ಮೂಲಕ: ವಿವೇಕ್ ಜೆ
ಜೂನ್ 27 2023
ವಿದ್ಯುತ್ ಬಿಲ್ ಪಾವತಿಸದ ಕಾರಣಕ್ಕೆ ವ್ಯಕ್ತಿಯೊಬ್ಬ ವಿದ್ಯುತ್ ಮಂಡಳಿಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದರ ದೃಶ್ಯವನ್ನು, ಕಾಂಗ್ರೆಸ್ ನ ಚುನಾವಣಾ ಭರವಸೆಗೆ ಹೋಲಿಸಲಾಗಿದೆ.
ಸಂದರ್ಭ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ವಿದ್ಯುತ್ ರೀಡಿಂಗ್ ತೆಗೆದುಕೊಳ್ಳಲು ಬಂದ ವಿದ್ಯುತ್ ಮಂಡಳಿಯ ಅಧಿಕಾರಿಯ ಮೇಲೆ ಸ್ಥಳೀಯ ನಿವಾಸಿಗಳು ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಗ್ರಾಹಕರಿಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಕಾಂಗ್ರೆಸ್‌ನ ಚುನಾವಣಾ ಭರವಸೆಗೆ ತಿರುಗೇಟು ನೀಡಲು ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ (ಈಗ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ) ಈ ಭರವಸೆಯನ್ನು ನೀಡಿದ್ದರು.
ಹಿಂದೆ ಹಲವಾರು ಬಾರಿ ತಪ್ಪು ಮಾಹಿತಿ ಹರಡಿದ್ದಾರೆಂದು ಕಂಡುಬಂದಿರುವ ಟ್ವಿಟರ್ ಬಳಕೆದಾರರಾದ ರಿಷಿ ಬಾಗ್ರೀ, ಮೇ ೨೪ ರಂದು ಈ ವೀಡಿಯೋವನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ, “ವಿದ್ಯುತ್ ಅಧಿಕಾರಿಗಳು ಮೀಟರ್ ಓದಲು ಬಂದಾಗ ಕರ್ನಾಟಕದಲ್ಲಿ ಸ್ಥಳೀಯ ನಿವಾಸಿಗಳು ಹಲ್ಲೆ ಮಾಡಿದ್ದಾರೆ. ಇನ್ನುಮುಂದೆ ಕಾಂಗ್ರೆಸ್ ಗ್ಯಾರಂಟಿಯಂತೆ ವಿದ್ಯುತ್ ದರವನ್ನು ನೋಂದಾಯಿಸುವುದಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ (sic)." ಈ ಫ್ಯಾಕ್ಟ್ ಚೆಕ್ ಬರೆಯುವ ಸಮಯದಲ್ಲಿ ಪೋಷ್ಟ್ ೧.೬ ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು ೧೦,೦೦೦ ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.
ವಾಸ್ತವವಾಗಿ
ಇದು ಕೊಪ್ಪಳ ಜಿಲ್ಲೆಯ ಕುಕ್ಕನಪಲ್ಲಿ ಗ್ರಾಮದ ಘಟನೆ ಎಂದು ಸ್ಪಷ್ಟಪಡಿಸಿ ಜಿಲ್ಲಾ ಪೊಲೀಸ್ ಅಧ್ಯಕ್ಷೆ (ಎಸ್‌ಪಿ) ಯಶೋಧ ವಂಟಗೋಡಿ ಅವರು ‘ಸೌತ್ ಫಸ್ಟ್ ನ್ಯೂಸ್’ ಯೂಟ್ಯೂಬ್ ಚಾನೆಲ್ ಪೋಷ್ಟ್ ಮಾಡಿದ ವೀಡಿಯೋದಲ್ಲಿ ಹೇಳುವುದನ್ನು ನಾವು ಕಂಡಿದ್ದೇವೆ. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ನ (ಜೆಸ್ಕಾಂ) ಮಂಜುನಾಥ್ ಎಂಬಾತನನ್ನು ಚಂದ್ರಶೇಖರ ಹಿರೇಮಠ ಎಂಬಾತ ದೈಹಿಕವಾಗಿ ನಿಂದಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಅವರು ಹೇಳಿದರು. ಮೇ ೨೩, ೨೦೨೩ ರಂದು ವಿದ್ಯುತ್ ಮಂಡಳಿಗೆ ರೂ. ೯,೦೦೦ ಕ್ಕಿಂತ ಹೆಚ್ಚು ಶುಲ್ಕ ಪಾವತಿಸದ ಕಾರಣ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು. ವಿದ್ಯುತ್ ಮಂಡಳಿಯವರು ಹಿರೇಮಠ ಅವರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರೂ ಹೇಗೋ ಅಕ್ರಮವಾಗಿ ಮರುಸ್ಥಾಪಿಸಿದ್ದಾರೆ. ಇದು ಅಧಿಕಾರಿಗಳ ಗಮನಕ್ಕೆ ಬಂದಾಗ ಮಂಜುನಾಥ್, ಹಲ್ಲೆಗೊಳಗಾದ ಹಿರೇಮಠ್ ಅವರ ಮನೆಗೆ ಭೇಟಿ ನೀಡಿದ್ದರು.
ಹೆಚ್ಚಿನ ಮಾಹಿತಿಗಾಗಿ ಲಾಜಿಕಲಿ ಫ್ಯಾಕ್ಟ್ಸ್ ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಮಂಜುನಾಥ್ ಅವರನ್ನು ಸಂಪರ್ಕಿಸಿತು. ಮೇ ೨೦ ರಂದು ರೂ. ೯,೯೯೦ ಬಿಲ್ ಪಾವತಿಸದ ಹಿರೇಮಠ ಅವರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ಹೇಳಿದರು. ಮೇ ೨೩ರಂದು ಮತ್ತೆ ಜೆಸ್ಕಾಂ ಸಿಬ್ಬಂದಿ ಹಣ ವಸೂಲಿ ಮಾಡಲು ಹೋದಾಗ ಅಕ್ರಮವಾಗಿ ವಿದ್ಯುತ್ ಸರಬರಾಜು ಮಾಡಿರುವುದಾಗಿ ಗಮನಕ್ಕೆ ಬಂತು. ಹಿರೇಮಠ್ ಅವರಿಗೆ ಎಚ್ಚರಿಕೆ ನೀಡಿ ಸಿಬ್ಬಂದಿ ಪಕ್ಕದ ಮನೆಗೆ ತೆರಳಿದರು. ಆಗ ಹಿರೇಮಠ್ ಮಂಜುನಾಥ್ ಮೇಲೆ ಮಾತಿನ ಚಕಮಕಿ ನಡೆಸಿ ಹಲ್ಲೆ ನಡೆಸಿದ್ದಾರೆ. ಘಟನೆಗೂ ಕಾಂಗ್ರೆಸ್ ಚುನಾವಣಾ ಭರವಸೆಗೂ ಯಾವುದೇ ಸಂಬಂಧವಿಲ್ಲ ಎಂದು ಮಂಜುನಾಥ್ ಅವರು ಖಚಿತಪಡಿಸಿದ್ದಾರೆ. "ಇಲ್ಲ, ಅವರು (ಚಂದ್ರಶೇಖರ್) ಕಾಂಗ್ರೆಸ್‌ನ ಉಚಿತ ವಿದ್ಯುತ್ ಭರವಸೆಯ ಬಗ್ಗೆ ಏನನ್ನೂ ಹೇಳಲಿಲ್ಲ" ಎಂದು ಮಂಜುನಾಥ್ ಲಾಜಿಕಲಿ ಫ್ಯಾಕ್ಟ್ಸ್ ಗೆ ಹೇಳಿದರು.
ಮಂಜುನಾಥ್ ಇದೇ ವಿಷಯದ ಕುರಿತು ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿರುವ ಇತರ ವೀಡಿಯೋಗಳನ್ನು ಸಹ ನಾವು ಕಂಡುಕೊಂಡಿದ್ದೇವೆ. ಸ್ಪಷ್ಟವಾಗಿ, ಈ ಘಟನೆಯು ಬಾಕಿ ಹಣ ಪಾವತಿಸದಿರುವುದು ಮತ್ತು ಅಕ್ರಮ ವಿದ್ಯುತ್ ಬಳಕೆಯ ಬಗ್ಗೆ ಮಾತ್ರ.
ತೀರ್ಪು
ಗ್ರಾಹಕರಿಂದ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಪಾವತಿಯನ್ನು ವಸೂಲಿ ಮಾಡುವಾಗ ಕೊಪ್ಪಳ ಜಿಲ್ಲೆಯ ಕುಕ್ಕನಪಲ್ಲಿಯಲ್ಲಿ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ಮತ್ತು ವಿದ್ಯುತ್ ಮಂಡಳಿಯ ಉದ್ಯೋಗಿ ವೀಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ. ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕಾಂಗ್ರೆಸ್‌ನ ಉಚಿತ ವಿದ್ಯುತ್ ಭರವಸೆಯೊಂದಿಗೆ ಅದನ್ನು ತಪ್ಪಾಗಿ ಜೋಡಿಸಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ವೀಡಿಯೋವನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.