ಯೀಕರಿಸುತ್ತದೆ.
ತೀರ್ಪು
ಮುಸ್ಲಿಂ ಜನಸಂಖ್ಯೆಯ ಪೌರತ್ವವನ್ನು ಬೆಂಬಲಿಸುವ ರಾಜನಾಥ್ ಸಿಂಗ್ ಅವರ ನಾಲ್ಕು ವರ್ಷಗಳ ಹಳೆಯ ವೀಡಿಯೋವನ್ನು, ಭಾರತೀಯ ರಕ್ಷಣಾ ಸಚಿವರು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಬೆಂಬಲಿಸಿದ್ದಾರೆ ಎಂದು ತಪ್ಪಾಗಿ ಪ್ರತಿಪಾದಿಸಲಾಗಿದೆ.
Read this fact-check in English here