ಮೂಲಕ: ಅಂಕಿತಾ ಕುಲಕರ್ಣಿ
ನವೆಂಬರ್ 28 2022
ಪುರುಷರು ಮತ್ತು ಮಹಿಳೆಯರು ಅನುಭವಿಸುವ ಹೃದಯಾಘಾತದ ಲಕ್ಷಣಗಳಲ್ಲಿ ವ್ಯತ್ಯಾಸವಿಲ್ಲಾ. ಆದರೆ ಹೃದಯಾಘಾತದ ಇನ್ನಿತರ ರೋಗಲಕ್ಷಣಗಳಲ್ಲಿ ಅಲ್ಪ ವಿಭಿನ್ನತೆ ಇದೆ.
ಸಂದರ್ಭ
ಮಹಿಳೆ ಮತ್ತು ಪುರುಷರಲ್ಲಿ ವಿಭಿನ್ನ ಪ್ರಕಾರದ ಹೃದಯಾಘಾತದ ಲಕ್ಷಣಗಳು ಕಂಡು ಬರುತ್ತವೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಲನೆಯಾಗುತ್ತಿದೆ. ಕೆಲವು ಪೋಷ್ಟಗಳು ಹೃದಯಾಘಾತದ ರೋಗಲಕ್ಷಣಗಳ ಪ್ರಸ್ತುತ ಪಟ್ಟಿಯನ್ನು ಇಟ್ಟುಕೊಂಡು ಇವು ಮಹಿಳೆಯರಲ್ಲಿ ಕಂಡುಬರುವ ಹೃದಯಾಘಾತದ ಪ್ರಾಥಮಿಕ ಲಕ್ಷಣಗಳೆಂದು ಹೇಳುತ್ತವೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಮಾನ್ಯವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪೋಷ್ಟಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಮಹಿಳೆಯರು ಮತ್ತು ಪುರುಷರು ಒಂದೇ ತರಹದ ಹೃದಯಾಘಾತದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ ಎಂದು ತಿಳಿಯುತ್ತದೆ.
ವಾಸ್ತವವಾಗಿ
ಹೃದಯಾಘಾತದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು; ಕೆಲವು ಜನರು ಹೃದಯಾಘಾತದೊಂದಿಗೆ ಎದೆ ನೋವು ಇಲ್ಲದೆಯೇ ಅತಿಯಾದ ಆಯಾಸ ಮತ್ತು ತಲೆತಿರುಗುವಿಕೆಯನ್ನು ಅನುಭವಿಸಬಹುದು -- ಆದರೆ ಅನುಭವದಲ್ಲಿನ ಈ ವ್ಯತ್ಯಾಸಗಳು ಲಿಂಗದ ರೇಖೆಗಳಲ್ಲಿ ನಿರ್ಣಾಯಕವಾಗಿ ವಿಭಜಿಸಲ್ಪಟ್ಟಿಲ್ಲ.
೨೦೧೭ ರಲ್ಲಿ ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ಎಡಿನ್‌ಬರ್ಗ್ ರಾಯಲ್ ಇನ್‌ಫರ್ಮರಿ ಎಂಬ ಆಸ್ಪತ್ರೆಯ ತುರ್ತು ವಿಭಾಗದಲ್ಲಿದ್ದ ಹೃದಯಾಘಾತ ರೋಗಿಗಳ ಸಂಭವನೀಯ ಗುಣಲಕ್ಷಣಗಳನ್ನು ಸಂಗ್ರಹಿಸುತ್ತಾರೆ. ಈ ಅಧ್ಯಯನವು, ಎದೆ ನೋವು ಮತ್ತು ಒತ್ತಡವು ಪುರುಷರಲ್ಲಿ ಹಾಗು ಮಹಿಳೆಯರಲ್ಲಿ ಸಾಮಾನ್ಯವಾಗಿ ಗುರುತಿಸಬಹುದಾದ ಲಕ್ಷಣವೆಂದು ವರದಿ ನೀಡಿದೆ . ಸುಮಾರು ೯೩ ಪ್ರತಿಶತದಷ್ಟು ಎರಡೂ ಲಿಂಗಗಳ ಜನರಲ್ಲಿ ಈ ರೋಗಲಕ್ಷಣವು ಕಂಡುಬಂದಿದೆ ಎಂದು ಹೇಳುತ್ತದೆ. ಹಾಗೆಯೇ ಇದೇ ಪ್ರಮಾಣದ ಪುರುಷರು ಮತ್ತು ಮಹಿಳೆಯರು, ಹೃದಯಾಘಾತದಿಂದ ತಮ್ಮ ಎಡಗೈಗೆ ಹರಡುವ ನೋವಿನ ಬಗ್ಗೆಯೂ ಸಹ ವಿವರಿಸಿದ್ದಾರೆ.
ಹಿಂದಿನ ಅಧ್ಯಯನಗಳು ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ವಿಭಿನ್ನವಾದ ಹೃದಯಾಘಾತದ ಲಕ್ಷಣಗಳು ಕಂಡುಬರುತ್ತವೆ ಎಂದು ಸೂಚಿಸಿದ್ದರೂ, ಹೆಚ್ಚಾಗಿ ಆ ಅಧ್ಯಯನಗಳು ಹೃದಯಾಘಾತದ ರೋಗನಿರ್ಣಯವನ್ನು ದೃಢಪಡಿಸಿದ ನಂತರವೇ ಖಾಯಿಲೆಯ ಲಕ್ಷಣಗಳನ್ನು ದಾಖಲಿಸಿಕೊಂಡಿವೆ. ಆದರೆ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಅಧ್ಯಯನವು ವಿಭಿನ್ನ ವಿಧಾನವನ್ನು ತೆಗೆದುಕೊಂಡಿತು. ಅಂದರೆ ರೋಗನಿರ್ಣಯದ ಮೊದಲೇ ಶಂಕಿತ ಹೃದಯಾಘಾತದ ಲಕ್ಷಣಗಳನ್ನು ದಾಖಲಿಸಿತು. ಇದು ಹೆಚ್ಚು ಜನಸಂಖ್ಯೆಯನ್ನು ಒಳಪಡಿಸಿಕೊಂಡು ಮಾಡುವ ಅಧ್ಯಯನಗಳಿಗೆ ಪ್ರೋತ್ಸಾಹ ನೀಡಬಹುದೆಂದು ಉಲ್ಲೇಖಿಸುತ್ತದೆ.
"ಪುರುಷರು ಮತ್ತು ಮಹಿಳೆಯರ ನಡುವಿನ ರೋಗಲಕ್ಷಣದ ಪ್ರಸ್ತುತಿಯಲ್ಲಿ ವ್ಯತ್ಯಾಸಗಳಿಗಿಂತ ಹೆಚ್ಚಿನ ಹೋಲಿಕೆಗಳಿವೆ" ಎಂದು ಅಧ್ಯಯನವು ವಿಶ್ಲೇಷಿಸುತ್ತದೆ . ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಎದೆ ನೋವು ಮತ್ತು ವಾಕರಿಕೆಯಂತಹ ಮೊದಲಾದ ಲಕ್ಷಣಗಳು ಕಂಡುಬಂದಿದೆ ಎಂದು ವರದಿ ಮಾಡಿದೆ.
ತೀರ್ಪು
ಪುರುಷರು ಮತ್ತು ಮಹಿಳೆಯರ ನಡುವಿನ ಇನ್ನಿತರ ಹೃದಯಾಘಾತದ ರೋಗಲಕ್ಷಣಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ, ಸಂಪೂರ್ಣ ರೋಗಲಕ್ಷಣಗಳಲ್ಲಿ ವ್ಯತ್ಯಾಸವಿಲ್ಲ ಎಂದು ಸೂಚಿಸುತ್ತದೆ. ಈ ರೀತಿಯ ವ್ಯತಿರಿಕ್ತವಾದ ಹೇಳಿಕೆಗಳು ಹೃದಯಾಘಾತದ ಲಕ್ಷಣಗಳನ್ನು ಸರಿಯಾಗಿ ಗುರುತಿಸುವ ಸಾಧ್ಯತೆಗಳಿಂದ ದಾರಿತಪ್ಪಿಸುವ ಮೂಲಕ ಮಹಿಳೆಯರ ಜೀವಕ್ಕೆ ಅಪಾಯವನ್ನುಂಟು ಮಾಡಬಹುದು. ಹಾಗಾಗಿ ಈ ಹೇಳಿಕೆಯು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತಿದ್ದೇವೆ.