ಮೂಲಕ:
ಜನವರಿ 5 2023
ನಿಖರವಾಗಿರದ ಹಳೆಯ ಯಾಂತ್ರಿಕ ಮೀಟರ್ ಅನ್ನು ಹೊಸದಾದ ಡಿಜಿಟಲ್ ಮೀಟರ್ ಗೆ ಬದಲಾಯಿಸುವುದರಿಂದ ವಿದ್ಯುತ್ ಬಿಲ್ಲಿನಲ್ಲಿ ಸ್ವಲ್ಪ ಏರಿಕೆ ಆಗಬಹುದು.
ಸಂದರ್ಭ
ಆಮ್ ಆದ್ಮಿ ಪಕ್ಷದ (AAP Party) ಅಧಿಕೃತ ಟ್ವಿಟ್ಟರ್ ಖಾತೆಯಾದ AAP, Bengaluru ವಿದ್ಯುತ್ ಬಿಲ್ ಬಗೆಗಿನ ಒಂದು ಪೋಸ್ಟ್ ಹಂಚಿಕೊಂಡಿದೆ. ಶೀರ್ಷಿಕೆಯಲ್ಲಿ “ಹೆಚ್ಚಾಗಲಿರುವ ಕರೆಂಟ್ ಬಿಲ್ ಸುದ್ದಿ ಕೇಳಿದ ಬೆಂಗಳೂರಿಗರು ಕರೆಂಟ್ ಹೊಡೆದ ಕಾಗೆಯಂತಾಗಿದ್ದಾರೆ” ಎಂದು ಬರೆಯಲಾಗಿದೆ. ಟ್ವೀಟ್ ಜೊತೆ ಎರಡು ಹಳೆಯ ಮೀಟರ್ ಗಳು ಇರುವ ಚಿತ್ರವೊಂದನ್ನು ಹಾಕಿ, ಆಟೋ ಮೀಟರ್ ಅಷ್ಟೇ ಅಲ್ಲ ಇನ್ಮೇಲೆ ಕರೆಂಟಿಗೂ ಡಬಲ್ ಮೀಟರ್ ಎಂದು ಬರೆದಿದೆ. ಆದರೆ ಇದು ನಿಜವಲ್ಲ.
ವಾಸ್ತವವಾಗಿ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ನಿಂದ ಬೆಂಗಳೂರು ವಲಯದಲ್ಲಿ ಡಿಜಿಟಲ್ ಮೀಟರ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಹಳೆಯ ಎಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್ ಬದಲಿಗೆ ಡಿಜಿಟಲ್ ಮೀಟರ್ ಅಳವಡಿಸುವ ಕಾರ್ಯ ಕಳೆದ ವರ್ಷ ಅಂದರೆ ೨೦೨೨ರ ಜುಲೈ ನಲ್ಲಿ ಪ್ರಾರಂಭಿಸಲಾಗಿದೆ. ಎರಡು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು, ಏಪ್ರಿಲ್ ೨೦೨೪ ರ ವೇಳೆಗೆ ಅಳವಡಿಕೆ ಕಾರ್ಯ ಮುಕ್ತಾಯಗೊಳ್ಳಲಿದೆ. ನವೀನ ತಂತ್ರಜ್ಞಾನದ ಡಿಜಿಟಲ್ ಮಾಪನವು ಗ್ರಾಹಕ ಸ್ನೇಹಿಯಾಗಿದೆ. ಇದು ವಿದ್ಯುತ್ ಪ್ರಮಾಣದ ವಿವರಗಳನ್ನುಅತ್ಯಂತ ನಿಖರವಾಗಿ ತೋರಿಸುತ್ತದೆ. ಅಲ್ಲದೆ ಒಟ್ಟು ವಿದ್ಯುತ್ ಬಳಕೆಯ ವಿವರ, ವೋಲ್ಟೇಜ್ ಮತ್ತು ವಿದ್ಯುತ್ ಪ್ರಮಾಣ ಲೆಕ್ಕ ತೋರಿಸುವುದು. ಹಿಂದಿನ ತಿಂಗಳುಗಳ ಬಿಲ್ ಜೊತೆ ತುಲನೆ ಮಾಡಿ ಗ್ರಾಹಕರು ತಾವು ಬಳಸಿದ ವಿದ್ಯುತ್ ಪ್ರಮಾಣದ ಬಗ್ಗೆಯೂ ತಿಳಿಯಬಹುದು ಎಂದು 'ದಿ ಹಿಂದೂ' ಪತ್ರಿಕೆಯ ವರದಿಯಲ್ಲಿ ಬರೆಯಲಾಗಿದೆ. ಬೆಸ್ಕಾಂ ಹೇಳುವ ಪ್ರಕಾರ ಹೊಸ ಮಾಪನವು ಗ್ರಾಹಕರು ಮತ್ತು ವಿದ್ಯುತ್ ನಿಗಮ ಇಬ್ಬರಿಗೂ ಲಾಭದಾಯಕವಾಗಲಿದೆ.
ಈ ಬಗ್ಗೆ ನಾವು ಬೆಸ್ಕಾಂನ ಅಧಿಕಾರಿಯನ್ನು ಸಂಪರ್ಕಿಸಿದಾಗ ಹೊಸ ಡಿಜಿಟಲ್ ಮೀಟರ್ ಅಳವಡಿಕೆ ಮಾಡುತ್ತಿರುವುದನ್ನ ಖಚಿತಪಡಿಸಿದರು. ಅವರ ಪ್ರಕಾರ ನವೀನ ತಂತ್ರಜ್ಞಾನದ ಸಹಾಯದಿಂದ ಕರಾರುವಕ್ಕಾದ ಮಾಪನ ಮಾಡಬಹುದು. ಅಲ್ಲದೆ ಮುಂಬರುವ ಬಿಲ್ ನಲ್ಲಿ ಸಣ್ಣ ಪುಟ್ಟ ವ್ಯತ್ಯಾಸವು ಹಿಂದೆ ಇದ್ದ ಹಳೆಯ ಮೀಟರ್ ಮಾಪನ ಎಷ್ಟು ನಿಖರವಾಗಿತ್ತು ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಮಾಹಿತಿ ನೀಡಿದರು. ಒಂದು ಮನೆಯಲ್ಲಿ ಎರಡೆರಡು ಮೀಟರ್ ಮಾಪನಗಳು ಇರುವುದು ಎಂಬ ಮಾಹಿತಿಯು ತಪ್ಪು; ಕೇವಲ ಒಂದು ಡಿಜಿಟಲ್ ಮೀಟರ್ ಅಳವಡಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ. ನವೆಂಬರ್ ೯, ೨೦೨೨ ರಲ್ಲಿ ಬೆಸ್ಕಾಂನ ಫೇಸ್‌ಬುಕ್ ಪುಟದಲ್ಲಿ ಹಳೆಯ ಮೆಕ್ಯಾನಿಕಲ್ ಮೀಟರ್ ಮತ್ತು ಆಧುನಿಕ ಡಿಜಿಟಲ್ ಮೀಟರ್ ಬಗ್ಗೆ ವ್ಯತಾಸ ಇರುವ ಮಾಹಿತಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಹೊಸ ಡಿಜಿಟಲ್ ಮೀಟರ್ ಮಾಪನವು ಕಳ್ಳತನ ಮತ್ತು ಸೋರಿಕೆಯಿಂದಾಗುವ ನಷ್ಟ ತಡೆಗಟ್ಟಬಹುದು, ಹೊಸ ಮೀಟರ್ ನ ವೆಚ್ಚ ಕಡಿಮೆ ಇದ್ದು ವಿದ್ಯುತ್ ಉಳಿತಾಯ ಕೂಡ ಆಗುತ್ತದೆ ಎಂದಿದೆ. ಹಿಂದಿನ ಮಾಪನದ ಜೊತೆ ತಾಳೆ ಮಾಡಿ ಸರಿಯಾದ ವಿದ್ಯುತ್ ಬಳಕೆಯನ್ನು ಗೊತ್ತು ಮಾಡಬಹುದು, ವೋಲ್ಟೇಜ್ ಮತ್ತು ಕರೆಂಟ್ ಮಟ್ಟವನ್ನು ಅಳೆಯಬಹುದು ಎಂದು ಬರೆಯಲಾಗಿದೆ.
ಇದಲ್ಲದೆ ಎಕನಾಮಿಕ್ ಟೈಮ್ಸ್ ನ ವರದಿಯ ಪ್ರಕಾರ ಬೆಸ್ಕಾಂ ಸ್ಮಾರ್ಟ್ ಮೀಟರ್ ಅಳವಡಿಸುವ ಕಾರ್ಯಕ್ಕೆ ಕೈ ಹಾಕಿದ್ದು ಆ ಯೋಜನೆ ಇನ್ನಷ್ಟೇ ಜಾರಿಗೆ ಬರಬೇಕಿದೆ.
ತೀರ್ಪು
ಹೊಸ ಡಿಜಿಟಲ್ ಮೀಟರ್ ನಿಖರವಾದ ಮಾಪನ ತೋರಿಸುತ್ತದೆ ಮತ್ತು ಬಹಳ ಹಳೆಯದಾದ ಮೀಟರ್ ಬದಲಾಯಿಸುವುದರಿಂದ ತಿಂಗಳ ಬಿಲ್ ನಲ್ಲಿ ವ್ಯತಾಸ ಕಂಡು ಬರಬಹುದು. ಆದ್ದರಿಂದ ನಾವು ಈ ಮೇಲಿನ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತಿದ್ದೇವೆ.