ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಜನವರಿ 11 2024
ಈ ವೈರಲ್ ವೀಡಿಯೋ ಜೂನ್ ೨೦೨೩ ರಂದು ಮಾಲ್ಡೀವ್ಸ್‌ನಲ್ಲಿ ಪಿಎಂ ಮೋದಿ ವಿರುದ್ಧ ನಡೆದ ಪ್ರತಿಭಟನೆಯನ್ನು ತೋರಿಸುತ್ತದೆ, ಇತ್ತೀಚಿನದಲ್ಲ.
ಜನವರಿ ೨೦೨೪ ರಲ್ಲಿ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಲಕ್ಷದ್ವೀಪ ದ್ವೀಪಗಳಿಗೆ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಮಾಲ್ಡೀವಿಯನ್ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಷರೀಫ್ ಮತ್ತು ಅಬ್ದುಲ್ಲಾ ಮಹಜೂಮ್ ಮಜೀದ್ ಭಾರತ ಮತ್ತು ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು ಅಗೌರವದ ಹೇಳಿಕೆಗಳನ್ನು ನೀಡಿದ್ದರಿಂದ ಸಂಘರ್ಷ ಉಂಟಾಗಿದೆ.
ಈ ಕಾಮೆಂಟ್‌ಗಳು ಪ್ರಧಾನ ಮಂತ್ರಿಯವರು ತಮ್ಮ ಲಕ್ಷದ್ವೀಪ ಭೇಟಿಯ ಫೋಟೋಗಳು ಮತ್ತು ವೀಡಿಯೋಗಳನ್ನು ಹಂಚಿಕೊಂಡ ಹಿನ್ನಲೆಯಲ್ಲಿ ಪ್ರಚಿದನೆಗೊಂಡಿವೆ, ಹಾಗು ಹಲವಾರು ಜನ ತಿಳಿದುಕೊಂಡಂತೆ ಭಾರತೀಯ ದ್ವೀಪಸಮೂಹವನ್ನು ಮಾಲ್ಡೀವ್ಸ್‌ಗೆ ಪರ್ಯಾಯ ಪ್ರವಾಸಿ ತಾಣವಾಗಿ ಪ್ರಚಾರ ಮಾಡುವ ಪ್ರಯತ್ನ ಇದಾಗಿದೆ ಎಂದು ಹೇಳಲಾಗುತ್ತಿದೆ.
ಆಕ್ರಮಣಕಾರಿ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಮಾಲ್ಡೀವ್ಸ್ ಸರ್ಕಾರವು ಈ ಮಂತ್ರಿಗಳನ್ನು ತಮ್ಮ ಸ್ಥಾನಗಳಿಂದ ತೆಗೆದುಹಾಕಿತು. ಈ ಘಟನೆಯು ಭಾರತದಲ್ಲಿ ಗಮನಾರ್ಹ ಸಂಖ್ಯೆಯ ವ್ಯಕ್ತಿಗಳನ್ನು ಮಾಲ್ಡೀವ್ಸ್‌ಗೆ ಪ್ರಯಾಣಿಸದಂತೆ ಪ್ರತಿಜ್ಞೆ ಮಾಡಲು ಪ್ರಚೋದಿಸಿತು. #BoycottMaldives ಹ್ಯಾಶ್‌ಟ್ಯಾಗ್ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುವುದರೊಂದಿಗೆ ಆಂದೋಲನವು ವೇಗವನ್ನು ಪಡೆಯಿತು.
ಹೇಳಿಕೆ ಏನು?
ಉಲ್ಬಣಗೊಳ್ಳುತ್ತಿರುವ ರಾಜತಾಂತ್ರಿಕ ವಿವಾದದ ಮಧ್ಯೆ, ಒಂದು ನಿಮಿಷಕ್ಕೂ ಹೆಚ್ಚು ಅವಧಿಯ ವೀಡಿಯೋವೊಂದು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿಯವರನ್ನು ಹೋಲುವ ಮುಖವಾಡಗಳನ್ನು ಧರಿಸಿ ಪ್ರತಿಭಟನಾಕಾರರು ರ‍್ಯಾಲಿಯಲ್ಲಿ ಭಾಗವಹಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಒಬ್ಬ ವ್ಯಕ್ತಿ ಚಪ್ಪಲಿಯಿಂದ ಮಾಡಿದ ಹಾರವನ್ನು ಧರಿಸಿರುವುದು ಕಂಡುಬರುತ್ತದೆ. ಹೆಚ್ಚುವರಿಯಾಗಿ, "ಇಂಡಿಯಾ ಔಟ್" ಎಂಬ ಸಂದೇಶದೊಂದಿಗೆ ಬ್ಯಾನರ್‌ಗಳನ್ನು ಹಿಡಿದಿರುವ ಪ್ರದರ್ಶನಕಾರರನ್ನು ನೋಡಬಹುದು ಮತ್ತು ಇತರರು ಕೆಂಪು ಮತ್ತು ಹಸಿರು ಧ್ವಜಗಳನ್ನು ಬೀಸುತ್ತಿರುವುದನ್ನು ಕಾಣಬಹುದು.
"ಮಾಲ್ಡೀವ್ಸ್‌ನಲ್ಲಿರುವ ಜಿಹಾದಿಗಳು ನಮ್ಮ ಪ್ರಧಾನಿಯನ್ನು ಅವಮಾನಿಸುತ್ತಿದ್ದಾರೆ. ಎಲ್ಲಾ ಭಾರತೀಯರು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಬೇಕು (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಎಕ್ಸ್‌ನಲ್ಲಿ ಪೋಷ್ಟ್ ಮಾಡಲಾಗಿದೆ. ಈ ಎಕ್ಸ್ ಪೋಷ್ಟ್ ೪೭,೬೦೦ ವೀಕ್ಷಣೆಗಳನ್ನು ಗಳಿಸಿದೆ. ಅದೇ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ ಮತ್ತೊಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, ''ಮಾಲ್ಡೀವ್ಸ್‌ನಲ್ಲಿ ಏನಾಗುತ್ತಿದೆ? ಅವರನ್ನು ವಿದೂಷಕರಂತೆ ಬಿಂಬಿಸುವುದೇಕೆ? ಈ ಪ್ರತಿಭಟನೆಯ ಉದ್ದೇಶವೇನು?'' ಮತ್ತು #maldivesboycott' ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಲಾಗಿದೆ.
ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
"ಭಾರತೀಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್‌ನಲ್ಲಿ ಭಾರೀ ಪ್ರತಿಭಟನೆ. ಒಂದು ವಾರದ ಹಿಂದೆ, ಮಾಲ್ಡೀವ್ಸ್ ಪ್ರಧಾನಿಯವರ ವಿವಾದಾತ್ಮಕ ಹೇಳಿಕೆ #maldives #india #politicalway #narendramodi #tourism #boycottmaldives ##lakshdweep." ಎಂಬ ಹೇಳಿಕೆಯೊಂದಿಗೆ ಅದೇ ವೀಡಿಯೋವನ್ನು ಫೇಸ್‌ಬುಕ್ ನಲ್ಲಿ ಹಂಚಿಕೊಳ್ಳಲಾಗಿದೆ.
ಆದರೆ, ಈ ವೀಡಿಯೋ ನಡೆಯುತ್ತಿರುವ ಭಾರತ-ಮಾಲ್ಡೀವ್ಸ್ ವಿವಾದಕ್ಕೆ ಸಂಬಂಧಿಸಿಲ್ಲ. ಮತ್ತು ಜೂನ್ ೨೦೨೩ ರಲ್ಲಿ ಮಾಲ್ಡೀವ್ಸ್‌ನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಸೆರೆಹಿಡಿಯಲಾಗಿದೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯ.
ಸತ್ಯ ಏನು?
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ನಾವು ಜುಲೈ ೧, ೨೦೨೩ ರ ಸ್ಕ್ರೋಲ್ ವರದಿಯನ್ನು ಕಂಡುಕೊಂಡೆವು "ಇಂಡಿಯಾ ಔಟ್' ಪ್ರತಿಭಟನೆಗಳ ನಂತರ, ಮಾಲ್ಡೀವ್ಸ್ ಸರ್ಕಾರವು ಖಂಡನೆಯನ್ನು ನೀಡಿದೆ" ಎಂದು ವರದಿಯ ತಲೆಬರಹ ಹೇಳುತ್ತದೆ. ವರದಿಯು ಜೂನ್ ೨೯, ೨೦೨೩ ರಂದು ಮಾಲ್ಡೀವ್ಸ್‌ನಲ್ಲಿ ಭಾರತವನ್ನು ವಿರೋಧಿಸಿ ನಡೆದ ಪ್ರತಿಭಟನೆಯನ್ನು ವಿವರಿಸಿದೆ, ಅಲ್ಲಿ ಪ್ರತಿಭಟನಾಕಾರರು ಪಿಎಂ ನರೇಂದ್ರ ಮೋದಿಯನ್ನು ಹೋಲುವ ಮುಖವಾಡಗಳನ್ನು ಧರಿಸಿದ್ದರು ಮತ್ತು "ಇಂಡಿಯಾ ಔಟ್" ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದರು ಎಂದು ಹೇಳಲಾಗಿದೆ. ಪ್ರತಿಭಟನೆಯ ನಂತರ, ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯವು ಆಂದೋಲನವನ್ನು ಖಂಡಿಸಿ ಹೇಳಿಕೆಯನ್ನು ನೀಡಿತು, ದೇಶದ ವಿರೋಧ ಪಕ್ಷಗಳಿಗೆ ಆರೋಪ ಹೊರಿಸಿತ್ತು.
ಸ್ಕ್ರಾಲ್ ಲೇಖನದ ಸ್ಕ್ರೀನ್‌ಶಾಟ್. (ಮೂಲ: ಸ್ಕ್ರಾಲ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಇದಲ್ಲದೆ, ವರದಿಯು ಜೂನ್ ೨೦೨೩ ರಂದು ಎಕ್ಸ್ ನಲ್ಲಿನ ಪೋಷ್ಟ್ ಅನ್ನು ಉಲ್ಲೇಖಿಸಿದೆ, ಇದರಲ್ಲಿ ''#IndiaOut'' ಎಂಬ ಶೀರ್ಷಿಕೆಯೊಂದಿಗೆ ೨೩-ಸೆಕೆಂಡ್‌ಗಳ ವೀಡಿಯೋವನ್ನು ನೋಡಬಹುದು. ಈ ವೀಡಿಯೋ ವೈರಲ್ ಆದ ತುಣುಕಿನಲ್ಲಿ ಸುಮಾರು ೫೩ ಸೆಕೆಂಡುಗಳಿಂದ ಪ್ರಾರಂಭವಾಗುವ ದೃಶ್ಯಗಳಿಗೆ ನಿಖರವಾಗಿ ಅನುರೂಪವಾಗಿದೆ.
(ಮೂಲ: ಎಕ್ಸ್)
ಈ ವಿಭಾಗದಲ್ಲಿ, ಮೋದಿ ಮುಖವಾಡಗಳನ್ನು ಧರಿಸಿರುವ ಮೂವರು ವ್ಯಕ್ತಿಗಳು, ಒಬ್ಬರು ಚಪ್ಪಲಿಯಿಂದ ಮಾಡಿದ ಹಾರವನ್ನು ಹೊಂದಿದ್ದು, ಹಸಿರು ಮತ್ತು ಕೆಂಪು ಧ್ವಜಗಳನ್ನು ಬೀಸುವ ಪ್ರತಿಭಟನಾಕಾರರ ಗುಂಪನ್ನು ಮುನ್ನಡೆಸುತ್ತಿದ್ದಾರೆ. ಅದಲ್ಲದೆ, ಕಪ್ಪು ಟೀ ಶರ್ಟ್ ಮತ್ತು ನೀಲಿ ಜೀನ್ಸ್ ನಲ್ಲಿರುವ ವ್ಯಕ್ತಿಯನ್ನು ವೀಡಿಯೋದಲ್ಲಿ ಗಮನಿಸಬಹುದು.
ವೈರಲ್ ವೀಡಿಯೋ (ಎಡಭಾಗದಲ್ಲಿ) ಮತ್ತು ಜೂನ್ ೨೦೨೩ ರ ಪ್ರತಿಭಟನೆಯ (ಬಲಭಾಗದಲ್ಲಿ) ವೀಡಿಯೋ ನಡುವಿನ ಹೋಲಿಕೆ. (ಮೂಲ: ಎಕ್ಸ್ / ಸ್ಕ್ರೀನ್‌ಶಾಟ್‌ಗಳು/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಅದೇ ರೀತಿ, ಜುಲೈ ೨೦೨೩ ರಿಂದ ಹಿಂದೂಸ್ತಾನ್ ಟೈಮ್ಸ್ ಯೂಟ್ಯೂಬ್ ವೀಡಿಯೋ ವೈರಲ್ ವೀಡಿಯೋದ ದೃಶ್ಯಗಳನ್ನು ಒಳಗೊಂಡಿತ್ತು, ಈದ್-ಅಲ್-ಅಧಾ ಸಮಯದಲ್ಲಿ ದೇಶದ ವಿರುದ್ಧ "ಇಂಡಿಯಾ ಔಟ್" ಅಭಿಯಾನದ ನಂತರ ಮಾಲ್ಡೀವಿಯನ್ ಸರ್ಕಾರವು ಹಾನಿ ನಿಯಂತ್ರಣವನ್ನು ಪ್ರಾರಂಭಿಸಿತು ಎಂದು ವರದಿ ಮಾಡಿದೆ.
ಮಾಲ್ಡೀವ್ಸ್‌ನಲ್ಲಿ 'ಇಂಡಿಯಾ ಔಟ್' ಪ್ರತಿಭಟನೆ
'ಇಂಡಿಯಾ ಔಟ್' ಅಭಿಯಾನವು ೨೦೨೦ ರಲ್ಲಿ ಮಾಲ್ಡೀವ್ಸ್‌ನಲ್ಲಿ ನಡೆದ ಪ್ರತಿಭಟನೆಯೊಂದಿಗೆ ಪ್ರಾರಂಭವಾಯಿತು ಮತ್ತು ಅದೇ ರೀತಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾದ ಆವೇಗವನ್ನು ಪಡೆದುಕೊಂಡಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದಿ ಹಿಂದೂ ಪತ್ರಿಕೆಯ ಡಿಸೆಂಬರ್ ೨೦೨೧ ರ ವರದಿಯ ಪ್ರಕಾರ, ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ಅಧಿಕಾರ ವಹಿಸಿಕೊಂಡ ನಂತರ ಮಾಲ್ಡೀವ್ಸ್‌ನಲ್ಲಿ 'ಇಂಡಿಯಾ ಔಟ್' (#Indiaout) ಅಭಿಯಾನವು ಸಾಂದರ್ಭಿಕವಾಗಿ ಹೊರಹೊಮ್ಮಿತು. ಸೋಲಿಹ್ ಆಡಳಿತವು "ನೆಲದ ಮೇಲೆ ಭಾರತೀಯ ಬೂಟುಗಳನ್ನು" ಅನುಮತಿಸಿದೆ ಎಂದು ಆರೋಪಿಸಿ, ದ್ವೀಪ ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಈ ಅಭಿಯಾನವನ್ನು ಸರ್ಕಾರಿ ವಿಮರ್ಶಕರು ಮುನ್ನಡೆಸಿದ್ದರು ಎಂದು ವರದಿಯಾಗಿದೆ.
ಏಪ್ರಿಲ್ ೨೦೨೨ ರಲ್ಲಿ, ಮಾಲ್ಡೀವ್ಸ್‌ನ ಅಧ್ಯಕ್ಷ ಸೋಲಿಹ್ ಅವರು 'ಇಂಡಿಯಾ ಔಟ್' ಅಭಿಯಾನವನ್ನು "ರಾಷ್ಟ್ರೀಯ ಭದ್ರತೆಗೆ ಬೆದರಿಕೆ" ಎಂದು ಉಲ್ಲೇಖಿಸಿ ಅದನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದರು ಎಂದು ದಿ ಹಿಂದೂ ವರದಿ ಮಾಡಿದೆ.
ತೀರ್ಪು
ಜೂನ್ ೨೦೨೩ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್‌ನಲ್ಲಿ ನಡೆದ ಪ್ರತಿಭಟನೆಯ ವೀಡಿಯೋವನ್ನು ತಪ್ಪುದಾರಿಗೆಳೆಯುವ ಹೇಳಿಕೆಯೊಂದಿಗೆ ಹಂಚಿಕೊಳಲಾಗುತ್ತಿದೆ. ವೈರಲ್ ಪೋಷ್ಟ್, ಇದು ನಡೆಯುತ್ತಿರುವ ಭಾರತ-ಮಾಲ್ಡೀವ್ಸ್ ವಿವಾದದ ನಡುವೆ ಇತ್ತೀಚಿನ ಬೆಳವಣಿಗೆಯಾಗಿದೆ ಎಂದು ತಪ್ಪಾಗಿ ಸೂಚಿಸುತ್ತದೆ. ಆದ್ದರಿಂದ, ಟೈಮ್‌ಲೈನ್ ಮತ್ತು ಸಂದರ್ಭವನ್ನು ತಪ್ಪಾಗಿ ನಿರೂಪಿಸಿರುವ ಕಾರಣ ನಾವು ಹೇಳಿಕೆಯನ್ನು ಅನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.