ಮೂಲಕ:
ನವೆಂಬರ್ 29 2022
ಸುಪ್ರೀಂ ಕೋರ್ಟ್ ಹಿಜಾಬ್ ಧರಿಸುವಂತಿಲ್ಲ ಎಂದು ಹೇಳಿಲ್ಲ. ಕರ್ನಾಟಕ ಹೈಕೋರ್ಟ್‌ನ ಹಿಜಾಬ್ ಆದೇಶವನ್ನು ಪ್ರಶ್ನಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಭಿನ್ನ ತೀರ್ಪು ನೀಡಿದೆ.
ಸಂದರ್ಭ
ಭಾರತದ ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರದ ಹಿಜಾಬ್ ವಿರುದ್ದದ ಆದೇಶವನ್ನು ಎತ್ತಿ ಹಿಡಿದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯು ಹರಿದಾಡುತ್ತಿದೆ. ಟ್ವಿಟ್ಟರ್ ನಲ್ಲಿಯೂ ಹಿಜಾಬ್ ಕುರಿತಾದ ಈ ಸುದ್ದಿಯು ಪ್ರಸರಿಸಿದೆ. ಟ್ವೀಟ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸಲಾಗಿಲ್ಲ ಎಂದು ಬರೆಯಲಾಗಿದೆ.
ವಾಸ್ತವವಾಗಿ
ಅದೇನೇ ಇರಲಿ, ಸುಪ್ರೀಂ ಕೋರ್ಟ್ ಆ ರೀತಿಯ ತೀರ್ಪನ್ನು ಕೊಟ್ಟಿಲ್ಲ. ಲೈವ್ ಲಾ ಪ್ರಕಟಿಸಿರುವ ವರದಿಯ ಪ್ರಕಾರ ಅಕ್ಟೋಬರ್ ೧೩ ರಂದು ಕೋರ್ಟಿನ ನ್ಯಾಯಾಧೀಶರಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠವು ವಿಭಿನ್ನ ತೀರ್ಪನ್ನು ನೀಡಿದೆ. ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವುದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಕೋರ್ಟಿಗೆ ಸಲ್ಲಿಕೆಯಾಗಿತ್ತು. ಈ ಮೊದಲು ಪೀಠವು ೧೦ ದಿನಗಳ ಕಾಲ ವಾದವನ್ನು ಆಲಿಸಿ ಸೆಪ್ಟೆಂಬರ್ ೨೨ ರಂದು ತಮ್ಮ ತೀರ್ಪನ್ನು ಕಾಯ್ದಿರಿಸಿತ್ತು.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಕರ್ನಾಟಕ ಹೈ ಕೋರ್ಟ್ ನ ಮಾರ್ಚ್ ೨೦೨೨ ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ೨೬ ಮನವಿಗಳನ್ನು ವಜಾ ಮಾಡಿ ಹಿಜಾಬ್ ನಿಷೇಧದ ಆದೇಶವನ್ನು ಎತ್ತಿ ಹಿಡಿದರು. ಅವರು ತಮ್ಮ ತೀರ್ಪಿನಲ್ಲಿ ೧೧ ಪ್ರಶ್ನೆಗಳನ್ನು ರಚಿಸಿ "ಜಾತ್ಯತೀತತೆ ಎಲ್ಲಾ ನಾಗರಿಕರಿಗೂ ಅನ್ವಯವಾಗುತ್ತದೆ" ಮತ್ತು ಒಂದು ಕೋಮಿನವರಿಗೆ ಧಾರ್ಮಿಕ ಸಂಕೇತವುಳ್ಳ ಉಡುಪುಗಳನ್ನು ಧರಿಸಲು ಅನುಮತಿ ಕೊಟ್ಟರೆ ಅದು ಜಾತ್ಯತೀತತೆಯ ವಿರುದ್ಧ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಧುಲಿಯಾ ಅವರು ಮನವಿಗಳನ್ನು ಸ್ವೀಕರಸಿ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದುಗೊಳಿಸಿದರು. ಅಲ್ಲದೆ ಹೈ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಅಗತ್ಯವಾದ ಧಾರ್ಮಿಕ ಆಚರಣೆಯ ಬಗ್ಗೆ ಪರಾಮರ್ಷೆಯು ಈ ಪ್ರಕರಣದಲ್ಲಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಮುಂದುವರೆದು, ಹಿಜಾಬ್ ಧರಿಸುವುದು ಅವರವರ ಆಯ್ಕೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣ ಅದಕ್ಕಿಂತ ಬಹಳ ಮುಖ್ಯ ಎಂದಿದ್ದಾರೆ.
ಸಮ್ಮತವಾದ ತೀರ್ಪು ಬರದ ಹಿನ್ನೆಲೆ ಪ್ರಕರಣವನ್ನು ಮುಖ್ಯ ನ್ಯಾಯಾಧೀಶರ ಸೂಚನೆಗಾಗಿ ಅವರ ಮುಂದೆ ಇಡಲಾಗುವುದು. ಅವರು ವಿಸ್ತೃತವಾದ ಪೀಠಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ ಎಂದು ದಿ ಕ್ವಿಂಟ್ (The Quint) ವರದಿ ಮಾಡಿದೆ. ಕರ್ನಾಟಕದ ಶಿಕ್ಷಣ ಮಂತ್ರಿಗಳಾದ ಬಿ ಸಿ ನಾಗೇಶ್ ರವರು ಅಕ್ಟೋಬರ್ ೧೩ ರಂದು ಹಿಜಾಬ್ ನಿಷೇಧ ಹೇರಿಕೆಯು ಮುಂದುವರಿಯುತ್ತದೆ ಮತ್ತು ಹೈ ಕೋರ್ಟ್ ನ ಆದೇಶವು ಸುಪ್ರೀಂ ಕೋರ್ಟ್ ನ ಆದೇಶ ಬರುವವರೆಗೂ ಮಧ್ಯಂತರದಲ್ಲಿ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ ಹಿಜಾಬ್ ಅನ್ನು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಧರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ ಎನ್ನುವ ಸಲ್ಲಿಕೆಯು ತಪ್ಪು ಎಂದು ಹೇಳಬಹುದು.
ಹಿಜಾಬ್ ಬಗೆಗಿನ ಗಲಾಟೆಯು ಕರ್ನಾಟಕದ ಉಡುಪಿಯಲ್ಲಿ ಡಿಸೆಂಬರ್ ೨೦೨೧ ರಿಂದ ಶುರುವಾಗಿತ್ತು. ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ೬ ಮುಸ್ಲಿಂ ವಿದ್ಯಾರ್ಥಿನಿಗಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿರಲಿಲ್ಲ. ಶಾಲೆಯ ಸಮವಸ್ತ್ರವನ್ನು ಧರಿಸಿ ಹಾಜರಾಗಬೇಕು ಎಂದು ಅವರಿಗೆ ತಿಳಿಸಲಾಗಿತ್ತು. ಇತರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಇದೇ ನೀತಿಯನ್ನು ಅಳವಡಿಸುವ ನಿರ್ಧಾರ ಪ್ರಕಟಿಸಿದಾಗ ಪ್ರತಿಭಟನೆಗಳು ಶುರುವಾಯಿತು. ತದನಂತರ, ಕರ್ನಾಟಕ ಸರ್ಕಾರವು ಶಾಲಾ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಫೆಬ್ರವರಿ ೫ ರಂದು ಆದೇಶ ಮಾಡಿದಾಗ ಹೈ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಯಿತು. ಮಾರ್ಚ್ ೧೫ ರಂದು ಹೈ ಕೋರ್ಟ್ ಆದೇಶ ಹೊರಡಿಸಿ ಅರ್ಜಿಗಳನ್ನು ವಜಾ ಮಾಡಿದಾಗ ಸುಪ್ರೀಂ ಕೋರ್ಟ್ ನಲ್ಲಿ ಆದೇಶವನ್ನು ಪ್ರಶ್ನೆ ಮಾಡಲಾಗಿತ್ತು.
ತೀರ್ಪು
ಸುಪ್ರೀಂ ಕೋರ್ಟ್ ನಲ್ಲಿ ಹಿಜಾಬ್ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ವಿಷಯವು ಮುಖ್ಯ ನ್ಯಾಯಾಧೀಶರ ಅಂಗಳದಲ್ಲಿದೆ. ಸಮ್ಮತ ತೀರ್ಪು ಬಂದಿಲ್ಲವಾದ್ದರಿಂದ ಕರ್ನಾಟಕ ಹೈ ಕೋರ್ಟ್ ನ ತೀರ್ಪು ಯಥಾಸ್ಥಿತಿ ಇರಲಿದೆ. ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯ ಮುಂದುವರೆಯಲಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಹಿಜಾಬ್ ಅನ್ನು ನಿಷೇಧಿಸಿದೆ ಎನ್ನುವ ಪ್ರತಿಪಾದನೆ ತಪ್ಪು ಎಂದು ಗುರುತಿಸಲಾಗಿದೆ.